ಮಾಜಿ ಕೇಂದ್ರ ಸಚಿವರೊಬ್ಬರಿಗೆ ಕೋವಿಡ್-19 ಸೋಂಕು ದೃಢಪಟ್ಟಿದ್ದು, ಅವರನ್ನ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿಸಲಾಗಿದೆ.
ಮಂಗಳೂರು, (ಜುಲೈ.05): ಮಾಜಿ ಕೇಂದ್ರ ಸಚಿವ ಬಿ. ಜನಾರ್ದನ ಪೂಜಾರಿ ಅವರಿಗೂ ಕೊರೋನಾ ಸೋಂಕು ತಗುಲಿದೆ. ಈ ಬಗ್ಗೆ ಅವರ ಹಿರಿಯ ಪುತ್ರ ಸಂತೋಷ್ ಜೆ.ಪೂಜಾರಿ ಖಚಿತಪಡಿಸಿದ್ದಾರೆ. ಜನಾರ್ದನ ಪೂಜಾರಿಯವರಿಗೆ ಶನಿವಾರ ಕೋವಿಡ್ ತಪಾಸಣೆ ನಡೆಸಲಾಗಿದ್ದು, ವರದಿ ಪಾಸಿಟಿವ್ ಬಂದಿದೆ. ಅಲ್ಲದೇ ಅವರ ಪತ್ನಿಗೂ ಸೋಂಕು ತಾಗಿರುವುದು ವರದಿಯಲ್ಲಿ ದೃಢಪಟ್ಟಿದೆ.
ಕರ್ನಾಟಕದ ಮಾಜಿ MLCಗೆ ಕೊರೋನಾ ಅಟ್ಯಾಕ್, ಆಸ್ಪತ್ರೆಗೆ ದಾಖಲು
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ನಿವಾಸಿಯಾಗಿರುವ ಮಾಜಿ ಸಚಿವರ ಮನೆಯ ಕೆಲಸದಾಕೆಯ ಕಾರಣದಿಂದ ಸೋಂಕು ತಾಗಿದೆ ಎನ್ನಲಾಗಿದೆ. ಸದ್ಯ ಮಾಜಿ ಸಚಿವರು ಮತ್ತು ಅವರ ಪತ್ನಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅವರಿಗೆ ಸೋಂಕು ಸಂಬಂಧಿ ಯಾವುದೇ ಲಕ್ಷಣಗಳು ಕಂಡುಬಂದಿಲ್ಲ.ಅವರು ಆರೋಗ್ಯವಾಗಿದ್ದು, ದಯವಿಟ್ಟು ಯಾರೂ ಈ ಬಗ್ಗೆ ಆತಂಕಪಡುವ ಅಗತ್ಯವಿಲ್ಲ. ಶೀಘ್ರದಲ್ಲೇ ಅವರು ಸಂಪೂರ್ಣ ಗುಣಮುಖರಾಗಲು ನಾವೆಲ್ಲರೂ ಪ್ರಾರ್ಥಿಸೋಣ ಎಂದು ಪುತ್ರ ಸಂತೋಷ್ ಜೆ. ಪೂಜಾರಿ ಮನವಿ ಮಾಡಿದ್ದಾರೆ.
ಇತ್ತೀಚೆಗಷ್ಟೇ ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಭರತ್ ಶೆಟ್ಟಿ ಅವರಿಗೂ ಸಹ ಕೋವಿಡ್ ಸೋಂಕು ದೃಢವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.