ಪಕ್ಷ ಕೊಡುವ ಜವಾಬ್ದಾರಿ ನಿಭಾಯಿಸುವೆ : ಎಐಸಿಸಿ ಅಧ್ಯಕ್ಷ ಸ್ಥಾನದ ಬಗ್ಗೆ ಖರ್ಗೆ ಪ್ರತಿಕ್ರಿಯೆ

By Suvarna NewsFirst Published Sep 23, 2022, 5:57 PM IST
Highlights

ನಾನು ಎಐಸಿಸಿ ಅಧ್ಯಕ್ಷ ಸ್ಥಾನಕ್ಕಾಗಿ ನಾಮಿನೇಷನ್ ಮಾಡಿಲ್ಲ. ಮಾಡೋದೂ ಇಲ್ಲ. ಪಕ್ಷ ನನಗೆ ಯಾವುದೇ ಜವಾಬ್ದಾರಿ ಕೊಟ್ರೂ ನಿಭಾಯಿಸಲು ಸಿದ್ಧ ಎಂದು ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ನೀಡಿದ್ದಾರೆ.

ಕಲಬುರ್ಗಿ (ಸೆ.23) : ನಾನು ಎಐಸಿಸಿ ಅಧ್ಯಕ್ಷ ಸ್ಥಾನಕ್ಕಾಗಿ ನಾಮಿನೇಷನ್ ಮಾಡಿಲ್ಲ. ಮಾಡೋದೂ ಇಲ್ಲ. ಪಕ್ಷ ನನಗೆ ಯಾವುದೇ ಜವಾಬ್ದಾರಿ ಕೊಟ್ರೂ ನಿಭಾಯಿಸಲು ಸಿದ್ಧ ಎಂದು ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ಕಲಬುರ್ಗಿಯ ತಮ್ಮ ನಿವಾಸದಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ ಅವರು, ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಮಲ್ಲಿಕಾರ್ಜುನ ಖರ್ಗೆ ಹೆಸರು ಕೇಳಿ ಬರುತ್ತಿರುವ ವಿಚಾರಕ್ಕೆ ಪ್ರತಿಕ್ರಿಯಿಸುತ್ತಾ, ಪಕ್ಷ ಏನು ಜವಾಬ್ದಾರಿ ಕೊಡುತ್ತೋ ಮಾಡಲು ನಾನು ಸಿದ್ದನಿದ್ದೇನೆ ಎಂದರು. ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷಿ ಇರೋರು ನಾಮಿನೇಷನ್ ಮಾಡುತ್ತಿದ್ದಾರೆ. ನಾನು ಯಾವುದಕ್ಕೂ ನಾಮಿನೇಷನ್ ಮಾಡಿಲ್ಲ. ಪಕ್ಷಕ್ಕೆ ನಿಷ್ಟೆಯಾಗಿ ಕೆಲಸ ಮಾಡುವುದಷ್ಟೇ ನಮ್ಮ ಕೆಲಸ. ನಮ್ಮ ನಾಯಕರಾದ ಸೋನಿಯಾಗಾಂಧಿ, ರಾಹುಲ್ ಗಾಂಧಿ ಅವರು ಏನ್ ಹೇಳ್ತಾರೆ ಅವದನ್ನು ಕೇಳುತ್ತೇನೆ ಎಂದರು.‌ ವಯಕ್ತಿಕವಾಗಿ ನನ್ನ ಅಭಿಪ್ರಾಯ ಅಂದ್ರೆ ರಾಹುಲ್ ಗಾಂಧಿ ಅವರೇ ಎಐಸಿಸಿ ಅಧ್ಯಕ್ಷರಾಗಬೇಕು. ಆದ್ರೆ ಇತ್ತಿಚಿಗೆ ಸೋನಿಯಾಗಾಂಧಿ ಅವರನ್ನು ಭೇಟಿ ಮಾಡಿದಾಗ, ಲ ನಮ್ಮ ಕುಟುಂಬದಿಂದ ಯಾರೂ ಬೇಡ ಅಂತ ಅವರು ಖಡಾಖಂಡಿತವಾಗಿ ಹೇಳಿದ್ದಾರೆ. ಈಗ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ಪ್ರಕ್ರಿಯೆ ಶುರುವಾಗಿದೆ.  ಏನಾಗುತ್ತೋ ನೋಡೋಣ ಎಂದರು. 

ಎನ್.ಐ.ಎ ಬಗ್ಗೆ ಗೊತ್ತಿಲ್ಲ, ಆದ್ರೆ ಇಡಿ, ಸಿಬಿಐ ದುರುಪಯೋಗ ಸತ್ಯ
ದೇಶಾದ್ಯಂತ ಪಿ.ಎಫ್.ಐ ಮುಖಂಡರ ಮನೆಗಳ ಮೇಲೆ ಎನ್.ಐ.ಎ ದಾಳಿ ನಡೆಸುತ್ತಿರುವ ಬಗ್ಗೆ ಕೇಳಲಾದ ಪ್ರಶ್ನೆಗೆ ಪ್ರತಿಕ್ರಯಿಸಿದ ಮಲ್ಲಿಕಾರ್ಜುನ ಖರ್ಗೆ, ಯಾರೇ ದೇಶ ದ್ರೋಹದ ಕೆಲಸ ಮಾಡಲಿ, ಪಕ್ಷ, ಜಾತಿ ಧರ್ಮ ನೋಡದೇ ಕ್ರಮ ಕೈಗೊಳ್ಳಲು ಸರಕಾರಕ್ಕೆ ಅಧಿಕಾರಕ್ಕೆ ಇದೆ. ನಾವು ದೇಶದ್ರೋಹಿಗಳ ಪರ ಇಲ್ಲ ಎಂದರು. 

ಆದ್ರೆ ಈ ವಿಚಾರದಲ್ಲಿ ಏನೇನು ನಡೆದಿದೆ ಎನ್ನುವ ಬಗ್ಗೆ  ವಿರೋಧ ಪಕ್ಷಗಳಿಗೂ ಯಾವುದೇ ಮಾಹಿತಿ ನೀಡಿಲ್ಲ. ಯಾವುದೇ ಸಂಸ್ಥೆ ಮೇಲೆ ಕ್ರಮ ತಗೋವಾಗ ಸಾಧಕ ಬಾಧಕ ನೋಡಿ ಮಾಡಬೇಕು. ನಮ್ಮಲ್ಲಿ ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ಹಾಗಾಗಿ ಈ ಹಂತದಲ್ಲಿ ಪ್ರತಿಕ್ರಿಯೆ ಸರಿಯಲ್ಲ ಎಂದ ಅವರು, ಎನ್.ಐ.ಎ ದಾಳಿ ಬಗ್ಗೆ ನಮಗೆ ಮಾಹಿತಿ ಇಲ್ಲ. ಆದ್ರೆ ಕೇಂದ್ರ ಸರಕಾರ ಇಡಿ, ಸಿಬಿಐ ಗಳನ್ನು ಇವರು ದುರುಪಯೋಗ ಮಾಡಿಕೊಂಡಿರುವುದು ಮಾತ್ರ ಅಪ್ಪಟ ಸತ್ಯ ಎಂದರು. 

ದೇಶದ್ರೋಹಿಗಳಿಗೆ ನಮ್ಮ ಬೆಂಬಲ ಇಲ್ಲ:
ಶಿವಮೊಗ್ಗದಲ್ಲಿ ಉಗ್ರರ ಬಂಧನ ವಿಚಾರದ ಕುರಿತು ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ರಾಜ್ಯ ಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಖರ್ಗೆ,  ನಾವು ದೇಶದ್ರೋಹಿಗಳಿಗೆ ರಕ್ಷಣೆ ಕೊಡುವ ಜನರಲ್ಲ. 
ಯಾರೇ ಅಶಾಂತಿ ಮಾಡುತ್ತಿದ್ದರೆ, ಸಮಾಜದಲ್ಲಿ ಒಡಕು ಮಾಡುತ್ತಿದ್ದರೆ ಯಾವತ್ತೂ ನಾವು ಸಹಿಸಿಲ್ಲ,  ಸಹಿಸೋದೂ ಇಲ್ಲ ಎಂದರು. 

ಆದ್ರೆ ಅನಗತ್ಯವಾಗಿ ಸುಮ್ಮನೆ ತೊಂದರೆ ಕೊಡಬೇಡಿ ಎನ್ನುವುದು ನಮ್ಮ ಒತ್ತಾಯ. ಕೆಲವರು ಹಿಂದೂ ಸಂಘಟನೆಗಳ ಹೆಸರಿನ ಮೇಲೆ ಎಷ್ಟು ಅನ್ಯಾಯ ಮಾಡಿಲ್ಲವೇ ‌? ಮಹಿಳೆಯರ ಮೇಲೆ ರೇಪ್ , ದಲಿತರ ಮೇಲೆ ದೌರ್ಜನ್ಯ ನಡೆಯುತ್ತಲೇ ಇವೆ. ಈ ಬಗ್ಗೆ ನಿಮ್ಮ ಗಮನ ಇಲ್ಲ ಎಂದು ಅವರು ಕೇಂದ್ರ ಸರ್ಕಾರವನ್ನು ತಿವಿದರು. ಗೋದ್ರಾದಲ್ಲಿ ರೇಪ್ & ಮರ್ಡರ್ ಮಾಡಿ ಪ್ರಕರಣದಲ್ಲಿ ಹೊರಬಂದವರಿಗೆ ಹಾರ ಹಾಕುತ್ತಿರಿ ಎಂದು ಖರ್ಗೆ ಬಿಜೆಪಿ ನಾಯಕರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು. 

ಕಿತ್ತಾಟ, ನಾಯಕತ್ವ ವಿಚಾರ ಕೈಬಿಡಿ: ರಾಹುಲ್‌ ಸೂಚನೆ

ಮೊದಲು ಅಸ್ಪ್ರಶ್ಯತೆ ನಿವಾರಿಸಿ ಆಮೇಲೆ ಮಸಿದಿಗೆ ಹೋಗಿ:
ಮೋಹನ್ ಭಾಗವತ್ ಅವರು ಇತ್ತಿಚಿಗೆ ಕೆಲವೆಡೆ ಮಸೀದಿಗಳಿಗೆ ಹೋಗುತ್ತಿರುವ ವಿಚಾರದ ಬಗ್ಗೆ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ, ಮೊದಲು ನೀವು ಬದಲಾಗಿ. ದೇಶದಲ್ಲಿ ಅಸ್ಪ್ರಶ್ಯತೆ ತಾಂಡವವಾಡುತ್ತಿದೆ.‌ಇದನ್ನು ಸುಧಾರಣೆ ಮಾಡಲು ಮೊದಲು ಶ್ರಮಿಸಿ. ಆನಂತರ ಅವರಿಗೂ ಸುಧಾರಣೆ ಮಾಡಿ, ಬೇಡ ಅನ್ನಲ್ಲ.ಮೊದಲು ನಿಮ್ಮಲ್ಲಿನ ಅಸಮಾನತೆ ನಿವಾರಣೆ ಮಾಡಿ. ಕೊಪ್ಪಳ ಜಿಲ್ಲೆಯಲ್ಲಿ ದೇವಸ್ಥಾನದ ಕಂಬಕ್ಕೆ ಮುಟ್ಟಿದ್ದಕ್ಕೆ 13 ವರ್ಷದ ದಲಿತ ಬಾಲಕನಿಗೆ ಶಿಕ್ಷೆ ನೀಡಲಾಗಿದೆ. ಹೀಗಾದ್ರೆ ಹೇಗೆ ? ಒಂದು ಕಡೆ ಹಿಂದೂ ಅಂತಿರಿ, ಹಿಂದೂಗಳಲ್ಲಿನ ಕೆಲ ಜನರನ್ನ ಸಮೀಪ ಸೇರಿಸಿಕೊಳ್ಳಲ್ಲ. ಮೊದಲು ಇದನ್ನು ಸುಧಾರಣೆ ಮಾಡಿ. ನಿಮ್ಮಲ್ಲಿನ ನ್ಯೂನ್ಯತೆ ಸರಿಪಡಿಸಿಕೊಳ್ಳಿ. ಸಂಘ ಬೆಳೆಸೊದಕ್ಕೆ ನಿಮ್ಮ ತತ್ವ ಸಿದ್ದಾಂತ ಜನರ ತಲೆಯಲ್ಲಿ ತುಂಬಿ ದೇಶಿ ಒಡೆಯುವ ಕೆಲಸ ಮಾಡಬೇಡಿ ಎಂದು ಮೋಹನ್ ಭಾಗವತ್ ಅವರಿಗೆ ತಿರುಗೇಟು ನೀಡಿದರು.

AICC President: ರಾಹುಲ್‌ ಅಧ್ಯಕ್ಷರಾಗದಿದ್ದರೆ ಸೋನಿಯಾ ಮುಂದುವರಿಕೆ?

ಜನ ಸಾಯತಿದ್ರೆ ಇವರಿಗೆ ಚಿತಾ ಚಿಂತೆ:
ದೇಶದಲ್ಲಿ ಕೊರೊನಾದಿಂದ ಸಾವಿರಾರು ಜನ ಸತ್ರೂ ಅವರಿಗೆ ಚಿಂತೆಯಿಲ್ಲ.‌ ಅವರಿಗೆ ಚಿತಾ ತಂದು ಬಿಡುವ ಚಿಂತೆ ಎಂದು ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಹುಟ್ಟುಹಬ್ಬದ ದಿನ ವಿದೇಶಗಳಿಂದ ಎಂಟು ಚಿತ ತರಿಸಿಕೊಂಡಿದ್ದರ ಬಗ್ಗೆ ಮಲ್ಲಿಕಾರ್ಜುನ ಖರ್ಗೆ ಆಕ್ರೋಶ ವ್ಯಕ್ತಪಡಿಸಿದರು. ಲಕ್ಷಾಂತರ ಜನ ಹಸಿವಿನಿಂದ ನರಳುತಿದ್ದಾರೆ ಗೊತ್ತಿಲ್ಲವಾ ? ಚೀತಾ ತರದಿದ್ದರೆ ದೇಶದ ಅಭಿವೃದ್ಧಿ ಏನು ನಿಂತು ಹೋಗ್ತಿತ್ತಾ ? ಎಂದು ಪ್ರಶ್ನಿಸಿದರು. ಪಾರಿವಾಳ ಬಿಡೋದು ಶಾಂತಿಯ ಸಂಕೇತ. ಹಿಂದೆ ನಾವು ಜಗತ್ತಿಗೆ ಶಾಂತಿಯ ಸಂಕೇತ ತೋರಿಸುತ್ತಿದ್ದೇವು. ಆದ್ರೆ ಈಗ ಇವರು ಆಕ್ರಮಣದ ರೀತಿ ನಡೆದುಕೊಳ್ಳುತ್ತಿದ್ದಾರೆ ಎಂದು ಮೋದಿ ವಿರುದ್ಧ ಖರ್ಗೆ ವಾಗ್ದಾಳಿ ನಡೆಸಿದರು. ಮಾಜಿ ಸಚಿವ ಶರಣಪ್ರಕಾಶ್ ಪಾಟೀಲ್, ಶರಣಬಸಪ್ಪ ದರ್ಶನಾಪುರ್, ತಿಪ್ಪಣ್ಣಪ್ಪ ಕಮಕ್ನೂರ್, ಸುಭಾಷ್ ರಾಠೋಡ್ ಉಪಸ್ಥಿತರಿದ್ದರು.

click me!