ಸಹಕಾರ ಸಚಿವ ಕೆ.ಎನ್. ರಾಜಣ್ಣ ಹನಿಟ್ರ್ಯಾಪ್ ಪ್ರಕರಣದಲ್ಲಿ ಸಿಲುಕಿದ್ದು, ಸಚಿವ ಸತೀಶ್ ಜಾರಕಿಹೊಳಿ ದೆಹಲಿಗೆ ತೆರಳಿ ಹೈಕಮಾಂಡ್ ಹಾಗೂ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದಾರೆ. ಹನಿಟ್ರ್ಯಾಪ್ ಮಾಡಿದ ನಾಯಕನ ಬಗ್ಗೆ ಹಾಗೂ ಪ್ರಕರಣದ ತನಿಖೆಯ ಬಗ್ಗೆ ಮಾತುಕತೆ ನಡೆಸಿದ್ದಾರೆ.
ದೆಹಲಿ (ಮಾ.25): ರಾಜ್ಯದಲ್ಲಿ ಹನಿಟ್ರ್ಯಾಪ್ ವಿಚಾರ ಭಾರೀ ಸದ್ದು ಮಾಡುತ್ತಿದ್ದು, ಇದರಲ್ಲಿ ಸಹಕಾರ ಸಚಿವ ಕೆ.ಎನ್. ರಾಜಣ್ಣ ಒಬ್ಬ ಸಂತ್ರಸ್ತರಾಗಿದ್ದಾರೆ. ಈ ಬಗ್ಗೆ ದೂರು ಕೊಟ್ಟಿದ್ದು, ತನಿಖೆ ಮಾಡಲು ಸರ್ಕಾರ ಮುಂದಾಗಿದೆ. ಇದರ ಬೆನ್ನಲ್ಲಿಯೇ ರಾಜಣ್ಣ ಪರವಾಗಿ ಬ್ಯಾಟಿಂಗ್ ಮಾಡಲು ದೆಹಲಿಗೆ ತೆರಳಿರುವ ಸಚಿವ ಸತೀಶ್ ಜಾರಕಿಹೊಳಿ ಅವರು ಹೈಕಮಾಂಡ್ ಭೇಟಿ ಬಳಿಕ, ಶತ್ರುವಿನ ಶತ್ರು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಹನಿಟ್ರ್ಯಾಪ್ ವಿಚಾರವನ್ನು ಚರ್ಚೆ ಮಾಡಿದ್ದಾರೆ.
ರಾಜ್ಯದಲ್ಲಿ ಸಿಎಂ ಖುರ್ಚಿ ಮೇಲೆ ಕಣ್ಣಿಟ್ಟಿದ್ದ ಡಿ.ಕೆ. ಶಿವಕುಮಾರ್‌ನನ್ನು ಮಣಿಸಬೇಕು ಎಂದು ಒಗ್ಗೂಡಿದ ಗುಂಪಿನ ಸದಸ್ಯ ಸಹಕಾರ ಸಚಿವ ಕೆ.ಎನ್. ರಾಜಣ್ಣ ಅವರ ಮೇಲೆ ಇದೀಗ ಹನಿಟ್ರ್ಯಾಪ್ ತೂಗುಗತ್ತಿ ಬೀಸುತ್ತಿದೆ. ಈ ಹನಿಟ್ರ್ಯಾಪ್ ವಿಡಿಯೋ ರಿಲೀಸ್ ಆಗಿ ಯಾವಾಗ ರಾಜಕೀಯ ಜೀವನಕ್ಕೆ ಮುಳುವಾಗುವುದೋ ಎಂದು ಆತಂಕದಲ್ಲಿರುವಾಗ ರಾಜಣ್ಣ ಪರವಾಗಿ ಬ್ಯಾಟಿಂಗ್ ಮಾಡಲು ಅವರ ಸ್ನೇಹಿತ ಸತೀಶ್ ಜಾರಕಿಹೊಳಿ ಅವರು ದೆಹಲಿಗೆ ಹೋಗಿ ಹೈಕಮಾಂಡ್ ಭೇಟಿ ಮಾಡಿದ್ದಾರೆ. ಜೊತೆಗೆ, ಶತ್ರವಿನ ಶತ್ರು ಮಿತ್ರ ಎಂಬ ನಾಣ್ಣುಡಿಯಂತೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿಯನ್ನು ಭೇಟಿ ಮಾಡಿ ಹನಿಟ್ರ್ಯಾಪ್ ಮಾಡಿದ ನಾಯಕನ ಬಗ್ಗೆ ಚರ್ಚೆ ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ರಾಜಣ್ಣ ಪರವಾಗಿ ಬೆಂಬಲಕ್ಕೆ ನಿಂತಿರುವ ಸತೀಶ್ ಜಾರಕಿಹೊಳಿ ಅವರು ನಿನ್ನೆ ರಾತ್ರಿ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ. ಸರ್ಕಾರದ ಅಭಿವೃದ್ಧಿ ಕಾರ್ಯಕ್ರಮಗಳ ಫೈಲ್ ಹಿಡಿದು ಹೋದ ಸತೀಶ್ ಅವರು, ನಂತರ ರಾಜ್ಯದಲ್ಲಿ ಭಾರೀ ಸದ್ದು ಮಾಡುತ್ತಿರುವ ಹನಿಟ್ರ್ಯಾಪ್ ವಿಚಾರವನ್ನೂ ತೆರೆದಿಟ್ಟಿದ್ದಾರೆ. ಸಂಸತ್ ಭವನದ ಕಚೇರಿಯಲ್ಲಿ ಸರ್ಕಾರದ ಕಡತಗಳ ಬಗ್ಗೆ ಚರ್ಚೆ ಮಾಡಿದ ನಂತರ ರಾತ್ರಿ ವೇಳೆ ಪುನಃ ಡಿನ್ನರ್ ಮೀಟಿಂಗ್‌ನಲ್ಲಿ ಭೇಟಿಯಾಗಿ ಹನಿಟ್ರ್ಯಾಪ್ ಬಗ್ಗೆ ಸುಧೀರ್ಘವಾಗಿ ಚರ್ಚೆ ಮಾಡಿದ್ದಾರೆ.
ಇದನ್ನೂ ಓದಿ: ಹೈಕಮಾಂಡ್ ಒತ್ತಡಕ್ಕೆ ಮಣಿದರಾ ರಾಜಣ್ಣ?: ಕುತೂಹಲ ಹುಟ್ಟಿಸಿದ ಸಚಿವರ ನಡೆ
ಈ ವೇಳೆ ಹನಿಟ್ರ್ಯಾಪ್ ಮಾಡಿರುವುದರ ಹಿಂದೆ ಯಾರ ಕೈವಾಡವಿದೆ ಎಂಬುದನ್ನು ಚರ್ಚೆ ನಡೆದಿದೆ ಚರ್ಚಿಸಲಾಗಿದೆ. ಹನಿಟ್ರ್ಯಾಪ್ ಮಾಡಿದ ನಾಯಕ ಯಾರು? ಆತನ ಮುಂದಿನ ಆಟವೇನು? ಎಂಬುದನ್ನು ಅರಿತು ಹೆಜ್ಜೆ ಇರುವ ಬಗ್ಗೆ ಇಲ್ಲಿ ತಂತ್ರವನ್ನು ರೂಪಿಸಲಾಗಿದೆಯೇ ಅಥವಾ ಈ ಹನಿಟ್ರ್ಯಾಪ್ ಪ್ರಕರಣದ ತನಿಖೆಯಲ್ಲಿ ಕೇಂದ್ರ ಸರ್ಕಾರದ ಪ್ರವೇಶದ ಬಗ್ಗೆ ಚರ್ಚೆ ಮಾಡಲಾಗಿದೆಯೇ ಎಂಬುದು ಮುಂದಿನ ದಿನಗಳಲ್ಲಿ ತಿಳಿದುಬರಲಿದೆ.
ಇದಾದ ಬಳಿಕ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರನ್ನೂ ಭೇಟಿ ಮಾಡಿದ್ದಾರೆ. ಈ ವೇಳೆಯೂ ರಾಜ್ಯದ ಅಭಿವೃದ್ಧಿ ಹಾಗೂ ರಾಜಕೀಯ ಬೆಳವಣಿಗೆ ಜೊತೆಗೆ ಮಾತನಾಡಿದ್ದಾರೆ. ನಂತರ, ಹನಿಟ್ರ್ಯಾಪ್ ವಿಚಾರವನ್ನೂ ಚರ್ಚೆ ಮಾಡಿ, ಇದಕ್ಕೆ ಹೇಗೆ ಕಡಿವಾಣ ಹಾಕಬೇಕು ಎಂಬುದನ್ನು ಹಿರಿಯ ಮುತ್ಸದ್ದಿ ದೇವೇಗೌಡರ ಬಳಿ ಸಲಹೆ ಪಡೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಸಂವಿಧಾನ ಬದಲು ಹೇಳಿಕೆ ಸಾಬೀತು ಮಾಡಿದ್ರೆ ರಾಜಕೀಯ ನಿವೃತ್ತಿ: ಬಿಜೆಪಿಗರಿಗೆ ಡಿಕೆಶಿ ಸವಾಲ್