ಬೈ ಎಲೆಕ್ಷನ್‌ ಅಭ್ಯರ್ಥಿ ಆಯ್ಕೆಗೆ ಇಂದು ಬಿಜೆಪಿ ಹಿರಿಯರ ಸಭೆ!

By Kannadaprabha News  |  First Published Oct 1, 2020, 11:13 AM IST

ಬೈ ಎಲೆಕ್ಷನ್‌ ಅಭ್ಯರ್ಥಿ ಆಯ್ಕೆಗೆ ಇಂದು ಬಿಜೆಪಿ ಹಿರಿಯರ ಸಭೆ| ಮುನಿರತ್ನಗೆ ಟಿಕೆಟ್‌ ಖಚಿತ: ಶಿರಾ ಟಿಕೆಟ್‌ ಯಾರಿಗೆ?


ಬೆಂಗಳೂರು(ಅ.01): ರಾಜ್ಯದ ಎರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಭರಾಟೆ ಆರಂಭವಾಗಿದ್ದು, ಪಕ್ಷದ ಅಭ್ಯರ್ಥಿಗಳ ಆಯ್ಕೆ ಸಂಬಂಧ ಆಡಳಿತಾರೂಢ ಬಿಜೆಪಿಯ ಹಿರಿಯ ನಾಯಕರನ್ನು ಒಳಗೊಂಡ ಕೋರ್‌ ಕಮಿಟಿ ಸಭೆ ಗುರುವಾರ ನಡೆಯಲಿದೆ.

ಸಂಜೆ 5 ಗಂಟೆಗೆ ಸಭೆ ನಡೆಯಲಿದ್ದು, ಪಕ್ಷದ ರಾಜ್ಯಾಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌, ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ಸಚಿವರಾದ ಜಗದೀಶ್‌ ಶೆಟ್ಟರ್‌, ಕೆ.ಎಸ್‌.ಈಶ್ವರಪ್ಪ, ಸಿ.ಟಿ.ರವಿ ಮತ್ತಿತರ ಹಿರಿಯ ನಾಯಕರು ಪಾಲ್ಗೊಳ್ಳಲಿದ್ದಾರೆ.

Latest Videos

undefined

ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರಕ್ಕೆ ಹಿಂದೆ ಭರವಸೆ ನೀಡಿದಂತೆ ಕಾಂಗ್ರೆಸ್‌ ತೊರೆದು ಬಂದಿರುವ ಮುನಿರತ್ನ ಅವರಿಗೆ ಟಿಕೆಟ್‌ ನೀಡುವುದು ಬಹುತೇಕ ಖಚಿತವಾಗಿದೆ. ಆದರೆ, ಈ ಕ್ಷೇತ್ರದಲ್ಲಿ ಕಳೆದ ಬಾರಿ ಬಿಜೆಪಿಯಿಂದ ಸ್ಪರ್ಧಿಸಿ ಹೆಚ್ಚಿನ ಸಂಖ್ಯೆಯ ಮತ ಗಳಿಸಿದ್ದ ಹಾಲಿ ಪಕ್ಷದ ರಾಜ್ಯ ಕಾರ್ಯದರ್ಶಿ ಮುನಿರಾಜುಗೌಡ ಅವರನ್ನು ಹೇಗೆ ಸಮಾಧಾನಪಡಿಸಲಾಗುತ್ತದೆ ಎಂಬುದು ಕುತೂಹಲವಾಗಿದೆ.

ಆದರೆ, ಮುನಿರಾಜುಗೌಡ ಅವರು ಟಿಕೆಟ್‌ ಸಿಗದಿದ್ದರೆ ಬಂಡಾಯ ಏಳುವ ಮನಸ್ಥಿತಿಯವರಲ್ಲ. ಸಂಘ ಪರಿವಾರದ ಹಿನ್ನೆಲೆಯುಳ್ಳ ಮುನಿರಾಜುಗೌಡರು ಹಿಂದೆಯೇ ಮುನಿರತ್ನ ಅವರು ಪಕ್ಷಕ್ಕೆ ಬಂದ ಕೂಡಲೇ ಸಮಾಧಾನಪಡಿಸುವ ಉದ್ದೇಶದಿಂದ ಅಖಿಲ ಕರ್ನಾಟಕ ಪ್ರವಾಸೋದ್ಯಮ ನಿಗಮ (ಕೆಎಸ್‌ಟಿಡಿಸಿ) ಅಧ್ಯಕ್ಷ ಸ್ಥಾನ ನೀಡಿದರೂ ಅದನ್ನು ತಿರಸ್ಕರಿಸಿದ್ದರು. ಇದೀಗ ಉಪಚುನಾವಣೆ ಘೋಷಣೆ ಆಗಿರುವುದರಿಂದ ಮುನಿರಾಜುಗೌಡರನ್ನು ಮನವೊಲಿಸುವ ಪ್ರಯತ್ನ ಮತ್ತೊಮ್ಮೆ ಆರಂಭವಾಗಿದೆ.

ಇನ್ನು ತುಮಕೂರು ಜಿಲ್ಲೆ ಶಿರಾ ಕ್ಷೇತ್ರವನ್ನು ಗೆದ್ದುಕೊಳ್ಳುವ ಉತ್ಸಾಹದಲ್ಲಿರುವ ಆಡಳಿತಾರೂಢ ಬಿಜೆಪಿ ಸದ್ದಿಲ್ಲದೇ ತಂತ್ರಗಾರಿಕೆಯಲ್ಲಿ ತೊಡಗಿದೆ. ಇದುವರೆಗೆ ಈ ಕ್ಷೇತ್ರದಲ್ಲಿ ಬಿಜೆಪಿಗೆ ಖಾತೆ ತೆರೆಯಲು ಸಾಧ್ಯವಾಗಿಲ್ಲ. ಹೀಗಾಗಿ ಚುನಾವಣೆಯನ್ನು ಗಂಭೀರವಾಗಿ ಸ್ವೀಕರಿಸಿ ಕಾರ್ಯಪ್ರವೃತ್ತವಾಗಿದೆ. ಗೊಲ್ಲ ಸಮುದಾಯಗಳ ಮತ ಸೇರಿ ಹಿಂದುಳಿದ ವರ್ಗಗಳ ಮತಗಳು ಗಣನೀಯ ಪ್ರಮಾಣದಲ್ಲಿದೆ. ಹೀಗಾಗಿ ಆ ಸಮುದಾಯವನ್ನು ಸೆಳೆಯಲು ಕಾಡು ಗೊಲ್ಲ ಅಭಿವೃದ್ಧಿ ನಿಗಮ ರಚನೆ ಮಾಡಲು ಸರ್ಕಾರ ಮುಂದಾಗಿದೆ. ಪಕ್ಷದಿಂದ ಜಿಲ್ಲಾ ಪಂಚಾಯತ್‌ ಮಾಜಿ ಸದಸ್ಯ ಬಿ.ಕೆ. ಮಂಜುನಾಥ್‌, ಎಸ್‌.ಆರ್‌.ಗೌಡ, ಡಾ.ರಾಜೇಶಗೌಡ ಮತ್ತು ಹಿರಿಯೂರಿನ ಹಾಲಿ ಶಾಸಕಿ ಪೂರ್ಣಿಮಾ ಅವರ ಪತಿ ಶ್ರೀನಿವಾಸ್‌ ಅವರ ಹೆಸರುಗಳು ಪ್ರಮುಖವಾಗಿ ಕೇಳಿಬರುತ್ತಿವೆ.

click me!