
ಬೆಂಗಳೂರು (ಅ.12): ಬಿಜೆಪಿ ನಾಯಕರು ಕೇವಲ ಮಾತುಗಾರರು, ಕೆಲಸಗಾರರಲ್ಲ. ತಮ್ಮ ಅವಧಿಯಲ್ಲಿ ಬಿಬಿಎಂಪಿ ಆಸ್ತಿ ಅಡವಿಟ್ಟು, ಸಾಲದ ಹೊರೆ ಹೊರೆಸಿದ್ದರು. ನಾವು ಅಧಿಕಾರಕ್ಕೆ ಬಂದ ಮೇಲೆ ಅದನ್ನು ತೀರಿಸುತ್ತಿದ್ದೇವೆ. ಬೆಂಗಳೂರಿನಲ್ಲಿ ಕಾಂಗ್ರೆಸ್ ಆಡಳಿತದ ಮಹತ್ವವನ್ನು ಜನರಿಗೆ ತಿಳಿಸುವ ಕೆಲಸವಾಗಬೇಕು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.
ಕೆಪಿಸಿಸಿ ಕಚೇರಿಯಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯ ಕಾಂಗ್ರೆಸ್ ಮುಖಂಡರೊಂದಿಗಿನ ಸಭೆಯಲ್ಲಿ ಮಾತನಾಡಿ, ಬೆಂಗಳೂರು ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ಬೃಹತ್ ಬೆಂಗಳೂರಿಗೆ ಒಬ್ಬ ಮೇಯರ್, ಒಬ್ಬ ಆಯುಕ್ತರಿಂದ ಆಡಳಿತ ನಡೆಸಲು ಸಾಧ್ಯವಿಲ್ಲ. ಹೀಗಾಗಿಯೇ 5 ನಗರ ಪಾಲಿಕೆಗಳನ್ನು ರಚಿಸಲಾಗಿದೆ. ಬೆಂಗಳೂರಿಗರ ಸಮಸ್ಯೆ ನಿವಾರಿಸಲು ಇದು ಉತ್ತಮ ಕ್ರಮವಾಗಿದ್ದು, ಸಮರ್ಪಕ ಅಭಿವೃದ್ಧಿ, ಆಡಳಿತಕ್ಕೆ ಸಹಕಾರಿ ಎಂದು ಹೇಳಿದರು.
ಬಿಜೆಪಿ ಪ್ರತಿಯೊಂದರಲ್ಲಿ ದ್ವಂದ್ವ ರಾಜಕಾರಣ ಮಾಡುತ್ತದೆ. ಅದು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ರಚನೆಯಲ್ಲೂ ಮುಂದುವರಿಸಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚನೆ ಸಮಿತಿಯಲ್ಲಿ ಬಿಜೆಪಿ ಶಾಸಕರೂ ಇದ್ದರು. ಆಗೆಲ್ಲ ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ ಸಮ್ಮತಿಸಿದ್ದ ಬಿಜೆಪಿ ಶಾಸಕರು, ಈಗ ಅದನ್ನು ವಿರೋಧಿಸಿ ಮಾತನಾಡುತ್ತಿದ್ದಾರೆ. ಬಿಜೆಪಿ ನಾಯಕರು ಕೇವಲ ಮಾತನಾಡುತ್ತಾರೆ, ಕೆಲಸ ಮಾಡುವುದಿಲ್ಲ. ಗ್ರೇಟರ್ ಬೆಂಗಳೂರು ಪ್ರಾಧಿಕಾರ ಮತ್ತು 5 ನಗರ ಪಾಲಿಕೆ ರಚನೆ ವಿಚಾರದಲ್ಲೂ ಇದೇ ಕೆಲಸ ಮಾಡುತ್ತಿದ್ದಾರೆ. ಕೇವಲ ಮಾತನಾಡುತ್ತಿದ್ದು, ಬೆಂಗಳೂರಿನ ಅಭಿವೃದ್ಧಿಗೆ ಯಾವುದೇ ಕೆಲಸ ಮಾಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ಬಿಬಿಎಂಪಿಯಲ್ಲಿ ಅಧಿಕಾರದಲ್ಲಿದ್ದಾಗ 14 ಕಟ್ಟಡ ಅಡಮಾನವಿಟ್ಟು ಸಾಲ ಪಡೆದಿದ್ದರು. 8 ಸಾವಿರ ಕೋಟಿ ರು. ಸಾಲ ಸೇರಿ ಸಾವಿರಾರು ಕೋಟಿ ರು. ಬಾಕಿ ಬಿಲ್ ಉಳಿಸಿದ್ದರು. ಅದನ್ನು ಕಾಂಗ್ರೆಸ್ ಅಧಿಕಾರದಲ್ಲಿ ಬಂದ ನಂತರ ತೀರಿಸಲಾಗುತ್ತಿದೆ. ಬಿಜೆಪಿ ಅಧಿಕಾರದಲ್ಲಿದ್ದಾಗ ರಸ್ತೆ ಗುಂಡಿಗಳನ್ನು ಹೈಕೋರ್ಟ್ ನಿಗಾವಹಿಸಿತ್ತು. ಅಮೆರಿಕದ ಮಾಧ್ಯಮಗಳಲ್ಲಿ ಬೆಂಗಳೂರನ್ನು ಗಾರ್ಬೆಜ್ ಸಿಟಿ ಎಂದು ಕರೆಸಿದ ಶ್ರೇಯ ಬಿಜೆಪಿ ಆಡಳಿತಕ್ಕೆ ಸೇರಿದೆ. ಈ ಎಲ್ಲದರ ಬಗ್ಗೆ ಜನರಿಗೆ ತಿಳಿಸಬೇಕು. ಬೆಂಗಳೂರಿನಲ್ಲಿ ಬಿಜೆಪಿಯ ಆಡಳಿತ ಎಷ್ಟು ಕೆಟ್ಟದಾಗಿತ್ತು ಎಂಬುದನ್ನು ಸಾರ್ವಜನಿಕರಿಗೆ ಹೇಳಬೇಕು ಎಂದು ತಿಳಿಸಿದರು.
ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳು, ಬೆಂಗಳೂರಿನಲ್ಲಿ ಕಾಂಗ್ರೆಸ್ ಆಡಳಿತ ನಡೆಸಿದಾಗ ಕೈಗೊಂಡ ಕ್ರಮಗಳು, ಅಭಿವೃದ್ಧಿ ಬಗ್ಗೆಯೂ ಪ್ರಚಾರ ಮಾಡಬೇಕು. ಬಿಜೆಪಿ ನಾಯಕರು ಬೆಂಗಳೂರಿನ ಪ್ರವಾಹ ನಿರ್ವಹಣೆಯಲ್ಲಿ ವಿಫಲವಾಗಿದ್ದು, ರಾಜಕಾಲುವೆ ಒತ್ತುವರಿ ತೆರವು ಸ್ಥಗಿತಗೊಳಿಸಿದ್ದು, ಕೇಂದ್ರದಿಂದ ಸೂಕ್ತ ಅನುದಾನ ತರುವಲ್ಲಿ ವಿಫಲವಾಗಿದ್ದರ ಬಗ್ಗೆಯೂ ಜನರಿಗೆ ಮಾಹಿತಿ ನೀಡಬೇಕು ಎಂದು ಸೂಚಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.