Belagavi: ಸ್ವಪಕ್ಷದಲ್ಲಾದ ಪಿತೂರಿ ಗುಟ್ಟು ಬಿಚ್ಚಿಟ್ಟ ಜಾರಕಿಹೊಳಿ ಸಂದೇಶ ರವಾನಿಸಿದ್ದು ಯಾರಿಗೆ?

By Gowthami K  |  First Published Aug 20, 2022, 6:29 PM IST

2018ರ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಕ್ಷೇತ್ರದಲ್ಲಿ ಗೆಲುವಿನ ಅಂತರ ಕಡಿಮೆ ಆಗಲು ಕಾರಣ ಏನು ಎಂಬ ಗುಟ್ಟನ್ನು ಸತೀಶ್ ಜಾರಕಿಹೊಳಿ ಬಹಿರಂಗ ಪಡಿಸಿದ್ದಾರೆ.


ವರದಿ: ಮಹಾಂತೇಶ ಕುರಬೇಟ್, ಏಷ್ಯಾನೆಟ್ ಸುವರ್ಣನ್ಯೂಸ್

ಬೆಳಗಾವಿ (ಆ.20): ಇಡೀ ರಾಜ್ಯ ರಾಜಕಾರಣದ್ದೇ ಒಂದು ತೂಕ ಆದ್ರೆ ಬೆಳಗಾವಿ ರಾಜಕಾರಣದ್ದೇ ಒಂದು ತೂಕ. ಇಲ್ಲಿ ಯಾರು ಗೆಲ್ತಾರೆ ಅನ್ನೋದಕ್ಕಿಂತ ಯಾರು ಯಾರನ್ನು ಸೋಲಿಸುತ್ತಾರೆ ಅನ್ನೋದೇ ಸಸ್ಪೆನ್ಸ್ ಆಗಿರುತ್ತೆ. ಈ ಮಧ್ಯೆ 2018ರ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಕ್ಷೇತ್ರದಲ್ಲಿ ಗೆಲುವಿನ ಅಂತರ ಕಡಿಮೆ ಆಗಲು ಕಾರಣ ಏನು ಎಂಬ ಗುಟ್ಟನ್ನು ಸತೀಶ್ ಜಾರಕಿಹೊಳಿ ಬಹಿರಂಗ ಪಡಿಸಿದ್ದಾರೆ. 2018ರ ಚುನಾವಣೆಯಲ್ಲಿ ಸತೀಶ್ ಜಾರಕಿಹೊಳಿ ಕಡಿಮೆ ಅಂತರದಲ್ಲಿ ಗೆಲುವು ಸಾಧಿಸಿದ ಹಿನ್ನೆಲೆ ಬಿಜೆಪಿಯವರು ಈ ಬಾರಿ ಯಮಕನಮರಡಿ ಕ್ಷೇತ್ರ ಟಾರ್ಗೆಟ್ ಮಾಡಿದ್ದಾರಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ, 'ಕಳೆದ ಬಾರಿ ನಮ್ಮ ಪಕ್ಷದ ಹಣ ನಮ್ಮ ಲೀಡ್ ಕಡಿಮೆಯಾಗಲು ಕಾರಣವಾಯಿತು. ಈ ಸಾರಿ ಆ ಹಣ ಯಾವುದೂ ಬರಲ್ಲ ಎಂದಿದ್ದಾರೆ‌. ಯಾರು ಸರ್ ಹಣ ಕೊಟ್ಟಿದ್ದು ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಸತೀಶ್ ಜಾರಕಿಹೊಳಿ, 'ನಮ್ಮವರೇ ನಮ್ಮ ಪಕ್ಷದವರಿಂದಲೇ ಹಣ ಬಂದಿತ್ತು. ಬಿಜೆಪಿ ಹಣದಿಂದ ಏನೂ ನನ್ನ ಲೀಡ್ ಕಡಿಮೆ ಆಗಿರಲಿಲ್ಲ. ಈಗ ಆ ಹಣ ಬರಲ್ಲ ಆ ಕಡೆಯಿಂದ ಬ್ಲಾಕ್ ಆಗುತ್ತೆ, ಆ ಹಣ ನಮ್ಮ ಪರವಾಗಿರುತ್ತೆ' ಎಂದಿದ್ದಾರೆ. 

Tap to resize

Latest Videos

ಬಳಿಕ ನೀವೂ ಆ ಕಡೆ ಹಣ ಕೊಟ್ಟಿದ್ರಿ ಎಂದು ಮಾಧ್ಯಮ ಪ್ರತಿನಿಧಿಗಳು ಪ್ರಶ್ನಿಸಿದಾಗ ಕರೆಕ್ಟ್ ಅದು ಇಕ್ವಲ್ ಇಕ್ವಲ್ ಆಯ್ತಲ್ಲ. ಈ ಸಲ ಅವರೂ ಏನೂ ಮಾಡಲ್ಲ‌‌‌. ನಾವೂ ಸಹ ಏನೂ ಮಾಡುವ ಪ್ರಶ್ನೆ ಇಲ್ಲ' ಎಂಬ ಸ್ಫೋಟಕ ಹೇಳಿಕೆ ನೀಡಿದ್ದಾರೆ‌‌. ಸ್ವಪಕ್ಷದಲ್ಲಿದ್ದ ವಿರೋಧಿಗಳು ಈಗ ಒಂದಾಗಿದ್ದೇವೆ ಎಂಬ ಸಂದೇಶ ಸಾರಲು ಸತೀಶ್ ಜಾರಕಿಹೊಳಿ ಈ ರೀತಿ ಮಾತನಾಡಿದರಾ? ಎಂಬ ಚರ್ಚೆಗಳು ಬೆಳಗಾವಿ ಜಿಲ್ಲಾ ರಾಜಕಾರಣದಲ್ಲಿ ಶುರುವಾಗಿದ್ದು ಯಾರ ಹೆಸರನ್ನು ಪ್ರಸ್ತಾಪಿಸದೇ ಒಂದೇ ಕಲ್ಲಿಗೆ ಎರಡು ಏಟು ಹೊಡೆದ ಹಾಗೇ ಸ್ವಪಕ್ಷ ವಿಪಕ್ಷದವರಿಗೆ ಪರೋಕ್ಷ ಸಂದೇಶ ರವಾನಿಸಿದ್ದಾರೆ‌. 

ನನ್ನ ಕಟ್ಟಿ ಹಾಕಲು ಸಾಧ್ಯವೇ ಇಲ್ಲ ಎಂದ ಸತೀಶ್ ಜಾರಕಿಹೊಳಿ
ಇನ್ನು ಸತೀಶ್ ಜಾರಕಿಹೊಳಿ ಕಟ್ಟಿಹಾಕಲು ಬಿಜೆಪಿ ಹೂಡುತ್ತಿರುವ ತಂತ್ರಗಾರಿಕೆ ವಿಚಾರವಾಗಿ ಪ್ರತಿಕ್ರಿಯಿಸಿರುವ ಸತೀಶ್ ಜಾರಕಿಹೊಳಿ, 'ಅದಕ್ಕೆ ಪೂರಕವಾಗಿ ಈಗಾಗಲೇ ಅವರ ಕಾರ್ಯಕ್ರಮ ನಡೀತಿದೆ. ಅವರು ಒಂದೊಂದು ಹೆಜ್ಜೆ ಇಡುತ್ತಿರೋದು ಗೊತ್ತಿದೆ. ನನ್ನ ಕಟ್ಟಿ ಹಾಕಲಿಕ್ಕೆ ಆಗಲ್ಲ, ನಾವು ಈಗ ಅಡ್ಡಾಡುತ್ತಿದ್ದೇವಲ್ಲ. ನಮ್ಮ ಜನ ಕ್ಷೇತ್ರದ ಹಿಡಿತ ಬಗ್ಗೆ ನಮಗೆ ಗೊತ್ತಿದೆ, ಜನ ಯಾರ ಪರವಾಗಿದ್ದಾರೆ ಗೊತ್ತು. ನನ್ನ ಕಟ್ಟಿ ಹಾಕಲಂತೂ ಸಾಧ್ಯವೇ ಇಲ್ಲ ಎಂದಿದ್ದಾರೆ. ಇನ್ನು ಯಮಕನಮರಡಿ ಕ್ಷೇತ್ರದಲ್ಲಿ ಸತೀಶ್ ಜಾರಕಿಹೊಳಿ ಆಪ್ತ ಸಹಾಯಕರ ಹಾವಳಿಯಿಂದ ಜನ ದೂರ ಆಗುತ್ತಿದ್ದಾರೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಸತೀಶ್ ಜಾರಕಿಹೊಳಿ, 'ನಾವು ಎಲ್ಲಿ ರೂಲಿಂಗ್‌ನಲ್ಲಿ ಇರ್ತೀವಿ ಅಲ್ಲಿ ಮೈನಸ್ ಇದ್ದೇ ಇರುತ್ತೆ. ಪ್ರಮುಖ ಕಾರ್ಯಕರ್ತರು, ಆಪ್ತ ಸಹಾಯಕರು ಇಲ್ಲದೇ ಕೆಲಸ ಮಾಡಲು ಸಾಧ್ಯವಿಲ್ಲ. ತಪ್ಪನ್ನು ಸರಿ ಮಾಡಲು ನಿರಂತರ ಪ್ರಯತ್ನ ಮಾಡ್ತಾನೇ ಇರ್ತೇವೆ. ಆಪ್ತ ಸಹಾಯಕರು ಇಲ್ಲದೇ ಶಾಸಕರು ಕೆಲಸ ಮಾಡಲು ಕಷ್ಟ ಅದನ್ನ ಸರಿಪಡಿಸುವ ಯತ್ನ ಮಾಡ್ತೀವಿ ಎಂದಿದ್ದಾರೆ.

'ಕ್ಷೇತ್ರದಲ್ಲಿ ಪ್ರಚಾರ ಮಾಡದೇ ಗೆಲ್ಲಬೇಕು ಎಂಬ ಹಠ ಇತ್ತು'
ಇನ್ನು ಕಳೆದ ಬಾರಿ ನಿಮ್ಮ ಗೆಲುವಿನ ಅಂತರ ಕಡಿಮೆ ಇದ್ದಿದ್ದಕ್ಕೆ ಬಿಜೆಪಿ ಟಾರ್ಗೆಟ್ ಮಾಡಿದೆಯಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಸತೀಶ್ ಜಾರಕಿಹೊಳಿ, 'ಬಿಜೆಪಿಯವರು ಎಂ ಆರ್ ಪಿ ಫಿಕ್ಸ್ ಎಂದು ಹಿಡಿದುಕೊಂಡು ಕುಳಿತಿದ್ದಾರೆ. ಇದು ರಾಜಕೀಯ ಆಗಿನ ಸಂದರ್ಭ ಬೇರೆ ಇತ್ತು ಈಗ ಬೇರೆ ಇದೆ. ಕ್ಷೇತ್ರದಲ್ಲಿ ಪ್ರಚಾರ ನಡೆಸದೇ, ಹಣ ಖರ್ಚು ಮಾಡದೇ ಗೆದ್ದಿದ್ದೇನೆ. ಇದರ ಅರಿವು ಬಿಜೆಪಿ ನಾಯಕರಿಗೆ ಇಲ್ಲ. ಕ್ಷೇತ್ರದಲ್ಲಿ ಪ್ರಚಾರ ಮಾಡದೇ ಗೆಲ್ಲಬೇಕು ಎಂಬ ಹಠ ಇತ್ತು. ಕಿತ್ತೂರು ಕರ್ನಾಟಕದ ಭಾಗದಲ್ಲಿ 56 ವಿಧಾನಸಭೆ ಕ್ಷೇತ್ರಗಳು ಇವೆ‌. ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಪೈಕಿ ನನ್ನ ಕ್ಷೇತ್ರದಲ್ಲಿ ಕೇವಲ 2500 ಕಡಿಮೆ ಮತ ಬಂದಿದೆ. 2019ರ ಲೋಕಸಭೆ ಚುನಾವಣೆಯ ಫಲಿತಾಂಶ ಬಿಜೆಪಿ ನಾಯಕರು ನೋಡಬೇಕು.

ಬಿಜೆಪಿ ಕಾರ್ಯಕರ್ತರ ರಾಜೀನಾಮೆ ವಿಚಾರವಾಗಿ ವಿಷಾದ ವ್ಯಕ್ತಪಡಿಸಿದ ಸಂಸದ ಸಿದ್ದೇಶ್ವರ

ಇನ್ನೂ ನಮ್ಮ ಪಕ್ಷದ ನಾಯಕರ ಕ್ಷೇತ್ರದಲ್ಲಿ 30 ರಿಂದ 40 ಸಾವಿರ ಮೈನಸ್ ಆಗಿದೆ. 30 ಸಾವಿರ ಲೀಡ್ ಕಡಿಮೆ ಇದ್ದವರು ಗೆಲ್ತಾರೆ ಅಂದ್ರೆ 2500 ಲೀಡ್ ಕಡಿಮೆ ಇದ್ದವನು ಸೋಲ್ತೀನಾ? ಬಿಜೆಪಿಯವರು ಸ್ಟಡಿ ಮಾಡಿ 56 ಕ್ಷೇತ್ರಗಳ ಲೆಕ್ಕ ತೆಗೆಯಬೇಕು. ಅದರಲ್ಲಿ ಸಿದ್ದರಾಮಯ್ಯ ಇದಾರೆ, ಎಂ.ಬಿ.ಪಾಟೀಲ್ ಇದಾರೆ, ಆರ್.ವಿ.ದೇಶಪಾಂಡೆ ಇದ್ದಾರೆ. ಬಹಳಷ್ಟು ಕಾಂಗ್ರೆಸ್ ಘಟಾನುಘಟಿ ನಾಯಕರ ಕ್ಷೇತ್ರದಲ್ಲಿ ಲೀಡ್ ಕಡಿಮೆ ಆಗಿದೆ‌. ಆದರೂ ಕೂಡ ಅವರು ಎಂಎಲ್‌ಎ ಆಗಿ ಗೆಲ್ಲುತ್ತಿದ್ದಾರೆ. ನಾವು ಅಷ್ಟ ಸುಲಭವಾಗಿ ನಮ್ಮ ಕ್ಷೇತ್ರ ಬಿಟ್ಟುಕೊಡ್ತೀವಾ? ಒಂದೊಂದು ಚುನಾವಣೆ ಬೇರೆ ಬೇರೆ ಆಗಿರುತ್ತದೆ ಒಂದೇ ತರ ಇರಲ್ಲ ಎಂದು ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.

ಡಿಕೆ ಸಹೋ​ದ​ರರ ಕ್ಷೇತ್ರ​ದಿಂದಲೇ ಬಿಜೆಪಿ ರಣ ಕಹಳೆಗೆ ಸಿದ್ಧತೆ

ಇನ್ನು ಕಿತ್ತೂರು ಕರ್ನಾಟಕ ಭಾಗದ 2019ರ ಲೋಕಸಭಾ ಚುನಾವಣೆಯ 7 ಲೋಕಸಭಾ ಕ್ಷೇತ್ರಗಳ 56 ವಿಧಾನಸಭಾ ಕ್ಷೇತ್ರವಾರು ಫಲಿತಾಂಶದ ಪಟ್ಟಿ ಬಿಡುಗಡೆ ಮಾಡಿರುವ ಸತೀಶ್ ಜಾರಕಿಹೊಳಿ ತಮ್ಮ ಹಾಗೂ ಉಳಿದ ನಾಯಕರ ಕ್ಷೇತ್ರದಲ್ಲಿ ಮತಗಳ ಹಂಚಿಕೆ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಮಾಸ್ಟರ್‌ಮೈಂಡ್ ಸತೀಶ್ ಜಾರಕಿಹೊಳಿ ನಡೆ ಬಗ್ಗೆ ಜಿಲ್ಲಾ ರಾಜಕಾರಣದಲ್ಲಿ ತರಹೇವಾರು ಚರ್ಚೆ ನಡೆಯುತ್ತಿದ್ದು ತಮ್ಮನ್ನು ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಕಟ್ಟಿಹಾಕುವ ರಾಜಕೀಯ ವಿರೋಧಿಗಳ ತಂತ್ರಕ್ಕೆ ಯಾವ ಪ್ರತಿ ತಂತ್ರ ಹೂಡುತ್ತಾರೆ ಎಂಬುದನ್ನು ಕಾದು ನೋಡಬೇಕು.

click me!