ಸಾವರ್ಕರ್ ಫೋಟೋ ತೆಗೆಯಬೇಕು ಎಂಬ ತಮ್ಮ ನಿಲುವನ್ನು ಮತ್ತೆ ಸಮರ್ಥಿಸಿಕೊಂಡ ಸಚಿವ ಪ್ರಿಯಾಂಕ್ ಖರ್ಗೆ, ನನ್ನ ಸಿದ್ಧಾಂತವು ಬಸವ ತತ್ವ, ನಾರಾಯಣ ಗುರು, ಡಾ. ಬಿ.ಆರ್.ಅಂಬೇಡ್ಕರ್ ಅವರ ಸಿದ್ಧಾಂತ.
ಸುವರ್ಣ ವಿಧಾನಸೌಧ (ಡಿ.10): ಸುವರ್ಣ ವಿಧಾನಸೌಧದಲ್ಲಿರುವ ವಿ.ಡಿ. ಸಾವರ್ಕರ್ ಭಾವಚಿತ್ರ ತೆಗೆಸುವ ಪ್ರಸ್ತಾಪ ತಮ್ಮ ಮುಂದೆ ಇಲ್ಲ ಎಂದು ಸ್ಪೀಕರ್ ಯು.ಟಿ.ಖಾದರ್ ಸ್ಪಷ್ಟಪಡಿಸಿದ್ದಾರೆ. ಜತೆಗೆ, ಇಂತಹ ವಿಚಾರ ಪ್ರಸ್ತಾಪ ಮಾಡುವ ಬದಲು ಸಚಿವರು, ಹಾಗೂ ಶಾಸಕರು ತಮ್ಮ ಕೆಲಸವನ್ನು ಚೆನ್ನಾಗಿ ಮಾಡಲಿ. ನಾನು ನನ್ನ ಕೆಲಸವನ್ನು ಮಾಡುತ್ತೇನೆ ಎನ್ನುವ ಮೂಲಕ ಸಾವರ್ಕರ್ ಫೋಟೋ ತೆಗೆಸುವ ವಿಚಾರ ಪ್ರಸ್ತಾಪಿಸಿದ ಸಚಿವ ಪ್ರಿಯಾಂಕ್ ಖರ್ಗೆ ಧೋರಣೆಗೆ ಬೇಸರವನ್ನು ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಫೋಟೋ ಬದಲಿಸಬೇಕು ಎಂಬ ತಮ್ಮ ಹೇಳಿಕೆಯನ್ನು ಪುನರುಚ್ಚರಿಸಿರುವ ಸಚಿವ ಪ್ರಿಯಾಂಕ್ ಖರ್ಗೆ ಅವರು, ಈ ಹೇಳಿಕೆಗೆ ತಾವು ಬದ್ಧ ಎಂದು ತಿಳಿಸಿದ್ದಾರೆ.
ಸಭಾಪತಿ ಬಸವರಾಜ ಹೊರಟ್ಟಿ ಅವರೊಂದಿಗೆ ಜಂಟಿ ಪತ್ರಿಕಾಗೋಷ್ಠಿ ನಡೆಸಿದ ಸ್ಪೀಕರ್ ಯು.ಟಿ. ಖಾದರ್ ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿ ಸಾವರ್ಕರ್ ಫೋಟೋ ಬದಲಿಸುವ ಪ್ರಸ್ತಾಪ ತಮ್ಮ ಮುಂದೆ ಇಲ್ಲ ಎಂದು ಸ್ಪಷ್ಟಪಡಿಸಿದರು. ಜತೆಗೆ, ಸರಿಯಾದ ಸಮಯಕ್ಕೆ ಅಧಿವೇಶನಕ್ಕೆ ಬರುವುದು, ಉತ್ತಮ ಚರ್ಚೆ ನಡೆಸುವುದು, ಯೋಜನೆ ರೂಪಿಸುವುದು ಸಚಿವರು ಹಾಗೂ ಶಾಸಕರ ಕೆಲಸ. ಆ ಕೆಲಸವನ್ನು ಚೆನ್ನಾಗಿ ಮಾಡಲಿ. ಯಾರು ಏನೇನು ಕೆಲಸ ಮಾಡಬೇಕು. ಆ ಕೆಲಸವನ್ನು ಅವರು ಮಾಡುತ್ತಾರೆ ಎಂದರು.
ಚುನಾವಣೆ ಗೆಲ್ಲಲು ಜನರ ಹೃದಯ ಗೆಲ್ಲಬೇಕು: ಪ್ರಧಾನಿ ಮೋದಿ
ರಾಜ್ಯದಲ್ಲಿ ಸೌಹಾರ್ದತೆ ಮೂಡಿಸುವುದು ನನ್ನ ಕೆಲಸ. ಹಿಂದೆ ಏನು ಆಗಿದೆ ಅದರ ವಿಮರ್ಶೆ ಮಾಡುವುದಿಲ್ಲ. ಸಂವಿಧಾನ ಬದ್ಧವಾಗಿ ಕೆಲಸ ಮಾಡುತ್ತೇನೆ. ಯಾವುದನ್ನೂ ಕಿತ್ತು ಎಸೆಯುವುದು ನನ್ನ ಕೆಲಸವಲ್ಲ. ಬದಲಿಗೆ ಬೆಸೆಯುವುದು ನನ್ನ ಕೆಲಸ. ಸಮಾಜದಲ್ಲಿ ಸೌಹಾರ್ದತೆ ಮೂಡಿಸುವು ನನ್ನ ಮೊದಲ ಆದ್ಯತೆ. ಬೆಂಗಳೂರಿನ ಯಲಹಂಕದಲ್ಲಿ ಮೇಲ್ಸೇತುವೆಗೆ ಸಾವರ್ಕರ್ ಹೆಸರು ಇಡಲಾಗಿದೆ. ಹಾಗಾದರೆ, ಅದರಲ್ಲಿ ಓಡಾಡುವುದಿಲ್ಲವೇ? ಹಾಗೆಯೇ, ಮುಂದಾಲೋಚನೆಯಿಂದ ಕೆಲಸ ಮಾಡಬೇಕು. ಬಿಕ್ಕಟ್ಟು ಸೃಷ್ಟಿಸುವ ಕೆಲಸ ಮಾಡಬಾರದು ಎಂದು ತಿಳಿಸಿದರು.
ನಿಲುವಿಗೆ ಬದ್ಧ: ಇದೇ ವೇಳೆ ಫೋಟೋ ತೆಗೆಯಬೇಕು ಎಂಬ ತಮ್ಮ ನಿಲುವನ್ನು ಮತ್ತೆ ಸಮರ್ಥಿಸಿಕೊಂಡ ಸಚಿವ ಪ್ರಿಯಾಂಕ್ ಖರ್ಗೆ, ನನ್ನ ಸಿದ್ಧಾಂತವು ಬಸವ ತತ್ವ, ನಾರಾಯಣ ಗುರು, ಡಾ. ಬಿ.ಆರ್.ಅಂಬೇಡ್ಕರ್ ಅವರ ಸಿದ್ಧಾಂತ. ಹೀಗಾಗಿ ಸಾವರ್ಕರ್ ಸಿದ್ಧಾಂತ ನಾನು ಒಪ್ಪಲ್ಲ. ವಿಧಾನಸೌಧ ಸಭಾಂಗಣದಲ್ಲಿ ವಿ.ಡಿ. ಸಾವರ್ಕರ್ ಅವರ ಭಾವಚಿತ್ರ ತೆರವು ಮಾಡುವ ಕುರಿತು ನನ್ನ ಹೇಳಿಕೆಗೆ ನಾನು ಈಗಲೂ ಬದ್ಧವಾಗಿದ್ದೇನೆ. ಸಾವರ್ಕರ್ ಅವರು ಬ್ರಿಟೀಷರಿಂದ ಪಿಂಚಣಿ ಪಡೆಯುತ್ತಿದ್ದರು ಎಂದಿದ್ದಾರೆ.
ಬಡ್ತಿಗೆ ಶಿಕ್ಷಕರೇ ಪರೀಕ್ಷೆ ಬರೆಯುವ ನಿಯಮ ರದ್ದು: ಸಚಿವ ಮಧು ಬಂಗಾರಪ್ಪ
ಇದೇ ವೇಳೆ ವಿ.ಡಿ. ಸಾವರ್ಕರ್ ಅವರನ್ನು ಇಡಲಾಗಿದ್ದ ಅಂಡಮಾನ್ ಜೈಲಿಗೆ ಬರಲಿ ಎಂದು ಸಿ.ಟಿ. ರವಿ ಅವರ ಸವಾಲಿಗೆ ಪ್ರತಿಕ್ರಿಯಿಸಿದ ಪ್ರಿಯಾಂಕ್ ಖರ್ಗೆ, ನಾನು ಸವಾಲನ್ನು ಸ್ವೀಕರಿಸಿದ್ದೇನೆ. ಅವರು ಕರೆದುಕೊಂಡು ಹೋದರೆ ನಾನು ಹೋಗೋಕೆ ಸಿದ್ಧನಿದ್ದೇನೆ. ಈಗ ಬರಗಾಲವಿದೆ. ಅದು ಮುಗಿಯಲಿ. ಅನಂತರವೂ ಅವರು ಕರೆದರೆ ಹೋಗುತ್ತೇನೆ ಎಂದು ಹೇಳಿದರು.