ಆರ್ ಆರ್ ನಗರ ಅಭ್ಯರ್ಥಿಯಾಗಿ ಕುಸುಮಾ ನಾಮಪತ್ರ ಸಲ್ಲಿಸಿದ್ದಾರೆ. ಪತಿ ಹೆಸರಿನ ಕಲಂನಲ್ಲಿ ಹೀಗೆ ಬರೆದಿದ್ದಾರೆ
ಬೆಂಗಳೂರು (ಅ.14): ರಾಜರಾಜೇಶ್ವರಿ ನಗರ ಉಪ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಕಸುಮಾ ಹನುಮಂತರಾಯಪ್ಪ ಅವರು ಮಂಗಳವಾರ ಮಧ್ಯಾಹ್ನ ನಾಮಪತ್ರ ಸಲ್ಲಿಕೆ ಮಾಡಿದ್ದು, ನಾಮಪತ್ರದ ಪ್ರಮಾಣ ಪತ್ರದಲ್ಲಿ 2.47 ಕೋಟಿ ರು.ಮೌಲ್ಯದ ಆಸ್ತಿ ಘೋಷಣೆ ಮಾಡಿದ್ದಾರೆ.
ಅಲ್ಲದೆ, ಪತಿಯ ಹೆಸರಿನ ಕಲಂನಲ್ಲಿ ಅನ್ವಯವಾಗುವುದಿಲ್ಲ ಎಂದು ಬರೆದಿದ್ದು, ಪ್ರಮಾಣಪತ್ರದಲ್ಲಿ ಎಲ್ಲಿಯೂ ತಮ್ಮ ಪತಿ, ದಿವಂಗತ ಐಎಎಸ್ ಅಧಿಕಾರಿ ಡಿ.ಕೆ. ರವಿ ಹೆಸರನ್ನು ನಮೂದು ಮಾಡಿಲ್ಲ. ಬದಲಿಗೆ ಹನುಮಂತರಾಯಪ್ಪನವರ ಪುತ್ರಿ ಎಂದು ಬರೆದಿದ್ದಾರೆ.
ಆರ್.ಆರ್. ನಗರ ಬೈ ಎಲೆಕ್ಷನ್: ಬಿಜೆಪಿ-ಜೆಡಿಎಸ್‌ಗಿಂತ ಒಂದೆಜ್ಜೆ ಮುಂದೆ ಹೋದ ಕಾಂಗ್ರೆಸ್..!
ಇನ್ನು ಕುಸುಮಾ ಅವರಿಗೆ ಬುಧವಾರ ತಾರಾಬಲ ಇಲ್ಲವೆಂಬ ಕಾರಣಕ್ಕೆ ಜ್ಯೋತಿಷಿ ಸಲಹೆ ಮೇರೆಗೆ ಮಂಗಳವಾರ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಕುಸುಮಾ ಹುಟ್ಟಿದ ದಿನ ಮಂಗಳವಾಗಿದ್ದರಿಂದ ಜ್ಯೋತಿಷಿ ಡಾ.ಬಿ.ಪಿ. ಆರಾಧ್ಯ ಸಲಹೆಯಂತೆ ಮಂಗಳವಾರ ಮಧ್ಯಾಹ್ನ 12 ರಿಂದ 12.15ರ ನಡುವೆ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಬುಧವಾರ ಬೆಳಗ್ಗೆ 11.45 ಗಂಟೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಜೊತೆಯಲ್ಲಿ ತೆರಳಿ ಅಧಿಕೃತವಾಗಿ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ. ಇದಕ್ಕೂ ಮೊದಲು ಬೆಳಗ್ಗೆ 8 ಗಂಟೆಗೆ ನಾಗರಬಾವಿ ಬಿಡಿಎ ಕಾಂಪ್ಲೆಕ್ಸ್ ಹಿಂಭಾಗದ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಿದ್ದಾರೆ.
ಸ್ವಂತ ಮನೆ, ಕಾರು ಇಲ್ಲ
ಕುಸುಮಾ ತಮ್ಮ ಬಳಿ 1.41 ಲಕ್ಷ ನಗದು, ವಿವಿಧ ಬ್ಯಾಂಕ್‌ಗಳ ಖಾತೆಯಲ್ಲಿ 5.52 ಲಕ್ಷ ರು. ಹಣ ಹೊಂದಿದ್ದಾರೆ. ಷೇರುಗಳಲ್ಲಿ 2.45 ಲಕ್ಷ ರು. ಹೂಡಿಕೆ ಹೊಂದಿದ್ದಾರೆ. ಉಳಿದಂತೆ ಎಚ್. ಅನಿಲ್‌ಗೌಡ ಎಂಬುವವರಿಗೆ 2.05 ಲಕ್ಷ ರು., ಎಬಿಎಚ್ ಇನ್‌ಫ್ರಾಸ್ಟ್ರಕ್ಚರ್ ಅವರಿಗೆ 56.58 ಲಕ್ಷ ರು. ಸಾಲ ನೀಡಿದ್ದಾರೆ. ಉಡುಗೊರೆಯಾಗಿ ಬಂದಿರುವ 45 ಲಕ್ಷ ರು. ಮೌಲ್ಯದ 1.1 ಕೆ.ಜಿ. ಮೌಲ್ಯದ ಚಿನ್ನ ಸೇರಿ ಒಟ್ಟು 1.13 ಕೋಟಿ ರು. ಚರಾಸ್ತಿ ಹೊಂದಿದ್ದಾರೆ.
ಉಳಿದಂತೆ ಸ್ಥಿರಾಸ್ತಿ ಪೈಕಿ 1.07 ಕೋಟಿ ರು. ಮೌಲ್ಯದ ನಿವೇಶನವನ್ನು ತಮ್ಮ ತಾಯಿ ಉಡುಗೊರೆಯಾಗಿ ನೀಡಿದ್ದಾರೆ. ಪ್ರಸ್ತುತ 30 ಲಕ್ಷ ರು. ಬೆಲೆ ಬಾಳಬಹುದಾದ ನಿವೇಶನವನ್ನು 2018ರಲ್ಲಿ ಖರೀದಿಸಿರುವುದಾಗಿ ಹೇಳಿದ್ದು, ಒಟ್ಟು 1.07 ಕೋಟಿ ರು. ಮೌಲ್ಯದ ಸ್ಥಿರಾಸ್ತಿ ಹೊಂದಿರುವುದಾಗಿ ಹೇಳಿದ್ದಾರೆ. ಉಳಿದಂತೆ 20.48 ಲಕ್ಷ ರು. ಸಾಲ ಹೊಂದಿರುವುದಾಗಿ ತಿಳಿಸಿದ್ದು, ಭೈರಮ್ಮ ಅವರಿಂದ ಸಾಲ ಪಡೆದಿದ್ದಾರೆ. ಸ್ವಂತ ಮನೆ ಅಥವಾ ಕಾರು ಸೇರಿ ಯಾವುದೇ ವಾಹನ ಹೊಂದಿರುವುದಾಗಿ ಪ್ರಮಾಣಪತ್ರದಲ್ಲಿ ತಿಳಿಸಿಲ್ಲ.