ಬದ್ಧ ರಾಜಕೀಯ ವೈರಿಗಳಾದ ಮಂಜು, ಬಾಲಕೃಷ್ಣರ ಗೌಪ್ಯ ಸಭೆ| ಮಾಗಡಿ ಕ್ಷೇತ್ರದಲ್ಲಿ ರಾಜಕೀಯ ಸಂಚಲನ ಮೂಡಿಸಿದೆ ಇಬ್ಬರ ಭೇಟಿ| ಇಬ್ಬರು ನಾಯಕರ ಭೇಟಿಯ ಹಿಂದಿನ ರಹಸ್ಯವಾದರೂ ಏನು?
ಬೆಂಗಳೂರು[ಅ.09]: ರಾಜಕಾರಣದಲ್ಲಿ ಬದ್ಧ ವೈರಿಗಳಾಗಿರುವ ಮಾಗಡಿ ಕ್ಷೇತ್ರದ ಜೆಡಿಎಸ್ ಶಾಸಕ ಎ.ಮಂಜುನಾಥ್ ಹಾಗೂ ಕಾಂಗ್ರೆಸ್ ನಾಯಕರಾದ ಮಾಜಿ ಶಾಸಕ ಎಚ್ .ಸಿ.ಬಾಲಕೃಷ್ಣ ಅವರು ಗೌಪ್ಯವಾಗಿ ಸಭೆ ನಡೆಸಿರುವುದು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಬೆಂಗಳೂರಿನ ಶಿವಾನಂದ ಸರ್ಕಲ್‌ನಲ್ಲಿನ ಖಾಸಗಿ ಹೋಟೆಲ್ ಒಂದರಲ್ಲಿ ಶಾಸಕ ಎ. ಮಂಜುನಾಥ್, ಮಾಜಿ ಶಾಸಕ ಎಚ್.ಸಿ. ಬಾಲಕೃಷ್ಣ, ಕಾಂಗ್ರೆಸ್ ಯುವ ಅಧ್ಯಕ್ಷ ರಘುವೀರ್ ಗೌಡ ಹಾಗೂ ಮಂಡ್ಯದ ಕಾಂಗ್ರೆಸ್ ನಾಯಕ ಗಣಿಗ ರವಿ ಅವರೆಲ್ಲರು ಒಟ್ಟಿಗೆ ಚರ್ಚೆ ನಡೆಸುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಪ್ರತಿ ವಿಧಾನಸಭಾ ಚುನಾವಣೆಗಳಲ್ಲಿ ಪರಸ್ಪರ ಪ್ರತಿಸ್ಪರ್ಧಿಗಳಾಗುವ ಇಬ್ಬರು ನಾಯಕರು ಗೌಪ್ಯ ಸಭೆ ನಡೆಸಿರುವುದು ಜೆಡಿಎಸ್ ಪಾಳಯದಲ್ಲಿ ಸಂಚಲನ ಮೂಡಿಸಿದೆ. ದಳದಲ್ಲಿ ಎ. ಮಂಜು ಅವರ ಮಾತಿಗೆ ಬೆಲೆಯಿಲ್ಲ. ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸ ಮಾಡಲು ತೊಂದರೆಯಾಗುತ್ತಿದೆ. ಇದರಿಂದ ಇವರು ಬೇಸತ್ತಿದ್ದಾರೆ. ಹೆಸರಿಗಷ್ಟೆಶಾಸಕ. ಆದರೆ, ಸ್ವತಂತ್ರವಾಗಿ ಕ್ಷೇತ್ರದ ಕೆಲಸ ಮಾಡಲಾಗುತ್ತಿಲ್ಲ ಎಂದು ನೊಂದುಕೊಂಡಿದ್ದಾರೆ ಎಂಬುದು ಅವರ ಆಪ್ತರ ಮಾತು.
ಹೊಂದಾಣಿಕೆ ಯತ್ನ:
ಹೀಗಾಗಿ ಜೆಡಿಎಸ್ ವರಿಷ್ಠರಿಗೆ ಸೆಡ್ಡು ಹೊಡೆಯಲು ಮಂಜುರವರು ಶತ್ರು ಜೊತೆಗೆ ಹೊಂದಾಣಿಕೆ ಮಾಡಿಕೊಳ್ಳುತ್ತಿದ್ದಾರೆ. ದಳಪತಿಗಳ ವಿರುದ್ಧವೇ ತೊಡೆ ತಟ್ಟಲು ಒಂದಾಗುತ್ತಿದ್ದಾರೆಯೇ ಎಂಬ ಅನುಮಾನಗಳು ದಟ್ಟವಾಗುತ್ತಿವೆ.
ಜೆಡಿಎಸ್ ಪಕ್ಷದಲ್ಲಿ ದೀರ್ಘಕಾಲ ರಾಜಕಾರಣ ಮಾಡಿ ಕಾಂಗ್ರೆಸ್ ಪಕ್ಷಕ್ಕೆ ಬಂದಿರುವ ಎಚ್.ಸಿ.ಬಾಲಕೃಷ್ಣರವರು ಶಾಸಕ ಎ.ಮಂಜುನಾಥ್ ಅವರನ್ನು ಜೆಡಿಎಸ್ ಪಕ್ಷದಿಂದ ಕಾಂಗ್ರೆಸ್ ಪಕ್ಷಕ್ಕೆ ಕರೆತರುವ ಕಾರ್ಯಕ್ಕೆ ನವರಾತ್ರಿ ಸಂದರ್ಭದಲ್ಲಿಯೇ ಚಾಲನೆ ನೀಡಿದ್ದಾರೆ. ಇವರಿಬ್ಬರ ನಡುವಿನ ಮಾತು ಹೆಚ್ಚೂ ಕಡಿಮೆ ಫಲಪ್ರದವಾಗಿವೆ ಎಂಬ ಬಿಸಿಬಿಸಿ ಚರ್ಚೆಗಳು ನಡೆಯುತ್ತಿವೆ.
ಕಳೆದ ವಿಧಾನಸಭಾ ಚುನಾವಣೆ ವೇಳೆ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ್ದ ಎಚ್.ಸಿ. ಬಾಲಕೃಷ್ಣ ಅವರನ್ನು ಕಾಂಗ್ರೆಸ್‌ನಲ್ಲಿದ್ದ ಮಂಜುನಾಥ್ ಅವರನ್ನು ಜೆಡಿಎಸ್ನಿಂದ ಟಿಕೆಟ್ ನೀಡಿ ಸೋಲಿಸಲಾಗಿತ್ತು. ಆ ಸಿಟ್ಟನ್ನು ತೀರಿಸಿಕೊಳ್ಳಲು ಮಾಜಿ ಸಿಎಂ ಕುಮಾರಸ್ವಾಮಿ ಬಳಸಿದ ಅಸ್ತ್ರವನ್ನೇ ಬಳಸಲು ಬಾಲಕೃಷ್ಣರವರು ಶಾಸಕ ಮಂಜುನಾಥ್ ಅವರನ್ನು ಭೇಟಿಯಾಗಿರಬಹುದು ಎಂಬ ಪ್ರಶ್ನೆ ಕಾಡತೊಡಗಿದೆ.
ಯಾರು ಎಲ್ಲಿಗೆ ಹೋಗ್ತಾರೆ?:
ಹಾಗೊಂದು ವೇಳೆ ಎ. ಮಂಜುನಾಥ್ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಯಾದಲ್ಲಿ ಮುಂದಿನ ಚುನಾವಣೆಯಲ್ಲಿ ಮಾಗಡಿ ಕ್ಷೇತ್ರದಿಂದ ಸ್ಪರ್ಧಿಸುವವರು ಯಾರು? ಅನರ್ಹ ಶಾಸಕರಿಂದಾಗಿ ನಡೆಯಲಿರುವ ಉಪಚುನಾವಣೆಯಲ್ಲಿ ಮಹಾಲಕ್ಷ್ಮಿ ಲೇಔಟ್ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಿಂದ ಎಚ್.ಸಿ. ಬಾಲಕೃಷ್ಣ ಸ್ಪರ್ಧಿಸುತ್ತಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಆ ರೀತಿ ಆದಲ್ಲಿ ಎ.ಮಂಜುನಾಥ್ ಅವರಿಗೆ ಮಾಗಡಿ ಕ್ಷೇತ್ರ ಗಟ್ಟಿಯಾಗಲಿದೆ. ಆದರೆ, ಬಾಲಕೃಷ್ಣರವರು ಮಹಾಲಕ್ಷ್ಮಿ ಲೇಔಟ್ ಕ್ಷೇತ್ರದಿಂದ ಸ್ಪರ್ಧಿಸಲು ಹಿಂದೇಟು ಹಾಕುತ್ತಿದ್ದಾರೆ. ನನ್ನ ಕರ್ಮಭೂಮಿ ಏನಿದ್ದರೂ ಮಾಗಡಿ ಕ್ಷೇತ್ರ. ಸೋತರೂ, ಗೆದ್ದರೂ ಮಾಗಡಿಯಲ್ಲಿಯೇ ಸ್ಪರ್ಧಿಸುತ್ತೇನೆ ಎಂಬ ಮಾತುಗಳನ್ನು ಆಡಿದ್ದಾರೆ.
ಮಾಗಡಿಯಲ್ಲಿ ಬದ್ಧ ರಾಜಕೀಯ ವೈರಿಗಳೆಂದೇ ಕರೆಸಿಕೊಳ್ಳುವ ಮಂಜುನಾಥ್ ಮತ್ತು ಬಾಲಕೃಷ್ಣರವರು ಗುಪ್ತ ಸಭೆಯ ಹಿಂದಿರುವ ಪ್ಲಾನ್ ಏನೆಂಬುದನ್ನು ಅವರೇ ಸ್ಪಷ್ಟಪಡಿಸಬೇಕಾಗಿದೆ.