
ಬೆಂಗಳೂರು (ನ.27): ಪಕ್ಷ ಸಂಘಟನೆ ದೃಷ್ಟಿಯಿಂದ ಡಿ.ಕೆ.ಶಿವಕುಮಾರ್ ಭೇಟಿಯಾಗಿ ಚರ್ಚೆ ಮಾಡಿದ್ದಾರೆ. ಡಿ.ಕೆ.ಶಿವಕುಮಾರ್ ಭೇಟಿಯಾದ ಮಾತ್ರಕ್ಕೆ ಸಿದ್ದರಾಮಯ್ಯ ಅವರಿಗೆ ನಮ್ಮ ಬೆಂಬಲದಲ್ಲಿ ಯಾವುದೇ ಬದಲಾವಣೆಯಿಲ್ಲ. ಉಳಿದಂತೆ ಹೈಕಮಾಂಡ್ ಏನೇ ನಿರ್ಧಾರ ತೆಗೆದುಕೊಂಡರೂ ಅದಕ್ಕೆ ಬದ್ಧ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪಕ್ಷ ಸಂಘಟನೆ, ಮುಂಬರುವ ಚುನಾವಣೆ ಕುರಿತು ಚರ್ಚೆಗೆ ಡಿ.ಕೆ. ಶಿವಕುಮಾರ್ ಭೇಟಿಯಾಗಿದ್ದರು. ಉಳಿದ ಎಲ್ಲ ವಿಚಾರಗಳನ್ನು ಹೈಕಮಾಂಡ್ ನಿರ್ಧರಿಸುತ್ತದೆ. ಅದರಲ್ಲಿ ನಮ್ಮ ಪಾತ್ರ ಇರುವುದಿಲ್ಲ. ಹೀಗಾಗಿ ಬೇರೆ ವಿಚಾರಗಳ ಬಗ್ಗೆ ಚರ್ಚೆ ಮಾಡಿಲ್ಲ ಎಂದರು.
ನಾನು ಕೊನೆಯವನಿರಬೇಕು: ಡಿ.ಕೆ.ಶಿವಕುಮಾರ್ ಅವರು ಈಗಾಗಲೇ ಎಲ್ಲರನ್ನೂ ಭೇಟಿಯಾಗಿದ್ದಾರೆ. ಕೆಲವರನ್ನು ಮನೆಗೆ ಕರೆಸಿ ಭೇಟಿಯಾಗಿದ್ದರೆ, ಉಳಿದವರನ್ನು ಹೊರಗಡೆ ಭೇಟಿಯಾಗಿ ಚರ್ಚಿಸಿದ್ದಾರೆ. ನಾನು ಕೊನೆಯವನಿರಬೇಕು ಅಷ್ಟೇ. ಇನ್ನು, ನಾನು ಯಾರಿಗೂ ತಡೆಗೋಡೆಯಾಗಿಲ್ಲ. ಹೈಕಮಾಂಡ್ ಮತ್ತು ಪಕ್ಷ ಹೇಳುವಂತೆ ನಡೆದುಕೊಳ್ಳುವವನು. ಡಿ.ಕೆ.ಶಿವಕುಮಾರ್ ಭೇಟಿಗೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ. ಅವರಿಗೆ ಅವಶ್ಯಕತೆ ಇದ್ದಾಗ ಅವರು ಬಂದಿದ್ದಾರೆ, ನನಗೆ ಬೇಕಾದಾಗ ನಾನೂ ಸಾಕಷ್ಟು ಬಾರಿ ಹೋಗಿ ಅವರನ್ನು ಭೇಟಿಯಾಗಿದ್ದೇನೆ ಎಂದು ಸತೀಶ್ ಜಾರಕಿಹೊಳಿ ಹೇಳಿದರು.
ಪಕ್ಷದೊಳಗೆ ನಾಯಕತ್ವ ಬದಲಾವಣೆ ಕುರಿತು ಯಾವುದೇ ಚರ್ಚೆಯಿಲ್ಲ. ಅದರ ಚರ್ಚೆ ಬಂದಾಗ ಮಾತನಾಡುತ್ತೇನೆ. ಈ ಬಗ್ಗೆ ಸಂದರ್ಭ ಬಂದಾಗ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮನವಿ ಮಾಡುತ್ತೇನೆ ಎಂದರು. ಡಾ.ಜಿ.ಪರಮೇಶ್ವರ್ ಈ ಹಿಂದೆ 8 ವರ್ಷ ಕೆಪಿಸಿಸಿ ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ. ಅವರಿಗೆ ಹಿರಿತನವಿದೆ. ಆದರೆ, ದೆಹಲಿಯಲ್ಲಿ ಎಲ್ಲವೂ ನಿರ್ಧಾರವಾಗುತ್ತದೆ. ಹಕ್ಕು ಪ್ರತಿಪಾದಿಸುವುದಷ್ಟೇ ನಮ್ಮ ಕೆಲಸ ಎಂದರು. ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಗಳಪಟ್ಟಿಯಲ್ಲಿ ನಿಮ್ಮ ಹೆಸರು ಕೇಳಿಬರುತ್ತಿದೆಯಲ್ಲ ಎಂಬ ಪ್ರಶ್ನೆಗೆ ಉತ್ತರಿಸಿ, ಅಂತಹ ಸನ್ನಿವೇಶ ಈಗ ಬಂದಿಲ್ಲ ಎಂದು ಹೇಳಿದರು. ಡಿ.ಕೆ.ಶಿವಕುಮಾರ್ ಅವರ ಮೇಲೆ ನನಗೆ ಯಾವುದೇ ಕೋಪವಿಲ್ಲ. ಇದ್ದರೂ ಅದು ತಾತ್ಕಾಲಿಕ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.