
ವಿಧಾನಸಭೆ(ಜು.13): ‘ನಾನು 1983ರಲ್ಲಿ ವಿಧಾನಸಭೆಗೆ ಮೊದಲು ಪ್ರವೇಶ ಮಾಡಿದೆ. ಅಲ್ಲಿಂದ ಈವರೆಗೆ ಯಾವುದೇ ಪ್ರತಿಪಕ್ಷದ ನಾಯಕರ ಜತೆ ಹೊಂದಾಣಿಕೆ ಮಾಡಿಕೊಂಡಿರುವುದನ್ನು ಸಾಬೀತುಪಡಿಸಿದರೂ ಈ ಕ್ಷಣವೇ ರಾಜಕೀಯ ನಿವೃತ್ತಿ ಪಡೆಯುತ್ತೇನೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸವಾಲು ಹಾಕಿದರು.
ವಿಧಾನಸಭೆಯಲ್ಲಿ ರಾಜ್ಯಪಾಲರ ಮೇಲಿನ ಚರ್ಚೆ ವೇಳೆ ಬುಧವಾರ ಪದೇ ಪದೇ ಎದ್ದು ನಿಂತು ಮಾತನಾಡಲು ಯತ್ನಿಸುತ್ತಿದ್ದ ಬಿಜೆಪಿಯ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ‘ನೀವು ಎಷ್ಟು ಬಾರಿ ಪದೇ ಪದೇ ಎದ್ದು ನಿಂತರೂ ನಿಮ್ಮನ್ನು ಪ್ರತಿಪಕ್ಷ ನಾಯಕ ಮಾಡುವುದಿಲ್ಲ. ಇದು ನನಗಿರುವ ಖಚಿತ ಮಾಹಿತಿ’ ಎಂದು ಸಿದ್ದರಾಮಯ್ಯ ಅವರು ಕಾಲೆಳೆದರು.
ಸಾವಾಗಿಲ್ಲ ಮಾರ್ರೆ ವೀಡಿಯೋ ಟ್ರೋಲ್: ಖಡಕ್ ತಿರುಗೇಟು ಕೊಟ್ಟ ಶಾಸಕಿ ನಯನಾ ಮೋಟಮ್ಮ
ಇದಕ್ಕೆ ಯತ್ನಾಳ್, ‘ನಾನು ಪ್ರತಿಪಕ್ಷ ನಾಯಕನಾಗುವುದಿಲ್ಲ ಎಂದು ನೀವಿಷ್ಟುಖಚಿತವಾಗಿ ಹೇಳುತ್ತಿದ್ದೀರಿ ಎಂದರೆ ನಿಮಗೆ ನಮ್ಮಲ್ಲಿ ಯಾರೊಡನೆಯೋ ಅಡ್ಜಸ್ಟ್‌ಮೆಂಟ್ (ಹೊಂದಾಣಿಕೆ) ಆಗಿದೆ’ ಎಂದು ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿದರು. ಇದಕ್ಕೆ ಸಿದ್ದರಾಮಯ್ಯ ‘ನಾನು ನನ್ನ ರಾಜಕೀಯ ಜೀವನದಲ್ಲಿ ಯಾರೊಂದಿಗೂ ಹೊಂದಾಣಿಕೆ ಮಾಡಿಕೊಂಡಿಲ್ಲ. ಪ್ರತಿಪಕ್ಷದಲ್ಲಿದ್ದಾಗ ಯಾವ ಸಚಿವ, ಸಿಎಂಗಳ ಮನೆಗೂ ಹೋಗಿಲ್ಲ. ಹೊಂದಾಣಿಕೆ ಮಾಡಿಕೊಂಡಿದ್ದೆ ಎಂಬುದನ್ನು ಸಾಬೀತು ಪಡಿಸಿದರೆ ಈ ಕ್ಷಣವೇ ರಾಜೀನಾಮೆ ನೀಡುತ್ತೇನೆ’ ಎಂದು ಸವಾಲು ಹಾಕಿದರು.
ಎಚ್‌ಡಿಕೆ ಕಿಡಿ:
ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆ ವೇಳೆ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಅವರು, ‘ಚುನಾವಣೆಗೆ ಮೊದಲು 200 ಯುನಿಟ್ ಉಚಿತ ವಿದ್ಯುತ್ ಎಂದು ಈಗ ಷರತ್ತುಗಳನ್ನು ವಿಧಿಸಿದ್ದೀರಿ. ಇದರಿಂದ ಬಡವರ ಆಸೆಗೆ ತಣ್ಣೀರು ಎರಚಿದಂತಾಗಿದೆ’ ಎಂದರು.
ಮಧ್ಯಪ್ರವೇಶಿಸಿದ ಸಚಿವ ಪ್ರಿಯಾಂಕ್ ಖರ್ಗೆ, ‘200 ಯುನಿಟ್‌ವರೆಗೆ ಎಂದು ಹೇಳಿದ್ದೆವು. ಹೀಗಾಗಿ ಅವರ ಸರಾಸರಿ ಬಳಕೆ ಆಧಾರದ ಮೇಲೆ ಶೇ.10ರಷ್ಟುಹೆಚ್ಚು ವಿದ್ಯುತ್ ಉಚಿತವಾಗಿ ನೀಡಲಾಗುತ್ತಿದೆ’ ಎಂದು ಸಮರ್ಥಿಸಿಕೊಳ್ಳಲು ಯತ್ನಿಸಿದರು.
ಈ ಹಂತದಲ್ಲಿ ಯತ್ನಾಳ್, ‘ನೀವು ಗ್ಯಾರಂಟಿ ನೀಡಬೇಕಾದರೆ ಅರ್ಧವಿರಾಮ, ಪೂರ್ಣ ವಿರಾಮ.. ಏನೂ ಹೇಳಿರಲಿಲ್ಲ. ಈಗ ಸುಳ್ಳು ಹೇಳುತ್ತಿದ್ದೀರಿ’ ಎಂದು ಕಿಡಿ ಕಾರಿದರು.
ಯತ್ನಾಳ್‌ಗೆ ಟಾಂಗ್ ನೀಡಿದ ಸಿದ್ದರಾಮಯ್ಯ, ‘ಪದೇ ಪದೇ ಎದ್ದು ನಿಂತರೆ ಪ್ರತಿಪಕ್ಷ ನಾಯಕನಾಗಿ ಮಾಡುತ್ತಾರೆ ಎಂದು ಎದ್ದೇಳುತ್ತಿದ್ದಿಯಾ. ನನಗೆ ಇರುವ ಮಾಹಿತಿ ಪ್ರಕಾರ ನಿನ್ನನ್ನು ಪ್ರತಿಪಕ್ಷ ನಾಯಕ ಮಾಡುವುದಿಲ್ಲ. ಇನ್ನೂ ಡಾ.ಸಿ.ಎನ್. ಅಶ್ವತ್ಥನಾರಾಯಣ್, ಆರ್. ಅಶೋಕ್ ಕೂಡ ಪ್ರಯತ್ನ ಮಾಡುತ್ತಿದ್ದಾರೆ. ಅವರದ್ದು ಏನಾಗುತ್ತದೆ ಎಂಬುದು ಗೊತ್ತಿಲ್ಲ. ನಿನ್ನದು ಆಗಲ್ಲ ಎಂಬುದು ಖಚಿತ’ ಎಂದರು.
ಶೇ.100ರಷ್ಟು ವಿಪಕ್ಷ ನಾಯಕ ಆಗು: ಯತ್ನಾಳ್
ಇದಕ್ಕೆ ಯತ್ನಾಳ್, ‘ನನ್ನ ಬಗ್ಗೆ ಜ್ಯೋತಿಷ್ಯ ಹಾಗೂ ಭವಿಷ್ಯ ಹೇಳುತ್ತಿದ್ದೀರಿ. ನೀವು ಅವರಪ್ಪನಾಣೆಗೂ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಲ್ಲ ಎಂದಾಗ ಅವರು ಮುಖ್ಯಮಂತ್ರಿ ಆದರು. ಹೀಗಾಗಿ ನಾನು ಶೇ.100 ರಷ್ಟುಪ್ರತಿಪಕ್ಷ ನಾಯಕ ಆಗುತ್ತೇನೆ’ ಎಂದು ಹೇಳಿದರು.
Karnataka Budget 2023: ಮಾತು ತಪ್ಪಿದ ಮುಖ್ಯಮಂತ್ರಿ ಸಿದ್ದರಾಮಯ್ಯ: ಅಬ್ರಾರ್ ಅಹಮದ್
ಅಲ್ಲದೆ, ‘ನೀವು ನಮ್ಮ ಪಕ್ಷದಲ್ಲಿ ನಾನು ಪ್ರತಿಪಕ್ಷ ನಾಯಕ ಆಗಲ್ಲ ಎಂದು ಇಷ್ಟುಖಚಿತವಾಗಿ ಹೇಳುತ್ತಿದ್ದೀರಿ ಎಂದರೆ ನೀವು ನಮ್ಮಲ್ಲಿ ಯಾರೊಡನೆಯೋ ಹೊಂದಾಣಿಕೆ ಆಗಿದ್ದೀರಿ. ಹೊಂದಾಣಿಕೆ ಎಂದರೆ ನೀವು ಯಾರ ಮನೆಗೂ ಹೋಗಬೇಕಾಗಿಲ್ಲ. ಆದರೆ ಫೋನ್ ಮೂಲಕ, ಹೊರಗಡೆ ಭೇಟಿಯಾಗಿ ಆಗಿರಬಹುದಲ್ಲ?’ ಎಂದರು.
ಈ ವೇಳೆ ಸಿದ್ದರಾಮಯ್ಯ, ‘ನಾನು 1983ರಲ್ಲಿ ಮೊದಲ ಬಾರಿಗೆ ಶಾಸಕನಾದವನು. ಈವರೆಗೆ ಯಾರೊಂದಿಗಾದರೂ ಹೊಂದಾಣಿಕೆ ಸಾಬೀತುಪಡಿಸಿದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ’ ಎಂದು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.