ಮಾಜಿ ಪ್ರಧಾನಿ ಮಗನಾಗಿ ತಿಳುವಳಿಕೆ ಇಲ್ಲ: ಎಚ್‌ಡಿಕೆಗೆ ಸದಾನಂದಗೌಡ ತಿರುಗೇಟು

By Suvarna NewsFirst Published Apr 13, 2021, 10:48 PM IST
Highlights

ರಸಗೊಬ್ಬರ ಬೆಲೆ ಏರಿಕೆ ವಿಚಾರವಾಗಿ ಕಿಡಿಕಾರಿದ್ದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಕೇಂದ್ರ ಸಚಿವ ಸದಾನಂದ ಗೌಡ ತಿರುಗೇಟು ಕೊಟ್ಟಿದ್ದಾರೆ.

ನವದೆಹಲಿ, (ಏ.13) : ರಸಗೊಬ್ಬರ ಬೆಲೆ ಏರಿಕೆ ಹಾಗೂ ಸಬ್ಸಿಡಿ ಬಗ್ಗೆ ಕೇಂದ್ರ ಸರ್ಕಾರವನ್ನು ಟೀಕಿಸಿ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಮಾಡಿರುವ ಟ್ವೀಟ್ ಅನ್ನು ಬಾಲಿಶ ಎಂದು ಕೇಂದ್ರ ಸಚಿವ ಸದಾನಂದ ಗೌಡ ಹೇಳಿದರು.

ಇಂದು (ಮಂಗಳವಾರ) ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಸಚಿವರು, ಮಾಜಿ ಪ್ರಧಾನಿ ಮಗನಾಗಿ, ಮಾಜಿ ಮುಖ್ಯಮಂತ್ರಿಯಾಗಿ ಅವರಿಗೆ ದೇಶದ ರಸಗೊಬ್ಬರ ಬೆಲೆ ಹಾಗೂ ಸರಬರಾಜು ವ್ಯವಸ್ಥೆ ಯಾವ ರೀತಿ ಕಾರ್ಯನಿರ್ವಹಿಸುತ್ತದೆ ಎಂಬುದರ ಪ್ರಾಥಮಿಕ ತಿಳುವಳಿಕೆಯೂ ಇಲ್ಲದಿರುವುದು ಶೋಚನೀಯವಾಗಿದೆ. ಅವರಿಗೆ ಈ ಬಗ್ಗೆ ಏನಾದರು ಮಾಹಿತಿ ಬೇಕಾದರೆ ಕೇಳಲಿ. ನಾವು ಒದಗಿಸುತ್ತೇವೆ ಎಂದು ಸದಾನಂದ ಗೌಡ ತಿರುಗೇಟು ಕೊಟ್ಟಿದ್ದಾರೆ.

ರಸಗೊಬ್ಬರ ದರ ಏರಿಕೆ: ಸಚಿವ ಸದಾನಂದಗೌಡ್ರಿಗೆ ಮಹತ್ವದ ಸಲಹೆ ಕೊಟ್ಟ ಕುಮಾರಸ್ವಾಮಿ!

 ದೇಶಾದ್ಯಂತ ಲಭ್ಯವಿರುವ ಪೋಷಕಾಂಶಯುಕ್ತ ರಸಗೊಬ್ಬರಗಳ ಹಳೇಯ ದಾಸ್ತಾನನ್ನು ಈ ಹಿಂದಿನ ದರದಲ್ಲಿಯೇ ಮಾರಾಟ ಮಾಡಲು ರಸಗೊಬ್ಬರ ಉತ್ಪಾದಕರು ಸಮ್ಮತಿಸಿದ್ದಾರೆ. ಇಫ್ಕೋ, ಐಪಿಎಲ್ ನಂತಹ ಪ್ರಮುಖ ಕಂಪನಿಗಳು ಹಳೆ ದರ ಮುಂದುವರಿಸುವ ಬಗ್ಗೆ ಆಯಾ ರಾಜ್ಯ ಕೃಷಿ ಇಲಾಖೆಗಳಿಗೆ ಈಗಾಗಲೇ ಪತ್ರ ಬರೆದಿವೆ ಎಂದು ತಿಳಿಸಿದರು.

ದೇಶದಲ್ಲಿ ಎಲ್ಲ ನಮೂನೆಯ ರಸಗೊಬ್ಬರಗಳು ಸಾಕಷ್ಟು ದಾಸ್ತಾನು ಇವೆ. ಮುಂಗಾರು ಹಂಗಾಮಿನಲ್ಲಿ ಯಾವುದೇ ರೀತಿಯಲ್ಲಿ ರಸಗೊಬ್ಬರ ಕೊರತೆ ಆಗದಂತೆ ನೋಡಿಕೊಳ್ಳಲಾಗುವುದು. ಇದಕ್ಕೆ ಈಗಿನಿಂದಲೇ ಎಲ್ಲ ರೀತಿಯ ಪೂರ್ವಸಿದ್ದತೆ ಮಾಡಿಕೊಳ್ಳಲಾಗಿದೆ ಎಂದರು.

ರೈತ ಕಲ್ಯಾಣದ ವಿಚಾರವಾಗಿ ಕೇಂದ್ರ ಸರ್ಕಾರಕ್ಕೆ ಇರುವ ಬದ್ಧತೆಯ ಬಗ್ಗೆ ಯಾರಿಂದಲೂ ಪ್ರಮಾಣ ಪತ್ರ ಬೇಕಾಗಿಲ್ಲ. ರೈತರಿಗೆ ಆದಷ್ಟು ಕಡಿಮೆ ಬೆಲೆಯಲ್ಲಿ ರಸಗೊಬ್ಬರ ಪೂರೈಸಲು ಮೋದಿ ಸರ್ಕಾರ ಬದ್ಧವಾಗಿದೆ. ರಸಗೊಬ್ಬರ ಸಬ್ಸಿಡಿಗಾಗಿ ಭಾರೀ ದೊಡ್ಡ ಮೊತ್ತದ ಹಣವನ್ನು ವ್ಯಯಿಸಲಾಗುತ್ತದೆ. 2019-20ನೇ ಸಾಲಿನಲ್ಲಿ ರಸಗೊಬ್ಬರ ಸಬ್ಸಿಡಿಗಾಗಿ 83,467.85 ಕೋಟಿ ರೂ ಒದಗಿಸಲಾಗಿತ್ತು. ಕಳೆದ ಸಾಲಿನಲ್ಲಿ (2020-21) ಕೊರೊನಾ ಸಂಕಷ್ಟದ ಮಧ್ಯೆಯೂ 1,31,229.51 ಕೋಟಿ ರೂಪಾಯಿ ರಸಗೊಬ್ಬರ ಸಬ್ಸಿಡಿ ನೀಡಲಾಗಿದೆ. ಒಂದೇಒಂದು ನಯಾಪೈಸೆ ಸಬ್ಸಿಡಿಯನ್ನೂ ಉಳಿಸಿಕೊಂಡಿಲ್ಲ. ಇದು ಮೋದಿ ಸರ್ಕಾರ ಕಾರ್ಯನಿರ್ವಹಿಸುವ ರೀತಿ ಎಂದು ಅವರು ಹೇಳಿದರು.

click me!