ಜಿಲ್ಲೆಗೆ ಮುಂದಿನ ಬಜೆಟ್‌ನಲ್ಲಿ ಮೆಡಿಕಲ್ ಕಾಲೇಜ್ ಹಾಗೂ ಕೋಲಾರ ನಗರಕ್ಕೆ ರಿಂಗ್ ರೋಡ್ ಮಂಜೂರಾತಿ ಮಾಡಲಾಗುವುದು ಎಂದು ನಗರಾಭಿವೃದ್ಧಿ ಹಾಗೂ ನಗರ ಯೋಜನೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಸುರೇಶ್ ತಿಳಿಸಿದರು.
ಕೋಲಾರ (ಜ.27): ಜಿಲ್ಲೆಗೆ ಮುಂದಿನ ಬಜೆಟ್‌ನಲ್ಲಿ ಮೆಡಿಕಲ್ ಕಾಲೇಜ್ ಹಾಗೂ ಕೋಲಾರ ನಗರಕ್ಕೆ ರಿಂಗ್ ರೋಡ್ ಮಂಜೂರಾತಿ ಮಾಡಲಾಗುವುದು ಎಂದು ನಗರಾಭಿವೃದ್ಧಿ ಹಾಗೂ ನಗರ ಯೋಜನೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಸುರೇಶ್ ತಿಳಿಸಿದರು. ನಗರದ ಸರ್.ಎಂ.ವಿ. ಕ್ರೀಡಾಂಗಣದಲ್ಲಿ ಧ್ವಜರೋಹಣಾ ಕಾರ್ಯಕ್ರಮದ ನಂತರ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಜಿಲ್ಲೆಗೆ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲಾಗಿದೆ, ಕೆಜಿಎಫ್ ನಲ್ಲಿ ಒಂದು ಸಾವಿರ ಎಕರೆ ಪ್ರದೇಶದಲ್ಲಿ ಕೈಗಾರಿಕೆ ಅಭಿವೃದ್ಧಿ ಯೋಜನೆಗಳು ಹಾಗೂ ಜಿಲ್ಲೆಯಲ್ಲಿ ಆಶ್ರಯ ಯೋಜನೆಗಳು ಪ್ರಗತಿಯಲ್ಲಿವೆ,
ಕೋಲಾರ ನಗರಸಭೆಯನ್ನು ಮಹಾನಗರ ಪಾಲಿಕೆಯನ್ನಾಗಿ ಮಾಡಲು ಸರ್ಕಾರದ ಮುಂದೆ ಪ್ರಸ್ತಾವನೆ ಸಲ್ಲಿಸಿದ್ದು, ಅದಕ್ಕೆ ಕೆಲವು ತಾಂತ್ರಿಕ ಸಮಸ್ಯೆಗಳಿವೆ. ಅವುಗಳ ಪರಿಹಾರ ಕ್ರಮ ಜರುಗಿಸಲಾಗುತ್ತಿದೆ ಎಂದು ಹೇಳಿದರು. ಈಗಾಗಲೇ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆಗೆ ಕಠಿಣ ಕ್ರಮಗಳನ್ನು ಜರುಗಿಸಲಾಗಿದೆ, ಡ್ರಗ್ಸ್ ಮಾಫಿಯ ಮುಕ್ತ ಜಿಲ್ಲೆಗೆ ಅಗತ್ಯ ಕ್ರಮ ಕೈಗೊಂಡಿದೆ, ರಸ್ತೆಗಳ ಅಭಿವೃದ್ಧಿಗೆ ಹಂತ, ಹಂತವಾಗಿ ಕ್ರಮ ಜರುಗಿಸಲಾಗುತ್ತಿದೆ, ಜಿಲ್ಲಾಮಟ್ಟದ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿದ್ದು, ಕಾರ್ಯನಿರ್ವಹಿಸಬೇಕೆಂದು ಸೂಚಿಸಲಾಗಿದೆ. ಮತ್ತೊಮ್ಮೆ ಕೇಂದ್ರ ಸ್ಥಾನದಲ್ಲಿ ಇಲ್ಲದೆ ಇರುವವರಿಗೆ ನೋಟಿಸ್ ಜಾರಿ ಮಾಡಲು ಕ್ರಮ ವಹಿಸಲಾಗುವುದು ಎಂದು ಹೇಳಿದರು.
ನನಗೆ ನಿಗಮ ಮಂಡಳಿ ಜವಾಬ್ದಾರಿ ಬೇಡ: ಶಾಸಕ ಸುಬ್ಬಾರೆಡ್ಡಿ ಅಸಮಾಧಾನ
ಬಜೆಟ್ ನಂತರ ನಗರದ ರಸ್ತೆಗಳನ್ನು ವಿಸ್ತರಿಸಲಾಗುವುದು, ಮಹಾನಗರಪಾಲಿಕೆಗೆ ೩ ಲಕ್ಷ ಜನಸಂಖ್ಯೆ ಇರಬೇಕಾಗಿದ್ದು, ಅದಕ್ಕೆ ಈಗಾಗಲೇ ೧೦ ಕಿಮೀ ವ್ಯಾಪ್ತಿಯ ೭ ಪಂಚಾಯಿತಿಗಳನ್ನು ನಗರ ಪಾಲಿಕೆಗೆ ಸೇರ್ಪಡೆ ಮಾಡಿಕೊಳ್ಳುವ ಮೂಲಕ ತಾಂತ್ರಿಕ ಸಮಸ್ಯೆ ಬಗೆಹರಿಸಲು ಚರ್ಚಿಸಲಾಗುತ್ತಿದೆ ಎಂದು ನುಡಿದರು. ಜಗದೀಶ್ ಶೆಟ್ಟರ್ ನಮ್ಮ ರಾಜ್ಯದ ಮಾಜಿ ಮುಖ್ಯಮಂತ್ರಿಗಳಾಗಿದ್ದವರು, ಅವರ ಬಗ್ಗೆ ನಮಗೆ ಅಪಾರ ಗೌರವವಿದೆ. ವಿಧಾನಸಭೆ ಚುನಾವಣೆಯಲ್ಲಿ ಸೋತಿದ್ದರೂ ಸಹ ಅವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ನೇಮಕ ಮಾಡಲಾಗಿತ್ತು, ಅವರು ಮರಳಿ ಬಿಜೆಪಿಗೆ ಹೋಗಿರುವುದರಿಂದ ಕಾಂಗ್ರೆಸ್ ಪಕ್ಷಕ್ಕೆ ಯಾವುದೇ ನಷ್ಟವಾಗುವುದಿಲ್ಲ ಎಂದು ತಿಳಿಸಿದರು.
ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರ ವಹಿಸಿಕೊಂಡ ದಿನದಿಂದಲೂ ಬಿಜೆಪಿ ಪಕ್ಷವು ಆಪರೇಷನ್ ಕಮಲಕ್ಕೆ ಸಂಬಂಧಿಸಿ, ಈ ಸರ್ಕಾರ ನಿಲ್ಲುವುದಿಲ್ಲ ಎಂದು ಅಪಪ್ರಚಾರ ಮಾಡುತ್ತಲೇ ಬರುತ್ತಿದೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ೧೫ ರಿಂದ ೨೦ ಸ್ಥಾನಗಳನ್ನು ಗೆಲ್ಲಲಿದೆ ಎಂದು ಹೇಳಿದರು. ಕಾಂಗ್ರೆಸ್ ನುಡಿದಂತೆ ನಡೆಯುವ ಪಕ್ಷವಾಗಿದ್ದು, ಚುನಾವಣೆ ಪೂರ್ವ ನೀಡಿದ ಉಚಿತ ಗ್ಯಾರಂಟಿ ಯೋಜನೆಗಳನ್ನು ಸಂಪೂರ್ಣ ಅನುಷ್ಠಾನಕ್ಕೆ ತರಲಾಗಿದೆ, ಜೆಡಿಎಸ್ ಪಕ್ಷವು ಈ ಹಿಂದೆ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಿದ್ದ ಸಂದರ್ಭದಲ್ಲಿ ಬಿಜೆಪಿ ಹೆಚ್ಚು ಸ್ಥಾನ ಪಡೆಯಿತು, ಅದೇ ರೀತಿ ಲೋಕಸಭೆಯಲ್ಲಿ ಜೆಡಿಎಸ್ ಪಕ್ಷವು ಬಿಜೆಪಿಯನ್ನು ಬೆಂಬಲಿಸಲು ಮುಂದಾಗಿದೆ. ಹಾಗಾಗಿ ಈ ಬಾರಿ ಕಾಂಗ್ರೆಸ್ ಪಕ್ಷಕ್ಕೆ ಲಾಭವಾಗಲಿದೆ ಎಂದು ಅಭಿಪ್ರಾಯಪಟ್ಟರು.
ಕೋಲಾರ ಜಿಲ್ಲೆಗೆ ನಿಗಮ ಮಂಡಳಿಗೆ ಇಬ್ಬರು ಶಾಸಕರು ಹಾಗೂ ಇಬ್ಬರು ಹಿರಿಯ ಕಾರ್ಯಕರ್ತರಿಗೆ ಅವಕಾಶ ಸಿಗಲಿದೆ, ಶಾಸಕ ನಂಜೇಗೌಡರ ಮನೆ ಮೇಲೆ ಇಡಿ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳೇ ಪ್ರತಿಕ್ರಿಯೆ ನೀಡಿದ್ದಾರೆ, ಕೇಂದ್ರ ಸರ್ಕಾರದ ಸ್ವಾಮ್ಯಕ್ಕೆ ಒಳಪಟ್ಟಿರುವ ಪ್ರಕರಣಗಳು ಬಹುತೇಕ ದ್ವೇಷದ ರಾಜಕಾರಣ ಮಾಡುತ್ತಿವೆ, ಕಾಂಗ್ರೆಸ್ ಪಕ್ಷವು ಎಂದೂ ಜಾತಿ, ಧರ್ಮದ ಮೇಲೆ ಮತಯಾಚಿಸುವುದಕ್ಕೆ ಹೋಗುವುದಿಲ್ಲ, ನಮ್ಮದು ಜಾತ್ಯಾತೀತ ಪಕ್ಷವಾಗಿದೆ, ಸಂವಿಧಾನದಲ್ಲಿ ನಂಬಿಕೆ ಇರಿಸಿಕೊಂಡು ಸರ್ವರಿಗೂ ಸಮಾನತೆ, ಸಮಬಾಳು, ಸಮಪಾಲು ಎಂಬ ತತ್ವ ಸಿದ್ಧಾಂತ ಅಳವಡಿಸಿಕೊಂಡು ಬಂದಿವ ಪಕ್ಷವಾಗಿದೆ ಎಂದು ಹೇಳಲು ಹೆಮ್ಮೆಯೆಸುತ್ತದೆ ಎಂದರು.
ಜಗದೀಶ ಶೆಟ್ಟರ್ ಬಿಜೆಪಿಗೆ: ಕಾಂಗ್ರೆಸ್‌ಗೆ ಹಾನಿಯಿಲ್ಲ: ಸಚಿವ ಡಾ.ಶರಣಪ್ರಕಾಶ ಪಾಟೀಲ್
ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಹೈಕಮಾಂಡ್ ತೀರ್ಪು ಅಂತಿಮವಾಗಲಿದೆ, ಲೋಕಸಭಾ ಚುನಾವಣೆಯಲ್ಲಿ ೧೦ ಸಚಿವರಿಗೆ ಟಿಕೆಟ್ ನೀಡಬೇಕೆಂಬುವುದು ಹಾಗೂ ಚುನಾವಣೆಯ ಟಾಸ್ಕ್ ಬಗ್ಗೆಯೂ ನಮಗೆ ತಿಳಿದಿಲ್ಲ ಎಂದು ಸ್ವಷ್ಟ ಪಡಿಸಿದರು. ನಮ್ಮ ಸರ್ಕಾರದಲ್ಲಿ ಅಭಿವೃದ್ಧಿ ಯೋಜನೆಗಳಿಗೆ ಯಾವುದೇ ಅನುದಾನದ ಕೊರತೆಯಿಲ್ಲ, ಎಲ್ಲಾ ಕಾಮಗಾರಿಗಳನ್ನು ಹಂತ ಹಂತವಾಗಿ ಕೈಗೆತ್ತಿಕೊಳ್ಳಲಾಗುತ್ತಿದೆ. ೫ ಗ್ಯಾರಂಟಿ ಯೋಜನೆಗಳಿಗೂ ಅಭಿವೃದ್ಧಿ ಕಾಮಗಾರಿಗಳಿಗೂ ಯಾವುದೇ ಸಂಬಂಧವಿಲ್ಲ ಹಾಗೂ ಅಭಿವೃದ್ಧಿ ಕಾಮಗಾರಿ ಯೋಜನೆಗಳನ್ನು ನಾವು ನಿಲ್ಲಿಸಿಲ್ಲ ಎಂದು ವಿವರಿಸಿದರು. ಶಾಸಕ ಕೊತ್ತೂರು ಮಂಜುನಾಥ್, ಜಿಲ್ಲಾಧಿಕಾರಿ ಅಕ್ರಂಪಾಷ, ಜಿಪಂ ಸಿಇಒ ಪದ್ಮಬಸವಂತಪ್ಪ, ಎಸ್‌ಪಿ ಎಂ.ನಾರಾಯಣ ಇದ್ದರು.