ಗದ್ದಲದ ನಡುವೆ, ಚರ್ಚೆಯೇ ಇಲ್ಲದೆ ದ್ವೇಷ ಭಾಷಣ ತಡೆ ಮಸೂದೆ ಪಾಸ್‌

Kannadaprabha News   | Kannada Prabha
Published : Dec 19, 2025, 05:43 AM IST
Belagavi session

ಸಾರಾಂಶ

ರಾಜ್ಯದಲ್ಲಿ ದ್ವೇಷ ಭಾಷಣ ಮತ್ತು ದ್ವೇಷಾಪರಾಧಗಳ ಪ್ರಸರಣ, ಪ್ರಕಟಣೆ ಅಥವಾ ಪ್ರಚಾರ, ದ್ವೇಷ ಹರಡಿಸುವಿಕೆಗೆ ಕಡಿವಾಣ ಹಾಕಲು ಮತ್ತು ಅಂಥ ಅಪರಾಧಗಳನ್ನು ಎಸಗುವ ವ್ಯಕ್ತಿ, ವ್ಯಕ್ತಿಗಳು, ಸಂಘಟನೆಯವರನ್ನು ಶಿಕ್ಷೆಗೆ ಒಳಪಡಿಸುವ ಉದ್ದೇಶದಿಂದ ದ್ವೇಷ ಅಪರಾಧಗಳ(ಪ್ರತಿಬಂಧಕ) ವಿಧೇಯಕ-2025’ ಅಂಗೀಕಾರ

ಸುವರ್ಣ ವಿಧಾನಸಭೆ : ರಾಜ್ಯದಲ್ಲಿ ದ್ವೇಷ ಭಾಷಣ ಮತ್ತು ದ್ವೇಷಾಪರಾಧಗಳ ಪ್ರಸರಣ, ಪ್ರಕಟಣೆ ಅಥವಾ ಪ್ರಚಾರ, ದ್ವೇಷ ಹರಡಿಸುವಿಕೆಗೆ ಕಡಿವಾಣ ಹಾಕಲು ಮತ್ತು ಅಂಥ ಅಪರಾಧಗಳನ್ನು ಎಸಗುವ ವ್ಯಕ್ತಿ, ವ್ಯಕ್ತಿಗಳು, ಸಂಘಟನೆಯವರನ್ನು ಶಿಕ್ಷೆಗೆ ಒಳಪಡಿಸುವ ಉದ್ದೇಶದಿಂದ ರೂಪಿಸಿರುವ ‘ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ(ಪ್ರತಿಬಂಧಕ) ವಿಧೇಯಕ-2025’ ಗುರುವಾರ ಪ್ರತಿಪಕ್ಷ ಸದಸ್ಯರ ಗದ್ದಲದ ನಡುವೆ ಹೆಚ್ಚಿನ ಚರ್ಚೆ ಇಲ್ಲದೆ ವಿಧಾನಸಭೆಯಲ್ಲಿ ಅಂಗೀಕಾರವಾಯಿತು.

ಮಸೂದೆ ವಿರೋಧಿಸಿ ಬಿಜೆಪಿ ಸದಸ್ಯರು ಮಾತನಾಡುವಾಗ, ‘ಕರಾವಳಿಯಲ್ಲಿ ಬೆಂಕಿ ಹಾಕಿ, ಈಗ ಇಲ್ಲೇಕೆ ಬೆಂಕಿ ಹಾಕುವಿರಿ’ ಎಂದು ಸಚಿವ ಬೈರತಿ ಸುರೇಶ್‌ ಅವರು ಹೇಳಿದ್ದು, ಕೋಲಾಹಲಕ್ಕೆ ಕಾರಣವಾಯಿತು. ಆ ಗದ್ದಲದ ನಡುವೆಯೇ ವಿಧೇಯಕವನ್ನು ಅಂಗೀಕರಿಸಲಾಯಿತು. ಇದರಿಂದ ಸಿಟ್ಟಿಗೆದ್ದ ಪ್ರತಿಪಕ್ಷ ನಾಯಕ ಅಶೋಕ್‌ ಅವರು, ಮಸೂದೆಯ ಪ್ರತಿಯನ್ನೇ ಹರಿದು ಎಸೆದರು.ದ್ವೇಷ ಭಾಷಣ ನಿಗ್ರಹಕ್ಕೆ ದೇಶದಲ್ಲಿ ಮಸೂದೆಯೊಂದನ್ನು ಅಂಗೀಕರಿಸಿರುವುದು ಇದೇ ಮೊದಲು.

ಗುರುವಾರ ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಈ ವಿಧೇಯಕವನ್ನು ಅಂಗೀಕರಿಸುವಂತೆ ಕೋರಿ ಬಳಿಕ ವಿಧೇಯಕ ಕುರಿತು ವಿವರಣೆ ನೀಡಿದರು. ಇತ್ತೀಚೆಗೆ ಸಮಾಜದಲ್ಲಿ ದ್ವೇಷ ಭಾಷಣಗಳು ಹೆಚ್ಚಾಗಿವೆ. ದ್ವೇಷ ಮಾತು, ಪದಗಳ ಬಳಕೆಯಿಂದ ಒಂದು ಸಮುದಾಯದ ವಿರುದ್ಧ ಮತ್ತೊಂದು ಸಮುದಾಯ ಎತ್ತಿ ಕಟ್ಟುವ ಕೆಲಸಗಳಾಗುತ್ತಿವೆ. ದ್ವೇಷ ಭಾಷಣಗಳಿಂದ ಎಷ್ಟೋ ಕೊಲೆಗಳು, ಹೊಡೆದಾಟಗಳು ನಡೆದಿವೆ. ಇದರಿಂದ ಸಮಾಜದ ಸ್ವಾಸ್ಥ್ಯ, ಸಾಮರಸ್ಯ ಹಾಳಾಗುತ್ತಿದೆ. ಪೂರ್ವಗ್ರಹಪೀಡಿತವಾಗಿ ಧರ್ಮ, ಜನಾಂಗ, ಭಾಷೆ, ಜನ್ಮಸ್ಥಳ, ಜಾತಿ, ಲಿಂಗ ಆಧಾರದಲ್ಲಿ ದ್ವೇಷದ ಭಾಷಣ ಮಾಡುವವರನ್ನು ನಿರ್ಬಂಧಿಸಲು ಈ ಮಸೂದೆ ರೂಪಿಸಲಾಗಿದೆ ಎಂದರು.

ದ್ವೇಷ ಭಾಷಣದಿಂದ ಕಾನೂನು, ಸುವ್ಯವಸ್ಥೆಗೆ ಸಮಸ್ಯೆಯಾಗುತ್ತದೆ. ಇತ್ತೀಚೆಗೆ ಗುಪ್ತಚರ ವರದಿ ಆಧರಿಸಿ ವ್ಯಕ್ತಿಯೊಬ್ಬರು ಬೇರೆ ಜಿಲ್ಲೆಗೆ ಹೋಗದಂತೆ ನಿಷೇಧಿಸಿದ್ದೇವೆ. ಹೀಗೆ ಎಷ್ಟೆಂದು ನಿಷೇಧಿಸುವುದು? ಇಂಥ ದ್ವೇಷ ಭಾಷಣ, ದ್ವೇಷಾಪರಾಧಿಗಳಿಗೆ ಕಡಿವಾಣ ಹಾಕಲು ಕಾನೂನು ಅಗತ್ಯವಿದೆ. ಈ ನಿಟ್ಟಿನಲ್ಲಿ ಮಸೂದೆ ತಂದಿದ್ದೇವೆಂದು ವಿವರಣೆ ನೀಡಿದರು.

ಪುನರಾವರ್ತನೆಗೆ 2ರಿಂದ 7 ವರ್ಷ ಜೈಲು:

ಮುಂದುವರೆದು, ಧಾರ್ಮಿಕ, ಜನಾಂಗೀಯ, ಜಾತಿ ಅಥವಾ ಸಮುದಾಯ, ಲಿಂಗ, ಲೈಂಗಿಕ ದೃಷ್ಟಿಕೋನ, ಜನ್ಮಸ್ಥಳ, ಭಾಷೆ, ವಾಸಸ್ಥಳ, ಅಂಗವೈಕಲ್ಯ ಅಥವಾ ಬುಡಕಟ್ಟು ಜನರ ಕುರಿತು ಯಾವುದೇ ವ್ಯಕ್ತಿಗೆ ಹಾನಿ ಮಾಡುವುದು ಅಥವಾ ದ್ವೇಷ ಉತ್ತೇಜಿಸುವುದು ಅಥವಾ ಪ್ರಚಾರ ಮಾಡುವುದನ್ನು ದ್ವೇಷಾಪರಾಧ ಎಂದು ಪರಿಗಣಿಸಲಾಗುತ್ತದೆ. ಮೊದಲ ಬಾರಿ ಇಂಥ ಕೃತ್ಯದಲ್ಲಿ ಭಾಗಿಯಾದರೆ 1 ವರ್ಷದಿಂದ 7 ವರ್ಷ ದವರೆಗೆ ವಿಸ್ತರಿಸಬಹುದಾದ ಜೈಲು ಶಿಕ್ಷೆ ಮತ್ತು 50 ಸಾವಿರ ರು. ದಂಡ ವಿಧಿಸಬಹುದು. ಪುನರಾವರ್ತನೆಯಾದರೆ, 2ರಿಂದ 10 ವರ್ಷದವರೆಗೆ ವಿಸ್ತರಿಸಬಹುದಾದ ಜೈಲು ಶಿಕ್ಷೆ ಹಾಗೂ 1 ಲಕ್ಷ ರು. ದಂಡ ವಿಧಿಸಲು ಅವಕಾಶ ಕಲ್ಪಿಸಲಾಗಿತ್ತು. ಇದೀಗ ಈ ಪುನರಾವರ್ತಿತ ಪ್ರಕರಣದಲ್ಲಿ ಜೈಲು ಶಿಕ್ಷೆಯನ್ನು 10 ವರ್ಷಗಳ ಬದಲಾಗಿ 7 ವರ್ಷಗಳವರೆಗೆ ವಿಸ್ತರಿಸಲು ತಿದ್ದುಪಡಿ ತರಲಾಗಿದೆ ಎಂದರು.

ಅಂತೆಯೇ ಈ ದ್ವೇಷಾಪರಾಧದಿಂದ ಆಗಿರುವ ಹಾನಿ ತೀವ್ರತೆ ಪರಿಗಣಿಸಿ ಸಂತ್ರಸ್ತರಿಗೆ ನ್ಯಾಯಾಲಯ ಸೂಕ್ತ ಪರಿಹಾರ ಘೋಷಿಸಬಹುದು. ಇಂಥ ಕೃತ್ಯವೂ ಜಾಮೀನುರಹಿತ ಅಪರಾಧ ಎಂದು ಪರಿಗಣಿಸಲ್ಪಡಲಿದೆ. ಇವುಗಳನ್ನು ಜೆಎಂಎಫ್‌ಸಿ ನ್ಯಾಯಾಲಯ ವಿಚಾರಣೆ ನಡೆಸಲಿದೆ ಎಂದು ಮಸೂದೆ ಕುರಿತು ಗೃಹ ಸಚಿವರು ವಿಸ್ತೃತ ಮಾಹಿತಿ ನೀಡಿದರು.

ನೋಂದಾಯಿತ, ನೋಂದಾಯಿತವಲ್ಲದ ಸಂಘಟನೆಗಳು, ಸಂಸ್ಥೆಗಳು, ವಿದ್ಯುನ್ಮಾನ ಮಾಧ್ಯಮಗಳು, ಯೂಟ್ಯೂಬ್‌ ಚಾನಲ್‌ಗಳು ಈ ಮಸೂದೆ ವ್ಯಾಪ್ತಿಗೆ ಬರುತ್ತವೆ. ದ್ವೇಷ ಬಿತ್ತುವ ಪುಸ್ತಕಗಳು, ಚಿತ್ರಗಳು, ಪ್ರಕಟಣೆಗಳು, ಕರಪತ್ರಗಳಿಗೂ ಇದು ಅನ್ವಯವಾಗುತ್ತದೆ ಎಂದರು.

ಇದಕ್ಕೆ ಬಿಜೆಪಿ ಸದಸ್ಯ ಸುನೀಲ್‌ ಕುಮಾರ್, ಇದು ಮುಂದಾಲೋಚನೆ ಇಲ್ಲದೆ ತಂದ ಮಸೂದೆಯಾಗಿದ್ದು, ಅಪಾಯದ ಸೂಚನೆ ನೀಡುತ್ತಿದೆ ಎಂದರು. ಆಗ ಪರಮೇಶ್ವರ್, ಬಿಎನ್ಎಸ್ ಕಾಯ್ದೆ ವ್ಯಾಪ್ತಿಗೆ ಬಾರದ್ದನ್ನು ಈ ಮಸೂದೆಯಡಿ ತಂದಿದ್ದೇವೆ. ಹೀಗಾಗಿ ಮಸೂದೆಗೆ ಅಂಗೀಕಾರ ಕೊಡಬೇಕೆಂದು ಸದನವನ್ನು ಕೋರಿದರು.

ಅಭಿವ್ಯಕ್ತಿ ಸ್ವಾತಂತ್ರ್ಯದ ಉಲ್ಲಂಘನೆ-ಅಶೋಕ್‌:

ವಿರೋಧ ಪಕ್ಷದ ನಾಯಕ ಆರ್‌.ಅಶೋಕ್ ಮಾತನಾಡಿ, 75 ವರ್ಷಗಳಲ್ಲಿ ಯಾವುದೇ ತಜ್ಞರಿಗೂ ಬಾರದ ಆಲೋಚನೆ ಗೃಹ ಸಚಿವ ಡಾ.ಪರಮೇಶ್ವರ್ ಅವರಿಗೆ ಬಂದಿದೆ. ಪರಮೇಶ್ವರ್ ಹೃದಯವಂತರು ಎಂದುಕೊಂಡಿದ್ದೆವು. ಈ ಮಸೂದೆ ಹೃದಯ ಹಿಂಡುವಂಥದ್ದು. ಮಾಸ್ಟರ್ ಹಿರಣ್ಣಯ್ಯ ಅವರು ತಮ್ಮ ನಾಟಕಗಳ ಪ್ರದರ್ಶನ ವೇಳೆ ಮುಖ್ಯಮಂತ್ರಿಗಳನ್ನು ಮುಂದೆ ಕೂರಿಸಿಕೊಂಡು ಟೀಕಿಸುತ್ತಿದ್ದರು. ಅಂದರೆ, ಸಹಿಷ್ಣುತೆ ಇರಬೇಕೆಂದು ಹೇಳಿದರು.

ಈ ಮಸೂದೆಯಿಂದ ಪೊಲೀಸ್‌ ಅಧಿಕಾರಿಗಳು ಹಿಟ್ಲರ್‌ಗಳಾಗುತ್ತಾರೆ. ಅಭಿವ್ಯಕ್ತಿ ಸ್ವಾತಂತ್ರ್ಯದ ಉಲ್ಲಂಘನೆಯಾಗುತ್ತದೆ. ಪತ್ರಿಕಾ ಸ್ವಾತಂತ್ರ್ಯಕ್ಕೆ ಕುತ್ತುಬೀಳಲಿದೆ. ಭ್ರಷ್ಟಾಚಾರ ಸುದ್ದಿ ಪ್ರಸಾರ ಮಾಡಿದರೆ ಜೈಲು ಸೇರಬೇಕಾಗುತ್ತದೆ. ವ್ಯಕ್ತಿ ಹೇಳಿಕೆ ನೀಡಿದರೆ, ಸಂಸ್ಥೆ ಮೇಲೆ ಕೇಸ್. ಯಾವ ಉದ್ದೇಶಕ್ಕೆ ಈ ಬಿಲ್‌? ಪೊಲೀಸ್‌ ಇಲಾಖೆ ಮತ್ತಷ್ಟು ಭ್ರಷ್ಟಾಚಾರ, ದುಡ್ಡು ವಸೂಲಿ ಮಾಡಲು ಅವಕಾಶ ನೀಡುತ್ತಿದ್ದೀರಾ? ಈ ಬಿಲ್‌ ಡೈರೆಕ್ಟ್ ಟು ಜೈಲ್ ಎನ್ನುವಂತಿದೆ. ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದವರಿಂದ ಮತ್ತೇನು ನಿರೀಕ್ಷೆ ಮಾಡಲು ಸಾಧ್ಯ ಎಂದು ಸರ್ಕಾರವನ್ನು ಟೀಕಿಸಿದರು.

ದ್ವೇಷ ಭಾಷಣಕ್ಕೆ ಬಿಎನ್ಎಸ್‌ ಕಾಯ್ದೆಯಡಿ ಈಗಾಗಲೇ ಶಿಕ್ಷೆ ಇದೆ. ಈ ಮಸೂದೆ ತಂದರೆ ರಾಜಕೀಯ ದ್ವೇಷ ತೀರಿಸಿಕೊಳ್ಳುವ ಬ್ರಹ್ಮಾಸ್ತ್ರವಾಗಲಿದೆ. ಮತ್ತೆ ಪತ್ರಿಕಾ ಎಮರ್ಜೆನ್ಸಿ ಹೇರಿದಂತಾಗುತ್ತದೆ. ಮಸೂದೆ ಹಿಂದೆ ವೋಟ್ ಬ್ಯಾಂಕ್ ರಾಜಕಾರಣವಿದೆ. ಯಾರನ್ನೋ ಸಂತೃಪ್ತಿಪಡಿಸಲು ಯಾರನ್ನೋ ಜೈಲಿಗೆ ಹಾಕಲಾಗುತ್ತದೆ. ಇದೊಂದು ಅಭಿವ್ಯಕ್ತಿ ಸ್ವಾತಂತ್ರ್ಯ ಮೇಲಿನ ಆಕ್ರಮಣ. ಪತ್ರಿಕೆ, ಟಿ.ವಿ. ಜಪ್ತಿ ಮಾಡಲು ಅವಕಾಶ ನೀಡಲಾಗಿದೆ. ಅಸಾಮರಸ್ಯ, ದ್ವೇಷಾಪರಾಧ ಎಂದು ನಿಘಂಟಿನಲ್ಲಿಲ್ಲದ ಪದಗಳು ಮಸೂದೆಯಲ್ಲಿವೆ. ತಪ್ಪುಗಳೇ ಇರುವ ಮಸೂದೆ ಇದು ಎಂದು ತರಾಟೆಗೆ ತೆಗೆದುಕೊಂಡರು.

ವಿರೋಧ ಪಕ್ಷಗಳನ್ನು ಟಾರ್ಗೆಟ್ ಮಾಡಲು ಸರ್ಕಾರ ಈ ಮಸೂದೆ ತಂದಿದೆ. ಮುಂದೆ ಅನಾಹುತಗಳಾಗುತ್ತವೆ. ಈಗ ರೆಸಾರ್ಟ್‌ಗಳಾಗಿರುವ ಜೈಲುಗಳು ಹೌಸ್‌ಫುಲ್‌ ಆಗಲಿವೆ. ಈ ಪಾಪರ್‌ ಸರ್ಕಾರ ಹೊಸ ಜೈಲು ಕಟ್ಟಬೇಕಾಗುತ್ತದೆ. ದ್ವೇಷ ಭಾಷಣ ಮೇಲೆ ನಿಗಾವಹಿಸಲು ನಾಟಕಗಳು, ಕಾರ್ಯಕ್ರಮಗಳಿಗೆ ಪೊಲೀಸರನ್ನು ನಿಯೋಜಿಸಬೇಕಾಗುತ್ತದೆ. ಇದು ಮುಂದೆ ತಿರುಗುಬಾಣವಾಗುತ್ತದೆ. ಕಾನೂನು ಮಾಡುವಾಗ ಎಚ್ಚರದಿಂದ ಮಾಡಬೇಕೆಂದು ಕುಟುಕಿದರು.

ಸದನದಲ್ಲಿ ‘ಕರಾವಳಿ ಬೆಂಕಿ’ ಗದ್ದಲ:

ಸಚಿವ ಡಾ.ಎಚ್‌.ಸಿ.ಮಹದೇವಪ್ಪ ಮಂಡಿಸಿದ ಸಾಮಾಜಿಕ ಬಹಿಷ್ಕಾರ ಪ್ರತಿಬಂಧಕ ಮಸೂದೆಗೆ ಇಡೀ ಸದನ ಒಪ್ಪಿಗೆ ನೀಡಿದೆ. ಡಾ.ಜಿ.ಪರಮೇಶ್ವರ್ ಅದೇ ಹೆಸರಿನವರು. ಏಕೆ ಈ ಮಸೂದೆ ತಂದರೋ ಗೊತ್ತಿಲ್ಲ ಎಂದು ಅಶೋಕ್‌ ತಿಳಿಸಿದರು. ಆಗ ಸಚಿವ ಮಹದೇವಪ್ಪ ಅವರು, ಅಂಬೇಡ್ಕರ್‌ಗೆ ಎಷ್ಟು ಹಿಂಸೆ ಕೊಟ್ಟರು. ಆದರೂ ಅವರು ದ್ವೇಷ ಮಾಡಲಿಲ್ಲ ಎಂದರು. ಇದಕ್ಕೆ ಬಿಜೆಪಿ ಸದಸ್ಯ ಸುರೇಶ್ ಕುಮಾರ್, ಅಂಬೇಡ್ಕರ್ ಸೋಲಿಸಿದ್ದು ಯಾರು ಗೊತ್ತಾ? ಅಂಬೇಡ್ಕರ್‌ ಚುನಾವಣೆ ಏಜೆಂಟ್ ಆಗಿದ್ದು ದತ್ತೊಪಂಥ ತೆಂಗಡಿ. ಅಂಬೇಡ್ಕರ್‌ರನ್ನು ಸೋಲಿಸಿದ್ದು ನಿಮ್ಮ ಪಾರ್ಟಿ ಎಂದು ಕಿಚಾಯಿಸಿದರು. ಇದಕ್ಕೆ ಮಹದೇವಪ್ಪ, ಅಂಬೇಡ್ಕರ್ ರನ್ನು ಸೋಲಿಸಿದ್ದು ಸಿಪಿಐ ಎಂದರು. ಇದಕ್ಕೆ ಸಚಿವ ಸಂತೋಷ್ ಲಾಡ್‌ ದನಿಗೂಡಿಸಿದರು. ನೀವು ಸೋಲಿಸಿದ್ದು ಅಂದ್ರೆ ಏನು? ನೀವು ಸೋಲಿಸಲಿಲ್ಲವಾ ಎಂದು ಬಿಜೆಪಿಗರಿಗೆ ತಿರುಗೇಟು ನೀಡಿದರು.

ಬಾಸಿಸಂಗೆ ಹೆದರಲ್ಲ- ಸಚಿವ ಬೈರತಿ:

ಸಚಿವ ಲಾಡ್‌ ಮಾತಿನಿಂದ ಕೆರಳಿದ ಕರಾವಳಿ ಭಾಗದ ಬಿಜೆಪಿ ಸದಸ್ಯರು, ಅಂಬೇಡ್ಕರ್‌ ಸತ್ತಾಗ ಸಮಾಧಿ ಮಾಡಲು ದೆಹಲಿಯಲ್ಲಿ ಜಾಗ ಕೊಡಲಿಲ್ಲ ಎಂದು ಆಡಳಿತ ಪಕ್ಷದವರ ಕಾಲೆಳೆದರು. ಈ ವೇಳೆ ಸದನದಲ್ಲಿ ಗದ್ದಲ ಏರ್ಪಟ್ಟಿತು. ಆಗ ಸಚಿವ ಬೈರತಿ ಸುರೇಶ್‌, ನೀವು ಏಕೆ ಪಕ್ಷಪಾತಿಗಳಾಗಿದ್ದೀರಿ ಎಂದು ಪ್ರತಿಪಕ್ಷ ಸದಸ್ಯರನ್ನು ಪ್ರಶ್ನಿಸಿದರು. ಇದಕ್ಕೆ ಕರಾವಳಿ ಭಾಗದ ಬಿಜೆಪಿ ಶಾಸಕರು ಆಕ್ಷೇಪ ವ್ಯಕ್ತಪಡಿಸಿದರು. ಇದರಿಂದ ರೊಚ್ಚಿಗೆದ್ದ ಸಚಿವ ಬೈರತಿ, ಕರಾವಳಿಯಲ್ಲಿ ಬೆಂಕಿ ಹಾಕಿ, ಈಗ ಇಲ್ಲೇಕೆ ಬೆಂಕಿ ಹಾಕುವಿರಿ ಎಂದು ಹರಿಹಾಯ್ದರು. ಈ ಮಾತಿಂದ ಸದನದಲ್ಲಿ ಗದ್ದಲ ಹೆಚ್ಚಾಯಿತು. ಕರಾವಳಿ ಶಾಸಕರು ರೊಚ್ಚಿಗೆದ್ದರು. ಇದರಿಂದ ಮತ್ತೆ ಕೆರಳಿದ ಸಚಿವ ಬೈರತಿ ಸುರೇಶ್, ನಿಮ್ಮ ಬಾಸಿಸಂಗೆ ನಾವು ಹೆದರಲ್ಲ ಎಂದು ಕಿಡಿಕಾರಿದರು.

ಸಚಿವರ ಕ್ಷಮೆಗೆ ಆಗ್ರಹ:

ಇದರಿಂದ ಮತ್ತಷ್ಟು ಕೆರಳಿದ ಬಿಜೆಪಿ ಶಾಸಕ ವಿ.ಸುನೀಲ್ ಕುಮಾರ್, ಕರಾವಳಿ ಬಿಟ್ಟಿ ಬಿದ್ದಿದೆಯಾ? ಕರಾವಳಿ ಬಗ್ಗೆ ಹಗುರವಾಗಿ ಮಾತನಾಡಬಾರದು ಆಕ್ರೋಶ ವ್ಯಕ್ತಪಡಿಸಿದರು. ಕರಾವಳಿ ಬಗ್ಗೆ ಹಗುರವಾಗಿ ಮಾತನಾಡಿದ ಸಚಿವರು ಕ್ಷಮೆ ಕೇಳಬೇಕು ಎಂದು ಆ ಭಾಗದ ಶಾಸಕರು ಆಗ್ರಹಿಸಿದರು. ಸ್ಪೀಕರ್ ಅವರೇ ನೀವೂ ಕರಾವಳಿ ಭಾಗದವರು. ಇಂಥ ಮಾತು ಕೇಳಿಯೂ ಹೇಗೆ ಪೀಠದಲ್ಲಿ ಕೂರುತ್ತೀರಿ ಎಂದು ಪ್ರಶ್ನಿಸಿದರು. ಇದಕ್ಕೆ ಸ್ಪೀಕರ್ ಖಾದರ್‌, ಆ ಪದವನ್ನು ಕಡತದಿಂದ ತೆಗೆಸುತ್ತೇನೆಂದರು. ಇದಕ್ಕೆ ಒಪ್ಪದ ಕರಾವಳಿ ಭಾಗದ ಬಿಜೆಪಿ ಶಾಸಕರು ಸೇರಿ ಬಿಜೆಪಿ-ಜೆಡಿಎಸ್ ಶಾಸಕರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದರು. ಇದರಿಂದ ಸದನದಲ್ಲಿ ಮತ್ತಷ್ಟು ಗದ್ದಲ ಹೆಚ್ಚಾಯಿತು.

ವಿಧೇಯಕದ ಪ್ರತಿ ಹರಿದು ಆಕ್ರೋಶ:

ಈ ಗದ್ದಲ ನಡುವೆ ಧ್ವನಿಮತದ ಮೂಲಕ ವಿಧೇಯಕ ಅಂಗೀಕರಿಸಲಾಯಿತು. ಇದನ್ನು ವಿರೋಧಿಸಿದ ಆರ್‌.ಅಶೋಕ್, ಮಸೂದೆ ಪ್ರತಿ ಹರಿದು ಸದನದ ಬಾವಿಗೆಸೆದು ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಸದನವನ್ನು ಮಧ್ಯಾಹ್ನ 3 ಗಂಟೆಗೆ ಮುಂದೂಡಲಾಯಿತು. ಗದ್ದಲದ ನಡುವೆ ದ್ವೇಷ ಭಾಷಣ ಪ್ರತಿಬಂಧಕ ಮಸೂದೆಯೂ ಹೆಚ್ಚಿನ ಚರ್ಚೆ ಇಲ್ಲದೆ ಅಂಗೀಕಾರವಾಯಿತು.

ಈ ಮಸೂದೆಯಿಂದ ಪೊಲೀಸ್‌ ಅಧಿಕಾರಿಗಳು ಹಿಟ್ಲರ್‌ಗಳಾಗುತ್ತಾರೆ. ಅಭಿವ್ಯಕ್ತಿ ಸ್ವಾತಂತ್ರ್ಯದ ಉಲ್ಲಂಘನೆಯಾಗುತ್ತದೆ. ಪತ್ರಿಕಾ ಸ್ವಾತಂತ್ರ್ಯ ಕಸಿದುಕೊಳ್ಳಲಿದೆ. ಭ್ರಷ್ಟಾಚಾರದ ಸುದ್ದಿ ಪ್ರಸಾರ ಮಾಡಿದರೆ, ಜೈಲು ಸೇರಬೇಕಾಗುತ್ತದೆ. ವ್ಯಕ್ತಿ ಹೇಳಿಕೆ ನೀಡಿದರೆ, ಸಂಸ್ಥೆ ಮೇಲೆ ಕೇಸ್ ಹಾಕ್ತಾರೆ.

-ಆರ್.ಅಶೋಕ್‌, ಪ್ರತಿಪಕ್ಷದ ನಾಯಕ

ಮಸೂದೆಯಲ್ಲಿ ಏನಿದೆ?

- ಧರ್ಮ, ಜನಾಂಗ, ಜಾತಿ, ಸಮುದಾಯ, ಲಿಂಗ, ಜನ್ಮಸ್ಥಳ, ಭಾಷೆ, ಅಂಗವೈಕಲ್ಯ, ಬುಡಕಟ್ಟು ಜನರ ಬಗ್ಗೆ ದ್ವೇಷ ಉತ್ತೇಜನ ನಿಷಿದ್ಧ

- ಅಂಥ ಕೆಲಸ ಮಾಡಿದರೆ ಅದು ಅಪರಾಧ. 1ರಿಂದ 7 ವರ್ಷ ಜೈಲು, ₹50 ಸಾವಿರ ದಂಡ. ಸಂತ್ರಸ್ತರಿಗೆ ಪರಿಹಾರ ನೀಡುವ ಅವಕಾಶ

- ದ್ವೇಷ ಭಾಷಣ ಜಾಮೀನುರಹಿತ ಅಪರಾಧ ಎಂದು ಪರಿಗಣನೆ. ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಇಂತಹ ಪ್ರಕರಣ ವಿಚಾರಣೆ

ಯಾರಿಗೆ ಅನ್ವಯ?

- ನೋಂದಾಯಿತ, ನೋಂದಾಯಿತವಲ್ಲದ ಸಂಘಟನೆಗಳು, ಸಂಸ್ಥೆಗಳು

- ವಿದ್ಯುನ್ಮಾನ ಮಾಧ್ಯಮಗಳು, ಯೂಟ್ಯೂಬ್‌ ಚಾನಲ್‌ಗಳು

- ದ್ವೇಷ ಬಿತ್ತುವ ಪುಸ್ತಕಗಳು, ಚಿತ್ರಗಳು, ಪ್ರಕಟಣೆಗಳು, ಕರಪತ್ರಗಳು

ವಿರೋಧ ಏಕೆ?

- ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಇದು ಆಕ್ರಮಣ. ಪತ್ರಿಕೆ, ಟೀವಿ ಚಾನಲ್‌ ಜಪ್ತಿ ಮಾಡಲು ಮಸೂದೆಯಲ್ಲಿದೆ ಅವಕಾಶ

- ವಿರೋಧ ಪಕ್ಷಗಳನ್ನು ಟಾರ್ಗೆಟ್ ಮಾಡುವ ವಿಧೇಯಕ. ಮಾಧ್ಯಮಗಳ ಮೇಲೆ ತುರ್ತು ಪರಿಸ್ಥಿತಿ ಹೇರುವ ಪ್ರಯತ್ನ

- ಯಾರನ್ನೋ ಸಂತೃಪ್ತಪಡಿಸಲು ಯಾರನ್ನೋ ಜೈಲಿಗೆ ಹಾಕುವ ಪ್ರಯತ್ನ. ದ್ವೇಷ ಭಾಷಣಕ್ಕೆ ಶಿಕ್ಷೆ ಇದೆ. ಮಸೂದೆ ಏಕೆ?

ಸರ್ಕಾರದ ವಾದ ಏನು?

- ದ್ವೇಷ ಮಾತು, ಪದಗಳ ಬಳಕೆಯಿಂದ ಸಮುದಾಯಗಳನ್ನು ಎತ್ತಿಕಟ್ಟುವ ಕೆಲಸ ನಡೆಯುತ್ತಿದೆ

- ದ್ವೇಷ ಭಾಷಣಗಳಿಂದ ಕೊಲೆ, ಹೊಡೆದಾಟಗಳು ನಡೆದಿವೆ. ಸಮಾಜದ ಸಾಮರಸ್ಯ ಹಾಳಾಗುತ್ತಿದೆ

- ಧರ್ಮ, ಜನಾಂಗ, ಭಾಷೆ, ಜನ್ಮಸ್ಥಳ, ಜಾತಿ ಲಿಂಗ ಆಧಾರದಲ್ಲಿ ದ್ವೇಷ ನಿರ್ಬಂಧಿಸಲು ಈ ಮಸೂದೆ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಉತ್ತರ ಕರ್ನಾಟಕಕ್ಕೆ ಸಂಪುಟದ ಪ್ಯಾಕೇಜ್‌
ಬಾಕಿ ಲಕ್ಷ್ಮಿ ಬಾರಮ್ಮ! ಫೆಬ್ರವರಿ - ಮಾರ್ಚ್‌ ಬಾಕಿ ಚುಕ್ತಾಗೆ ಆಗ್ರಹ