
ಯಾದಗಿರಿ (ಆ.25): ಧರ್ಮಸ್ಥಳ ವಿರುದ್ಧ ಷಡ್ಯಂತ್ರ ನಡೆದಿದ್ದು ಎನ್ಐಎ ತನಿಖೆಗೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಆಗ್ರಹ ವಿಚಾರವಾಗಿ, ಪ್ರತಿಕ್ರಿಯಿಸಿರುವ ಸಚಿವ ಸತೀಶ್ ಜಾರಕಿಹೊಳಿ, ಇದು ಉದ್ದೇಶಪೂರ್ವಕವಾಗಿ ಆಗಿದೆಯೋ ? ಅಥವಾ ತಾನಾಗಿಯೇ ಆಗಿದೆಯೋ? ಎಂಬುದು ಗೊತ್ತಾಗಬೇಕು ಅಂದರೆ ಎನ್ಐಎ ತನಿಖೆಯಾದರೆ ಏನೂ ತಪ್ಪಿಲ್ಲ. ಎನ್ಐಎ ತನಿಖೆಯಾದರೆ ಒಳ್ಳೆಯದು, ಇದರ ಹಿಂದೆ ಯಾರಿದ್ದಾರೆ ಎಂದು ಗೊತ್ತಾಗಲಿದೆ ಎಂದರು. ಆರೋಪಗಳಿಂದ ಮುಕ್ತಿ ಸಿಗಬೇಕಾದರೆ ಎನ್ಐಎ ತನಿಖೆ, ಇಲ್ಲವೇ ಅದಕ್ಕಿಂತ ದೊಡ್ಡಮಟ್ಟದ ತನಿಖೆ ಆಗಬೇಕು. ಕರ್ನಾಟಕ ಜನತೆ ಬೇರೆ ಕೆಲಸ ಬಿಟ್ಟು ಧರ್ಮಸ್ಥಳದ ಬಗ್ಗೆ ನೋಡುತ್ತ ಕುಳಿತಿದ್ದಾರೆ. ಇದರಲ್ಲಿ ಎಡಪಂಥೀಯ ಹಾಗೂ ಬಲಪಂಥೀಯ ಎಂಬುದು ಇಲ್ಲ. ಇದು ರಾಜಕೀಯಕ್ಕೆ ಸಂಬಂಧಿಸಿದ ವಿಷಯ ಅಲ್ಲ ಎಂದರು.
ಒಗ್ಗಟ್ಟಿನಿಂದ ಹೋರಾಟ ನಡೆಸಿದರೆ ಶಾಂತಿ, ಸೌಹಾರ್ದ ಗಟ್ಟಿ: ಅಂಬೇಡ್ಕರ್, ಬಸವಣ್ಣ, ಮಹಾವೀರರ ತತ್ವದಂತೆ ಜೈನರು, ಸಿಖ್ಖರು, ಮುಸ್ಲಿಂರು ಸೇರಿದಂತೆ ಎಲ್ಲರೂ ಒಗ್ಗಟ್ಟಿನಿಂದ ಹೋರಾಟ ನಡೆಸಿದರೆ ಶಾಂತಿ, ಸೌಹಾರ್ದ ಗಟ್ಟಿಯಾಗುತ್ತದೆ. ಈ ನಿಟ್ಟಿನಲ್ಲಿ ಮನುಷ್ಯತ್ವ, ಬಂಧುತ್ವದೊಂದಿಗೆ ಒಗ್ಗಟ್ಟಿನ ಹೋರಾಟ ನಡೆಸಿ ಜಾತ್ಯತೀತವಾಗಿ ಬದುಕಬೇಕು ಎಂದು ಹೇಳಿದರು. ಭಾರತಕ್ಕೆ ಕೇವಲ ಒಂದು ಜಾತಿ, ಸಮುದಾಯದ ಹೋರಾಟದಿಂದ ಸ್ವಾತಂತ್ರ್ಯ ಸಿಕ್ಕಿಲ್ಲ. ಎಲ್ಲ ಜಾತಿ- ಧರ್ಮದ ಜನರ ಹೋರಾಟದ ಫಲವಾಗಿ ಸ್ವಾತಂತ್ರ್ಯ ಸಿಕ್ಕಿದೆ. ಹೀಗಾಗಿ ಸದ್ಯ ಎದುರಾಗಿರುವ ಸಮಸ್ಯೆಗಳಿಗೆ ಒಗ್ಗಟ್ಟಿನ ಹೋರಾಟ ಅತ್ಯವಶ್ಯ ಎಂದರು.
ಮಾನವರನ್ನು ಮತ್ತಷ್ಟು ಹತ್ತಿರಗೊಳಿಸುವ ಉದ್ದೇಶದಿಂದ ಸೂಫಿ ಸಂತರ ಸಮ್ಮೇಳನ ನಡೆಯುತ್ತಿದೆ. ದೇಶದ ಸಾಮಾಜಿಕ, ಧಾರ್ಮಿಕತೆ ಬೆಳವಣಿಗೆಯಲ್ಲಿ ಸೂಫಿ ಸಂತರ ಕೊಡುಗೆ ಅಪಾರವಾಗಿದೆ. ಭಾವೈಕ್ಯತೆ ಮುಂದುವರಿದು ನಾವೆಲ್ಲ ಒಂದೇ ತಾಯಿ ಮಕ್ಕಳಂತೆ ಬದುಕಬೇಕು. ಆ ಮೂಲಕ ಸಾಮಾಜಿಕ, ಶೈಕ್ಷಣಿಕ ಹಕ್ಕು ಸಮಾನತೆ ದೊರೆಯುವಂತಾಗಬೇಕು. ಮುಸ್ಲಿಂ ಸಮುದಾಯದ ಶ್ರೇಯೋಭಿವೃದ್ಧಿ ಮತ್ತು ಕಲ್ಯಾಣಕ್ಕಾಗಿ ಸರ್ಕಾರ ವಕ್ಫ್ ಬೋರ್ಡ್ ಸ್ಥಾಪಿಸಿದ್ದು, ಸದುಪಯೋಗ ಪಡೆದುಕೊಂಡು ಭವಿಷ್ಯ ರೂಪಿಸಿಕೊಳ್ಳಬೇಕು ಎಂದರು.
ವಿಧಾನ ಪರಿಷತ್ ಮುಖ್ಯ ಸಚೇತಕ ಸಲೀಂ ಅಹ್ಮದ್ ಮಾತನಾಡಿ, ನಾಡು ಮತ್ತು ಸಮಾಜ ಅಭಿವೃದ್ಧಿಯಾಗಲು ಕೋಮು ಸೌಹಾರ್ದತೆಯಿಂದ ಮಾತ್ರ ಸಾಧ್ಯ. ಈ ಸಮ್ಮೇಳನ ಮೂಲಕ ನಾಡಿಗೆ ಸದ್ಭಾವನೆ, ಭ್ರಾತೃತ್ವ ಮತ್ತು ನಾವೆಲ್ಲರೂ ಒಂದು ಎಂಬ ಸಂದೇಶ ಸಾರಲಾಗಿದೆ ಎಂದರು. ಸಚಿವ ಶಿವಾನಂದ ಪಾಟೀಲ ಮಾತನಾಡಿ, ಭಾರತೀಯರು ನೆಮ್ಮದಿಯಿಂದ ಇರಬಾರದೆಂಬ ಉದ್ದೇಶದಿಂದಲೇ ಬ್ರಿಟಿಷರು ಜಾತಿ ಎಂಬ ವಿಷಬೀಜ ಬಿತ್ತಿ ಹೋಗಿದ್ದಾರೆ. ವಿಪರ್ಯಾಸ ಎಂದರೆ ಕೆಲವರು ಇದನ್ನು ಇನ್ನೂ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಲೋಕಸಭಾ ಸದಸ್ಯರು, ಶಾಸಕರು ಅಧಿಕಾರಕ್ಕಾಗಿ ಜಾತಿ ಮೇಲೆ ಮಾತನಾಡುತ್ತಿರುವುದು ಖೇದಕರ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.