ರಾಜ್ಯದಲ್ಲಿ ಮೂರು ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯುತ್ತಿದ್ದು, ಶಿಗ್ಗಾವಿ ಕ್ಷೇತ್ರಕ್ಕೆ ಮಾಜಿ ಸಚಿವ ಮುರುಗೇಶ್ ನಿರಾಣಿ ಅವರ ಹೆಸರು ಕೇಳಿ ಬರುತ್ತಿರುವುದರ ಬೆನ್ನಲ್ಲೇ ಸ್ವತಃ ನಿರಾಣಿ ಅವರೇ ನಾನು ಸ್ಪರ್ಧೆ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ನವದೆಹಲಿ (ಅ.18): ರಾಜ್ಯದಲ್ಲಿ ಮೂರು ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯುತ್ತಿದ್ದು, ಶಿಗ್ಗಾವಿ ಕ್ಷೇತ್ರಕ್ಕೆ ಮಾಜಿ ಸಚಿವ ಮುರುಗೇಶ್ ನಿರಾಣಿ ಅವರ ಹೆಸರು ಕೇಳಿ ಬರುತ್ತಿರುವುದರ ಬೆನ್ನಲ್ಲೇ ಸ್ವತಃ ನಿರಾಣಿ ಅವರೇ ನಾನು ಸ್ಪರ್ಧೆ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ನಿರಾಣಿ ಅವರು, ಶಿಗ್ಗಾವಿ ಕ್ಷೇತ್ರ ಸೇರಿ 3 ಕ್ಷೇತ್ರಗಳ ಉಪಚುನಾವಣೆಗೆ ದಿನಾಂಕ ಘೋಷಣೆಯಾಗಿದೆ. ಇದರಲ್ಲಿ ಶಿಗ್ಗಾವಿ ಕ್ಷೇತ್ರಕ್ಕೆ ನನ್ನ ಹೆಸರು ಕೇಳಿ ಬರುತ್ತಿದ್ದು, ನಾನು ಬಿಜೆಪಿ ಟಿಕೆಟ್ ಆಕಾಂಕ್ಷಿ ಅಲ್ಲ.
ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರ ಮಗ ಭರತ್ ಬೊಮ್ಮಾಯಿ ಸೇರಿ 60 ಮಂದಿ ಟಿಕೆಟ್‌ಗಾಗಿ ಅರ್ಜಿ ಹಾಕಿದ್ದಾರೆ ಎಂದು ತಿಳಿಸಿದರು. ನಾನು ಮತ್ತೊಂದು ಜಿಲ್ಲೆಗೆ ಹೋಗಿ ಸ್ಪರ್ಧೆ ಮಾಡೋದು ಸರಿಯಲ್ಲ. ಆ ಕ್ಷೇತ್ರದಲ್ಲೂ ಪಂಚಮಸಾಲಿ ಸಮಾಜದವರು ಹೆಚ್ಚಿದ್ದು, ಪಕ್ಷಕ್ಕಾಗಿ ದುಡಿದ ಕಾರ್ಯಕರ್ತರಿಗೆ ಪಕ್ಷದ ಟಿಕೆಟ್ ಕೊಡಬೇಕು. ಅಂತಿಮವಾಗಿ ಶಿಗ್ಗಾವಿಯಲ್ಲಿ ಬಿಜೆಪಿ ಗೆಲ್ಲಿಸಿಕೊಂಡು ಬರುತ್ತೇವೆ ಎಂದು ತಮ್ಮ ಸ್ಪರ್ಧೆಯ ಕುರಿತು ಹರಿದಾಡಿದ ಸುದ್ದಿಗಳನ್ನು ನಿರಾಣಿ ಅಲ್ಲಗಳೆದಿದ್ದಾರೆ.
ಟಿಕೆಟ್ ಆಕಾಂಕ್ಷಿಗಳ ಲಾಬಿ ಶುರು: ಶಿಗ್ಗಾಂವಿ ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ ಘೋಷಣೆಯಾಗುತ್ತಿದ್ದಂತೆ ಕ್ಷೇತ್ರದಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿದೆ. ಕಾಂಗ್ರೆಸ್ ಮತ್ತು ಬಿಜೆಪಿ ಟಿಕೆಟ್ ಆಕಾಂಕ್ಷಿಗಳ ಲಾಬಿ ಶುರುವಾಗಿದ್ದು, ರಾಜ್ಯ ರಾಜಧಾನಿಯತ್ತ ದೌಡಾಯಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಸದರಾಗಿ ಆಯ್ಕೆಯಾದ ಬಳಿಕ ಶಿಗ್ಗಾಂವಿ ಕ್ಷೇತ್ರದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಕ್ಷೇತ್ರಕ್ಕೆ ಚುನಾವಣಾ ಆಯೋಗವು ದಿನಾಂಕ ನಿಗದಿಪಡಿಸಿದೆ. ಕ್ಷೇತ್ರಕ್ಕೆ ನ.13ರಂದು ಮತದಾನ ನಡೆಯಲಿದ್ದು, ನ.23ರಂದು ಮತ ಎಣಿಕೆ ಪ್ರಕ್ರಿಯೆ ನಡೆಯಲಿದೆ.
ಚನ್ನಪಟ್ಟಣ, ಶಿಗ್ಗಾವಿ, ಸಂಡೂರು ಉಪಚುನಾವಣೆ: ಇಂದಿನಿಂದ ನಾಮಪತ್ರ ಸಲ್ಲಿಕೆ ಪ್ರಾರಂಭ
2008ರಿಂದ ಸತತ ನಾಲ್ಕು ಚುನಾವಣೆಗಳಲ್ಲಿ ಬಸವರಾಜ ಬೊಮ್ಮಾಯಿ ಅವರು ಬಿಜೆಪಿಯಿಂದ ಸ್ಪರ್ಧಿಸಿ ಕ್ಷೇತ್ರವನ್ನು ಪ್ರತಿನಿಧಿಸುತ್ತ ಬಂದಿದ್ದರು. ಮಾಜಿ ಮುಖ್ಯಮಂತ್ರಿ ಪ್ರತಿನಿಧಿಸುತ್ತಿದ್ದ ಕ್ಷೇತ್ರವಾದ್ದರಿಂದ ಸಹಜವಾಗಿಯೇ ರಾಜ್ಯದ ಜನರ ಕುತೂಹಲ ಶಿಗ್ಗಾಂವಿಯತ್ತ ನೆಟ್ಟಿದೆ. ಉಪಚುನಾವಣೆ ಬಿಜೆಪಿ ಮತ್ತು ಕಾಂಗ್ರೆಸ್‌ಗೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಬಿಜೆಪಿಗೆ ಕ್ಷೇತ್ರ ಉಳಿಸಿಕೊಳ್ಳಬೇಕಾದ ಅನಿವಾರ್ಯತೆಯಿದ್ದರೆ, ಆಡಳಿತಾರೂಢ ಕಾಂಗ್ರೆಸ್‌ಗೆ ಕ್ಷೇತ್ರವನ್ನು ಗೆದ್ದು ಪ್ರತಿಷ್ಠೆ ಉಳಿಸಿಕೊಳ್ಳಬೇಕಾಗಿದೆ. ಆದ್ದರಿಂದ ಎರಡೂ ಪಕ್ಷಗಳು ರಣತಂತ್ರ ಹೂಡುವುದು ನಿಶ್ಚಿತವಾಗಿದೆ. ಅದಕ್ಕಾಗಿ ಅಳೆದು ತೂಗಿ ಟಿಕೆಟ್ ನೀಡಲು ಮುಖಂಡರು ನಿರ್ಧರಿಸಿದ್ದಾರೆ.