ಶಿಗ್ಗಾವಿ ಉಪಚುನಾವಣೆ: ಪುತ್ರನ ಪರ ಸಂಸದ ಬೊಮ್ಮಾಯಿ ತೆರೆಮರೆ ಕಸರತ್ತು: ಬಿಎಸ್‌ವೈ ಭೇಟಿಯಾಗಿ ಸಮಾಲೋಚನೆ

By Kannadaprabha NewsFirst Published Oct 18, 2024, 7:59 AM IST
Highlights

ಶಿಗ್ಗಾವಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ತಮ್ಮ ಪುತ್ರನನ್ನು ಕಣಕ್ಕಿಳಿಸುವ ಬಗ್ಗೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬಹಿರಂಗವಾಗಿ ನಿರಾಕರಿಸುತ್ತಲೇ ತೆರೆಮರೆಯಲ್ಲಿ ಪ್ರಯತ್ನ ನಡೆಸಿದ್ದಾರೆ ಎನ್ನಲಾಗಿದೆ. 

ಬೆಂಗಳೂರು (ಅ.18): ಶಿಗ್ಗಾವಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ತಮ್ಮ ಪುತ್ರನನ್ನು ಕಣಕ್ಕಿಳಿಸುವ ಬಗ್ಗೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬಹಿರಂಗವಾಗಿ ನಿರಾಕರಿಸುತ್ತಲೇ ತೆರೆಮರೆಯಲ್ಲಿ ಪ್ರಯತ್ನ ನಡೆಸಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಗುರುವಾರ ಪಕ್ಷದ ಹಿರಿಯ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿದರು. ಮಾತುಕತೆ ವೇಳೆ ಯಡಿಯೂರಪ್ಪ ಅವರೂ ಬೊಮ್ಮಾಯಿ ಪುತ್ರ ಭರತ್‌ ಅವರನ್ನು ಕಣಕ್ಕಿಳಿಸುವಂತೆ ಸಲಹೆ ನೀಡಿದರು. 

ಯೋಚಿಸಿ ನಿರ್ಧರಿಸುವುದಾಗಿ ಬೊಮ್ಮಾಯಿ ಪ್ರತಿಕ್ರಿಯಿಸಿದರು ಎಂದು ತಿಳಿದು ಬಂದಿದೆ. ಇದೇ ವೇಳೆ ಟಿಕೆಟ್ ವಿಷಯವಾಗಿ ಪಕ್ಷದ ವರಿಷ್ಠರ ಜತೆ ಚರ್ಚೆ ನಡೆಸುವ ಸಂಬಂಧ ಬಸವರಾಜ ಬೊಮ್ಮಾಯಿ ಅವರು ಶನಿವಾರದ ಬಳಿಕ ದೆಹಲಿಗೆ ತೆರಳಲು ನಿರ್ಧರಿಸಿದ್ದಾರೆ. ಶಿಗ್ಗಾವಿಯಲ್ಲಿ ಕಾಂಗ್ರೆಸ್ ಯಾರನ್ನು ಕಣಕ್ಕಿಳಿಸಲಿದೆ ಎಂಬುದನ್ನು ಕಾದು ನೋಡಿ ತಮ್ಮ ಪುತ್ರನನ್ನು ಕಣಕ್ಕಿಳಿಸುವ ಬಗ್ಗೆ ಬೊಮ್ಮಾಯಿ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ. ಅಲ್ಪಸಂಖ್ಯಾತರು ನಿರ್ಣಾಯಕರಾಗಿರುವ ಶಿಗ್ಗಾವಿಯಿಂದ ಕಾಂಗ್ರೆಸ್ ಪಕ್ಷ ಅಲ್ಪಸಂಖ್ಯಾತರನ್ನೇ ಕಣಕ್ಕಿಳಿಸಿದಲ್ಲಿ ಬೊಮ್ಮಾಯಿ ಅವರು ತಮ್ಮ ಪುತ್ರನನ್ನು ಅಭ್ಯರ್ಥಿಯನ್ನಾಗಿಸಲು ಮುಂದಾಗಬಹುದು. 

Latest Videos

ಒಂದು ವೇಳೆ ಕಾಂಗ್ರೆಸ್ ಪಕ್ಷ ಅಲ್ಪಸಂಖ್ಯಾತರನ್ನು ಹೊರತುಪಡಿಸಿ ಲಿಂಗಾಯತ ಸಮುದಾಯದವರನ್ನು ಕಣಕ್ಕಿಳಿಸಿದಲ್ಲಿ ಬೊಮ್ಮಾಯಿ ಅವರು ತಮ್ಮ ಪುತ್ರನನ್ನು ಕಣಕ್ಕಿಳಿಸುವ ‘ರಿಸ್ಕ್‌’ ತೆಗೆದುಕೊಳ್ಳಲಾರರು ಎಂದು ಮೂಲಗಳು ತಿಳಿಸಿವೆ. ಯಡಿಯೂರಪ್ಪ ಅವರ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಬೊಮ್ಮಾಯಿ, ಯಡಿಯೂರಪ್ಪ ನಮ್ಮ ಹಿರಿಯ ನಾಯಕರು. ಅವರನ್ನು ಸಹಜವಾಗಿ ಭೇಟಿ ಮಾಡುತ್ತೇವೆ. ಚುನಾವಣೆಯ ಬಗ್ಗೆ ಬಂದು ಮಾತನಾಡು ಅಂದರು. ಹೀಗಾಗಿ ಅವರೊಂದಿಗೆ ಮಾತಾಡಿದ್ದೇನೆ. ಶಿಗ್ಗಾವಿ ಕ್ಷೇತ್ರದ ಬಗ್ಗೆಯೂ ಚರ್ಚೆ ನಡೆಯಿತು.

ಚನ್ನಪಟ್ಟಣ, ಶಿಗ್ಗಾವಿ, ಸಂಡೂರು ಉಪಚುನಾವಣೆ: ಇಂದಿನಿಂದ ನಾಮಪತ್ರ ಸಲ್ಲಿಕೆ ಪ್ರಾರಂಭ

ಚುನಾವಣೆಗೆ ಏನೇನು ತಯಾರಿ ಮಾಡಿದ್ದೇವೆ ಅಂತ ಕೇಳಿದರು. ಎಲ್ಲ ಸಿದ್ಧತೆ ಮಾಡಿಕೊಂಡಿರುವ ಬಗ್ಗೆ ಹೇಳಿದ್ದೇನೆ ಎಂದು ತಿಳಿಸಿದರು. ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಅಭ್ಯರ್ಥಿ ಆಯ್ಕೆ ಬಗ್ಗೆಯೂ ಚರ್ಚೆ ಆಗಿದೆ. ಅಂತಿಮವಾಗಿ ಯಾರಿಗೇ ಟಿಕೆಟ್ ಕೊಟ್ಟರೂ ಗೆಲ್ಲಿಸಬೇಕು ಅಂತ ಆಗಿದೆ. ದೆಹಲಿಗೆ ಶನಿವಾರದ ನಂತರ ಹೋಗುತ್ತೇನೆ. ಎಲ್ಲ ಮೂರು ಕ್ಷೇತ್ರಗಳಲ್ಲೂ ಗೆಲ್ಲುವುದಕ್ಕೆ‌ ಪ್ರಯತ್ನ ಮಾಡೋಣ ಅಂದಿದ್ದಾರೆ ಎಂದು ಹೇಳಿದರು.

click me!