ಯಾದಗಿರಿ ಜಿಲ್ಲೆಗೆ ಒಲಿದ ಸಚಿವ ಸ್ಥಾನದ ಗರಿ: ಸಣ್ಣ ಕೈಗಾರಿಕಾ ಸಚಿವರಾಗಿ ದರ್ಶನಾಪುರ

By Kannadaprabha News  |  First Published May 28, 2023, 5:36 AM IST

​​​ ಯಾದಗಿರಿ ಜಿಲ್ಲೆಯ ಶಹಾಪುರ ಮತಕ್ಷೇತ್ರದ ಶಾಸಕ ಶರಣ ಬಸಪ್ಪಗೌಡ ದರ್ಶನಾಪುರ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರದ ಸಚಿವ ಸಂಪುಟದಲ್ಲಿ ಕೊನೆಗೂ ಸ್ಥಾನ ಸಿಕ್ಕಿದೆ. ದರ್ಶನಾಪುರ ಬೆಂಬಲಿಗರಲ್ಲಿ ಹರ್ಷದ ಹೊನಲು ಮುಗಿಲು ಮುಟ್ಟಿದೆ.


ಯಾದಗಿರಿ/ಶಹಾಪುರ (ಮೇ.28) : ಯಾದಗಿರಿ ಜಿಲ್ಲೆಯ ಶಹಾಪುರ ಮತಕ್ಷೇತ್ರದ ಶಾಸಕ ಶರಣ ಬಸಪ್ಪಗೌಡ ದರ್ಶನಾಪುರ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರದ ಸಚಿವ ಸಂಪುಟದಲ್ಲಿ ಕೊನೆಗೂ ಸ್ಥಾನ ಸಿಕ್ಕಿದೆ. ದರ್ಶನಾಪುರ ಬೆಂಬಲಿಗರಲ್ಲಿ ಹರ್ಷದ ಹೊನಲು ಮುಗಿಲು ಮುಟ್ಟಿದೆ.

ಶನಿವಾರ ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯ ಸಂಪುಟ ದರ್ಜೆಯ ಸಚಿವರಾಗಿ ದೇವರ ಹೆಸರಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಶರಣಬಸಪ್ಪಗೌಡ ದರ್ಶನಾಪುರ ಅವರಿಗೆ ರಾಜ್ಯ ಸಣ್ಣ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆಗಳ ಖಾತೆ ನೀಡಲಾಗಿದೆ. ಯಾದಗಿರಿ ಜಿಲ್ಲಾ ಉಸ್ತುವಾರಿಯನ್ನೂ ನೀಡುವ ಸಾಧ್ಯತೆಗಳು ದಟ್ಟವಾಗಿವೆ.

Latest Videos

undefined

ಕಾಂಗ್ರೆಸ್‌ ಅಧಿಕಾರಕ್ಕೆ ಬಂದ 3 ದಿನದಲ್ಲಿ ಸಾಲಬಾಧೆಗೆ ಇಬ್ಬರು ರೈತರ ಆತ್ಮಹತ್ಯೆ

5 ಬಾರಿ ಶಾಸಕರಾಗಿ ಆಯ್ಕೆ :

ಒಟ್ಟು 7 ಬಾರಿ ವಿಧಾನಸಭೆ ಚುನಾವಣೆಗಳನ್ನು ಎದುರಿಸಿದ ಶರಣಬಸಪ್ಪಗೌಡ ದರ್ಶನಾಪುರ, 5 ಬಾರಿ ಗೆಲುವು ಹಾಗೂ 2 ಬಾರಿ ಸೋಲು ಕಂಡಿದ್ದಾರೆ. ಅವರು 1994, 2004, 2008, 2018, ಮತ್ತು 2023ರ ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ 5 ಅವ​ಧಿಗೆ ಶಹಾಪುರ ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ.

ಮೊದಲು ಎರಡು ಬಾರಿ ಸಚಿವ ಸ್ಥಾನ :

1996ರಲ್ಲಿ ಮಾಜಿ ಮುಖ್ಯಮಂತ್ರಿ ದಿ.ಜೆ.ಎಚ್‌.ಪಟೇಲರ ಸರ್ಕಾರದಲ್ಲಿ ಇಂಧನ ಹಾಗೂ ವಿದ್ಯುತ್‌ ಖಾತೆ ಮಂತ್ರಿಯಾಗಿದ್ದ ಶರಣಬಸಪ್ಪಗೌಡ, ಮಾಜಿ ಸಿಎಂ ಎಚ್‌. ಡಿ. ಕುಮಾರಸ್ವಾಮಿ ಅವರ ಅವಧಿಯಲ್ಲಿ (18 ಫೆ. 2006 ರಿಂದ 8 ಅ. 2007ರವರೆಗೆ) ಕೃಷಿ ಉತ್ಪನ್ನ ಮಾರುಕಟ್ಟೆಸಮಿತಿ ಸಚಿವರಾಗಿದ್ದರು. ಆಗ ಅವಿಭಜಿತ ಕಲಬುರಗಿ-ಯಾದಗಿರಿ ಜಿಲ್ಲೆಯ ಉಸ್ತುವಾರಿಯನ್ನೂ ಅವರು ವಹಿಸಿಕೊಂಡಿದ್ದರು.

2023ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಂಪುಟದಲ್ಲಿ ಮೂರನೇ ಬಾರಿಗೆ ಅವರಿಗೆ ಸಚಿವ ಸ್ಥಾನ ಒಲಿದು ಬಂದಿದೆ. ಸಣ್ಣ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆಗಳ ಖಾತೆಯನ್ನು ಅವರಿಗೆ ನೀಡಲಾಗಿದೆ. ಜಿಲ್ಲೆಯಲ್ಲಿ ಸಣ್ಣ ಕೈಗಾರಿಕೆಗಳ ಸ್ಥಾಪನೆ ಜೊತೆಗೆ ಇನ್ನಿತರ ಅಭಿವೃದ್ಧಿ ಕಾರ್ಯಗಳಿಗೆ ದರ್ಶನಾಪುರ ಒತ್ತು ನೀಡುವ ಅಪಾರ ನಿರೀಕ್ಷೆಯಿದೆ.

ವಿದ್ಯಾಭ್ಯಾಸ, ವೈಯುಕ್ತಿಕ ಬದುಕು :

ಸಚಿವ ಶರಣಬಸಪ್ಪ ದರ್ಶನಾಪುರ ಅವರು ಕಲಬುರಗಿಯ ಪೂಜ್ಯ ದೊಡ್ಡಪ್ಪ ಅಪ್ಪ ಎಂಜಿನೀಯರಿಂಗ್‌ ಕಾಲೇಜಿನಲ್ಲಿ ಸಿವಿಲ್‌ ಎಂಜಿನೀಯರಿಂಗ್‌ ಪದವಿಯನ್ನು ಪೂರ್ಣಗೊಳಿಸಿದ್ದಾರೆ.

ರಾಜಕೀಯಕ್ಕೆ ಪ್ರವೇಶಿಸುವ ಮೊದಲು, ಅವರು 1985ರಿಂದ 1989ರವರೆಗೆ ಲಿಫ್ಟ್‌ ನೀರಾವರಿ ಕಾರ್ಪೊರೇಷನ್‌ ಬಿಜಾಪುರದಲ್ಲಿ (ವಿಜಯಪುರ) ಸಹಾಯಕ ಎಂಜಿನೀಯರ್‌ ಆಗಿ ಕಾರ್ಯನಿರ್ವಹಿಸಿದ್ದರು. 1992ರಲ್ಲಿ ಎಂಜಿನೀಯರಿಂಗ್‌ ಪದವೀಧರ ಕ್ಷೇತ್ರ ಗುಲ್ಬರ್ಗಾ ವಿಶ್ವವಿದ್ಯಾಲಯ ಗುಲ್ಬರ್ಗಾದಿಂದ ಸೆನೆಟ್‌ ಸದಸ್ಯರಾಗಿ ಆಯ್ಕೆಯಾದರು. ಸಚಿವ ಶರಣಬಸಪ್ಪಗೌಡ 1996ರಲ್ಲಿ ಸರ್‌ ಎಂ. ವಿಶ್ವೇಶ್ವರಯ್ಯ ಸಹಕಾರ ಬ್ಯಾಂಕ್‌ ನಿಯಮಿತದ ಸಂಸ್ಥಾಪಕ ಸದಸ್ಯ ಮತ್ತು ಅಧ್ಯಕ್ಷರಾದರು. 1997ರಲ್ಲಿ ಗುಲ್ಬರ್ಗಾ ಎಂಜಿನೀಯರ್ಸ್‌ ಫ್ಯಾಮಿಲಿ ಕ್ಲಬ್‌, ಗುಲ್ಬರ್ಗಾದ ಸಂಸ್ಥಾಪಕ ಮತ್ತು ಅಧ್ಯಕ್ಷರಾಗಿದ್ದ ದರ್ಶನಾಪುರ, ಪ್ರಸ್ತುತ ಕ್ಲಬ್‌ನ ಮುಖ್ಯ ಪೋಷಕರಾಗಿದ್ದಾರೆ.

2018ರಲ್ಲಿ ರಾಜ್ಯ ಯೋಜನಾ ಮಂಡಳಿಯ ಉಪಾಧ್ಯಕ್ಷರಾಗಿ, ಫೆ.14, 2022ರಂದು ಅವರು ಹೈದರಾಬಾದ್‌ ಕರ್ನಾಟಕ ಪ್ರದೇಶಕ್ಕೆ ಸೇರಿದ 11 ಇತರ ಶಾಸಕರೊಂದಿಗೆ ಕೆಕೆಆರ್ಡಿಬಿ ಮಂಡಳಿಯ ಸದಸ್ಯರಾಗಿದ್ದರು.

ಅಪ್ಪ ಸಹ ಸಣ್ಣ ಕೈಗಾರಿಕೆ ಮಂತ್ರಿಯಾಗಿದ್ದರು

ಮುಖ್ಯಮಂತ್ರಿ ಸಿದ್ದರಾಮಯ್ಯ(Siddaramaiah) ಅವರ ಸಚಿವ ಸಂಪುಟದಲ್ಲಿ ಸ್ಥಾನ ಗಿಟ್ಟಿಸಿದ ಶಾಸಕ ಶರಣಬಸಪ್ಪಗೌಡ ದರ್ಶನಾಪುರSharanabasappa darshanaur ಅವರಿಗೆ ಸಣ್ಣ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆಗಳ ಇಲಾಖೆ ನೀಡಲಾಗಿದೆ. ಅಚ್ಚರಿ ಎಂದರೆ, ಸುಮಾರು ಐದು ದಶಕಗಳ ಹಿಂದೆ ಇದೇ ಸಣ್ಣ ಕೈಗಾರಿಕೆಗಳ ಖಾತೆಯನ್ನು ಶರಣಬಸಪ್ಪಗೌಡರ ತಂದೆ, ಮಾಜಿ ಸಚಿವ ದಿ. ಬಾಪೂಗೌಡರು ನಿರ್ವಹಿಸಿದ್ದರು. ಮೂರು ಅವಧಿಗಳಿಗೆ ಶಾಸಕರಾಗಿ ಆಯ್ಕೆಯಾಗಿದ್ದ ದಿ.ಬಾಪೂಗೌಡ ದರ್ಶನಾಪುರ ಅವರು 1985ರಲ್ಲಿ ಮಾಜಿ ಮುಖ್ಯಮಂತ್ರಿ ದಿ.ರಾಮಕೃಷ್ಣ ಹೆಗಡೆ ಅವರ ಸರ್ಕಾರದಲ್ಲಿ ಸಣ್ಣ ಕೈಗಾರಿಕೆಗಳ ಸಚಿವರಾಗಿದ್ದರು. ಮುಖ್ಯ ಸಚೇತಕರಾಗಿ ಮತ್ತು ಕರ್ನಾಟಕ ಹೌಸಿಂಗ್‌ ಬೋರ್ಡಿನ ಅಧ್ಯಕ್ಷರಾಗಿಯೂ ಬಾಪೂಗೌಡ ಸೇವೆ ಸಲ್ಲಿಸಿದ್ದರು. ಪತಿ ಶರಣಬಸಪ್ಪಗೌಡ ಅವರು ಮೂರನೇ ಬಾರಿ ಸಚಿವರಾಗಿದ್ದರಿಂದ ಪತ್ನಿ ಭಾರತಿ ದರ್ಶನಾಪುರ ಹಾಗೂ ಪುತ್ರ, ಪುತ್ರಿ ಸೇರಿದಂತೆ ಅನೇಕರ ಹರ್ಷ ಇಮ್ಮಡಿಸಿದೆ.

ಮೊದಲ ಬಾರಿಗೆ 43 ಡಿಗ್ರಿ ದಾಟಿದ ಉಷ್ಣಾಂಶ ಬಿಸಿಲು, ಯಾದಗಿರಿಯಲ್ಲಿ ಮತ್ತಷ್ಟುಶಿಶುಗಳು ಅಸ್ವಸ್ಥ

ಶಹಾಪುರ ಕ್ಷೇತ್ರದಿಂದ ಶಾಸಕ ಶರಣಬಸಪ್ಪ ಗೌಡ ಆಯ್ಕೆಯಾದ ವಿವರ

  • 1994: ಶರಣಬಸ್ಸಪ್ಪ ದರ್ಶನಾಪುರ, (ಜನತಾದಳ)
  • 2004: ಶರಣಬಸ್ಸಪ್ಪ ದರ್ಶನಾಪುರ, (ಜನತಾದಳ ಜಾತ್ಯತೀತ.
  • 2008: ಶರಣಬಸ್ಸಪ್ಪ ದರ್ಶನಾಪುರ, (ಭಾರತೀಯ ರಾಷ್ಟಿ್ರೕಯ ಕಾಂಗ್ರೆಸ್‌)
  • 2018: ಶರಣಬಸಪ್ಪಗೌಡ ದರ್ಶನಾಪುರ್‌, (ಭಾರತೀಯ ರಾಷ್ಟಿ್ರೕಯ ಕಾಂಗ್ರೆಸ್‌)
  • 2023: ಶರಣಬಸಪ್ಪಗೌಡ ದರ್ಶನಾಪುರ್‌, (ಭಾರತೀಯ ರಾಷ್ಟಿ್ರೕಯ ಕಾಂಗ್ರೆಸ್‌)
click me!