ಅಡ್ಡಮತದಾನ ಮಾಡಿ ಸಿಎಂ ತವರು ಜಿಲ್ಲೆಯಲ್ಲಿ ಬಿಜೆಪಿಗೆ ಮುಖಭಂಗಕ್ಕೆ ಕಾರಣವಾಗಿದ್ದ ಸದಸ್ಯನ್ನನ್ನು ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ.
ಶಿವಮೊಗ್ಗ, (ಜುಲೈ.05): ಕೃಷಿ ಉತ್ಪನ್ನ ಮಾರಾಟ ಸಮಿತಿ ಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಆರೋಪದ ಮೇಲೆ ಬಿಜೆಪಿ ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಎಚ್.ಸಿ.ಬಸವರಾಜಪ್ಪ ಬುಳ್ಳಾಪುರ ಹಾಗೂ ಅವರ ಪುತ್ರ ಎಪಿಎಂಸಿ ಸದಸ್ಯ ದಿನೇಶ್ ಅವರನ್ನು ಉಚ್ಚಾಟನೆ ಮಾಡಲಾಗಿದೆ.
ಎಪಿಎಂಸಿ ಆಡಳಿತ ಮಂಡಳಿಗೆ ಜುಲೈ 1ರಂದು ನಡೆದ ಚುನಾವಣೆಯಲ್ಲಿ ಬಹುಮತ ಹೊಂದಿದ್ದರೂ ಅಡ್ಡಮತದಾನ ಮಾಡಿದ್ದರಿಂದ ಬಿಜೆಪಿ ಗುಂಪಿನ ಅಭ್ಯರ್ಥಿ ಟಿ.ಬಿ.ಜಗದೀಶ್ ಸೋಲು ಕಂಡಿದ್ದರು. ಈ ಹಿನ್ನೆಲೆಯಲ್ಲಿ ಅಡ್ಡಮತದಾನ ಮಾಡಿರುವ ಆರೋಪದ ಮೇರೆಗೆ ಎಪಿಎಂಸಿ ಸದಸ್ಯ ದಿನೇಶ್ ಅವರನ್ನು ಪಕ್ಷದಿಂದ ಉಚ್ಚಾಟಿಸಿ ಶಿವಮೊಗ್ಗ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಟಿ.ಡಿ.ಮೇಘರಾಜ್ ಆದೇಶ ಹೊರಡಿಸಿದ್ದಾರೆ.
17 ಸದಸ್ಯ ಬಲದ ಎಪಿಎಂಸಿಯಲ್ಲಿ ಬಿಜೆಪಿ ಗುಂಪಿನ 9 ಹಾಗೂ ಕಾಂಗ್ರೆಸ್, ಜೆಡಿಎಸ್ ಗುಂಪಿನ 8 ಸದಸ್ಯರಿದ್ದರು. ಆದರೆ, ಫಲಿತಾಂಶ ಪ್ರಕಟವಾದಾಗ ಜೆಡಿಎಸ್ ದುಗ್ಗಪ್ಪಗೌಡ ಅಧ್ಯಕ್ಷ, ಕುಂಸಿ ಬಾಬಣ್ಣ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಇದರಿಂದ ಸಿಎಂ ಬಿಎಸ್ ಯಡಿಯೂರಪ್ಪ ತವರು ಜಿಲ್ಲೆಯಲ್ಲೇ ಬಿಜೆಪಿ ಭಾರೀ ಮುಖಭಂಗವಾಗಿತ್ತು.
ಅಡ್ಡ ಮತದಾನ ಮಾಡಿದ ಪಕ್ಷ ವಿರೋಧಿಗಳನ್ನು ಪತ್ತೆ ಹಚ್ಚಲು ಮುಖಂಡರು ಹರಸಾಹಸ ಮಾಡಿದ್ದರು. ಅದಕ್ಕಾಗಿಯೇ ಸತ್ಯ ಶೋಧನಾ ಸಮಿತಿ ರಚಿಸಲಾಗಿತ್ತು.
ಈ ಸಮಿತಿ ಸದಸ್ಯರ ಸಂಶಯಾಸ್ಪದ ನಡವಳಿಕೆ, ಹೇಳಿಕೆಗಳ ಆಧಾರದ ಮೇಲೆ ವರದಿ ಸಿದ್ಧಪಡಿಸಿ ಶಿಸ್ತು ಸಮಿತಿಗೆ ಸಲ್ಲಿಸಿತ್ತು. ಅದರ ಆಧಾರದ ಮೇಲೆ ಅಡ್ಡ ಮತದಾನ ಮಾಡಿದ ದಿನೇಶ್ ಅವರನ್ನು ಅವರಿಗೆ ಸಹಕಾರ ನೀಡಿದ ಅವರ ತಂದೆ ಬಸವರಾಜಪ್ಪ ಅವರ ವಿರುದ್ಧವೂ ಮೇಘರಾಜ್ ಕ್ರಮ ಕೈಗೊಂಡಿದ್ದಾರೆ.