
ಬಾಗಲಕೋಟೆ (ನ.28): ನಿಮ್ಮಲ್ಲಿ ಗೌರವಯುತ ಒಪ್ಪಂದ ಆಗಿದ್ದರೆ, ಎರಡೂವರೆ ವರ್ಷಕ್ಕೆ ರಾಜೀನಾಮೆ ಕೊಡುವ ಮಾತಿದ್ದರೆ, ರಾಜೀನಾಮೆ ಕೊಡಿ. ರಾಜೀನಾಮೆ ಕೊಟ್ಟು ಸುರಕ್ಷಿತ, ದಕ್ಷ ಆಡಳಿತ ನೀಡಿ ಎಂದು ಮಾಜಿ ಡಿಸಿಎಂ, ಸಂಸದ ಗೋವಿಂದ ಕಾರಜೋಳ ಪರೋಕ್ಷವಾಗಿ ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕೆಂಬ ಇಂಗಿತ ವ್ಯಕ್ತಪಡಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ವಿಧಾನಸಭೆಯಲ್ಲಿ ಆಡಳಿತ ಮಾಡುತ್ತಿಲ್ಲ. ಹೋಟೆಲ್, ಬಾರ್ ಗಳಲ್ಲಿ ಗುಂಪು ಗುಂಪಾಗಿ ಕುರ್ಚಿಗಾಗಿ ಕಾದಾಟ ಮಾಡುತ್ತಿದೆ ಎಂದು ಆರೋಪಿಸಿದರು.
ಡಿಕೆಶಿ ಪರ ಕೆಲ ಶಾಸಕರ ದೆಹಲಿ ಪ್ರವಾಸ ಹೋದ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಂಸದ ಕಾರಜೋಳ, ಪಕ್ಷದ ಶಾಸಕರು ಏನು ಹೇಳುತ್ತಾರೆ. ಅದು ಮುಖ್ಯವಲ್ಲ. ಹೈಕಮಾಂಡ್ ಹೇಳೋದು ಮುಖ್ಯ. ಹಿಂದೆ ಒಪ್ಪಂದ ಆಗಿದ್ದರೆ, ಆ ಪ್ರಕಾರ ನಡೆಯಬೇಕು ಎಂಬುದು ಜನರ ಆಶಯ ಹೊರತು ಒಪ್ಪಂದ ಮುರಿದು ಮಾಡಿ ಎಂದು ಯಾರೂ ಬಯಸುವುದಿಲ್ಲ ಎಂದು ಹೇಳಿದರು.
ಆದಿಚುಂಚನಗಿರಿ ಶ್ರೀ ರಾಜಕೀಯ ಮಾಡಲ್ಲ: ಸಿದ್ದು ಮತ್ತು ಡಿಕೆಶಿ ಪರವಾಗಿ ಸ್ವಾಮೀಜಿಗಳ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಆದಿಚುಂಚನಗಿರಿ ಸ್ವಾಮೀಜಿಗಳು ಹಿಂದೆಂದೂ ರಾಜಕೀಯದಲ್ಲಿ ಭಾಗವಹಿಸಿಲ್ಲ. ಡಿಕೆಶಿ ಅವರು ಶ್ರಮಪಟ್ಟು ಪಕ್ಷ ಕಟ್ಟಿದ್ದಾರೆ. ಕಾಂಗ್ರೆಸ್ ಪಕ್ಷದ ಹೈಕಮಾಂಡ್ ತಲಾ ಎರಡೂವರೆ ವರ್ಷ ಒಬ್ಬರು ಸಿಎಂ ಎಂದು ಹೇಳಿದ್ದಾರೆ. ದುಡಿದ ನಾಯಕ ಡಿಕೆಶಿಯವರಿಗೆ ಮುಖ್ಯಮಂತ್ರಿ ಪಟ್ಟ ಸಿಗಲಿ ಎಂದು ಆಶಯ ವ್ಯಕ್ತಪಡಿಸಿದ್ದಾರೆ ಹೊರತು ಸ್ವಾಮೀಜಿ ಅವರು ರಾಜಕೀಯದಲ್ಲಿ ಭಾಗವಹಿಸಿಲ್ಲ, ವಹಿಸೋದು ಇಲ್ಲ. ಅವರೊಬ್ಬ ಸಂಸ್ಕಾರ ಇರುವ ಸ್ವಾಮೀಜಿ, ಅವರು ಇಷ್ಟು ವರ್ಷವಾದರೂ ರಾಜಕೀಯದಲ್ಲಿ ಭಾಗವಹಿಸಿದ್ದನ್ನು ನಾನು ನೋಡಿಲ್ಲ, ಬಾಲಗಂಗಾಧರನಾಥ ಶ್ರೀಗಳು ಹೋದ ಮೇಲೆ ಇವರು ಆ ಪೀಠಕ್ಕೆ ಬಂದಮೇಲೆ ಯಾವುತ್ತೂ ಸಹ ರಾಜಕೀಯ ಮಾತನಾಡಿಲ್ಲ. ಆದರೆ ದುಡಿದ ನಾಯಕನಿಗೆ ಸ್ಥಾನ ಸಿಗಬೇಕೆನ್ನುವ ಆಶಯ ವ್ಯಕ್ತಪಡಿಸಿದ್ದಾರಷ್ಟೇ ಎಂದು ಸಮರ್ಥಿಸಿಕೊಂಡರು.
ಕಾಂಗ್ರೆಸ್ ದಲಿತರಿಗೆ ಗೌರವ ಕೊಟ್ಟಿಲ್ಲ: ಮಲ್ಲಿಕಾರ್ಜುನ ಖರ್ಗೆಯವರು ಮೊನ್ನೆ ಬೆಂಗಳೂರಲ್ಲಿ ನನ್ನ ಕೈಯಲ್ಲೇನಿದೆ, ನಾನು ಮೆಸೆಂಜರ್ ಕೆಲಸ ಮಾಡತಿದ್ದೀನಿ ಎಂದಿದ್ದಾರೆ. ರಾಷ್ಟೀಯ ಅಧ್ಯಕ್ಷನಾಗಿ ಕೆಲಸ ಮಾಡ್ತೀನಿ ಎಂದು ಹೇಳಲಿಲ್ಲ. ಕಾಂಗ್ರೆಸ್ ನಲ್ಲಿ ಎಂದೂ ದಲಿತರಿಗೆ ಗೌರವ ಕೊಟ್ಟಿಲ್ಲ, ಅವರು ವೋಟ್ ಬ್ಯಾಂಕ್ ಮಾತ್ರ. ಕರ್ನಾಟಕದಲ್ಲಿ ಅಸ್ಪೃಶ್ಯರು, ದಲಿತರು ಸಿಎಂ ಆಗಿಲ್ಲ. ಮುಖ್ಯಮಂತ್ರಿ ಸ್ಥಾನ ಕೊಡಿಸುತ್ತೇನೆಂದು ಖರ್ಗೆ ಧೈರ್ಯದಿಂದ ಹೇಳಲಿ ನೋಡೋಣ. ಅವರು ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮನವೊಲಿಸಿ ಕೊಡಿಸಬೇಕು. ಖರ್ಗೆಯವರು ಆ ತರಹ ಹೇಳುವ ಸ್ಥಿತಿಯಲ್ಲೂ ಇಲ್ಲ ಎಂದು ಲೇವಡಿ ಮಾಡಿದರು.
ಸರ್ಕಾರ ಸಂಪೂರ್ಣ ನಿಷ್ಕ್ರಿಯ ಆಗಿದೆ. ರಾಜ್ಯಪಾಲರು ಕೂಡಲೇ ಸರ್ಕಾರವನ್ನು ಅಮಾನತ್ತಿನಲ್ಲಿಟ್ಟು, ರಾಷ್ಟ್ರಪತಿ ಆಡಳಿತ ನಡೆಸಬೇಕೆಂದು ಆಗ್ರಹಿಸಿದ ಅವರು, ಇಲ್ಲದಿದ್ದರೆ ರಾಜ್ಯ ಸಂಪೂರ್ಣವಾಗಿ ಹಾಳಾಗಿ ಹೋಗಲಿದೆ. ಜನ ಸಂಕಷ್ಟದಲ್ಲಿದ್ದಾರೆ. ಆರ್ಥಿಕವಾಗಿ ದಿವಾಳಿಯಾಗಿರುವ ಸರ್ಕಾರ ದಿನಾಲು ಹೊಸ ಹೊಸ ನಾಟಕ ಮಾಡಿ, ಜನರಗೆ ಮೋಸ ಮಾಡುತ್ತ, ದಿಕ್ಕು ತಪ್ಪಿಸುವ ಕೆಲಸವನ್ನು ಸಿದ್ದರಾಮಯ್ಯ ಸರ್ಕಾರ ಮಾಡುತ್ತಿದೆ ಎಂದು ಆರೋಪಿಸಿದರು. ಈ ಸರ್ಕಾರ ಇದ್ದೂ ಸತ್ತಂತಿದೆ. ಮುಂದುವರಿದು ಏನೂ ಲಾಭ ಇಲ್ಲ. ಅವರು ಮನೆಗೆ ಹೋದರೆ ಅಟ್‌ಲೀಸ್ಟ್ ಜನರಿಗೆ ಒಂದು ಆಯ್ಕೆ ಆದರೂ ಇರುತ್ತದೆ. ಬೇರೆ ಸರ್ಕಾರ ಬೇರೆ ಪಕ್ಷವನ್ನು ಆಯ್ಕೆ ಮಾಡಿ ಉತ್ತಮ ಆಡಳಿತ ನಡೆಸಲಿಕ್ಕೆ ಅವಕಾಶ ಮಾಡಿಕೊಡಬೇಕು. ಜನರ ಭಾವನೆ, ಜನರ ಭಾವನೆಗೆ ಅನುಗುಣವಾಗಿ ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಟ್ಟರೆ ಒಳ್ಳೆಯದು ಎಂದು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.