ಡಿಕೆಶಿಗೆ ಕೊಟ್ಟ ಮಾತಿಗೆ ಬೆಂಗಳೂರು, ದೆಹಲಿಯಲ್ಲಿ ಉತ್ತರ: ಸಚಿವ ಸತೀಶ್ ಜಾರಕಿಹೊಳಿ

Published : Nov 28, 2025, 07:58 AM IST
Satish Jarkiholi

ಸಾರಾಂಶ

ಪಕ್ಷದಲ್ಲಿ ಉಂಟಾಗಿರುವ ಗೊಂದಲ ಸರಿಪಡಿಸುವಂತೆ ವರಿಷ್ಠರಿಗೆ ಮನವಿ ಮಾಡಿದ್ದೇವೆ. ಪಕ್ಷಕ್ಕಾಗಿ ದುಡಿದಿರುವ ಡಿ.ಕೆ.ಶಿವಕುಮಾರ ಅವರು ಕೂಲಿ ಕೇಳುವ ಸಂದರ್ಭ ಬಂದಾಗ ಚರ್ಚೆ ಮಾಡೋಣ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.

ಹಾವೇರಿ (ನ.28): ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಕೊಟ್ಟ ಮಾತಿನ ಬಗ್ಗೆ ಬೆಂಗಳೂರು ಹಾಗೂ ದೆಹಲಿಯಲ್ಲಿ ಉತ್ತರ ಸಿಗುತ್ತದೆ. ನಾವು ಕೂಡ ಆದಷ್ಟು ಬೇಗ ಪಕ್ಷದಲ್ಲಿ ಉಂಟಾಗಿರುವ ಗೊಂದಲ ಸರಿಪಡಿಸುವಂತೆ ವರಿಷ್ಠರಿಗೆ ಮನವಿ ಮಾಡಿದ್ದೇವೆ. ಪಕ್ಷಕ್ಕಾಗಿ ದುಡಿದಿರುವ ಡಿ.ಕೆ.ಶಿವಕುಮಾರ ಅವರು ಕೂಲಿ ಕೇಳುವ ಸಂದರ್ಭ ಬಂದಾಗ ಚರ್ಚೆ ಮಾಡೋಣ ಎಂದು ಸಚಿವ ಸತೀಶ ಜಾರಕಿಹೊಳಿ ಹೇಳಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಹಲವರ ಪ್ರಯತ್ನದಿಂದ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಆದರೆ, ಪಕ್ಷಕ್ಕಾಗಿ ದುಡಿದ ಎಲ್ಲರಿಗೂ ಅಧಿಕಾರ ಸಿಗಲ್ಲ.

ಅಧಿಕಾರ ಕೆಲವರಿಗೆ ಮಾತ್ರ ಸಿಗುತ್ತದೆ, ಕೆಲವರಿಗೆ ಸಿಗಲ್ಲ, ಕಾಯಬೇಕಷ್ಟೆ ಎಂದು ಮಾರ್ಮಿಕವಾಗಿ ನುಡಿದರು. ನೀವು ಮುಖ್ಯಮಂತ್ರಿ ಆಕಾಂಕ್ಷಿಯಾ? ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ಪಕ್ಷದ ವೇದಿಕೆಯಲ್ಲಿ ಎಲ್ಲವನ್ನೂ ಹೇಳ್ತೀವಿ, ಆ ಚರ್ಚೆ ಈಗ ಬರಲ್ಲ. ಮುಂದೆ ಚುನಾವಣೆ ಆಗಲಿ, ಆಗ ಚರ್ಚೆ ಮಾಡೋಣ. 2028ಕ್ಕೆ ನಮ್ಮದು, ಈಗ ನಮ್ಮದೇನಿಲ್ಲ ಎಂದು ಸ್ಪಷ್ಟಪಡಿಸಿದರು. ಡಿಕೆಶಿ ಪರ ಸ್ವಾಮೀಜಿಗಳ ಬ್ಯಾಟಿಂಗ್‌ ಕುರಿತು ಪ್ರತಿಕ್ರಿಯಿಸಿ, ಸಮುದಾಯದ ಪರವಾಗಿ ಸ್ವಾಮೀಜಿ ಮಾತನಾಡೋದು ಹೊಸದಲ್ಲ. ಈ ಹಿಂದೆ ಕೂಡ ಸ್ವಾಮೀಜಿಗಳು ಆ ಸಮುದಾಯದ ಪರವಾಗಿ ಹೇಳಿಕೆ ನೀಡಿದ್ದಾರೆ ಎಂದರು.

ಡಿಸಿಎಂ, ಜಾರಕಿಹೊಳಿ ಸಮಾಲೋಚನೆ

ಮುಖ್ಯಮಂತ್ರಿ ಬದಲಾವಣೆ ಕುರಿತ ಬೆಳವಣಿಗೆಗಳು ಗರಿಗೆದರಿರುವ ಬೆನ್ನಲ್ಲೇ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಆಪ್ತ ಸಚಿವ ಸತೀಶ್‌ ಜಾರಕಿಹೊಳಿ ಮಂಗಳವಾರ ರಾತ್ರಿ ಭೇಟಿಯಾಗಿದ್ದು ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿತು. ಸಾಕಷ್ಟು ವಿಷಯಗಳಲ್ಲಿ ಪರಸ್ಪರ ವಿರೋಧಿಗಳಾಗಿರುವ ಈ ನಾಯಕರು ತಡರಾತ್ರಿ ಸುದೀರ್ಘ ಚರ್ಚೆ ನಡೆಸಿದರು. ಈ ವೇಳೆ ಹೈಕಮಾಂಡ್‌ ತಮ್ಮನ್ನು ಮುಖ್ಯಮಂತ್ರಿಯನ್ನಾಗಿ ಘೋಷಿಸಿದರೆ ಬೆಂಬಲ ನೀಡುವಂತೆ ಡಿ.ಕೆ.ಶಿವಕುಮಾರ್ ಕೋರಿದರು ಎನ್ನಲಾಗಿದೆ.

ಅದಕ್ಕೆ ಸತೀಶ್ ಜಾರಕಿಹೊಳಿ ಅವರು, ಸಿದ್ದರಾಮಯ್ಯ ಅವರಿಗೆ ನಾವು ಹಿಂದಿನಿಂದಲೂ ಬೆಂಬಲಿಸಿದ್ದೇವೆ. ಮುಂದೆಯೂ ಆ ಬೆಂಬಲ ಹಾಗೆಯೇ ಉಳಿಯಲಿದೆ. ಒಂದು ವೇಳೆ ಹೈಕಮಾಂಡ್‌ ನಿರ್ಧರಿಸಿದರೆ, ಅದರ ವಿರುದ್ಧ ಹೋಗುವುದಿಲ್ಲ. ಹೈಕಮಾಂಡ್‌ ನಿರ್ದೇಶನದಂತೆ ಕೆಲಸ ಮಾಡುತ್ತೇವೆ. ಪಕ್ಷವನ್ನು ತೊರೆಯುವುದು ಅಥವಾ ಬೇರೆ ನಿರ್ಧಾರಕ್ಕೆ ಬರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಮತ್ತೊಂದು ಮೂಲಗಳ ಪ್ರಕಾರ ಸಭೆಯಲ್ಲಿ ಶಿವಕುಮಾರ್‌ ಅವರು ತಾವು ಮುಖ್ಯಮಂತ್ರಿಯಾದರೆ ತೆರವು ಮಾಡಲಿರುವ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಸತೀಶ್‌ ಅವರನ್ನು ತರಲು ಬೆಂಬಲ ನೀಡುವುದಾಗಿ ಹೇಳಿದರು ಎಂದೂ ಹೇಳಲಾಗುತ್ತಿದೆ. ಆದರೆ, ಉಭಯ ನಾಯಕರ ಆಪ್ತ ಮೂಲಗಳು ಇದನ್ನು ನಿರಾಕರಿಸುತ್ತಿವೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

India Latest News Live: ಅಕ್ರಮ ಸಂಬಂಧದ ಹಾದಿ ಹಿಡಿದ ಅಮ್ಮ - ಆಕೆಯ ಇಬ್ಬರು ಪುಟ್ಟ ಮಕ್ಕಳ ಮೋರಿಗೆಸೆದ ಪ್ರಿಯಕರ
63 ಪರ್ಸೆಂಟ್‌ ಭ್ರಷ್ಟಾಚಾರ ಬಿಜೆಪಿ ಕಾಲದ್ದು, ಅಶೋಕ್‌ಗೆ ಅರ್ಥವಾಗೇ ಇಲ್ಲ: ಸಿಎಂ