
ಬೆಂಗಳೂರು (ಜೂ.18): ರಾಜಕೀಯ ಪಕ್ಷಗಳ ಅಡ್ಡಮತದಾನದ ಭೀತಿ ನಡುವೆ ವಿಧಾನಸಭೆಯಿಂದ ವಿಧಾನಪರಿಷತ್ತಿನ ಏಳು ಸ್ಥಾನಗಳಿಗೆ ಗುರುವಾರ ಚುನಾವಣೆ ನಡೆಯಲಿದ್ದು, ಏಳನೇ ಸ್ಥಾನ ಯಾರ ಪಾಲಾಗಲಿದೆ ಎಂಬ ಕುತೂಹಲ ಅಂತಿಮ ಘಟ್ಟಕ್ಕೆ ತಲುಪಿದೆ.
ವಿಧಾನಸಭೆಯಲ್ಲಿ ಸಂಖ್ಯಾಬಲದ ಕೊರತೆ ಇದ್ದರೂ ಪ್ರತಿಪಕ್ಷ ಜೆಡಿಎಸ್ ತನ್ನ ಅಭ್ಯರ್ಥಿ ಕಣಕ್ಕಿಳಿಸುವ ಮೂಲಕ ಆಡಳಿತಾರೂಢ ಕಾಂಗ್ರೆಸ್ ಪಕ್ಷಕ್ಕೆ ಸಡ್ಡು ಹೊಡೆದಿದೆ. ಕಾಂಗ್ರೆಸ್ ತನ್ನ ಐದನೇ ಅಭ್ಯರ್ಥಿ ಗೆಲ್ಲಿಸಲು ಬೇಕಾದ ಎಲ್ಲ ರಣತಂತ್ರಗಳನ್ನೂ ಹೆಣೆದಿದೆ. ಗುರುವಾರ ಸಂಜೆ ಹೊತ್ತಿಗೆ ಎಲ್ಲವೂ ತಿಳಿಯಾಗಲಿದೆ.
ಬೆಳಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆವರೆಗೆ ವಿಧಾನಸೌಧದ ಒಂದನೇ ಮಹಡಿಯ ಕೊಠಡಿ ಸಂಖ್ಯೆ 106ರಲ್ಲಿ ಮತದಾನ ನಡೆಯಲಿದೆ. ಸಂಜೆ 5 ಗಂಟೆಗೆ ಮತ ಎಣಿಕೆ ಕಾರ್ಯ ಜರುಗಲಿದೆ. ವಿಧಾನಸಭೆಯ ಕಾರ್ಯದರ್ಶಿಯೂ ಆಗಿರುವ ಚುನಾವಣಾಧಿಕಾರಿ ಎಂ.ಕೆ.ವಿಶಾಲಾಕ್ಷಿ ಅವರು ಬುಧವಾರ ಚುನಾವಣಾ ಸಿದ್ಧತೆಗಳನ್ನು ಪರಿಶೀಲಿಸಿದರು. ಮತದಾನದ ವೇಳೆ ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ನೀಡದಂತೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿದೆ.
ವಿಧಾನ ಪರಿಷತ್ತಿನ ಏಳು ಸ್ಥಾನಗಳಿಗೆ ನಡೆಯುವ ಈ ಚುನಾವಣೆಯಲ್ಲಿ ಕಾಂಗ್ರೆಸ್ ಐವರು, ಬಿಜೆಪಿ ಇಬ್ಬರು ಮತ್ತು ಜೆಡಿಎಸ್ ಓರ್ವ ಸೇರಿ ಒಟ್ಟು ಎಂಟು ಮಂದಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ. ಇಲ್ಲಿ ಒಂದು ಸ್ಥಾನ ಗೆಲ್ಲಲು 28 ಮತಗಳ ಅಗತ್ಯವಿದೆ. ವಿಧಾನಸಭೆಯಲ್ಲಿ ರಾಜಕೀಯ ಪಕ್ಷಗಳ ಶಾಸಕರ ಸಂಖ್ಯಾಬಲ ನೋಡಿದಾಗ, ಕಾಂಗ್ರೆಸ್ 135, ಬಿಜೆಪಿ 62 ಮತ್ತು ಜೆಡಿಎಸ್ 18 ಶಾಸಕರ ಸಂಖ್ಯಾಬಲ ಹೊಂದಿವೆ.
ಈ ಶಾಸಕ ಸಂಖ್ಯಾಬಲದ ಆಧಾರದ ಮೇಲೆ 7 ಸ್ಥಾನಗಳ ಪೈಕಿ ಕಾಂಗ್ರೆಸ್ 4 ಮತ್ತು ಬಿಜೆಪಿ 2 ಸ್ಥಾನ ಗೆಲ್ಲುವುದು ಖಚಿತ. ತನ್ನ ಅಭ್ಯರ್ಥಿ ಗೆಲ್ಲಿಸಿಕೊಳ್ಳುವಷ್ಟು ಶಾಸಕರ ಸಂಖ್ಯಾಬಲ ಇಲ್ಲದ ಜೆಡಿಎಸ್, ಕಾಂಗ್ರೆಸ್‌ನ 5ನೇ ಅಭ್ಯರ್ಥಿಗೆ ಪೈಪೋಟಿ ನೀಡಲು ತನ್ನ ಅಭ್ಯರ್ಥಿ ಕಣಕ್ಕಿಳಿಸಿದೆ. ಹೀಗಾಗಿ ಈ ಚುನಾವಣೆ ರೋಚಕತೆ ಹುಟ್ಟು ಹಾಕಿದೆ. ಅಡ್ಡಮತದಾನದ ಭೀತಿಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ತಮ್ಮ ಶಾಸಕರನ್ನು ರೆಸಾರ್ಟ್‌ನಲ್ಲಿ ಇರಿಸಿಕೊಂಡು ಗೆಲುವಿಗೆ ಕೊನೆಯ ಹಂತದ ತಂತ್ರಗಾರಿಕೆಯಲ್ಲಿ ನಿರತವಾಗಿವೆ.
ಒಂದು ಸ್ಥಾನ ಗೆಲ್ಲಲು 28 ಮತ ಬೇಕು. ವಿಧಾನಸಭೆಯಲ್ಲಿ 135 ಶಾಸಕರ ಸಂಖ್ಯಾಬಲ ಹೊಂದಿರುವ ಕಾಂಗ್ರೆಸ್ 4 ಸ್ಥಾನಗಳನ್ನು ನಿರಾಯಾಸವಾಗಿ ಗೆಲ್ಲಲಿದೆ. 5ನೇ ಅಭ್ಯರ್ಥಿ ಗೆಲುವಿಗೆ ಉಳಿಕೆ 23 ಮತಗಳ ಜೊತೆಗೆ ಮೂವರು ಪಕ್ಷೇತರರು ಮತ್ತು ಇಬ್ಬರು ಬಿಜೆಪಿ ಉಚ್ಚಾಟಿತ ಶಾಸಕರ ಮತ ಪಡೆದು ಗೆಲ್ಲಲು ತಂತ್ರಗಾರಿಕೆ ರೂಪಿಸಿದೆ. ಇನ್ನು 62 ಶಾಸಕರ ಸಂಖ್ಯಾಬಲದ ಬಿಜೆಪಿ ತ್ರಾಸವಿಲ್ಲದೆ 2 ಸ್ಥಾನ ಗೆಲ್ಲಲಿದೆ. ಕೇವಲ 18 ಶಾಸಕರನ್ನು ಹೊಂದಿರುವ ಜೆಡಿಎಸ್, ಬಿಜೆಪಿಯ ಉಳಿಕೆ ಮತ 6, ಪಕ್ಷೇತರ ಶಾಸಕ ಗಾಲಿ ಜನಾರ್ದನ ರೆಡ್ಡಿ, ಉಚ್ಚಾಟಿತ ಶಾಸಕ ಬಸನಗೌಡ ಯತ್ನಾಳ್ ಸೇರಿ 26 ಮತದ ಜೊತೆಗೆ ಕಾಂಗ್ರೆಸ್‌ನ ಇಬ್ಬರು ಅತೃಪ್ತ ಶಾಸಕರನ್ನು ಸೆಳೆದು ತಮ್ಮ ಅಭ್ಯರ್ಥಿ ಗೆಲ್ಲಿಸಿಕೊಳ್ಳಲು ಪ್ರಯತ್ನಿಸುತ್ತಿದೆ. ಈ ಪೈಪೋಟಿಯಲ್ಲಿ ವಿಜಯಲಕ್ಷ್ಮೀ ಯಾರಿಗೆ ಉಳಿಯುತ್ತಾಳೆ ಎಂಬುದು ಗುರುವಾರ ಸಂಜೆ 5 ಗಂಟೆ ಬಳಿಕ ಗೊತ್ತಾಗಲಿದೆ.
ಗೆಲುವಿನ ಲೆಕ್ಕಾಚಾರ
ಕಾಂಗ್ರೆಸ್‌ನಿಂದ ಬಿ.ಕೆ.ಹರಿಪ್ರಸಾದ್, ತಿಪ್ಪಣ್ಣಪ್ಪ ಕಮಕನೂರ, ಪಿ.ವಿ.ಮೋಹನ್, ಬಿ.ಎಸ್.ಶಿವಣ್ಣ, ವಿನಯ್ ಕಾರ್ತಿಕ್ ಪ್ರಕಾಶ್. ಬಿಜೆಪಿಯಿಂದ ಕೌಟಿಲ್ಯ ರಘು ಮತ್ತು ಲಿಂಗರಾಜ್ ಪಾಟೀಲ್. ಜೆಡಿಎಸ್‌ನಿಂದ ಗೋವಿಂದರಾಜು
ಬೆಂಗಳೂರು: ವಿಧಾನಸಭೆಯಿಂದ ವಿಧಾನ ಪರಿಷತ್ತಿನ ಏಳು ಸ್ಥಾನಗಳಿಗೆ ಗುರುವಾರ ಚುನಾವಣೆ ಹಿನ್ನೆಲೆಯಲ್ಲಿ ಅಡ್ಡಮತದಾನದ ಭೀತಿಯಲ್ಲಿ ಜೆಡಿಎಸ್ ಪಕ್ಷವು ತನ್ನ ಶಾಸಕರನ್ನು ದೇವನಹಳ್ಳಿ ಸಮೀಪದ ರೆಸಾರ್ಟ್‌ಗೆ ಸ್ಥಳಾಂತರಿಸಿದೆ.
ರೆಸಾರ್ಟಲ್ಲಿ ಕಾಂಗ್ರೆಸ್ ಅಣಕು ಮತದಾನ
ಬೆಂಗಳೂರು: ವಿಧಾನ ಪರಿಷತ್‌ನ ಏಳು ಸ್ಥಾನಗಳಿಗೆ ಗುರುವಾರ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಬಿಡದಿಯ ಖಾಸಗಿ ರೆಸಾರ್ಟ್‌ನಲ್ಲಿ ಬೀಡುಬಿಟ್ಟಿರುವ ಕಾಂಗ್ರೆಸ್‌ನ ಶಾಸಕರಿಗೆ ಬುಧವಾರ ಅಣಕು ಮತದಾನದ ಮೂಲಕ ತರಬೇತಿ ನೀಡಲಾಯಿತು. ಬಿಜೆಪಿಯ ಉಚ್ಚಾಟಿತ ಶಾಸಕರಾದ ಎಸ್.ಟಿ. ಸೋಮಶೇಖರ್, ಶಿವರಾಂ ಹೆಬ್ಬಾರ್ ಕೂಡ ಭಾಗವಹಿಸಿದ್ದರು.
ಅನಾಮಿಕ ಕರೆ ಸ್ವೀಕರಿಸಬೇಡಿ
ಜೆಡಿಎಸ್ ಅಭ್ಯರ್ಥಿಯು ಹೆಂಡತಿ, ಮಗ, ಕಾರು ಡ್ರೈವರ್ ದೂರವಾಣಿ ಸಂಖ್ಯೆ ಮೂಲಕ ಕಾಂಗ್ರೆಸ್ ಶಾಸಕರನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿದ್ದಾರೆ ಎಂಬ ಮಾಹಿತಿ ಇದೆ. ಮತಚಲಾವಣೆ ಆಗುವವರೆಗೆ ಅನಾಮಿಕ ಕರೆಗಳನ್ನು ಸ್ವೀಕರಿಸಬೇಡಿ.
ಡಿ.ಕೆ. ಶಿವಕುಮಾರ್, ಸಿಎಂ
ನಮ್ಮದು ಸಣ್ಣ ಪಕ್ಷ, ಗೆಲ್ಲಲು ಆಗುತ್ತಾ?
ನಾವೇನು ಆಪರೇಷನ್ ಮಾಡೋದು? ನಮ್ಮದು ಸಣ್ಣ ಪಕ್ಷ. ಮ್ಯಾನ್ ಪವರ್, ಮಸಲ್ ಪವರ್, ಮನಿ ಪವರ್ ಇರುವವರ ಎದುರು ನಾವು ಫೈಟ್ ಮಾಡಲು ಆಗುತ್ತಾ?
ಎಚ್.ಡಿ. ಕುಮಾರಸ್ವಾಮಿ, ಕೇಂದ್ರ ಸಚಿವ
ಪಕ್ಷ ಸದಸ್ಯ ಬಲ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.