ಶೇ.90 ಮುಸ್ಲಿಮರು ಮತ ಹಾಕಿದರೆ ಜಯ ನಮ್ಮದೇ| ಮುಸ್ಲಿಮರ ಬಗ್ಗೆ ಕಾಳಜಿ ಇದ್ರೆ ಬಸವಕಲ್ಯಾಣದಲ್ಲಿ ಅವರಿಗೇ ಕಾಂಗ್ರೆಸ್ ಟಿಕೆಟ್ ನೀಡಬೇಕಿತ್ತು| ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಕಾಂಗ್ರೆಸ್ಸೇ ಕಾರಣ| ‘ಕನ್ನಡಪ್ರಭ’ಕ್ಕೆ ಕುಮಾರಸ್ವಾಮಿ ವಿಶೇಷ ಸಂದರ್ಶನ|
ಅಪ್ಪಾರಾವ್ ಸೌದಿ
ಬೀದರ್(ಏ.13): ರಾಜ್ಯದಲ್ಲಿ ಉಪಚುನಾವಣೆ ನಡೆಯುತ್ತಿರುವ ಮೂರು ಕ್ಷೇತ್ರಗಳ ಪೈಕಿ ಕೇವಲ ಬಸವಕಲ್ಯಾಣ ಕ್ಷೇತ್ರಕ್ಕೆ ಪಕ್ಷದ ಅಭ್ಯರ್ಥಿಯನ್ನು ಕಣಕ್ಕಿಳಿಸಿರುವ ಜೆಡಿಎಸ್ ನಾಯಕರು ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಹೋರಾಟ ಆರಂಭಿಸಿದ್ದಾರೆ. ಇನ್ನೆರಡು ಕ್ಷೇತ್ರ ಬಿಟ್ಟು ಕೇವಲ ಈ ಕ್ಷೇತ್ರದಲ್ಲಿ ಮಾತ್ರ, ಅದೂ ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕಿಳಿಸಿರುವುದರ ಹಿಂದೆ ಮತ ವಿಭಜನೆ ಮೂಲಕ ಆಡಳಿತಾರೂಢ ಬಿಜೆಪಿಗೆ ನೆರವಾಗುವ ತಂತ್ರವಿದೆ ಎಂಬ ಗಂಭೀರ ಆರೋಪವನ್ನೂ ಕಾಂಗ್ರೆಸ್ ಮಾಡುತ್ತಿದೆ.
ಇದೆಲ್ಲವನ್ನೂ ನುಂಗಿಕೊಂಡು ಜೆಡಿಎಸ್ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಹಲವು ದಿನಗಳಿಂದ ಬಸವಕಲ್ಯಾಣದಲ್ಲೇ ವಾಸ್ತವ್ಯ ಹೂಡಿ ಪ್ರಚಾರ ನಡೆಸುತ್ತಿದ್ದಾರೆ. ಪ್ರಚಾರದ ಭರಾಟೆಯ ಮಧ್ಯೆ ‘ಕನ್ನಡಪ್ರಭ’ಕ್ಕೆ ವಿಶೇಷ ಸಂದರ್ಶನ ನೀಡಿದ ಅವರು ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ.
'ಕೋಟಿ ಕೋಟಿ ಹಣ ಪಡೆದು ಕುಮಾರಸ್ವಾಮಿ ಬಿಜೆಪಿ ಗೆಲುವಿಗಾಗಿ ಶ್ರಮಿಸುತ್ತಿದ್ದಾರೆ'
ಕ.ಪ್ರ: ಮುಸ್ಲಿಂ ಅಭ್ಯರ್ಥಿ ಕಣಕ್ಕಿಳಿಸಿದ್ದು ನಿಜವಾದ ಕಾಳಜಿನಾ?
ಎಚ್‌ಡಿಕೆ: ಇಲ್ಲಿನ ಶೇ. 90ರಷ್ಟು ಮುಸ್ಲಿಂ ಸಮಾಜದವರು ನಮಗೆ ಮತದಾನ ಮಾಡಿದ್ದೇ ಆದಲ್ಲಿ ನಾವು ಬಸವಕಲ್ಯಾಣದಲ್ಲಿ ಗೆಲ್ತೀವಿ. ಇದು ಮುಂದಿನ ದಿನಗಳಲ್ಲಿ ಮುಸ್ಲಿಂ ಸಮಾಜದ ರಾಜಕೀಯ ಅಭಿವೃದ್ಧಿಗೆ ನಾಂದಿ ಆಗಲಿದೆ. ಯಾರೇ ಏನೇ ಹೇಳಲಿ. ಕಾಂಗ್ರೆಸ್ ಕೇವಲ ಮತ ಬ್ಯಾಂಕ್ ಆಗಿಸಿಕೊಂಡಿರುವ ಮುಸ್ಲಿಂ ಸಮಾಜದ ಬಗ್ಗೆ ನಿಜ ಕಾಳಜಿ ತೋರಿ ಅವರನ್ನು ಒಗ್ಗೂಡಿಸುವ ಕೆಲಸ ಮಾಡ್ತೇವೆ.
ಕ.ಪ್ರ : ಜೆಡಿಎಸ್‌ದ್ದು ಮತ ವಿಭಜನೆಯ ತಂತ್ರ ಎಂಬ ಆರೋಪಕ್ಕೆ ಏನಂತೀರಿ?
ಎಚ್‌ಡಿಕೆ: ಈ ರಾಜ್ಯದಲ್ಲಿ ಶೇ. 20ರಷ್ಟು ಮುಸ್ಲಿಂ ಸಮಾಜ ಮತದಾರರು ಇರುವ ಕ್ಷೇತ್ರಗಳಿವೆ. ಆ ಸಮಾಜದಲ್ಲಿರುವ ಬಡತನ, ಮುಗ್ಧತೆ, ಕೆಲವರ ಮೇಲೆ ಇಟ್ಟುಕೊಂಡಿರುವ ನಂಬಿಕೆ ದುರುಪಯೋಗ ಮಾಡಿಕೊಂಡಿರುವದು ಕಾಂಗ್ರೆಸ್. ವೀರಶೈವ, ಕುರುಬ, ಒಕ್ಕಲಿಗರಷ್ಟೇ ಸಮಾನ ಜನಸಂಖ್ಯೆ ಇದ್ದದ್ದು ಮುಸ್ಲಿಂ. ಹೀಗಾಗಿ ಅವರನ್ನು ಒಗ್ಗೂಡಿಸಿ ಅಧಿಕಾರಕ್ಕೇರಿಸುವ ತವಕ ನನ್ನದು. ವಿಧಾನಸಭೆಯಲ್ಲಿ ಕನಿಷ್ಠ 20 ಮುಸ್ಲಿಂ ಶಾಸಕರಾದರೂ ಇದ್ದಲ್ಲಿ ಅವರ ಸಮಾಜದ ಅಭಿವೃದ್ಧಿಗೆ ಪೂರಕವಾಗುತ್ತದೆ. ಅರ್ಧ ಶತಮಾನದಿಂದ ಮುಸ್ಲಿಂ ಮತದಾರರನ್ನು ಓಟ್ ಬ್ಯಾಂಕ್ ಮಾಡಿಕೊಂಡಿದ್ದ ಕಾಂಗ್ರೆಸ್ ಇದೀಗ ಬಸವಕಲ್ಯಾಣದಲ್ಲಿ ಮುಸ್ಲಿಂ ಸಮಾಜದವರನ್ನು ಜೆಡಿಎಸ್ ಅಭ್ಯರ್ಥಿಯನ್ನಾಗಿಸಿದ್ದಕ್ಕೆ ನನ್ನ ಮೇಲೆ ಮತ ಒಡೆಯುವ ಗೂಬೆ ಕೂರಿಸ್ತಿದೆ. ಮುಸ್ಲಿಂ ಸಮಾಜದ ಮೇಲೆ ಕಾಳಜಿ ಇದೆ ಎಂದೆನ್ನುವ ಕಾಂಗ್ರೆಸ್ ಇಲ್ಲಿನ ಬಹುಸಂಖ್ಯಾತ ಮುಸ್ಲಿಂ ಸಮಾಜದವರಿಗೆ ಟಿಕೆಟ್ ನೀಡಬೇಕಿತ್ತು.
ಕ.ಪ್ರ : ‘ಜೆಡಿಎಸ್‌ಗೆ ಮತ ಬಿಜೆಪಿಗೆ ಹಿತ’ ಅಂತಾರಲ್ಲ ಸಿದ್ದರಾಮಯ್ಯ?
ಎಚ್‌ಡಿಕೆ : ಬೆಳೆದು ಬಂದ ಪಕ್ಷದ ಹಿನ್ನೆಲೆ ಬಗ್ಗೆ ಟೀಕೆ ಮಾಡುತ್ತಿರುವದು ತಾಯಿ ದ್ರೋಹ. ನಮ್ಮ ಪಕ್ಷದಲ್ಲಿ ಬೆಳೆದಿದ್ದರಿಂದಲೇ ಇವರನ್ನು ಕಾಂಗ್ರೆಸ್ ತೆಗೆದುಕೊಂಡಿತು. ಇಲ್ಲವಾದಲ್ಲಿ ಇವರನ್ಯಾರು ಸೇರಿಸಿಕೊಳ್ಳುತ್ತಿದ್ದರು? ಜೆಡಿಎಸ್‌ನಲ್ಲಿದ್ದಾಗ ಇವರಿಗೆ ಮತ ನೀಡಿದ್ದು ಬಿಜೆಪಿಗೆ ಹಿತವಾಗಿತ್ತಾ? ಬಿಜೆಪಿ ರಾಜ್ಯದಲ್ಲಿ ತಳವೂರಲು ಕಾಂಗ್ರೆಸ್ ಮೂಲ ಕಾರಣ. 5 ವರ್ಷ ಅಧಿಕಾರ ನಡೆಸಿದ ಇವರು ಮತ್ತೆ ಅಧಿಕಾರಕ್ಕೆ ಏತಕ್ಕೆ ಏರಲಿಲ್ಲ? ಚುನಾವಣೆಯಲ್ಲಿ 80ಕ್ಕೂ ಏರದ ಕಾಂಗ್ರೆಸ್ ಬಿಜೆಪಿಯನ್ನು ಶತಕ ಬಾರಿಸುವಂತೆ ಮಾಡಿತು. ಒಂದು ಹಂತದಲ್ಲಿ ಬಿಜೆಪಿ ಅಧಿಕಾರಕ್ಕೆ ಏರಲು ಕಾಂಗ್ರೆಸ್ ಮೂಲ ಕಾರಣ. ಬೆಳೆದು ಬಂದ ಪಕ್ಷಕ್ಕೆ ಹಿಗ್ಗಾಮುಗ್ಗಾ ಟೀಕೆ ಮಾಡುವ ಇಂಥವರನ್ನು ಸಮಾಜ ಯಾವ ರೀತಿ ಗೌರವಿಸಬೇಕು ಎಂಬುದನ್ನು ಜನ ತೀರ್ಮಾನ ಮಾಡಬೇಕು.
'ಕುಮಾರಸ್ವಾಮಿ ಸಾರ್ವಜನಿಕವಾಗಿ ಕಾಣಿಸಿಕೊಂಡ್ರೆ ಬಂಧನ ವಾರಂಟ್ ಜಾರಿ'
ಕ.ಪ್ರ : ಸಾರಿಗೆ ಮುಷ್ಕರ ಉಪಚುನಾವಣೆಯಲ್ಲಿ ಬಿಜೆಪಿಗೆ ಪೆಟ್ಟು ನೀಡುತ್ತಾ?
ಎಚ್‌ಡಿಕೆ: ‘ಸರ್ಕಾರದ ಆರ್ಥಿಕ ಸ್ಥಿತಿ ಸರಿಯಿಲ್ಲ. ಕೋವಿಡ್ ಸಂಕಷ್ಟದಲ್ಲಿ ಖಜಾನೆ ಭರ್ತಿಯಾಗಿಲ್ಲ’ ಎಂಬುದೆಲ್ಲ ಸುಳ್ಳು. ಕೋವಿಡ್ ಹೆಸರಲ್ಲಿ ಸಾರಿಗೆ ನೌಕರರ ಬೇಡಿಕೆಗಳ ಕಡೆಗಣನೆಯಾಗ್ತಿದೆ ಎಂಬುವದು ಮಾತ್ರ ಸತ್ಯ. ತುಂಬಿರುವಂಥ ಖಜಾನೆ ಹಣವನ್ನ ದುರ್ಬಳಕೆ ಮಾಡಿಕೊಳ್ಳಲಾಗ್ತಿದೆ ಹೊರತು ಅಭಿವೃದ್ಧಿಗೆ ಪೂರಕವಾಗಿಲ್ಲ. ಸಾರಿಗೆ ನೌಕರರೂ ನಮ್ಮ ಥರ ಮುನಷ್ಯರು. ಅವರಿಗೆ ಮನವೊಲಿಸುವ ಬದಲು ಉದ್ಧಟತನ ತೋರಲಾಗ್ತಿದೆ. ಅಂತರ ಜಿಲ್ಲಾ ವರ್ಗಾವಣೆಯ ಬೆದರಿಕೆಯೊಡ್ಡಿ, ಕೆಲಸ ಮಾಡುವ ವಾತಾವರಣವನ್ನೇ ಹಾಳು ಮಾಡಲಾಗ್ತಿದೆ ಇದು ಸರ್ಕಾರ ನಡೆಸುವ ರೀತಿಯಲ್ಲ.
ಕ.ಪ್ರ: ಸರ್ಕಾರದ ಖಜಾನೆ ಲೂಟಿ ಆಗ್ತಿದೆ ಅಂತೀರಾ? ನಿಯಂತ್ರಿಸಲಾಗುತ್ತಿಲ್ಲವೇ?
ಎಚ್‌ಡಿಕೆ: ಈಗಿನ ಸರ್ಕಾರದಲ್ಲಿ ಸ್ವೇಚ್ಛಾಚಾರವಾಗಿ ವರ್ಗಾವಣೆ ದಂಧೆ ನಡೆಯುತ್ತಿದೆ, ಸಿಎಂ ಹಿಂದೆ ಮುಂದೆಯೇ ನಡೆಯುತ್ತಿದೆ, ಮುಖ್ಯಮಂತ್ರಿಯ ಬಿಎಸ್ ಯಡಿಯೂರಪ್ಪ ಅವರದ್ದು ಏನೂ ನಡೆಯೋದೇ ಇಲ್ಲ. ಮುಖ್ಯಮಂತ್ರಿ ವರ್ಗಾಯಿಸಿ ಎಂದು ಬರೆದರೂ ಅಂತಿಮ ಪರಿಶೀಲನೆ ನಡೆಸೋದು ಬೇರೊಬ್ಬರೇ. ಮುಖ್ಯಮಂತ್ರಿ ಹೆಸರಿಗೆ ಇರೋದಷ್ಟೇ. ಮಠಾಧೀಶರ ಮೇಲೆ ಗೌರವವಿದ್ರೆ, ದೇವರ ಮೇಲೆ ನಂಬಿಕೆ ಇದ್ರೆ ಆತ್ಮದಲ್ಲಿ ಪ್ರಶ್ನೆ ಹಾಕಿಕೊಳ್ಳಲಿ ಇದು ಸತ್ಯವೋ ಅಸತ್ಯವೋ ಅಂತಾ. ಜಿಲ್ಲಾಧಿಕಾರಿ, ಎಸ್‌ಪಿ, ಎಸಿ, ಸಿಪಿಐ, ಪಿಎಸ್‌ಐ ವರ್ಗಾವಣೆಗೆ ಲಂಚ ಫಿಕ್ಸ್ ಮಾಡಲಾಗಿದೆ, ಅಸೋಸಿಯೇಷನ್ ಮಾಡಿಕೊಳ್ಳುವ ಮಟ್ಟಿಗೆ ಹೋಗಿದೆ. ಈಸ್ಟ್ ಇಂಡಿಯಾ ಕಂಪನಿಯನ್ನೇ ಮೀರಿಸಿದೆ.