ಬಿಎಸ್‌ವೈ ಸಿಎಂ ಕುರ್ಚಿಗೆ ಕುತ್ತು ತಂದಿದ್ದು ಲಕ್ಷ್ಮಣ್ ಸವದಿ: ರಮೇಶ್ ಜಾರಕಿಹೊಳಿ

By Kannadaprabha News  |  First Published Apr 26, 2023, 12:35 AM IST

ಬಿ.ಎಸ್‌.ಯಡಿಯೂರಪ್ಪನವರಿಗೆ ಲಕ್ಷ್ಮಣ ಸವದಿ ಅವರನ್ನು ಡಿಸಿಎಂ ಮಾಡುವ ಮನಸು ಇರಲಿಲ್ಲ. ಪಕ್ಷದ ಹಿರಿಯ ಮುಖಂಡರ ಸಹಾಯದಿಂದ ಉಪಮುಖ್ಯಮಂತ್ರಿಯಾದ. ಮುಂದೆ ಬಿ.ಎಸ್‌.ಯಡಿಯೂರಪ್ಪನವರ ಮುಖ್ಯಮಂತ್ರಿ ಸ್ಥಾನಕ್ಕೆ ಕುತ್ತು ತಂದಿದ್ದು ಈ ಸವದಿ ಮಹಾನುಭಾವನಿಂದಲೇ ಎಂದು ಮಾಜಿ ಸಚಿವ ರಮೇಶ ಜಾರಕಿಹೊಳಿ ಗಂಭೀರ ಆರೋಪ ಮಾಡಿದರು.


ಅಥಣಿ (ಏ.26) : ಬಿ.ಎಸ್‌.ಯಡಿಯೂರಪ್ಪನವರಿಗೆ ಲಕ್ಷ್ಮಣ ಸವದಿ ಅವರನ್ನು ಡಿಸಿಎಂ ಮಾಡುವ ಮನಸು ಇರಲಿಲ್ಲ. ಪಕ್ಷದ ಹಿರಿಯ ಮುಖಂಡರ ಸಹಾಯದಿಂದ ಉಪಮುಖ್ಯಮಂತ್ರಿಯಾದ. ಮುಂದೆ ಬಿ.ಎಸ್‌.ಯಡಿಯೂರಪ್ಪನವರ ಮುಖ್ಯಮಂತ್ರಿ ಸ್ಥಾನಕ್ಕೆ ಕುತ್ತು ತಂದಿದ್ದು ಈ ಸವದಿ ಮಹಾನುಭಾವನಿಂದಲೇ ಎಂದು ಮಾಜಿ ಸಚಿವ ರಮೇಶ ಜಾರಕಿಹೊಳಿ(Ramesh jarkiholi) ಗಂಭೀರ ಆರೋಪ ಮಾಡಿದರು.

ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ಕಾಂಗ್ರೆಸ್‌ ಪಕ್ಷವನ್ನು ತೊರೆದ ಮುಖಂಡರನ್ನು ಬಿಜೆಪಿ ಪಕ್ಷಕ್ಕೆ ಸ್ವಾಗತಿಸಿಕೊಂಡು ಮಾತನಾಡಿದ ಅವರು, ಬಿಜೆಪಿ ಕೇಂದ್ರ ವರಿಷ್ಠರಿಗೆ ಯಡಿಯೂರಪ್ಪನವರ ಬಗ್ಗೆ ತಪ್ಪು ಕಲ್ಪನೆ ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದನು ಎಂದು ಲಕ್ಷ್ಮಣ ಸವದಿ(Laxman savadi) ವಿರುದ್ಧ ಏಕವಚನದಲ್ಲಿಯೇ ಹರಿಹಾಯ್ದರು.

Tap to resize

Latest Videos

 

ಕಾಂಗ್ರೆಸ್‌ನ ಸುಳ್ಳು ಭರವಸೆಗಳಿಗೆ ಕಿವಿಗೊಡಬೇಡಿ: ರಮೇಶ ಜಾರಕಿಹೊಳಿ

ಕೃಷ್ಣಾ ನದಿಗೆ 2 ಟಿಎಂಸಿ ನೀರು ಬಿಡುವ ನಿಟ್ಟಿನಲ್ಲಿ ಮಹಾರಾಷ್ಟ್ರ ಸರ್ಕಾರದೊಂದಿಗೆ ಮಾತುಕತೆ ನಡೆಸಲಾಗಿದೆ. ವಿಧಾನ ಪರಿಷತ… ಸದಸ್ಯ ಪ್ರಕಾಶ ಹುಕ್ಕೇರಿ ಅವರು ತಾವೇ ನೀರು ಬಿಡಿಸಿದ್ದು ಎಂದು ಸುಳ್ಳು ಪ್ರಚಾರ ಪಡೆದುಕೊಳ್ಳುತ್ತಿದ್ದಾರೆ. ಆದ್ದರಿಂದ ನದಿಗೆ ನೀರು ಬರಲು ಸ್ವಲ್ಪ ತಡವಾಗಿದೆ. ಈ ಭಾಗದ ರೈತರು, ಕಬ್ಬು ಬೆಳೆಗಾರರು ಆತಂಕ ಪಡುವ ಅಗತ್ಯವಿಲ್ಲ. ಮುಂಬರುವ ನಾಲ್ಕೈದು ದಿನಗಳಲ್ಲಿ ಕೃಷ್ಣಾ ನದಿಗೆ 2 ಟಿಎಂಸಿ ನೀರು ಹರಿದು ಬರಲಿದೆ ಎಂದು ತಿಳಿಸಿದರು.

ಶಾಸಕ ಮಹೇಶ ಕುಮಟಳ್ಳಿ(Mahehs kumatahalli MLA) ಮಾತನಾಡಿ, ನಾನು ಕಾಂಗ್ರೆಸ್‌ ಪಕ್ಷವನ್ನು ತೊರೆದು 17 ಜನ ಶಾಸಕರೊಂದಿಗೆ ಬಿಜೆಪಿ ಪಕ್ಷವನ್ನು ಸೇರ್ಪಡೆಗೊಳ್ಳುವಾಗ .50 ಕೋಟಿ ಪಡೆದುಕೊಂಡಿದ್ದೇನೆಂದು ನನ್ನ ಆತ್ಮೀಯ ಸ್ನೇಹಿತ ಸತ್ಯಪ್ಪ ಬಾಗೇಣ್ಣನವರ ಮುಂದೆ ಲಕ್ಷ್ಮಣ ಸವದಿ ಆರೋಪ ಮಾಡಿದ್ದಾರೆ. ಇದಕ್ಕೆ ಅವರಲ್ಲಿ ಸಾಕ್ಷಿ ಇದ್ದರೇ ಅವರ ತಾಯಿಯ ಮೇಲೆ ಆಣೆ ಮಾಡಿ ಹೇಳಲಿ. ಇಲ್ಲವೇ ಅಥಣಿಯ ಸಿದ್ಧೇಶ್ವರ ದೇವಸ್ಥಾನಕ್ಕೆ ಬರಲಿ, ನಾನು ಸಹ ಬರುತ್ತೇನೆ. ಅವರು ಸಾರ್ವಜನಿಕವಾಗಿ ಅವರು ಸಿದ್ಧೇಶ್ವರ ದೇವರ ಸನ್ನಿಧಿಯಲ್ಲಿ ಆಣೆ ಪ್ರಮಾಣ ಮಾಡಲಿ. ಇಲ್ಲವಾದರೇ ಸಾರ್ವಜನಿಕವಾಗಿ ಕ್ಷಮೆ ಕೇಳಲಿ ಎಂದು ಸವಾಲು ಹಾಕಿದರು.

ನಾನು ಇಲ್ಲಿಯವರೆಗೆ ಅನೇಕ ಅವಮಾನಗಳನ್ನು ಸಹಿಸಿಕೊಂಡಿದ್ದೆ. ಇನ್ನು ಮೇಲೆ ನಾನು ಸಹಿಸಿಕೊಳ್ಳುವುದಿಲ್ಲ. ಅವರಿಂದ ನನಗೆ ಯಾವುದೇ ಉಪಕಾರವಾಗಿಲ್ಲ. ನನ್ನಿಂದಲೇ ಅವರಿಗೆ ಅನೇಕ ಉಪಕಾರವಾಗಿದೆ. ಇನ್ನು ಮುಂದೆ ನಮ್ಮ ಅಭಿಮಾನಿಗಳಿಗೆ ಮತ್ತು ಬಿಜೆಪಿ ಕಾರ್ಯಕರ್ತರಿಗೆ ಅನ್ಯಾಯವಾದರೇ ಸಹಿಸುವುದಿಲ್ಲ. ಅಥಣಿ ತಾಲೂಕಿನ ಅನೇಕ ಪಿಕೆಪಿಎಸ್‌ಗಳಲ್ಲಿ ನಮ್ಮ ರೈತರಿಗೆ ಸಾಲ ಸೌಲಭ್ಯಗಳು ಸಿಗದೇ ಹೋದರೆ ಅಂತಹ ಪಿಕೆಪಿಎಸ್‌ಗಳನ್ನು ಬೀಗ್‌ ಜಡಿದು ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ನಾನು ಶಾಸಕನಾದ ಬಳಿಕ ಕಳೆದ 5 ವರ್ಷಗಳಲ್ಲಿ ಅಥಣಿ ಮತಕ್ಷೇತ್ರದಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇನೆ. ಎಲ್ಲ ಸಮುದಾಯಗಳಿಗೆ ವಿಶೇಷ ಅನುದಾನಗಳಲ್ಲಿ ಅನೇಕ ಯೋಜನೆಗಳನ್ನು ನೀಡಿದ್ದೇನೆ. ಪ್ರಮುಖವಾಗಿ ಅಮಾಜೇಶ್ವರಿ ಯಾತ ನೀರಾವರಿ ಯೋಜನೆ ಅನುಷ್ಠಾನಗೊಳಿಸುವಲ್ಲಿ ರಮೇಶ ಜಾರಕಿಹೊಳಿ ಪಾತ್ರ ಬಹಳ ಮುಖ್ಯವಾಗಿದೆ. ನನ್ನ ರಾಜಕೀಯ ಜೀವನದಲ್ಲಿಯೇ ಎಂದಿಗೂ ಯಾರಿಗೂ ನೋವಾಗುವ ರೀತಿಯಲ್ಲಿ ನಡೆದುಕೊಂಡಿಲ್ಲ. ನನ್ನ ಮುಗ್ಧ ಸ್ವಭಾವವನ್ನು ದುರುಪಯೋಗಪಡಿಸಿಕೊಂಡು ಇಲ್ಲಸಲ್ಲದ ಆರೋಪ ಮಾಡಿದರೇ ಸಮಯ ಬಂದಾಗ ತಕ್ಕ ಉತ್ತರ ನೀಡಬೇಕಾಗುತ್ತದೆ ಎಂದು ಗುಡುಗಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್‌ ಪಕ್ಷವನ್ನ ತೊರೆದು ವಿವಿಧ ಮುಖಂಡರು ಬಿಜೆಪಿ ಪಕ್ಷವನ್ನು ಸೇರ್ಪಡೆಗೊಂಡರು. ಈ ವೇಳೆ ಚುನಾವಣಾ ಉಸ್ತುವಾರಿ ವಿಜಯ ಕುಮಾರ ಕಡಗಿನೂರ, ಮುಖಂಡರಾದ ಸಿದ್ದಪ್ಪ ಮುದುಕಣ್ಣವರ, ಶೀತಲ ಪಾಟೀಲ, ರವಿ ಪೂಜಾರಿ, ಅಶೋಕ ದಾನಗೌಡ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಸೊಕ್ಕಿನ ಮನುಷ್ಯ ಸೋಲು ಕಾಣಬೇಕು; ಲಕ್ಷ್ಮಣ ಸವದಿ ವಿರುದ್ಧ ಗುಡುಗಿದ ಸಾಹುಕಾರ!

ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ಖಚಿತ. ಲಕ್ಷ್ಮಣ ಸವದಿಗೆ ಈ ಚುನಾವಣೆಯಲ್ಲಿ ಸೋಲಿಸಿ ಮನೆಗೆ ಕಳಿಸಲು ನಾನು ಸಿದ್ಧನಾಗಿದ್ದೇನೆ. ರಾಜ್ಯದಲ್ಲಿ ನಾವು ಆಡಳಿತಕ್ಕೆ ಬಂದ ಮರು ದಿನವೇ ಬೆಳಗಾವಿ ಜಿಲ್ಲಾ ಮಧ್ಯವರ್ತಿ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷ ರಮೇಶ ಕತ್ತಿ ಮೂಲಕ 12 ಜನ ನಿರ್ದೇಶಕರ ರಾಜೀನಾಮೆ ಕೊಡಿಸಿ ಸೂಪರ್‌ ಸೀಡ್‌ ಮಾಡಿಸುತ್ತೇನೆ. ಬ್ಯಾಂಕ್‌ನ ನಿರ್ದೇಶಕ ಸ್ಥಾನಕ್ಕೆ ಲಕ್ಷ್ಮಣ ಸವದಿ ವಿರುದ್ಧ ನಮ್ಮ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಗೆಲ್ಲಿಸುವ ಮೂಲಕ ಸವದಿ ಅವರನ್ನು ಮನೆಗೆ ಕಳುಹಿಸುತ್ತೇನೆ. ನಂತರ ಕೃಷ್ಣ ಸಹಕಾರಿ ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿಯನ್ನು ಸೂಪರ್‌ ಸೀಡ್‌ ಮಾಡಿ ನೂತನ ಚುನಾವಣೆಯ ನಡೆಸುತ್ತೇವೆ. ಲಕ್ಷ್ಮಣ ಸವದಿಯನ್ನು ರಾಜಕೀಯ ಜೀವನದಿಂದಲೇ ಮುಗಿಸಿ ಮನೆಗೆ ಕಳಿಸುತ್ತೇವೆ.

ರಮೇಶ ಜಾರಕಿಹೊಳಿ, ಮಾಜಿ ಸಚಿವರು.

ನನ್ನ ಆಡಳಿತದಲ್ಲಿ ಅವರು ಯಾವುದೇ ಹಸ್ತಕ್ಷೇಪ ಮಾಡಿಲ್ಲ. ಅಥಣಿ ಮತಕ್ಷೇತ್ರದಲ್ಲಿ ಯಾವುದೇ ಅಧಿಕಾರಿಗಳ ವರ್ಗಾವಣೆಯಲ್ಲಿ ನಾನು ಮತ್ತು ರಮೇಶಣ್ಣ ಯಾವುದೇ ರಾಜಕೀಯ ಮಾಡಿಲ್ಲ. ಲಕ್ಷ್ಮಣ ಸವದಿ ಮಾತ್ರ ತಮಗೆ ಬೇಕಾದ ಅಧಿಕಾರಿಗಳನ್ನು ವರ್ಗಾವಣೆ ಮಾಡಿಸಿಕೊಂಡಿದ್ದಾರೆ. ಆದರೆ, ನಾನು ಈ ಬಗ್ಗೆ ಯಾವುದೇ ಆಕ್ಷೇಪ ವ್ಯಕ್ತಪಡಿಸಿಲ್ಲ. ಎಲ್ಲವನ್ನು ಮೌನವಾಗಿಯೇ ಸ್ವೀಕರಿಸಿದ್ದೇವೆ. ಆದರೂ ಕೂಡ ಇಲ್ಲಸಲ್ಲದ ಆರೋಪಗಳನ್ನು ಮಾಡಿದರೇ ನಾನು ಇನ್ನು ಮುಂದೆ ಸಹಿಸುವುದಿಲ್ಲ.

ಮಹೇಶ ಕುಮಟಳ್ಳಿ, ಶಾಸಕರು.

ಮಾಧ್ಯಮಗಳ ವಿರುದ್ಧ ಹರಿಹಾಯ್ದ ರಮೇಶ

ಕೆಲ ಮಾಧ್ಯಮಗಳು ಸರ್ವೆ ಹೆಸರಿನಲ್ಲಿ ಸುಳ್ಳು ಸುದ್ದಿ ಬಿಂಬಿಸುತ್ತಿವೆ. ಮಾಧ್ಯಮಗಳನ್ನು ಮತ್ತು ಪತ್ರಿಕೆಗಳನ್ನು ನಂಬಬೇಡಿ. ಮೇ.13 ರವರೆಗೆ ಯಾವುದೇ ಮಾಧ್ಯಮದ ಸುದ್ದಿಗಳನ್ನು ವೀಕ್ಷಿಸಬೇಡಿ. ಪತ್ರಿಕೆಗಳನ್ನು ಓದಬೇಡಿ ಎಂದು ತಮ್ಮ ಅಭಿಮಾನಿಗಳಿಗೆ ಮತ್ತು ಕಾರ್ಯಕರ್ತರಿಗೆ ಹೇಳುವ ಮೂಲಕ ಮಾಧ್ಯಮಗಳ ವಿರುದ್ಧ ಮಾಜಿ ಸಚಿವ ರಮೇಶ ಜಾರಕಿಹೊಳಿ ಹರಿಹಾಯ್ದರು.

click me!