ನೀರಾವರಿಗೆ ಅನುದಾನ ತರದಿದ್ದರೆ ರಾಜಕೀಯ ನಿವೃತ್ತಿ: ಎಚ್.ಡಿ.ಕುಮಾರಸ್ವಾಮಿ

By Govindaraj SFirst Published Apr 5, 2024, 8:56 AM IST
Highlights

ರಾಜ್ಯದ ನೀರಾವರಿ ಯೋಜನೆಗಳಿಗೆ ಕೇಂದ್ರ ಸರ್ಕಾರದಿಂದ ಹಣ ತರದಿದ್ದರೆ ರಾಜಕೀಯ ನಿವೃತ್ತಿ ಘೋಷಿಸುವುದಾಗಿ ಮಂಡ್ಯ ಲೋಕಸಭಾ ಕ್ಷೇತ್ರದ ಜೆಡಿಎಸ್-ಬಿಜೆಪಿ ಮೈತ್ರಿಕೂಟದ ಅಭ್ಯರ್ಥಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು. 

ಮಂಡ್ಯ (ಏ.05): ರಾಜ್ಯದ ನೀರಾವರಿ ಯೋಜನೆಗಳಿಗೆ ಕೇಂದ್ರ ಸರ್ಕಾರದಿಂದ ಹಣ ತರದಿದ್ದರೆ ರಾಜಕೀಯ ನಿವೃತ್ತಿ ಘೋಷಿಸುವುದಾಗಿ ಮಂಡ್ಯ ಲೋಕಸಭಾ ಕ್ಷೇತ್ರದ ಜೆಡಿಎಸ್-ಬಿಜೆಪಿ ಮೈತ್ರಿಕೂಟದ ಅಭ್ಯರ್ಥಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು. ಮಂಡ್ಯ ವಿಶ್ವವಿದ್ಯಾಲಯದ ಆವರಣದಲ್ಲಿ ನಡೆದ ಲೋಕಸಭೆ ಚುನಾವಣೆ ಸಂಬಂಧ ಜೆಡಿಎಸ್-ಬಿಜೆಪಿ ಬಹಿರಂಗ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿ, ನಾಡಿನ ನೀರಾವರಿ ಯೋಜನೆಗಳಿಗೆ ಆಗಿರುವ ಅನ್ಯಾಯದ ವಿರುದ್ಧ ಸಮರ್ಥವಾಗಿ ದನಿಯೆತ್ತಬೇಕಿದೆ. ಕಾವೇರಿ ನೀರು ಹಂಚಿಕೆಯಲ್ಲಿ ರಾಜ್ಯದ ಕಾವೇರಿ ಕಣಿವೆ ಜನರಿಗೆ ಶಾಶ್ವತ ಪರಿಹಾರ ದೊರಕಿಸಬೇಕಿದೆ. ಅದಕ್ಕಾಗಿ ದೇವೇಗೌಡರ ಮಾದರಿಯಲ್ಲಿ ರೈತರಿಗೆ ಧ್ವನಿಯಾಗಿ ಕೆಲಸ ಮಾಡುವುದಕ್ಕೆ ಅವಕಾಶ ನೀಡುವಂತೆ ಕೋರಲು ನಿಮ್ಮ ಮುಂದೆ ನಿಂತಿರುವುದಾಗಿ ಹೇಳಿದರು.

ನಂಬಿದವರಿಗೆ ದ್ರೋಹ ಮಾಡಲಾರೆ: ನನ್ನನ್ನು ನಂಬಿರುವ ಜನರಿಗೆ ನಾನು ಎಂದಿಗೂ ದ್ರೋಹ ಬಗೆಯುವುದಿಲ್ಲ. ನಿಮಗೆ ದ್ರೋಹ ಬಗೆದರೆ ದೇವರಿಗೆ ದ್ರೋಹ ಬಗೆದಂತೆ. ನನಗೆ ಆಶೀರ್ವಾದ ಮಾಡಿ ಕಳುಹಿಸಿ. ಪಂಚರತ್ನ ಯೋಜನೆಗಳ ಜಾರಿಗಾಗಿ ಒಂದು ಅವಕಾಶ ಕೇಳಿದ್ದೆ. ನಾಡಿನ ಜನ ಇನ್ನೂ ನನ್ನನ್ನು ಸಂಪೂರ್ಣವಾಗಿ ನಂಬಲಿಲ್ಲ. ಈಗ ಮತ್ತೆ ಮೋದಿ ಪ್ರಧಾನಿ ಆಗುತ್ತಾರೆ. ರೈತರ ಪರ ದನಿಯಾಗಿ ಕೆಲಸ ಮಾಡುತ್ತೇನೆ. ನಾನು ಯಾವುದೇ ಶಿಕ್ಷಣ ಸಂಸ್ಥೆ ಕಟ್ಟಿಲ್ಲ, ದೊಡ್ಡ ಕಟ್ಟಡ ಕಟ್ಟಿ ಹಣ ಸಂಪಾದಿಸುತ್ತಿಲ್ಲ. ಚೆನ್ನಾಂಬಿಕೆ ಸಂಸ್ಥೆ ಕಟ್ಟಿ ದುಡಿದು ಕೇತಗಾನಹಳ್ಳಿಯಲ್ಲಿ ಭೂಮಿ ಖರೀದಿ ಮಾಡಿದ್ದೇನೆ, ಭ್ರಷ್ಟಾಚಾರ ಮಾಡಿ ಹಣ ಸಂಪಾದಿಸಿಲ್ಲ. ಆ ದುರ್ಬುದ್ಧಿಯೂ ನನ್ನಲ್ಲಿಲ್ಲ. ಜನರ ಹಿತರಕ್ಷಣೆಗಾಗಿ ಲಾಟರಿ ನಿಷೇಧ ಮಾಡಿದ್ದೆ, ಸಾರಾಯಿ ನಿಷೇಧ ಮಾಡಿದ್ದೆ. ನಾನು ಆ ರೀತಿ ಪಾಪದ ಹಣ ಸಂಪಾದಿಸಲು ಎಂದಿಗೂ ಮುಂದಾಗಿಲ್ಲ ಎಂದು ಹೇಳಿದರು.

Lok Sabha Election 2024: ಯದುವೀರ್ ಗೆಲ್ಲಿಸುವಂತೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಮನವಿ

ಜನರ ಮೇಲೆ ಸಾಲದ ಹೊರೆ: ನುಡಿದಂತೆ ನಡೆದಿದ್ದೇವೆ ಎಂದು ಕಾಂಗ್ರೆಸ್‌ನವರು ಹೇಳುತ್ತಾರೆ. ಗ್ಯಾರಂಟಿಗಳ ಜಾರಿಗೆ ಮಾಡಿರುವ ಸಾಲದ ಹೊರೆಯನ್ನು ಯಾರ ತಲೆಗೆ ಕಟ್ಟುತ್ತೀರಾ?. ಐದು ಕೆಜಿ ಅಕ್ಕಿಯನ್ನು ಮೋದಿ ಸರ್ಕಾರ ಕೊಡುತ್ತಿದೆ. ಉಳಿದ ಐದು ಕೆಜಿ ಅಕ್ಕಿಗೆ ೧೭೦ ರು. ಕೊಡುತ್ತಿರುವುದಾಗಿ ಹೇಳುತ್ತಿದ್ದೀರಿ. ಅದು ಎಷ್ಟು ಜನರಿಗೆ ಸಿಗುತ್ತಿದೆಯೋ ಗೊತ್ತಿಲ್ಲ. ಬೆಳಿಗ್ಗೆ ಆರು ಗಂಟೆಯಿಂದ ಮದ್ಯದ ಅಂಗಡಿಗಳನ್ನು ತೆರೆಯಲಾಗುತ್ತಿದೆ. ಮದ್ಯದ ಬೆಲೆ ಹೆಚ್ಚು ಮಾಡಿ ಜನರಿಂದಲೇ ವಸೂಲಿ ಮಾಡುತ್ತಿದ್ದಾರೆ. ನನ್ನ ಮೇಲೆ ಭರವಸೆ ಇಡಿ. ಕೇಂದ್ರದಿಂದ ಒಳ್ಳೆಯ ಕಾರ್ಯಕ್ರಮಗಳನ್ನು ತರುತ್ತೇನೆ. ಈ ಬಾರಿ ಮೈತ್ರಿ ಅಭ್ಯರ್ಥಿಗಳನ್ನು ಬೆಂಬಲಿಸುವಂತೆ ಕೋರಿದರು.

ದೇವೇಗೌಡರು ಪ್ರತಾಪ್ ಸಿಂಹ ಟಿಕೆಟ್ ತಪ್ಪಿಸಿದ್ರು ಎಂಬುದು ಜಗತ್ತಿನ ಎಂಟನೇ ಅದ್ಛುತ: ಎಚ್‌ಡಿಕೆ

ಕಾಂಗ್ರೆಸ್ ಅಭ್ಯರ್ಥಿ ಬಗ್ಗೆ ನಾನು ಮಾತಾಡುವುದಿಲ್ಲ. ಅವರು ಯಾವ ರೀತಿ ಹಣ ಖರ್ಚು ಮಾಡಲು ಮುಂದಾಗಿದ್ದಾರೋ ಅದರ ಬಗ್ಗೆಯೂ ಚರ್ಚೆ ಮಾಡುವುದಿಲ್ಲ. ಮುಸಲ್ಮಾನರು, ದಲಿತರು ಒಳ್ಳೆಯ ತೀರ್ಮಾನ ಮಾಡಿ. ನಿಮ್ಮ ಋಣವನ್ನು ಪ್ರಾಮಾಣಿಕವಾಗಿ ತೀರಿಸುತ್ತೇನೆ ಎಂದು ಭರವಸೆ ನೀಡಿದರು. ಸಮಾವೇಶದಲ್ಲಿ ಮಾಜಿ ಸಚಿವರಾದ ಸಿ.ಎಸ್. ಪುಟ್ಟರಾಜು, ಡಿ.ಸಿ. ತಮ್ಮಣ್ಣ, ಸಾ.ರಾ. ಮಹೇಶ್, ಕೆ.ಸಿ. ನಾರಾಯಣಗೌಡ, ಶಾಸಕ ಎಚ್.ಟಿ. ಮಂಜು, ಮಾಜಿ ಶಾಸಕರಾದ ರವೀಂದ್ರ ಶ್ರೀಕಂಠಯ್ಯ, ಕೆ. ಸುರೇಶ್‌ಗೌಡ, ಡಾ.ಕೆ. ಅನ್ನದಾನಿ, ಕೆ. ಟಿ. ಶ್ರೀಕಂಠೇಗೌಡ, ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಯದುವೀರ್, ಜೆಡಿಎಸ್ ಮುಖಂಡ ಬಿ.ಆರ್. ರಾಮಚಂದ್ರ, ಜೆಡಿಎಸ್ ಜಿಲ್ಲಾಧ್ಯಕ್ಷ ಡಿ. ರಮೇಶ್, ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಎಸ್. ಇಂದ್ರೇಶ್, ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಸಿ.ಪಿ. ಉಮೇಶ್, ರಾಜ್ಯ ಕಾರ್ಯಕಾರಿಣಿ ಸದಸ್ಯ ಡಾ. ಸಿದ್ದರಾಮಯ್ಯ ಸೇರಿ ಇತರರಿದ್ದರು.

click me!