5 ವರ್ಷ ಮುಖ್ಯಮಂತ್ರಿಯಾಗಿದ್ದವರು, 5 ವರ್ಷ ವಿಪಕ್ಷ ನಾಯಕರಾಗಿದ್ದವರು, ಎಲ್ಲಾ ಭಾಗ್ಯಗಳನ್ನು ಕೊಟ್ಟಿದ್ದೇನೆಂದು ಬೀಗುವ ನಾಯಕರು ಚುನಾವಣೆ ಸಂದರ್ಭದಲ್ಲಿ ಎಲ್ಲಿ ಗೆಲ್ಲುತ್ತೇನೆ, ಅಲ್ಲಿ ನಿಲ್ಲುತ್ತೇನೆ ಎಂದು ಓಡಾಡುತ್ತಿರುವುದು ದುರಂತದ ಸಂಗತಿ. ಕ್ಷೇತ್ರಕ್ಕಾಗಿ ದಯನೀಯವಾಗಿ ಭಿಕ್ಷೆ ಬೇಡುವ ಸ್ಥಿತಿಗೆ ತಲುಪಿದ್ದಾರೆ ಎಂದು ವೈ.ಎ.ಎನ್ ಲೇವಡಿ
ಕೋಲಾರ(ಏ.05): 2023ರ ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ ಏ.8ರ ಶನಿವಾರ ಬಿಜೆಪಿ ಅಭ್ಯರ್ಥಿಗಳ ಟಿಕೆಟ್ ಘೋಷಣೆಯಾಗಲಿದ್ದು, ಜಿಲ್ಲೆಯಲ್ಲಿ ಕನಿಷ್ಠ 4 ಸ್ಥಾನಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ ಎಂದು ವಿಧಾನಪರಿಷತ್ ಮುಖ್ಯಸಚೇತಕ ಡಾ.ವೈ.ಎ.ನಾರಾಯಣಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.
ನಗರ ಹೊರವಲಯದ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಮಂಗಳವಾರ ಕೋಲಾರ ವಿಧಾನಸಭಾ ಕ್ಷೇತ್ರದ ಗ್ರಾಮಾಂತರ, ನಗರ ಭಾಗದ ಸಂಘಟನಾ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಕೋಲಾರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ 100ಕ್ಕೆ 100 ಗೆಲುವು ಸಾಧಿಸುವುದು ಖಚಿತ. ಅಂತೆಯೇ ಮಾಲೂರು, ಕೆಜಿಎಫ್, ಬಂಗಾರಪೇಟೆ ಕ್ಷೇತ್ರಗಳಲ್ಲಿಯೂ ನಮ್ಮ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ.
ಕೇಂದ್ರ-ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು: ಶಾಸಕ ರಮೇಶ್ ಕುಮಾರ್
ಆ ನಿಟ್ಟಿನಲ್ಲಿ ಪಕ್ಷದ ಮುಖಂಡರು ಕಾರ್ಯಕರ್ತರು, ಶಕ್ತಿ ಕೇಂದ್ರಗಳ ಪ್ರಮುಖರು, ಎಲ್ಲಾ ಮೋರ್ಚಾಗಳ ಪದಾಧಿಕಾರಿಗಳು ಉಳಿದಿರುವ 35 ದಿನಗಳ ಕಾಲ ನಾವೇ ಅಭ್ಯರ್ಥಿಗಳು ಎಂದು ಶ್ರಮಪಬೇಕಾಗಿದೆ. ಡಬಲ್ ಎಂಜಿನ್ ಸರಕಾರ ಸಾಧನೆಗಳನ್ನು ಮನೆಮನೆಗೂ ತಿಳಿಸುವ ಜೊತೆಗೆ ಜನರ ಮನವೊಲಿಸುವ ಕೆಲಸವೂ ಆಗಬೇಕಿದೆ ಎಂದರು.
ಸಿದ್ದರಾಮಯ್ಯ ಸ್ಥಿತಿ ದಯನೀಯ-ಲೇವಡಿ
5 ವರ್ಷ ಮುಖ್ಯಮಂತ್ರಿಯಾಗಿದ್ದವರು, 5 ವರ್ಷ ವಿಪಕ್ಷ ನಾಯಕರಾಗಿದ್ದವರು, ಎಲ್ಲಾ ಭಾಗ್ಯಗಳನ್ನು ಕೊಟ್ಟಿದ್ದೇನೆಂದು ಬೀಗುವ ನಾಯಕರು ಚುನಾವಣೆ ಸಂದರ್ಭದಲ್ಲಿ ಎಲ್ಲಿ ಗೆಲ್ಲುತ್ತೇನೆ, ಅಲ್ಲಿ ನಿಲ್ಲುತ್ತೇನೆ ಎಂದು ಓಡಾಡುತ್ತಿರುವುದು ದುರಂತದ ಸಂಗತಿ. ಕ್ಷೇತ್ರಕ್ಕಾಗಿ ದಯನೀಯವಾಗಿ ಭಿಕ್ಷೆ ಬೇಡುವ ಸ್ಥಿತಿಗೆ ತಲುಪಿದ್ದಾರೆ ಎಂದು ವೈ.ಎ.ಎನ್ ಲೇವಡಿ ಮಾಡಿದರು.
ಸಿದ್ದರಾಮಯ್ಯರನ್ನ ಮೂಲೆ ಗುಂಪು ಮಾಡಲು ಕಾಂಗ್ರೆಸ್ ನಲ್ಲಿ ನಡೆದಿದ್ಯಾ ಹುನ್ನಾರ?
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವ ಗ್ಯಾರಂಟಿಯೂ ಇಲ್ಲ. ಅದಕ್ಕಾಗಿಯೇ ಜನರಿಗೆ ಗ್ಯಾರಂಟಿ ಕಾರ್ಡ್‌ಗಳನ್ನು ನೀಡಲಾಗುತ್ತಿದ್ದು, ಜನರಿಗೂ ಕಾಂಗ್ರೆಸ್ ಮೇಲೆ ನಂಬಿಕೆಯೇ ಇಲ್ಲ. ಕೋಲಾರ ವಿಧಾನಸಭಾ ಕ್ಷೇತ್ರದ ಉಸ್ತುವಾರಿಯನ್ನಾಗಿ ನನ್ನನ್ನು ನೇಮಿಸಲಾಗಿದೆ. ಪಕ್ಷವು ಅವಕಾಶ ಕೊಟ್ಟರೆ ಹೆಬ್ಬಾಳದಲ್ಲಿ ಸ್ಪರ್ಧಿಸುವೆ ಎಂದು ತಿಳಿಸಿದರು.
ಸಭೆಯಲ್ಲಿ ಕೆಯುಡಿಎ ಅಧ್ಯಕ್ಷ ವಿಜಯ್‌ಕುಮಾರ್, ಬಿಜೆಪಿ ನಗರ ಘಟಕದ ಅಧ್ಯಕ್ಷ ತಿಮ್ಮರಾಯಪ್ಪ, ಯು ಮೋರ್ಚಾ ಜಿಲ್ಲಾಧ್ಯಕ್ಷ ಬಾಲಾಜಿ, ಮುಖಂಡರಾದ ಕೆಂಬೋಡಿ ನಾರಾಯಣಸ್ವಾಮಿ, ನಿರ್ಮಲಾ ಇದ್ದರು.
ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.