ಬಿಜೆಪಿ ಜತೆ ಎನ್‌ಸಿಪಿ ಮಹಾ ಸರ್ಕಾರ: ಈ ಹಾದಿ ಸುಗಮಕ್ಕೆಂದೇ ಪವಾರ್ ಪದತ್ಯಾಗ?

Published : May 03, 2023, 07:36 AM IST
ಬಿಜೆಪಿ ಜತೆ ಎನ್‌ಸಿಪಿ ಮಹಾ ಸರ್ಕಾರ: ಈ ಹಾದಿ ಸುಗಮಕ್ಕೆಂದೇ ಪವಾರ್ ಪದತ್ಯಾಗ?

ಸಾರಾಂಶ

ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್‌ ಅವರ ಪದತ್ಯಾಗ ನಿರ್ಧಾರವು ಮಹಾರಾಷ್ಟ್ರ ರಾಜಕಾರಣದಲ್ಲಿ ಹಲವು ರೋಚಕ ರಾಜಕೀಯ ಘಟನೆಗಳಿಗೆ ನಾಂದಿಯಾಡಬಹುದು ಎಂಬ ಕುತೂಹಲ ಗರಿಗೆದರಿದೆ. ಈ ಎಲ್ಲ ಬೆಳವಣಿಗೆಗಳು ಮಹಾರಾಷ್ಟ್ರದಲ್ಲಿ ಬಿಜೆಪಿ- ಎನ್‌ಸಿಪಿ ಸರ್ಕಾರದ ಅಸ್ತಿತ್ವಕ್ಕೂ ಕಾರಣವಾಗಬಹುದು ಎಂದೂ ಹೇಳಲಾಗುತ್ತಿದೆ.

ಮುಂಬೈ: ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್‌ ಅವರ ಪದತ್ಯಾಗ ನಿರ್ಧಾರವು ಮಹಾರಾಷ್ಟ್ರ ರಾಜಕಾರಣದಲ್ಲಿ ಹಲವು ರೋಚಕ ರಾಜಕೀಯ ಘಟನೆಗಳಿಗೆ ನಾಂದಿಯಾಡಬಹುದು ಎಂಬ ಕುತೂಹಲ ಗರಿಗೆದರಿದೆ. ಈ ಎಲ್ಲ ಬೆಳವಣಿಗೆಗಳು ಮಹಾರಾಷ್ಟ್ರದಲ್ಲಿ ಬಿಜೆಪಿ- ಎನ್‌ಸಿಪಿ ಸರ್ಕಾರದ ಅಸ್ತಿತ್ವಕ್ಕೂ ಕಾರಣವಾಗಬಹುದು ಎಂದೂ ಹೇಳಲಾಗುತ್ತಿದೆ.

ಶಿವಸೇನೆಯಿಂದ (Shivasena) ಹೊರಬಂದು ಬಿಜೆಪಿ ಜತೆಗೂಡಿ ಏಕನಾಥ ಶಿಂಧೆ (Ekanath Shindhe)ಬಣದ ಶಾಸಕರು ಅಧಿಕಾರ ನಡೆಸುತ್ತಿದ್ದಾರೆ. ಸಿಎಂ ಏಕನಾಥ ಶಿಂಧೆ ಹಾಗೂ ಅವರ ಬಣದ 15 ಶಾಸಕರ ಅನರ್ಹತೆ ಪ್ರಶ್ನಿಸಿ ಶಿವಸೇನೆಯ ಉದ್ಧವ್‌ ಠಾಕ್ರೆ (Uddhav Thackeray) ಅವರು ಸುಪ್ರೀಂಕೋರ್ಟ್‌ನಲ್ಲಿ ಸಲ್ಲಿಸಿರುವ ಅನರ್ಹತೆ ಅರ್ಜಿಯ ತೀರ್ಪು ಇನ್ನು 15 ದಿನದಲ್ಲಿ ಹೊರಬೀಳುವ ನಿರೀಕ್ಷೆ ಇದೆ. ಅದರ ಬೆನ್ನಿಗೇ ಶರದ್‌ ಪವಾರ್‌ (Sharad pawar)ಅವರು ಎನ್‌ಸಿಪಿ ಅಧ್ಯಕ್ಷ ಹುದ್ದೆ ತೊರೆದಿದ್ದಾರೆ.

ಶಿಂಧೆ ಬಣ ಅನರ್ಹಗೊಂಡರೆ ಬಿಜೆಪಿ ಸರ್ಕಾರ ಬಹುಮತ ಕಳೆದುಕೊಳ್ಳುತ್ತದೆ. ಅಂತಹ ಸಂದರ್ಭದಲ್ಲಿ ಎನ್‌ಸಿಪಿ- ಬಿಜೆಪಿ ಸರ್ಕಾರ ರಚಿಸುವ ಸಾಧ್ಯತೆ ಇದೆ. ಮತ್ತೊಂದು ವಾದದ ಪ್ರಕಾರ, ಶಿಂಧೆ ಬಣದ ಶಾಸಕರ ಬಗ್ಗೆ ಜನಮಾನಸದಲ್ಲಿ ಉತ್ತಮ ಅಭಿಪ್ರಾಯವಿಲ್ಲ. ಅವರ ಜತೆ ಲೋಕಸಭೆ ಚುನಾವಣೆಗೆ ಹೋದರೆ ಹಿನ್ನಡೆಯಾಗುವ ಸಾಧ್ಯತೆ ಇದೆ. ಹೀಗಾಗಿ ಬಿಜೆಪಿಯು ಎನ್‌ಸಿಪಿ ಜತೆ ಸೇರಲು ತುದಿಗಾಲಿನಲ್ಲಿ ನಿಂತಿದೆ ಎನ್ನಲಾಗಿದೆ.

ಬಿಜೆಪಿ ವಿರೋಧಿ ರಾಜಕಾರಣ ಮಾಡಿಕೊಂಡು ಬಂದಿರುವ ಪವಾರ್‌ ಅವರಿಗೆ ಬಿಜೆಪಿ ಜತೆಗೂಡಿ ಸರ್ಕಾರ ರಚಿಸುವುದು ಸುತಾರಾಂ ಇಷ್ಟವಿಲ್ಲ. ರಾಜಕೀಯದ ಸಂಧ್ಯಾಕಾಲದಲ್ಲಿರುವ ಅವರು ಎನ್‌ಸಿಪಿ ಮುಖ್ಯಸ್ಥ ಹುದ್ದೆಯಿಂದ ಕೆಳಗಿಳಿದು, ಅಜಿತ್‌ ಪವಾರ್‌ ಹಾಗೂ ಸುಪ್ರಿಯಾ ಸುಳೆ ಅವರು ಬಿಜೆಪಿ ಜತೆಗೂಡಲು ಹಾದಿ ಸುಗಮ ಮಾಡಿಕೊಟ್ಟಿರಬಹುದು ಎಂದೂ ಹೇಳಲಾಗುತ್ತಿದೆ.

ವೀರ್ ಸಾವರ್ಕರ್ ವಿರುದ್ಧ ಟೀಕೆ ಬೇಡ, ರಾಹುಲ್ ಗಾಂಧಿಗೆ ಶರದ್ ಪವಾರ್ ಸೂಚನೆ!

ಸೋನಿಯಾ ವಿರುದ್ಧ ತಿರುಗಿಬಿದ್ದು ಎನ್‌ಸಿಪಿ ಸ್ಥಾಪಿಸಿದ್ದ ಪವಾರ್‌

ಇಟಲಿ ಮೂಲದ ಸೋನಿಯಾ ಗಾಂಧಿ ಅವರು ಕಾಂಗ್ರೆಸ್‌ ಅಧ್ಯಕ್ಷೆಯಾಗುವುದನ್ನು ತೀವ್ರವಾಗಿ ವಿರೋಧಿಸಿದ್ದ ಕಾರಣಕ್ಕೆ ಶರದ್‌ ಪವಾರ್‌, ಪಿ.ಎ. ಸಂಗ್ಮಾ ಹಾಗೂ ತಾರೀಖ್‌ ಅನ್ವರ್‌ ಅವರನ್ನು 1999ರಲ್ಲಿ ಕಾಂಗ್ರೆಸ್‌ನಿಂದ ಉಚ್ಚಾಟಿಸಲಾಗಿತ್ತು. ಆ ಬಳಿಕ ರಾಷ್ಟ್ರೀಯವಾದಿ ಕಾಂಗ್ರೆಸ್‌ ಪಕ್ಷವನ್ನು ಶರದ್‌ ಪವಾರ್‌ ಸ್ಥಾಪಿಸಿದ್ದರು. ಮಹಾರಾಷ್ಟ್ರದಲ್ಲಿ ಸೋನಿಯಾ ನೇತೃತ್ವದ ಕಾಂಗ್ರೆಸ್‌ ಜತೆಗೂಡಿಯೇ ಎರಡು ಬಾರಿ ಸಮ್ಮಿಶ್ರ ಸರ್ಕಾರ ರಚನೆಗೆ ಕಾರಣರಾಗಿದ್ದರು. ಅಲ್ಲದೆ ಸೋನಿಯಾ ನೇತೃತ್ವದ ಯುಪಿಎ ಪಾಲುದಾರರಾಗಿ ಕೇಂದ್ರದಲ್ಲಿ ಮಂತ್ರಿಯೂ ಆಗಿದ್ದರು. ಪಕ್ಷ ಸ್ಥಾಪನೆಯಾದಾಗಿನಿಂದಲೂ ಅದರ ರಾಷ್ಟ್ರೀಯ ಅಧ್ಯಕ್ಷರಾಗಿ ಪವಾರ್‌ ಇದ್ದರು.

ಪ್ರಭಾವಿ ರಾಜಕಾರಣಿ

4 ಬಾರಿ ಮಹಾರಾಷ್ಟ್ರ ಮುಖ್ಯಮಂತ್ರಿ ಹಾಗೂ ಕೇಂದ್ರದ ವಿವಿಧ ಸಚಿವ ಹುದ್ದೆಗಳನ್ನು ಅಲಂಕರಿಸಿರುವ ಶರದ್‌ ಪವಾರ್‌ ದೇಶದ ಪ್ರಭಾವಿ ರಾಜಕಾರಣಿ. 2014ರ ಲೋಕಸಭೆ ಚುನಾವಣೆಗೆ ಪ್ರತಿಪಕ್ಷಗಳು ಮಹಾಮೈತ್ರಿಕೂಟ ಸ್ಥಾಪಿಸಲು ಕಸರತ್ತು ನಡೆಸುತ್ತಿರುವ ಹೊತ್ತಿನಲ್ಲೇ ಅವರು ಎನ್‌ಸಿಪಿ ರಾಷ್ಟ್ರಾಧ್ಯಕ್ಷ ಹುದ್ದೆ ತೊರೆದಿರುವುದು ಅಚ್ಚರಿಗೆ ಕಾರಣವಾಗಿದೆ.

ಪದತ್ಯಾಗ ನಿರ್ಧಾರ ವಾಪಸಿಗೆ ಅಜಿತ್‌ ಪವಾರ್‌ ವಿರೋಧ

ಶರದ್‌ ಪವಾರ್‌ ಅವರು ಪದತ್ಯಾಗ ನಿರ್ಧಾರ ಘೋಷಿಸುತ್ತಿದ್ದಂತೆ ಅದನ್ನು ವಾಪಸ್‌ ಪಡೆಯುವಂತೆ ಪಕ್ಷದ ಎಲ್ಲ ನಾಯಕರೂ ಆಗ್ರಹಿಸಿದರು. ಆದರೆ ಶರದ್‌ ಪವಾರ್‌ ಸೋದರ ಸಂಬಂಧಿ ಅಜಿತ್‌ ಪವಾರ್‌ ಮಾತ್ರ ಆ ರೀತಿ ಆಗ್ರಹ ಮಾಡಲಿಲ್ಲ. ನಿರ್ಧಾರ ಹಿಂಪಡೆಯುವಂತೆ ಪವಾರ್‌ ಅವರಿಗೆ ಹೇಳಿ ಎಂದು ಪಕ್ಷದ ಮುಖಂಡರು ಪವಾರ್‌ ಪುತ್ರಿ ಸುಪ್ರಿಯಾ ಸುಳೆ ಅವರಿಗೆ ದುಂಬಾಲು ಬಿದ್ದರು. ಆದರೆ ಅದಕ್ಕೂ ಅಜಿತ್‌ ಅಡ್ಡಿಪಡಿಸಿದರು. ನಾನು ನಿನ್ನ ಅಣ್ಣ. ಏನೂ ಹೇಳಲು ಹೋಗಬೇಡ ಎಂದು ಸುಪ್ರಿಯಾಗೆ ತಾಕೀತು ಮಾಡಿದರು.

15 ದಿನದಲ್ಲಿ 2 ಬದಲಾವಣೆ: ಸುಳಿವು ನೀಡಿದ್ದ ಸುಪ್ರಿಯಾ

ಮುಂದಿನ 15 ದಿನದಲ್ಲಿ ಮಹಾರಾಷ್ಟ್ರ ರಾಜಕಾರಣದಲ್ಲಿ 2 ಮಹತ್ತರ ಬದಲಾವಣೆಗಳಾಗಲಿವೆ. ಒಂದು ಮಹಾರಾಷ್ಟ್ರದಲ್ಲಿ, ಇನ್ನೊಂದು ದೆಹಲಿಯಲ್ಲಿ ಆಗುತ್ತದೆ ಎಂದು ಏ.19ರಂದು ಶರದ್‌ ಪವಾರ್‌ ಪುತ್ರಿ ಸುಪ್ರಿಯಾ ಸುಳೆ ಹೇಳಿದ್ದರು. ಆ ಪೈಕಿ ‘ಮಹಾರಾಷ್ಟ್ರ’ದಲ್ಲಿ ಪವಾರ್‌ ಪದತ್ಯಾಗ ನಿರ್ಧಾರ ಪ್ರಕಟಿಸಿದ್ದಾರೆ. ‘ದೆಹಲಿ ಬೆಳವಣಿಗೆ’ ಯಾವುದು ಎಂಬ ಕುತೂಹಲವಿದೆ.

6 ದಶಕಗಳ ಸುದೀರ್ಘ ರಾಜಕೀಯ ನಡೆಸಿದ ಪವಾರ್‌

ಎನ್‌ಸಿಪಿ ಅಧ್ಯಕ್ಷ ಗಾದಿಗೆ ದಿಢೀರ್‌ ರಾಜೀನಾಮೆ ಘೋಷಿಸಿದ ಶರದ್‌ ಪವಾರ್‌ ಅವರದ್ದು ಸುದೀರ್ಘ ರಾಜಕೀಯ ಇತಿಹಾಸ. ಭರ್ಜರಿ 63 ವರ್ಷಗಳ ಕಾಲ ದೇಶದ ರಾಜಕೀಯವನ್ನು ಅರೆದು ಕುಡಿದ ಇತಿಹಾಸ ಅವರಿಗಿದೆ. 4 ಬಾರಿ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ, 2 ಬಾರಿ ಕೇಂದ್ರ ಸಚಿವರಾಗಿ ಸೇವೆ ಸಲ್ಲಿಸಿರುವ ಶರದ್‌ ಪವಾರ್‌ ನಿಪುಣ ರಾಜನೀತಿಜ್ಞ. ಕಾಂಗ್ರೆಸ್‌ನಲ್ಲೇ ಇದ್ದು ಮೊದಲ ಬಾರಿಗೆ ಕಾಂಗ್ರೆಸ್‌ಗೆ ವಿದೇಶಿ ಮುಖ್ಯಸ್ಥರು ಬೇಡ ಎಂದು ಸೋನಿಯಾ ಗಾಂಧಿ ವಿರುದ್ಧವಾಗಿ ಪತ್ರ ಬರೆದು ಗಮನ ಸೆಳೆದಿದ್ದು ಪವಾರ್‌ ಹಿರಿಮೆ.

ಶರದ್ ಪವಾರರ ಎನ್‌ಸಿಪಿಯ ರಾಷ್ಟ್ರೀಯ ಸ್ಥಾನಮಾನಕ್ಕೆ ಕುತ್ತು?

ಆರಂಭ: 1958ರಲ್ಲಿ ಯುವ ಕಾಂಗ್ರೆಸ್‌ಗೆ ಸೇರುವ ಮೂಲಕ ರಾಜಕೀಯ ಜೀವನ ಆರಂಭಿಸಿದ ಪವಾರ್‌. 1967ರಲ್ಲಿ ಬಾರಾಮತಿ ಕ್ಷೇತ್ರದಿಂದ ಮೊದಲ ಬಾರಿ ಶಾಸಕರಾಗಿ ಆಯ್ಕೆಯಾದರು. ಅಲ್ಲಿಂದ ಇಲ್ಲಿಯವರೆಗೂ ವಿಧಾನಸಭೆ ಅಥವಾ ಲೋಕಸಭೆ ಚುನಾವಣೆಗಳಲ್ಲಿ ಗೆಲುವು ಕಾಣುತ್ತಲೇ ಬಂದಿದ್ದಾರೆ. 1978ರಲ್ಲಿ ಮಹಾರಾಷ್ಟ್ರದ ಅತಿ ಕಿರಿಯ ಮುಖ್ಯಮಂತ್ರಿ (38 ವರ್ಷ)ಯಾಗಿ ಆಯ್ಕೆಯಾದರು. 1988 ಮತ್ತು 1990ರಲ್ಲಿ ಮತ್ತೆರಡು ಬಾರಿ ಅವರು ರಾಜ್ಯದ ಮುಖ್ಯಮಂತ್ರಿಯಾದರು. 1991ರಲ್ಲಿ ನರಸಿಂಹ ರಾವ್‌ ಅವರ ಸಂಪುಟದಲ್ಲಿ ರಕ್ಷಣಾ ಸಚಿವರಾಗಿ 2 ವರ್ಷ ಸೇವೆ ಸಲ್ಲಿಸಿದರು. ಬಳಿಕ ಮಹಾರಾಷ್ಟ್ರಕ್ಕೆ ಮರಳಿ 4ನೇ ಬಾರಿ ಮುಖ್ಯಮಂತ್ರಿಯಾದರು.

2004ರಲ್ಲಿ ಮನಮೋಹನ್‌ ಸಿಂಗ್‌ ಸರ್ಕಾರದಲ್ಲಿ ಕೃಷಿ ಸಚಿವರಾಗಿದ್ದ ಪವಾರ್‌ರನ್ನು 2009ರಲ್ಲೂ ಮುಂದುವರೆಸಲಾಯಿತು. 2014ರಲ್ಲಿ ಮಹಾರಾಷ್ಟ್ರದಲ್ಲಿ ಉಂಟಾದ ರಾಜಕೀಯ ಬಿಕ್ಕಟ್ಟನ್ನು ಪರಿಹರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಪವಾರ್‌ ಉದ್ಧವ್‌ ಠಾಕ್ರೆಯನ್ನು ಮುಖ್ಯಮಂತ್ರಿ ಎಂದು ಘೋಷಿಸಿದರು. ಈಗಲೂ ರಾಜ್ಯಸಭಾ ಸದಸ್ಯರಾಗಿ ಮುಂದುವರೆದಿದ್ದಾರೆ.

ಎನ್‌ಸಿಪಿಯಲ್ಲೀಗ ಉತ್ತರಾಧಿಕಾರಿ ಕಲಹ: ಯಾರಿಗೆ ಸಿಗುತ್ತೆ ಪಟ್ಟ?

ದೇಶದ ಹಿರಿಯ ಹಾಗೂ ಪ್ರಭಾವಿ ರಾಜಕಾರಣಿಗಳಲ್ಲಿ ಒಬ್ಬರಾಗಿರುವ ಮಹಾರಾಷ್ಟ್ರದ ಶರದ್‌ ಪವಾರ್‌ ಅವರ ಈ ದಿಢೀರ್ ನಿರ್ಧಾರ ತೀವ್ರ ಅಚ್ಚರಿ ಹಾಗೂ ನಾನಾ ವಿಶ್ಲೇಷಣೆಗಳಿಗೆ ಕಾರಣವಾಗಿದೆ. ಪವಾರ್‌ ಅವರ ಹಠಾತ್‌ ನಿರ್ಧಾರದಿಂದ ಆಘಾತಕ್ಕೆ ಒಳಗಾದ ಪಕ್ಷದ ನಾಯಕರು ಪವಾರ್‌ ಮುಂದೆಯೇ ಕಣ್ಣೀರಿಟ್ಟು, ಪ್ರತಿಭಟನೆ ಮಾಡಿ, ಆಕ್ರೋಶ ವ್ಯಕ್ತಪಡಿಸಿ ನಿರ್ಧಾರ ಹಿಂಪಡೆಯುವಂತೆ ಒತ್ತಾಯಿಸಿದ ಘಟನೆಯೂ ನಡೆದಿದೆ.

ಆದರೆ ಇದ್ಯಾವುದಕ್ಕೂ ಮಣಿಯದ ಅವರು, ‘ನಾನು ನಿಮ್ಮೊಂದಿಗೇ ಇರುತ್ತೇನೆ. ಆದರೆ ಎನ್‌ಸಿಪಿ ರಾಷ್ಟ್ರಾಧ್ಯಕ್ಷನಾಗಿ ಅಲ್ಲ’ಎಂದು ವಾದಿಸಿದ್ದಾರೆ. ಉತ್ತರಾಧಿಕಾರಿ ಆಯ್ಕೆಗೆ ಪ್ರಕ್ರಿಯೆ ಆರಂಭಿಸಲು ಸಮಿತಿಯೊಂದನ್ನೂ ಘೋಷಿಸಿದ್ದಾರೆ. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅಜಿತ್‌ ಪವಾರ್‌, ತಮ್ಮ ನಿರ್ಧಾರ ಮರುಪರಿಶೀಲಿಸಲು ಶರದ್‌ ಅವರಿಗೆ 3-4 ದಿನ ಬೇಕು ಎಂದು ಹೇಳಿದ್ದಾರೆ.

ಶರದ್‌ ಪವಾರ್‌ ದಿಢೀರ್‌ ಪದತ್ಯಾಗ ನಿರ್ಧಾರದ ಬೆನ್ನಲ್ಲೇ ಎನ್‌ಸಿಪಿಯ ಉತ್ತರಾಧಿಕಾರಿಯಾಗಿ ಯಾರು ಆಯ್ಕೆಯಾಗುತ್ತಾರೆ ಎಂಬ ಪ್ರಶ್ನೆ ಎದ್ದಿದೆ. ಈ ವಿಚಾರವಾಗಿ ಪವಾರ್‌ ಪುತ್ರಿ ಸುಪ್ರಿಯಾ ಸುಳೆ ಹಾಗೂ ಸೋದರ ಸಂಬಂಧಿ, ಪ್ರಭಾವಿ ನಾಯಕ ಅಜಿತ್‌ ಪವಾರ್‌ ನಡುವೆ ಕಲಹ ಕೂಡ ನಡೆಯಬಹುದು ಎಂಬ ವಿಶ್ಲೇಷಣೆಗಳು ಇವೆ.

ಹಠಾತ್‌ ಘೋಷಣೆ:

ತಮ್ಮ ಆತ್ಮಚರಿತ್ರೆಯ ಪರಿಷ್ಕೃತ ಆವೃತ್ತಿಯ ಬಿಡುಗಡೆಯ ಸಮಾರಂಭದಲ್ಲಿ ಶರದ್‌ ಪವಾರ್‌ ಅವರು ಮಂಗಳವಾರ ಪಾಲ್ಗೊಂಡಿದ್ದರು. ಎನ್‌ಸಿಪಿಯ ಘಟಾನುಘಟಿ ನಾಯಕರೂ ಉಪಸ್ಥಿತರಿದ್ದರು. ಈ ವೇಳೆ ಮಾತನಾಡಿದ ಪವಾರ್‌ ಅವರು, ನನ್ನ ರಾಜಕೀಯ ಜೀವನ 1960ರ ಮೇ 1ರಂದು ಆರಂಭವಾಗಿ 63 ವರ್ಷಗಳ ಕಾಲ ಮುಂದುವರಿದಿದೆ. ಮಹಾರಾಷ್ಟ್ರ ಹಾಗೂ ಭಾರತದ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದೇನೆ. ರಾಜ್ಯಸಭಾ ಸದಸ್ಯತ್ವ ಇನ್ನೂ ಮೂರು ವರ್ಷಗಳಷ್ಟಿದೆ. ಈ ವೇಳೆ ಮಹಾರಾಷ್ಟ್ರ ಹಾಗೂ ಭಾರತವನ್ನು ಕಾಡುತ್ತಿರುವ ಸಮಸ್ಯೆಗಳತ್ತ ಗಮನಹರಿಸುತ್ತೇನೆ. ಆದರೆ ಯಾವುದೇ ಜವಾಬ್ದಾರಿಯನ್ನೂ ಹೊತ್ತುಕೊಳ್ಳುವುದಿಲ್ಲ. 63 ವರ್ಷಗಳ ರಾಜಕೀಯ ಜೀವನದ ಬಳಿಕ ಹಿಂದೆ ಸರಿಯುವುದು ಅಗತ್ಯವಿದೆ. ಹೀಗಾಗಿ ರಾಷ್ಟ್ರೀಯವಾದಿ ಕಾಂಗ್ರೆಸ್‌ನ ರಾಷ್ಟ್ರಾಧ್ಯಕ್ಷ ಹುದ್ದೆಯಿಂದ ಕೆಳಗಿಳಿಯುತ್ತಿದ್ದೇನೆ ಎಂದು ಪ್ರಕಟಿಸಿದರು. ಆದರೆ ಸಾರ್ವಜನಿಕ ಜೀವನದಲ್ಲಿ ಮುಂದುವರಿಯವುದಾಗಿ ಹೇಳಿದರು.

ಈ ನಿರ್ಧಾರ ಕೇಳುತ್ತಿದ್ದಂತೆ ಪವಾರ್‌ ಅಕ್ಕಪಕ್ಕ ಕೂತಿದ್ದ ನಾಯಕರನೇಕರು ಕಣ್ಣೀರು ಹಾಕಿದರು. ಯಾರನ್ನೂ ವಿಶ್ವಾಸಕ್ಕೆ ಪಡೆಯದೆ ಕೈಗೊಂಡಿರುವ ಈ ನಿರ್ಧಾರವನ್ನು ಹಿಂದಕ್ಕೆ ಪಡೆಯಬೇಕು ಎಂದು ಸಂಸದ ಪ್ರಫುಲ್‌ ಪಟೇಲ್‌ ಆಗ್ರಹಿಸಿದರು. ರಾಜ್ಯ ಎನ್‌ಸಿಪಿ ಅಧ್ಯಕ್ಷ ಜಯಂತ್‌ ಪಾಟೀಲ್‌, ಜಿತೇಂದ್ರ ಅವ್ಹಾದ್‌ ಅವರು ಸಭೆಯಲ್ಲೇ ಕಣ್ಣೀರಿಟ್ಟು ನಿರ್ಧಾರ ಮರುಪರಿಶೀಲಿಸುವಂತೆ ಬೇಡಿಕೆ ಇಟ್ಟರು. ಆದರೂ ಪವಾರ್‌ ಮಣಿಯಲಿಲ್ಲ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕಾಂಗ್ರೆಸ್ ಸರ್ಕಾರ ಶೇ.60ರಷ್ಟು ಭ್ರಷ್ಟಾಚಾರದಲ್ಲಿ ಮುಳುಗಿದೆ: ಮಾಜಿ ಸಚಿವ ಬಿ.ಸಿ.ಪಾಟೀಲ್ ಆರೋಪ
ಇನ್ಮುಂದೆ ನೂರು ಗ್ಯಾರಂಟಿ ಘೋಷಣೆ ಮಾಡಿದರೂ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ: ಛಲವಾದಿ ನಾರಾಯಣಸ್ವಾಮಿ