
ಹಾವೇರಿ (ಅ.12): ನಾನು ಕೂಡ ಹಿಂದೆ ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದು, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವಲ್ಲಿ ನಮ್ಮದು ಪಾತ್ರವಿದೆ. 25 ವರ್ಷ ಪ್ರಾಮಾಣಿಕವಾಗಿ ಪಕ್ಷಕ್ಕಾಗಿ ದುಡಿದಿದ್ದೇನೆ. ಮುಂದಿನ ದಿನಗಳಲ್ಲಿ ಸಂಪುಟ ವಿಸ್ತರಣೆಯಾದರೆ ಹೈಕಮಾಂಡ್ ವರಿಷ್ಠರು ನನಗೆ ಸಚಿವ ಸ್ಥಾನ ನೀಡುವ ವಿಶ್ವಾಸವಿದೆ ಎಂದು ವಿಧಾನ ಪರಿಷತ್ ಮುಖ್ಯ ಸಚೇತಕ ಸಲೀಂ ಅಹ್ಮದ್ ಹೇಳಿದರು. ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಹಾರ ಚುನಾವಣೆ ನಂತರವೂ ಎರಡುವರೆ ವರ್ಷ ಕಾಂಗ್ರೆಸ್ ಅಧಿಕಾರದಲ್ಲಿ ಇರುತ್ತದೆ. ಈ ಹಿಂದೆಯೇ ಮಂತ್ರಿ ಭಾಗ್ಯ ಸಿಗುವ ಅವಕಾಶ ಒದಗಿ ಬಂದಿದ್ದರೂ ಕೊನೆಯ ಘಳಿಗೆಯಲ್ಲಿ ಕೈ ತಪ್ಪಿದೆ.
ಈ ಬಾರಿ ನನ್ನನ್ನು ಪರಿಗಣಿಸುವ ಭರವಸೆ ಇದೆ. ಸಂಪುಟ ಪುನಾರಚನೆ ವೇಳೆ ಯಾರಿಗೂ ಕೊಕ್ ಕೊಡುವುದಿಲ್ಲ, ಔಟ್ ಮಾಡುವುದಿಲ್ಲ. ಹೊಸಬರಿಗೆ ಸಚಿವ ಸ್ಥಾನದ ಅವಕಾಶ ಕೊಟ್ಟು, ಹಳಬರನ್ನು ಪಕ್ಷ ಸಂಘಟನೆಗೆ ಕಳುಹಿಸುತ್ತಾರೆ. ಮಂತ್ರಿಯಾಗುವ ಬಯಕೆ ಎಲ್ಲರಿಗೂ ಇರುತ್ತೆ. ಆದರೆ ಕೊನೆಯಲ್ಲಿ ಹೈಕಮಾಂಡ್ ನಿರ್ಧಾರ ಮಾಡುತ್ತದೆ. ರಾಜ್ಯದಲ್ಲಿ ಮತ್ತೆ 2028ಕ್ಕೂ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದು ಎರಡುವರೆ ವರ್ಷದಲ್ಲಿ ನುಡಿದಂತೆ ನಡೆದಿದ್ದೇವೆ.
ಎರಡು ವರ್ಷದಲ್ಲಿ ಒಂದೂವರೆ ಲಕ್ಷ ಕೋಟಿಂತಲೂ ಹೆಚ್ಚು ಹಣವನ್ನು ಗ್ಯಾರಂಟಿಗೆ ನೀಡಿದ್ದೇವೆ. ಜನರ ಆರ್ಥಿಕ ಸ್ಥಿತಿ ಸುಧಾರಣೆ ಕಂಡಿದೆ. ನಮ್ಮ ಸರ್ಕಾರ ಸರ್ವರಿಗೂ ಸಮ ಬಾಳು ಸರ್ವರಿಗೂ ಸಮಪಾಲು ನೀತಿ ಅಡಿ ಕೆಲಸ ಮಾಡಿದೆ. ಜಿಪಂ, ತಾಪಂ, ಸ್ಥಳೀಯ ಸಂಸ್ಥೆಗಳ ಚುನಾವಣೆ ತಯಾರಿ ನಡೆಸುತ್ತಿದ್ದು, ಮುಂದಿನ ವರ್ಷ ಪಕ್ಷ ಸಂಘಟನೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಒರಿಸ್ಸಾ, ಹರಿಯಾಣ, ಮಧ್ಯ ಪ್ರದೇಶ, ಪಾಂಡಿಚೇರಿ ಹೀಗೆ ವಿವಿಧೆಡೆ ನೂತನ ಜಿಲ್ಲಾಧ್ಯಕ್ಷರಿಗೆ ನೇಮಕ ಪ್ರಕ್ರಿಯೆ ನಡೆಸಲಾಗುತ್ತಿದೆ. ಮುಂದಿನ ತಿಂಗಳ ದೇಶದ ಎಲ್ಲಾ ಜಿಲ್ಲಾಧ್ಯಕ್ಷರ ಬದಲಾವಣೆ ನಡೆಯಲಿದೆ.
ಹೊಸ ಅಧ್ಯಕ್ಷರ ನೇಮಕದಲ್ಲಿ ಸಿಡಬ್ಲ್ಯೂಸಿ ತಂಡ ಅತ್ಯಂತ ಕಟ್ಟಕಡೆಯ ಪ್ರಾಮಾಣಿಕ ಕಾರ್ಯಕರ್ತರನ್ನು ನೇಮಕ ಮಾಡಲಿದೆ ಎಂದರು. ಪ್ರತಿ ಕ್ಷೇತ್ರಕ್ಕೆ 50 ಕೋಟಿ ನೀಡಲಾಗಿದೆ. ಈ ಬಾರಿ ಹೆಚ್ಚಿನ ಮಳೆಗೆ ಸಾಕಷ್ಟು ರಸ್ತೆಗಳು ಹದಗೆಟ್ಟಿದ್ದು ಒಂದು ತಿಂಗಳೊಳಗಾಗಿ ಗುಂಡಿಗಳನ್ನು ಸಂಪೂರ್ಣ ಮುಚ್ಚಲಾಗುವುದು. ಮುಚ್ಚದಿದ್ದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಂಜೀವಕುಮಾರ ನೀರಲಗಿ, ಎಂ.ಎಂ. ಹಿರೇಮಠ, ಡಿ. ಬಸವರಾಜ, ಡಾ. ಸಂಜಯ ಡಾಂಗೆ, ಎಂ.ಎಂ. ಮೈದೂರ, ರಾಘವೇಂದ್ರ ಬಾಸೂರ, ಪರಶುರಾಮ ಅಡಕಿ, ಗಂಗಾಧರ, ಎಂ.ಜೆ. ಮುಲ್ಲಾ ಸೇರಿದಂತೆ ಇತರರು ಇದ್ದರು.
ಅಧಿಕಾರ ಹಸ್ತಾಂತರ ವಿಚಾರದಲ್ಲಿ ಕಾಂಗ್ರೆಸ್‌ನಲ್ಲಿ ಬಣ ಬಡಿದಾಟ ಜೋರಾಗಿದೆ ಎಂಬ ಮಾಜಿ ಸಿಎಂ ಬೊಮ್ಮಾಯಿ ಹೇಳಿಕೆಗೆ ಪ್ರತಿಕ್ರಿಯಿಸಿ, ಕಾಂಗ್ರೆಸ್‌ನಲ್ಲಿ ಯಾವುದೇ ಬಣವಿಲ್ಲ. ಬಸವರಾಜ ಬೊಮ್ಮಾಯಿ ಅವರು ತಮ್ಮ ಪಕ್ಷದ ಒಡಕನ್ನು ಸರಿಪಡಿಸಿಕೊಳ್ಳಲಿ, ವಿಜಯೇಂದ್ರ ಹಾಗೂ ಯತ್ನಾಳ ಅವರಿಗೆ ಉತ್ತರ ನೀಡಲಿ. ನಮ್ಮ ಬಗ್ಗೆ ಬಸವರಾಜ ಬೊಮ್ಮಾಯಿ ಅವರಿಗೆ ಯಾಕೆ ಚಿಂತೆ? ಸಿಎಂ ಸಿದ್ದರಾಮಯ್ಯ ಇದ್ದಾರೆ, ಡಿಸಿಎಂ ಡಿಕೆಶಿ ಇದ್ದಾರೆ, ಪಕ್ಷದ ಹೈಕಮಾಂಡ್ ಇದೆ ಅವರು ನೋಡಿಕೊಳ್ಳುತ್ತಾರೆ ಎಂದರು. ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದು 11 ವರ್ಷವಾಯಿತು. ಯಾವುದೇ ಅಭಿವೃದ್ಧಿ ಮಾಡಿಲ್ಲ. ಕೇಂದ್ರ ಸರ್ಕಾರದ ದುರಾಡಳಿತದಿಂದ ದೇಶದ ಜನ ಭ್ರಮನಿರಸನರಾಗಿದ್ದಾರೆ. ಮಹದಾಯಿ, ಮೇಕೆದಾಟು ಯೋಜನೆಯಲ್ಲಿ ಮಲತಾಯಿ ಧೋರಣೆ ಮಾಡುತ್ತಿದೆ. ಸುಪ್ರೀಂ ಕೋರ್ಟ್ ಮುಖ್ಯ ನಾಯಮೂರ್ತಿಗಳ ಮೇಲೆ ಶೂ ಎಸೆತವನ್ನು ತೀವ್ರವಾಗಿ ಖಂಡಿಸುತ್ತೇವೆ ಎಂದು ವಿಧಾನ ಪರಿಷತ್ ಮುಖ್ಯ ಸಚೇತಕ ಸಲೀಂ ಅಹ್ಮದ್ ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.