
ಸುವರ್ಣ ವಿಧಾನಸಭೆ : ಕಲ್ಯಾಣ ಕರ್ನಾಟಕದ ರಾಯಚೂರಿನಲ್ಲಿ ‘ಏಮ್ಸ್’ ಸಂಸ್ಥೆ ಸ್ಥಾಪಿಸಲು ಅಂತಿಮ ಅನುಮೋದನೆ ನೀಡಬೇಕು, ಬೆಂಗಳೂರು ನಗರ ಪ್ರದೇಶದ ಸುತ್ತಮುತ್ತ ಇರುವ ಕೇಂದ್ರದ 73 ರಾಷ್ಟ್ರೀಯ ಸಂಸ್ಥೆಗಳ ಪೈಕಿ ಕನಿಷ್ಠ 25 ಸಂಸ್ಥೆಗಳನ್ನು ಉತ್ತರ ಕರ್ನಾಟಕಕ್ಕೆ ವರ್ಗಾಯಿಸಬೇಕು ಹಾಗೂ ಕೃಷ್ಣಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಿಸಬೇಕು ಎಂಬುದು ಸೇರಿ ಏಳು ಬೇಡಿಕೆಗಳನ್ನು ಜಾರಿ ತರುವಂತೆ ಕೇಂದ್ರ ಸರ್ಕಾರವನ್ನು ಆಗ್ರಹಿಸಿ ಸರ್ವಾನುಮತದಿಂದ ನಿರ್ಣಯಗಳನ್ನು ಅಂಗೀಕರಿಸಲಾಯಿತು.
ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ಮಂಡಿಸಿದ ಏಳು ನಿರ್ಣಯಗಳಿಗೆ ಸದನ ಧ್ವನಿ ಮತದ ಮೂಲಕ ಅಂಗೀಕಾರ ನೀಡಿತು.
ರಾಯಚೂರಿನಲ್ಲಿ ಏಮ್ಸ್ ಸ್ಥಾಪನೆ, ಬೆಂಗಳೂರು ನಗರ ಪ್ರದೇಶದಲ್ಲಿನ 73 ರಾಷ್ಟ್ರೀಯ ಪ್ರಾಮುಖ್ಯತೆ ಸಂಸ್ಥೆಗಳ ಪೈಕಿ 25 ಸಂಸ್ಥೆಗಳನ್ನು ಉತ್ತರ ಕರ್ನಾಟಕ್ಕೆ ಸ್ಥಳಾಂತರ ಮಾಡುವುದು, ಕೃಷ್ಣಾ ಜಲವಿವಾದ ನ್ಯಾಯಾಧಿಕರಣ-2 ತೀರ್ಪಿನ ಕುರಿತು ಅಧಿಸೂಚನೆ ಹೊರಡಿಸುವುದು, ಮಹಾರಾಷ್ಟ್ರದ ವಿದರ್ಭ ಅಭಿವೃದ್ಧಿಗೆ ಮಂಡಳಿಗೆ ಕೇಂದ್ರ ಸರ್ಕಾರ ಪ್ರತಿವರ್ಷ ನೀಡುವ ಆರ್ಥಿಕ ನೆರವಿನ ಮಾದರಿಯಲ್ಲಿ ಕಲ್ಯಾಣ ಕರ್ನಾಟಕ ಪ್ರಾದೇಶಿಕ ಅಭಿವೃದ್ಧಿ ಮಂಡಳಿಗೆ ಪ್ರತಿವರ್ಷ 5 ಸಾವಿರ ಕೋಟಿ ರು. ಆರ್ಥಿಕ ನೆರವು ನೀಡುವುದು, ರಾಜ್ಯದಿಂದ ಹೆಚ್ಚಿನ ಎಥೆನಾಲ್ ಖರೀದಿಸುವುದು, ಕಳಸಾ-ಬಂಡೂರಿ ಯೋಜನೆ ಅನುಷ್ಠಾನಕ್ಕೆ ಮಂಜೂರಾತಿ ನೀಡುವುದು ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳಿಗೆ ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿಯನ್ನು ಶೇ.50 ರಿಂದ ಶೇ.56ರಷ್ಟು ಹೆಚ್ಚಿಸಿದ ಮೀಸಲಾತಿ ಪ್ರಮಾಣದ ಅಧಿಸೂಚನೆ ಮತ್ತು ಆದೇಶಗಳನ್ನು ಭಾರತ ಸಂವಿಧಾನ ಅನುಸೂಚಿ 9ಕ್ಕೆ ಸೇರಿಸುವಂತೆ ಕೇಂದ್ರ ಸರ್ಕಾರವನ್ನು ಆಗ್ರಹಿಸುವ ನಿರ್ಣಯ ಮಂಡಿಸಿ ಅಂಗೀಕರಿಸಲಾಯಿತು. ಈ ನಿರ್ಣಯಗಳನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಿ ಕೊಡಲಾಗುತ್ತದೆ ಎಂದು ಸಚಿವರು ತಿಳಿಸಿದರು.
- ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರ
1. ಕಲ್ಯಾಣ ಕರ್ನಾಟಕಕ್ಕೆ ಪ್ರತಿ ವರ್ಷ 5000 ಕೋಟಿ ರು. ನೆರವು
2. ಕಳಸಾ- ಬಂಡೂರಿ ಅನುಷ್ಠಾನಕ್ಕೆ ಮಂಜೂರಾತಿ ನೀಡುವುದು
3. ಪರಿಶಿಷ್ಟ, ಒಬಿಸಿ ಮೀಸಲಾತಿಯನ್ನು ಶೇ.56ಕ್ಕೆ ಹೆಚ್ಚಿಸುವುದು
4. ಕೃಷ್ಣಾ ನ್ಯಾಯಾಧಿಕರಣ-2 ಐತೀರ್ಪು ಅಧಿಸೂಚನೆ ಪ್ರಕಟ
5. ರಾಯಚೂರಿನಲ್ಲಿ ಏಮ್ಸ್ ಸ್ಥಾಪನೆಗೆ ಅಂತಿಮ ಅನುಮೋದನೆ
6. ಬೆಂಗಳೂರು ಸುತ್ತಲಿನ 25 ಕೇಂದ್ರೀಯ ಕಚೇರಿ ಉ.ಕ.ಕ್ಕೆ ವರ್ಗ
7. ರಾಜ್ಯದಿಂದ ಹೆಚ್ಚಿನ ಪ್ರಮಾಣದಲ್ಲಿ ಎಥನಾಲ್ ಖರೀದಿಸುವುದು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.