Hindu Word War: ವಿವಾದಿತ ಹೇಳಿಕೆಗೆ ಸತೀಶ್ ಜಾರಕಿಹೊಳಿ ಸ್ಪಷ್ಟೀಕರಣ: ಕ್ಷಮೆಯಾಚನೆಗೆ ಬಿಜೆಪಿ ಆಗ್ರಹ

By Ravi Janekal  |  First Published Nov 9, 2022, 9:54 AM IST
  •  ಹಿಂದೂ ಪದದ ವಿವಾದಿತ ಹೇಳಿಕೆಗೆ ಸತೀಶ್ ಜಾರಕಿಹೊಳಿ ಸಮರ್ಥನೆ
  •  ವೆಬ್‌ಸೈಟ್‌ಗಳಲ್ಲಿ ಉಲ್ಲೇಖವಾದ ಬಗ್ಗೆ ದಾಖಲೆ ಬಿಡುಗಡೆ
  •  ಸತೀಶ್ ಜಾರಕಿಹೊಳಿ ವಿರುದ್ಧ ಇಂದು ಬೆಳಗಾವಿ ಬಿಜೆಪಿ ಪ್ರೊಟೆಸ್ಟ್..!

ರದಿ: ಮಹಾಂತೇಶ ಕುರಬೇಟ್, ಏಷ್ಯಾನೆಟ್ ಸುವರ್ಣನ್ಯೂಸ್, ಬೆಳಗಾವಿ

ಬೆಳಗಾವಿ (ನ.9) : ಹಿಂದೂ ಪದ ಪರ್ಷಿಯನ್ ಭಾಷೆಯಿಂದ ಬಂದಿದ್ದು ಇದರ ಅರ್ಥ ಬಹಳ ಅಶ್ಲೀಲವಾಗಿದೆ ಎಂದು ವಿವಾದಿತ ಹೇಳಿಕೆ ನೀಡಿದ್ದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿಕೆಗೆ ದೇಶಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿದೆ. 

Tap to resize

Latest Videos

ಹಿಂದುಗಳ ಕೆರಳಿಸಿದ ಸತೀಶ್‌ ಜಾರಕಿಹೊಳಿ ಮಾತು, ಕ್ಷಮೆ ಕೇಳಲ್ಲ ಎಂದ ಕಾಂಗ್ರೆಸ್ ನಾಯಕ!

ಖುದ್ದು ಕಾಂಗ್ರೆಸ್ ನಾಯಕರೇ ಸತೀಶ್ ಜಾರಕಿಹೊಳಿ ಹೇಳಿಕೆ ಖಂಡಿಸುತ್ತಿದ್ದು ತಮ್ಮ ಹೇಳಿಕೆ ವಾಪಸ್ ಪಡೆಯಬೇಕು ಅಂತಾ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಲಹೆ ನೀಡಿದ್ದಾರೆ. ಆದರೆ ತಾವು ಯಾವುದು ತಪ್ಪು ಹೇಳಿಕೆ ನೀಡಿಲ್ಲ ವೆಬ್‌ಸೈಟ್‌ಗಳಲ್ಲಿ, ವಿಕೀಪಿಡಿಯಾದಲ್ಲಿ, ಕೆಲ ಪುಸ್ತಕಗಳಲ್ಲಿ ಏನು ಉಲ್ಲೇಖ ಇದೆಯೋ ಅದನ್ನೇ ಹೇಳಿದ್ದೇನೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.

 ಬೆಳಗಾವಿಯಲ್ಲಿ ಏಷ್ಯಾನೆಟ್ ಸುವರ್ಣನ್ಯೂಸ್ ಜೊತೆ ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ತಾವು ಹೇಳಿದ್ದು ತಪ್ಪು ಅಂತಾ ಸಾಬೀತು ಪಡಿಸಿದರೆ ಬಹಿರಂಗ ಕ್ಷಮೆಯಾಚನೆ ಅಷ್ಟೇ ಅಲ್ಲ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ರಾಜಕೀಯ ನಿವೃತ್ತಿ ಪಡೆಯುವೆ ಎಂದು ಸವಾಲು ಹಾಕಿದ್ದಾರೆ. 

'ನನ್ನ ಹೇಳಿಕೆ ವಾಪಸ್ ಪಡೆಯುವ ಪ್ರಶ್ನೆಯೇ ಇಲ್ಲ. ಇದು ವಿವಾದ ಆಗುವಂತಹ ಪ್ರಶ್ನೆ ಇಲ್ಲ, ಅದೇನೂ ನಾನು ಸ್ವಂತ ಹೇಳಿಕೆಯಿಂದ ನಾನು ಹೇಳಿದ್ದಲ್ಲ. ಅದು ಡಿಕ್ಷನರಿಯಲ್ಲಿ ಇದೆ, ಆ ಡಿಕ್ಷನರಿ ನಿಮಗೆ ಕೊಡ್ತೀನಿ. ಬಹಳಷ್ಟು ಜನ ಲೇಖಕರು ತಮ್ಮ ಪುಸ್ತಕಗಳಲ್ಲಿ ಹಿಂದೂ ಪದದ ಅರ್ಥ ಏನು ಅಂತಾ ಉಲ್ಲೇಖ ಮಾಡಿದ್ದಾರೆ. ಅದು ಪರ್ಷಿಯನ್ ಶಬ್ದ ಅಂತಾ ಹೇಳಿದ್ದು ಪುಸ್ತಕ ನೋಡಿ ಹೇಳಿದ್ದು, ಇದರ ಬಗ್ಗೆ ಚರ್ಚೆ ಆಗಬೇಕು ಅಂತಾ ಹೇಳಿದ್ದೇನೆ. ಈ ಶಬ್ದಗಳು ಏಕೆ ಬಂದಿದೆ ಈ ಕೆಟ್ಟ ಮೀನಿಂಗ್ ಯಾರು ಕೊಟ್ರು? ಎಲ್ಲಿ ಕೊಟ್ರು? ಇದರ ಬಗ್ಗೆ ಚರ್ಚೆ ಆಗಲಿ ಅಂತಾ ಅಷ್ಟೇ ಹೇಳಿದ್ದೇನೆ. ಅದನ್ನ ತಿರುಚಿ ಮುರುಚಿ ಹೇಳುವ ಕೆಲಸ ಆಗ್ತಿದೆ, ಅದು ಆಗಬಾರದು' ಎಂದು ತಿಳಿಸಿದ್ದಾರೆ. 

ಇನ್ನು  ಸತೀಶ್ ಜಾರಕಿಹೊಳಿ ಹೇಳಿಕೆಗೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ ಸಿಂಗ್ ಸುರ್ಜೇವಾಲ ಖಂಡಿಸಿದ್ದಕ್ಕೆ ಪ್ರತಿಕ್ರಿಯಿಸಿರುವ ಸತೀಶ್ ಜಾರಕಿಹೊಳಿ, 'ಹಿಂದೂ ಪದಕ್ಕೆ ಅವಮಾನ ಆಗುವ ರೀತಿಯಲ್ಲಿ ಮಾಧ್ಯಮಗಳಲ್ಲಿ ಬಂದಿದೆ, ಅದು ಅವರ ತಪ್ಪಲ್ಲ‌‌' ಎಂದು ತಿಳಿಸಿದ್ದಾರೆ. ಅಷ್ಟೇ ಅಲ್ಲದೇ, 'ಎಲ್ಲರೂ ಸೂಕ್ಷ್ಮವಾಗಿ ಹೇಳಿಕೆ ನೋಡಬೇಕು. ಯಾರಿಗೂ ನೋವಾಗುವ ರೀತಿ ಹರ್ಟ್ ಆಗುವ ರೀತಿ ನಾನು ಹೇಳಿಕೆ ಕೊಟ್ಟಿಲ್ಲ. ನಾನು ಚರ್ಚೆ ಮಾಡಿ ಅಂದಿದ್ದು ಬಿಟ್ಟು.. ನನ್ನ ಮೇಲೆ ಗೂಬೆ ಕೂರಿಸುವ ಕೆಲಸ ಆಗುತ್ತಿದೆ' ಎಂದು ತಿಳಿಸಿದ್ದಾರೆ. 

ತಮ್ಮ ಹೇಳಿಕೆ ವಾಪಸ್ ಪಡೆಯಬೇಕೆಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೀಡಿದ ಸಲಹೆ ಕುರಿತು ಪ್ರತಿಕ್ರಿಯಿಸಿದ ಅವರು, 'ಸಿಎಂ ಬಸವರಾಜ ಬೊಮ್ಮಾಯಿಯವರು ಒಂದು ಕಮಿಟಿ ನೇಮಿಸಿ, ಚರ್ಚೆ ಮಾಡಿ, ವರದಿ ತರಿಸಿಕೊಳ್ಳಲಿ. ನಾನು ಹೇಳಿದ್ದು ತಪ್ಪಾ? ಸತೀಶ್ ಜಾರಕಿಹೊಳಿ ಸ್ವಂತ ವಿಚಾರ, ವೈಯಕ್ತಿಕ ಹೇಳಿಕೆಯಾ? ಈ ರೀತಿ ಮುಂಚೆ ಯಾರೂ ಹೇಳಿಲ್ವಾ ಎಂಬ ಬಗ್ಗೆ ಚರ್ಚೆ ಆಗಲಿ.‌ ಕ್ಷಮೆ ಕೇಳಬೇಕು ಅಂದ್ರೆ ಯಾವ ಆಧಾರದಲ್ಲಿ ಕೇಳಬೇಕು? ಬಿಜೆಪಿಯವರು ಹೇಳಿದಾರೆ ಅಂತಾ ಕೇಳಬೇಕಾ ಯಾವುದೇ ಒಂದು ಸಂಘಟನೆಯವರು ಹೇಳಿದ್ದಾರೆ ಅಂತಾ ಕೇಳಬೇಕಾ? ಬಿಜೆಪಿಯವರದ್ದೇ ಸರ್ಕಾರ ಇದೆ ನೀವು ವರದಿ ತರಿಸಿ ಅದು ಬಂದ್ರೆ ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವೆ. ಕ್ಷಮೆ ಅಷ್ಟೇ ಅಲ್ಲ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ರಾಜಕೀಯ ನಿವೃತ್ತಿ ತಗೆದುಕೊಳ್ಳುವೆ. ಸಮಾಜ ಸೇವೆ ಮಾಡಲು ನನಗೆ ಸಾಕಷ್ಟು ಕೆಲಸ ಇದೆ. ಶಾಸಕನಾಗಿಯೇ ಕೆಲಸ ಮಾಡಬೇಕು ಅಂತೇನಿಲ್ಲ. ರಾಜೀನಾಮೆ ನೀಡಿ ನನ್ನ ಸಮಾಜಸೇವೆ ಮುಂದುವರಿಸುವೆ. ಆದರೆ ನಾನು ಹೇಳಿದ್ದು ತಪ್ಪಿದೆ ಅಂತಾ ಪ್ರೂವ್ ಮಾಡಬೇಕು ಅಷ್ಟೇ' ಎಂದು ತಿಳಿಸಿದ್ದಾರೆ. 

ಚುನಾವಣೆ ಹೊಸ್ತಿಲಲ್ಲಿ ಸತೀಶ್ ಜಾರಕಿಹೊಳಿ ವಿವಾದಿತ ಹೇಳಿಕೆಯಿಂದ ವೋಟ್ ಕಳೆದುಕೊಳ್ಳುವ ಭೀತಿ ಬಗ್ಗೆ ಪ್ರತಿಕ್ರಿಯಿಸಿದ ಸತೀಶ್ ಜಾರಕಿಹೊಳಿ, 'ಆ ರೀತಿ ಇಲ್ಲ ಯಾರು ಎಲ್ಲಿದ್ದಾರೋ ಯಾವ ಪಕ್ಷದಲ್ಲಿ ಇದ್ದಾರೋ ಅಲ್ಲೇ ಇರ್ತಾರೆ. ನಾನು ಹೇಳಿಕೆ ಕೊಟ್ಟ ತಕ್ಷಣ ಎಲ್ಲರೂ ಏನೂ ಶಿಫ್ಟ್ ಆಗಲ್ಲ. ನಾವೇನಾದರೂ ಮಾಡ್ತೀವಿ ಅಂದ್ರೆ ಅವರ‌್ಯಾರು ನಮ್ಮ ಕಡೆ ಶಿಫ್ಟ್ ಆಗಲ್ಲ. ಅದು ನಮ್ಮ ಭ್ರಮೆ ಅಷ್ಟೇ. ತಪ್ಪಿದೆ ಅಂದ್ರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವೆ. ತಪ್ಪಿಲ್ಲ ಅಂತಾ ಆದ್ರೆ ಅವರ ಕಡೆಯವರು ಯಾರು sorry ಕೇಳ್ತಾರೆ ಹೇಳಬೇಕು‌. ಈ ವಿಷಯದ ಬಗ್ಗೆ ಬಹಿರಂಗ ಚರ್ಚೆಗೆ ಸಿದ್ಧ' ಎಂದು ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.

ವೆಬ್‌ಸೈಟ್‌ಗಳಲ್ಲಿ ಉಲ್ಲೇಖವಾದ ಬಗ್ಗೆ ಪ್ರತಿ ಬಿಡುಗಡೆ ಮಾಡಿದ ಸತೀಶ್ ಜಾರಕಿಹೊಳಿ

ಇನ್ನು ವೆಬ್‌ಸೈಟ್‌ಗಳಲ್ಲಿ ಹಿಂದೂ ಪದದ ಅರ್ಥ ಉಲ್ಲೇಖ ಇರುವ ಬಗ್ಗೆ ದಾಖಲೆ ಬಿಡುಗಡೆ ಮಾಡಿರುವ ಸತೀಶ್ ಜಾರಕಿಹೊಳಿ, ಬಸವ ಭಾರತ ಪಾಕ್ಷಿಕ ಪತ್ರಿಕೆಯಲ್ಲಿ ಬಸವ ತತ್ವ ಪ್ರಚಾರಕ ಡಾ.ಜಿ.ಎಸ್ ಪಾಟೀಲ್ ಬರೆದ ಲೇಖನದ ಪ್ರತಿ ಸಹ ಬಿಡುಗಡೆ ಮಾಡಿದ್ದಾರೆ. ಮತ್ತೊಂದೆಡೆ ಸತೀಶ್ ಜಾರಕಿಹೋಳಿ ಹೇಳಿಕೆ ಬೆಂಬಲಿಸಿ ಸಾಮಾಜಿಕ ಜಾಲತಾಣಗಳಲ್ಲಿ 'ಐ ಸ್ಟ್ಯಾಂಡ್ ವಿತ್ ಸತೀಶ್ ಜಾರಕಿಹೊಳಿ' ಹೆಸರಿನಲ್ಲಿ ಅಭಿಯಾನ ಶುರುವಾಗಿದೆ. ಸಾಮಾಜಿಕ ಜಾಲತಾಣ ಫೇಸ್ ಬುಕ್, ಟ್ವಿಟರ್‌ನಲ್ಲಿ ಸತೀಶ್ ಜಾರಕಿಹೊಳಿ ಬೆಂಬಲಿಸಿ ಪೋಸ್ಟ್ ಹಾಕುತ್ತಿದ್ದು, 'ನಾವು ಬುದ್ಧ, ಬಸವ, ಅಂಬೇಡ್ಕರ್ ಬೆಂಬಲಿಗರು, ಇದಕ್ಕೆಲ್ಲಾ ಹೆದರಲ್ಲ' ಎಂದು ಸತೀಶ್ ಜಾರಕಿಹೊಳಿ ಬೆಂಬಲಿಗರು ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ.

ಸತೀಶ್ ಜಾರಕಿಹೊಳಿ ವಿರುದ್ಧ ಮುಗಿಬಿದ್ದ ಬೆಳಗಾವಿ ಜಿಲ್ಲಾ ಬಿಜೆಪಿ ನಾಯಕರು

ಸತೀಶ್ ಜಾರಕಿಹೊಳಿ ಹಿಂದೂ ಪದದ ಬಗ್ಗೆ ವಿವಾದಿತ ಹೇಳಿಕೆಯನ್ನು ಬೆಳಗಾವಿ ಜಿಲ್ಲಾ ಬಿಜೆಪಿ ನಾಯಕರು ಜಂಟಿ ಸುದ್ದಿಗೋಷ್ಠಿ‌ ನಡೆಸಿ ಖಂಡಿಸಿದ್ದಾರೆ. ಬಿಜೆಪಿ ವಕ್ತಾರ ಎಂ.ಬಿ.ಜಿರಲಿ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಶಾಸಕರಾದ ಅನಿಲ್ ಬೆನಕೆ, ಅಭಯ್ ಪಾಟೀಲ್, ಮಾಜಿ ಶಾಸಕ ಬೆಳಗಾವಿ ಗ್ರಾಮಾಂತರ ಜಿಲ್ಲಾಧ್ಯಕ್ಷ ಸಂಜಯ್ ಪಾಟೀಲ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಿಜೆಪಿ ವಕ್ತಾರ ಎಂ.ಬಿ.ಜಿರಲಿ ಮಾತನಾಡಿ, 'ಕಾಂಗ್ರೆಸ್ ನಾಯಕರು ಹಿಂದೂ ಪರ ಮಾತನಾಡಿದ್ದು ಕೇಳಿಯೇ ಇಲ್ಲ. ಗೋಹತ್ಯೆ ನಿಷೇಧ ಕಾಯ್ದೆ ಆಗಿರಬಹುದು, ಮತಾಂತರ ನಿಷೇಧ ಕಾಯ್ದೆ ಆಗಿರಬಹುದು ಎಂದೂ ಹಿಂದೂ ಪರ ಹೇಳಿಕೆ ನೀಡಲ್ಲ. ಹಿಂದೂ ಶಬ್ದದ ಬಗ್ಗೆ ಸತೀಶ್ ಜಾರಕಿಹೊಳಿ ನಮಗೆ ನೋವಾಗುವಂತಹ ಹೇಳಿಕೆ ಕೊಟ್ಟಿದ್ದಾರೆ. 

ಹಿಂದೂ ಪದದ ಬಗ್ಗೆ ಸರ್ವೋಚ್ಚ ನ್ಯಾಯಾಲಯದ ಮೂವರು ನ್ಯಾಯಮೂರ್ತಿಗಳು ತೀರ್ಪು ಕೊಟ್ಟಿದ್ದಾರೆ. ಈ ಕೇಸ್ ನಡೆಯುವಾಗ ಹಿಂದೂ ಅಂದ್ರೆ ಏನು ಅಂತಾ ದೊಡ್ಡಮಟ್ಟಿಗೆ ಚರ್ಚೆ ನಡೆಯಿತು. ಹಿಂದೂ ಅಂದ್ರೆ ಅದು ಒಂದು ಜೀವನಶೈಲಿ.. Way of Life ಅಂತಾ ತೀರ್ಪು ಕೊಟ್ಟಾಗ ದೇಶ ಸ್ವಾಗತಿಸಿದೆ. ಕಾಂಗ್ರೆಸ್ ನೇತಾರರ ಮಾನಸಿಕತೆ, ಕೆಣಕುವಂತಹ ವಿಚಾರ ಅಭಿವೃದ್ಧಿ ಪರ ಇಲ್ಲವೇ ಇಲ್ಲ. ಭಾರತ ರಾಷ್ಟ್ರ ಹಿಂದೂ ರಾಷ್ಟ್ರ ಬಗ್ಗೆ ಅನುಮಾನ ಬೇಕಿಲ್ಲ. ಹಿಂದೂ ಬಗ್ಗೆ ಯಾವುದೇ ಆಧಾರ ಇಲ್ಲದೇ ಅಶ್ಲೀಲ ಶಬ್ದ ಅಂತಾ ಬಳಸಿರೋದನ್ನು ಬಿಜೆಪಿ ಖಂಡಿಸುತ್ತೇವೆ. ಸತೀಶ್ ಜಾರಕಿಹೊಳಿ ಹೇಳಿಕೆಯಿಂದ ನೋವಾಗಿದ್ದು ಬೇಷರತ್ ಕ್ಷಮೆ ಕೇಳಲು ಆಗ್ರಹಿಸುತ್ತೇವೆ. ಪ್ರಜಾಪ್ರಭುತ್ವದಲ್ಲಿ ರಾಷ್ಟ್ರೀಯ ಅಸ್ಮೀತೆಗೆ ಧಕ್ಕೆ ತರುವ ಹೇಳಿಕೆ ನೀಡಬಾರದು ಇದು ಅಸಂಬದ್ಧ ಹೇಳಿಕೆ, ಇದೊಂದು ಕಾಂಗ್ರೆಸ್ ‌ನ ಟೂಲ್‌ಕಿಟ್' ಎಂದು ಆಕ್ರೋಶ ಹೊರಹಾಕಿದ್ದಾರೆ. 

ಹಿಂದೂ ಪದದ ಅರ್ಥದ ಬಗ್ಗೆ ಬಹಿರಂಗ ಚರ್ಚಗೆ ಸಿದ್ದ ಎಂಬ ಸತೀಶ್ ಜಾರಕಿಹೊಳಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, 'ಇದರ ಬಗ್ಗೆ ದೇಶದಲ್ಲಿ ಸಾಕಷ್ಟು ಚರ್ಚೆ ಆಗಿದೆ. ಬೇಕಾದರೆ ಸರ್ವೋಚ್ಚ ನ್ಯಾಯಾಲಯ ನೀಡಿದ ತೀರ್ಪಿನ ಪ್ರತಿ ಕೊಡ್ತೇನೆ. ಸಂವಿಧಾನ ಬರೆದವರು ಅದರ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದಾರೆ. ಅಂತಹದ್ದರಲ್ಲಿ ಚರ್ಚೆಗೆ ಬರ್ತೀನಿ ಅಂದ್ರೆ ಏನಿದರ ಅರ್ಥ? ಚರ್ಚೆ ಕೋರ್ಟ್‌ನಲ್ಲಿ ಮುಗಿದಿದೆ. ಸುಪ್ರೀಂಕೋರ್ಟ್ ನಲ್ಲಿ ಕೇಸ್ ನಡೆದು ವಾದ ವಿವಾದ ನಡೆದು ಮುಗಿದಿದೆ. ಗೂಗಲ್, ವೀಕಿಪಿಡಿಯಾ ಯಾವುದೂ ದೃಢೀಕರಿತ(authenticated) ಅಲ್ಲ. ಚರ್ಚೆ ಮಾಡುವ ವೇದಿಕೆ ನಿರ್ಮಾಣ ಮಾಡೋಕೆ ಇದೊಂದು ಅಯೋಗ್ಯ ವಿಚಾರ ಅವರದ್ದು.ನಾನು ಇದನ್ನ ಖಂಡಿಸಿ ಇದರ ಬಗ್ಗೆ ಜನರಿಗೆ ಬಿಡುತ್ತೇವೆ' ಎಂದು ತಿಳಿಸಿದ್ದಾರೆ.

ಸತೀಶ್ ಜಾರಕಿಹೊಳಿ ಸುಪ್ರೀಂಕೋರ್ಟ್ ಮೀರಿದ ವ್ಯಕ್ತಿನಾ? ಈರಣ್ಣಾ ಕಡಾಡಿ ಪ್ರಶ್ನೆ

ಇನ್ನು ಸತೀಶ್ ಜಾರಕಿಹೊಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ, 'ಸುಪ್ರೀಂಕೋರ್ಟ್ ಹೇಳಿದ ಮೇಲೆ ಮತ್ತೆ ಚರ್ಚೆಗೆ ಬರ್ತೀನಿ ಅಂದ್ರೆ ಏನರ್ಥ ಸುಪ್ರೀಂಕೋರ್ಟ್ ಮೀರಿದ ವ್ಯಕ್ತಿನಾ ಇವರು?' ಎಂದು ಸತೀಶ್ ಜಾರಕಿಹೊಳಿಗೆ ಪ್ರಶ್ನಿಸಿದ್ದಾರೆ. ಸತೀಶ್ ಜಾರಕಿಹೊಳಿ ಹಿಂದೂನಾ ಅಲ್ವಾ ಸ್ಪಷ್ಟಪಡಿಸಬೇಕು ಎಂದು ತಿಳಿಸಿದರು. ಈ ವೇಳೆ ಸತೀಶ್ ಜಾರಕಿಹೊಳಿ ತಾವು ಭಾರತೀಯ ಎಂದಿದ್ದಾರೆ ಎಂಬ ಮಾಧ್ಯಮಗಳ ಪ್ರಶ್ನೆಗೆ ಭಾರತೀಯ ಅಂದ್ರೆ ಏನು? ನಮ್ಮ ಜೀವನ ಪದ್ಧತಿಯೇ ಹಿಂದೂ ಇದೆ. ಭಾಷಣ ಪ್ರಾರಂಭದಲ್ಲಿ ಸತೀಶ್ ಜಾರಕಿಹೊಳಿ ಯಾರೋ ಟೈಮ್ ಪಾಸ್‌ಗಾಗಿ ಬರೆದ ಗ್ರಂಥಗಳನ್ನು ನಮ್ಮ ಮೇಲೆ ಹೇರುತ್ತಿದ್ದು ಅವು ನಮ್ಮನ್ನ ಆಳುತ್ತಿವೆ ಅಂತಾರೆ. ಹೀಗಾದಾಗ ಪುಸ್ತಕಗಳಲ್ಲಿ ಬರೆದದ್ದನ್ನು ಅವರು ಹೇಗೆ ಒಪ್ಪಿಕೊಳ್ಳುತ್ತಾರೆ? ಇದನ್ನ ಹೇಗೆ ಸ್ವೀಕಾರ ಮಾಡ್ತಾರೆ? ದಯಾನಂದ ಸರಸ್ವತಿ ಸೇರಿ ಇತರರು ಬರೆದದ್ದು ಹೇಗೆ ಸ್ವೀಕಾರ ಮಾಡ್ತಾರೆ. ಇದಕ್ಕೂ ಸ್ಪಷ್ಟೀಕರಣ ಕೊಡಬೇಕಲ್ಲ' ಅಂತಾ ಪ್ರಶ್ನಿಸಿದ್ದಾರೆ.

ಸತೀಶ್ ಜಾರಕಿಹೊಳಿ ಒಬ್ಬರೇ ಶಾನ್ಯಾರಾ? ಎಂದು ಸಂಜಯ ಪಾಟೀಲ್ ಪ್ರಶ್ನೆ

ಇನ್ನು ಸತೀಶ್ ಜಾರಕಿಹೊಳಿ ಬಹಿರಂಗ ಕ್ಷಮೆಯಾಚನೆಗೆ ಆಗ್ರಹಿಸಿರುವ ಮಾಜಿ ಶಾಸಕ, ಬೆಳಗಾವಿ ಗ್ರಾಮಾಂತರ ಬಿಜೆಪಿ ಜಿಲ್ಲಾಧ್ಯಕ್ಷ ಸಂಜಯ ಪಾಟೀಲ್, 'ಯಾವ ಬಸವಣ್ಣ ಅಂಬೇಡ್ಕರ್ ಹೆಸರು ಹೇಳಿ ಸತೀಶ್ ಜಾರಕಿಹೊಳಿ ಕಾರ್ಯಕ್ರಮ ಮಾಡ್ತಾರಲ್ಲ. ಪೂಜಾ ಪುನಸ್ಕಾರ ಮಾಡಿ ಇಷ್ಟರ ಮಟ್ಟಿಗೆ ಬೆಳೆದ ವ್ಯಕ್ತಿ ಬಸವಣ್ಣನವರು. ನನಗೆ ಒಂದು ಸಾದಾ ಪ್ರಶ್ನೆ ಸತೀಶ್ ಜಾರಕಿಹೊಳಿಗೆ ಕೇಳೋದಿದೆ. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು 75 ವರ್ಷ ಆಗುತ್ತಾ ಬಂತು. 75 ವರ್ಷದಲ್ಲಿ ಎಷ್ಟೋ ಸಾಹಿತಿಗಳು, ವಿದ್ವಾಂಸರು ಬಂದು ಹೋದ್ರು. ಹಿಂದೂ ಶಬ್ದ ಎಲ್ಲಿಂದ ಬಂತು ಅಂತಾ ಅವರೆಂದೂ ಪ್ರಶ್ನೆ ಮಾಡಿಲ್ಲ. ಇವರು ಯಾವ ಪುಸ್ತಕ ತಂದ್ರು ಅಂತಾ ನಮಗೆ ಪ್ರಶ್ನೆ ಬಿದ್ದಿದೆ‌. ತೆಲುಗು ಭಾಷೆಯಲ್ಲಿ ರೇಪು ಅಂದ್ರೆ ನಾಳೆ ಅಂತಾ ಅರ್ಥ ಇದೆ.‌ ಇಂಗ್ಲೀಷ್ ದಲ್ಲಿ ರೇಪ್ ಅಂದ್ರೆ ಏನಾಗುತ್ತೆ? ನೀವು ಶಬ್ದ ಶಬ್ದದ ಅರ್ಥಕ್ಕೆ ಹೋದ್ರೆ ಪ್ರತಿಯೊಂದು ಭಾಷೆಯಲ್ಲಿ ಬೇರೆ ಬೇರೆ ಅರ್ಥವಿದೆ. ಇಸ್ಲಾಂ ಧರ್ಮ ಸ್ಥಾಪನೆ ಮಾಡಿದ್ದು ಮೊಹಮ್ಮದ್ ಪೈಗಂಬರ್. ಕ್ರಿಶ್ಚಿಯನ್ ಧರ್ಮ ಸ್ಥಾಪನೆ ಮಾಡಿದ್ದು ಜೀಸಸ್. ಹಿಂದೂ ಧರ್ಮ ಯಾರು ಸ್ಥಾಪನೆ ಮಾಡಿದ್ದಾರೆ ಅಂತಾ ಸಂಶೋಧನೆ ನಡೀತಿದೆ. ಇಷ್ಟು ಪ್ರಾಚೀನ ಧರ್ಮ ಹಿಂದೂ ಧರ್ಮ‌. ಹಿಂದೂ ಧರ್ಮ ಸಂಸ್ಕೃತಿ ಬಗ್ಗೆ ಎಷ್ಟೋ ಚರ್ಚೆ ಆಗುತ್ತೆ. ಈ ವಿಷಯದ ಮೇಲೆ ಎಷ್ಟೋ ಸಾಧು ಸಂತರು ಪ್ರವಚನ ಮಾಡ್ತಾರೆ,ಅವರೆಲ್ಲರೂ ಮೂರ್ಖರಾ? ಮತ್ತೆ ಇವರೊಬ್ಬರೆ ಶಾನ್ಯಾರಾ? ಪರ್ಷಿಯನ್ ಶಬ್ದ ಹುಡುಕಾಡಿ ತಗೆದಿದ್ದಾರೆ‌. ನಾವ್ಯಾರು ಅಷ್ಟು ಅಧ್ಯಯನ ಕರ್ತರಲ್ಲ ಆದ್ರೆ ನಮ್ಮ ದೇಶದ ಪರಂಪರೆ ಸಂಸ್ಕೃತಿ ನಮಗೆ ದಾರಿ ಹಾಕಿ ಕೊಟ್ಟಿದೆ. ಅದರ ಮೇಲೆ ನಾವು ನಡೀತಿದ್ದೇವೆ. ಹಿಂದೂ ಧರ್ಮ ಅಶ್ಲೀಲ ಅಂತಾ ಯಾವ ಪುಸ್ತಕದಲ್ಲಿ ಇದೆ? ಸತೀಶ್ ಜಾರಕಿಹೊಳಿ ಜೊತೆ ಬಹಿರಂಗ ಚರ್ಚೆಗೆ ನಾನು ಸಿದ್ಧ' ಎಂದು ಸಂಜಯ ಪಾಟೀಲ್ ತಿಳಿಸಿದ್ದಾರೆ.

ಮೊದಲು ತಮ್ಮ ಪಕ್ಷದ ನಾಯಕರ ಜೊತೆ ಸತೀಶ್ ಜಾರಕಿಹೊಳಿ ಚರ್ಚಿಸಲಿ ಎಂದ ಅಭಯ್ ಪಾಟೀಲ್

ಇನ್ನು ಸತೀಶ್ ಜಾರಕಿಹೊಳಿ ಮೊದಲು ತಮ್ಮ ಪಕ್ಷದ ನಾಯಕರ ಜೊತೆ ಚರ್ಚ ಮಾಡಿ ಬರಲಿ ಯಾಕೆ ಬೇರೆಯವರ ಅವಶ್ಯಕತೆ ಇದೆ. ರಣದೀಪ ಸಿಂಗ್ ಸುರ್ಜೇವಾಲ ಏನು ಹೇಳಿದ್ದಾರೆ ಅದೇ ಸರ್ಟಿಫಿಕೇಟ್ ಇದೆ ಅವರಿಗೆ ಎಂದು ಅಭಯ್ ಪಾಟೀಲ್ ತಿಳಿಸಿದ್ದಾರೆ‌. ತಮ್ಮ ಪಕ್ಷದವರನ್ನೇ ಕನ್ವಿಯನ್ಸ್ ಮಾಡಲು ಆ ಮನುಷ್ಯನಿಗೆ ಸಾಧ್ಯವಾಗುತ್ತಿಲ್ಲ. ಇನ್ನು ನಮ್ಮನ್ನೇನು ಕನ್ವಿಯನ್ಸ್ ಮಾಡೋಕೆ ಸಾಧ್ಯ ಇದೆ? ಜನರನ್ನೇನು ಕನ್ವಿಯನ್ಸ್ ಮಾಡೋಕೆ ಸಾಧ್ಯವಿದೆ? ಎಂದು ಪ್ರಶ್ನಿಸಿದರು. ಸುದ್ದಿಗೋಷ್ಠಿಯಲ್ಲಿ ಮಾಧ್ಯಮಗಳ ಪ್ರಶ್ನೆಗೆ ಯಾರದ್ದೋ ಫಾಲೋವರ್ ಆಗಿ ಮಾತನಾಡಬೇಡಿ ಎಂದು ಅಭಯ್ ಪಾಟೀಲ್ ಹೇಳಿದಾಗ ಮಾಧ್ಯಮ ಪ್ರತಿನಿಧಿಗಳು ಅಭಯ್ ಪಾಟೀಲ್ ವಿರುದ್ಧ ಮುಗಿಬಿದ್ದರು. ಈ ವೇಳೆ ನಾನು ನಿಮಗೆ ಹೇಳ್ತಿಲ್ಲ ಅಂತಾ ಸಮಜಾಯಿಷಿ ನೀಡಿದರು. ಬಳಿಕ ಮೊದಲು ಸತೀಶ್ ಜಾರಕಿಹೊಳಿ ತಮ್ಮ ಹೇಳಿಕೆ ಬಗ್ಗೆ ತಮ್ಮ ನಾಯಕರಿಗೆ ಕನ್ವಿಯನ್ಸ್ ಮಾಡಲಿ. ಸುರ್ಜೇವಾಲ, ಡಿಕೆಶಿ ಕನ್ವಿಯನ್ಸ್ ಮಾಡಲಿ‌. ಸತೀಶ್ ಜಾರಕಿಹೊಳಿ ಪರ ಅವರು ಹೇಳಿಕೆ ನೀಡಲಿ ಬಳಿಕ ಯಾರ‌್ಯಾರು ಏನು ಚರ್ಚೆ ಮಾಡ್ತಾರೆ ನೋಡೋಣ' ಎಂದು ಅಭಯ್ ಪಾಟೀಲ್ ತಿಳಿಸಿದ್ದಾರೆ.

'Hindu' Remark Row: ಹಿಂದೂ ಧರ್ಮದ ಕುರಿತು ಜಾರಕಿಹೊಳಿ ಹೇಳಿಕೆ: ರಾಜ್ಯದ ಜನತೆಯಲ್ಲಿ ಕ್ಷಮೆ ಕೇಳಲು ಬಿಎಸ್‌ವೈ ಪಟ್ಟು

ಇನ್ನು ಕೆಪಿಸಿಸಿ ಕಾರ್ಯಾಧ್ಯಕ್ಷ ಹೇಳಿಕೆ ಖಂಡಿಸಿ ಇಂದು ಬೃಹತ್ ಪ್ರತಿಭಟನೆಗೆ ಜಿಲ್ಲಾ ಬಿಜೆಪಿ ನಿರ್ಧರಿಸಿದ್ದಾರೆ‌‌. ಬೆಳಗಾವಿ ನಗರ ಹಾಗೂ ಬೆಳಗಾವಿ ಗ್ರಾಮೀಣ ಜಿಲ್ಲಾ ಬಿಜೆಪಿ ವತಿಯಿಂದ ಇಂದು ಬೆಳಗಾವಿಯ ಚನ್ನಮ್ಮ ವೃತ್ತದಲ್ಲಿ ಬೃಹತ್ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ‌.

click me!