ಅನಂತಾಲಿಂಗನ ಹಿಂದೆ ನಾನಾ ಲೆಕ್ಕಾಚಾರ: ನಂಗೆ ಮೋದಿಯಷ್ಟೇ ವಯಸ್ಸು ಎಂದು ಕರಡಿ ಸಂಗಣ್ಣ ಹೇಳಿದ ಮೇಲೆ ಆಗಿದ್ದೇನು?

Published : Jul 03, 2023, 11:11 AM IST
ಅನಂತಾಲಿಂಗನ ಹಿಂದೆ ನಾನಾ ಲೆಕ್ಕಾಚಾರ: ನಂಗೆ ಮೋದಿಯಷ್ಟೇ ವಯಸ್ಸು ಎಂದು ಕರಡಿ ಸಂಗಣ್ಣ ಹೇಳಿದ ಮೇಲೆ ಆಗಿದ್ದೇನು?

ಸಾರಾಂಶ

ಆಡಳಿತ ವ್ಯವಸ್ಥೆಯಲ್ಲಿರೋ ಡಿಸಿ, ಸಿಇಓ ಅಂದ್ರೆ ಅತ್ತೆ, ಮಾವ ಇದ್ಹಂಗೆ. ಅತ್ತೆ, ಮಾವ ಬದಲಾಗ್ತಾನೇ ಹೋಗ್ತಾರೆ, ನಾವು ಸೊಸೆಯಂದಿರು ಬಂದವರೊಂದಿಗೆ, ಅವರ ಸ್ಪೀಡ್‌, ಶೈಲಿ, ಧೋರಣೆಗಳೊಂದಿಗೆ ಅಡ್ಜಸ್ಟ್ ಆಗ್ತಿರಬೇಕು ಎಂದು ಡಿಸಿ ಮುಂದೆಯೇ ಹೇಳಿದರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಧಿಕಾರಿ.

ಕಾರವಾರದಲ್ಲಿ ಇತ್ತೀಚೆಗೆ ‘ದಿಶಾ’ ಸಭೆ ನಡೆಯಿತು. ಅಲ್ಲಿ ಒಂದು ವಿಚಿತ್ರ ಘಟಿಸಿತು. ಬಿಜೆಪಿಯ ಹಿಂದೂ ಫೈರ್‌ ಬ್ರಾಂಡ್‌ ಅನಂತಕುಮಾರ್‌ ಸಭೆಯಲ್ಲಿ ಇದ್ದರು. ಅಲ್ಲಿಗೆ ಕಾಂಗ್ರೆಸ್‌ ಶಾಸಕ ಸತೀಶ್‌ ಸೈಲ್‌ ಬಂದರು. ಅದೇನಾಯಿತೋ ಅನಂತಕುಮಾರ್‌ ಅವರು ಸೀದಾ ಸತೀಶ್‌ ಸೈಲ್‌ ಅವರನ್ನು ಅಪ್ಪಿಕೊಂಡುಬಿಟ್ಟರು.

ಹಿಂದು ಹುಲಿಯ ಈ ಅಪ್ಪುಗೆ ಕಂಡು ಅಕಟಕಟಾ ಎಂದು ಹಲ್ಲು ಕಡಿದವರು ಕಾರವಾರದಲ್ಲಿ ಇಟ್ಟಾಡುತ್ತಿದ್ದಾರಂತೆ. ಇಷ್ಟಕ್ಕೂ ಕಾಂಗ್ರೆಸ್‌ ಎಂದರೆ ಉರಿದುರಿದುಬೀಳುವ ಅನಂತಕುಮಾರ್‌ ಹೆಗಡೆ ಆ ಪಕ್ಷದ ಶಾಸಕನನ್ನು ಅಪ್ಪಿಕೊಂಡಿದ್ದರ ಹಿಂದೆ ಏನಿದೆ ಅಂತ ಜಿಲ್ಲಾದ್ಯಂತ ಚರ್ಚೆ. ನಿಮಗೆ ಗೊತ್ತು. ಅನಂತಕುಮಾರ್‌ ಇತ್ತೀಚೆಗೆ ರಾಜಕೀಯದಿಂದ ದೂರವಿದ್ದಾರೆ. ಇದಕ್ಕೆ ಕಾರಣ ರಾಜಕೀಯದ ಬಗ್ಗೆ ಜಿಗುಪ್ಸೆಯೋ, ಅಸಮಾಧಾನವೋ, ಅನಾರೋಗ್ಯವೋ ಒಂದೂ ಗೊತ್ತಾಗುತ್ತಿಲ್ಲ. ವಿಧಾನಸಭೆ ಚುನಾವಣೆಯಲ್ಲಿ ಪ್ರಚಾರ ಮಾಡಲಿಲ್ಲ. ಪ್ರಧಾನಿ ನರೇಂದ್ರ ಮೋದಿಯೇ ಅಂಕೋಲಾಕ್ಕೆ ಬಂದಾಗಲೂ ಅನಂತಕುಮಾರ್‌ ಗೈರಾಗಿದ್ದರು. ಪಕ್ಷದ ಯಾವ ಚಟುವಟಿಕೆಯಲ್ಲೂ ಅವರನ್ನು ಕಂಡವರಿಲ್ಲ.

ಇದನ್ನು ಓದಿ: ಪ್ರಧಾನಿ ವಯಸ್ಸಿನಷ್ಟೇ ನಾವೂ ಇದ್ದೇವೆ; ಮೋದಿಗೆ ಟಿಕೆಟ್ ಕೊಟ್ರೆ ನಮ್ಗೂ ಟಿಕೆಟ್‌ ಪರೋಕ್ಷ ಬೇಡಿಕೆ ಇಟ್ಟ ಕರಡಿ ಸಂಗಣ್ಣ!

ಇಂತಿಪ್ಪ ಅನಂತಕುಮಾರ ಸೈಲ್‌ಗೆ ಅಪ್ಪುಗೆಯ ಸಿಹಿ ನೀಡಿದ್ದಾದರೂ ಏಕೆ ಎಂಬುದಕ್ಕೆ ವಿವರಣೆ ಸಿಗುತ್ತಿಲ್ಲ. ಬಿಜೆಪಿ ಬಗ್ಗೆ ಬೇಸತ್ತು ಚುನಾವಣೆಯಿಂದ ಹಿಂದೆ ಸರಿದಿರುವ ಅನಂತಕುಮಾರ್‌ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳಿಗೆ ಬೆಂಬಲ ನೀಡಿದ್ದನ್ನು ಈ ಆಲಿಂಗನ ಸ್ಪಷ್ಟಪಡಿಸುತ್ತದೆ ಎಂದು ಕೆಲವರು ಹೇಳಿದರೆ, ಇನ್ನು ಅವರಿಗೆ ಚುನಾವಣಾ ರಾಜಕಾರಣ ಸಾಕಾಗಿದೆ. ಹೀಗಾಗಿ ಎಲ್ಲರೊಂದಿಗೆ ಚೆನ್ನಾಗಿರಬೇಕು ಎಂದು ಹೀಗೆ ಅಪ್ಪಿಕೊಳ್ಳುತ್ತಿದ್ದಾರೆ ಎಂದು ಅನೇಕರು ಹೇಳುತ್ತಾರೆ.

ಆದರೆ, ಅನಂತಕುಮಾರ ಹೆಗಡೆ ಮಾತ್ರ ತುಟಿಬಿಚ್ಚುತ್ತಿಲ್ಲ. ಈ ಅಂತೆಕಂತೆಗಳು ಹಬ್ಬಿದ್ದನ್ನು ಕೇಳಿಸಿಕೊಂಡು ಮತ್ಯಾರನ್ನು ತಬ್ಬಿಕೊಳ್ಳಲಿ ಎಂದು ಅರ್ಹರನ್ನು ಹುಡುಕಾಡುತ್ತಿದ್ದಾರೆ ಎಂಬುದು ಸತ್ಯಸ್ಯ ಸುಳ್ಳು!

ಇದನ್ನೂ ಓದಿ: ಕೊಪ್ಪಳದಲ್ಲಿ ಬಿಜೆಪಿ ಟಿಕೆಟ್‌ ಟೆನ್ಶನ್‌: ಟಿಕೆಟ್‌ಗಾಗಿ ಸಂಸದ ಕರಡಿ ಸಂಗಣ್ಣ ಕಸರತ್ತು

ಕರಡಿ ಕೋಪ ಎಲ್ಲಿಗೆ ಮೂಲ?
ಬಡವರ ಕೋಪ ದವಡೆಗೆ ಮೂಲ. ಇದು ಸರಿನೇ. ಆದರೆ ಕರಡಿ ಕೋಪ..?

ನಮ್ಮ ಕೊಪ್ಪಳ ಸಂಸದರಾದ ಕರಡಿ ಸಂಗಣ್ಣ ಅವರಿಗೆ ಕೋಪ ಬಂದುಬಿಟ್ಟಿದೆ. ಇದು ಯಾರ ದವಡೆಗೆ ಮೂಲ ಆಗುತ್ತದೆ ಎಂಬ ಬಗ್ಗೆ ಮಾತ್ರ ಈಗ ಪತ್ತೆದಾರಿಕೆ ನಡೆಯಬೇಕಿದೆ!
ಇಷ್ಟಕ್ಕೂ ಸಂಭಾವಿತ ರಾಜಕಾರಣಿ ಸಂಗಣ್ಣಂಗೆ ಕರಡಿಯಂತಹ ಕೋಪ ಏಕೆ ಬಂತು? ಏಕೆಂದರೆ, ಈ ಬಾರಿ ಎಂಪಿ ಚುನಾವಣೆಗೆ ಬಿಜೆಪಿಯಲ್ಲಿ 10-12 ಮಂದಿಗೆ ಟಿಕೆಟ್‌ ತಪ್ಪುತ್ತದೆ. ಅದರಲ್ಲಿ ಕೊಪ್ಪಳದ ಕರಡಿ ಸಂಗಣ್ಣ ಹೆಸರೂ ಇದೆ ಅಂತ ರೂಮರು ತೇಲಿಬಂದಿರುವುದು.

ಇದನ್ನೂ ಓದಿ: ಸಂಸದ ಸಂಗಣ್ಣರಿಗೆ ಕೇಂದ್ರ ಮಂತ್ರಿಗಿರಿಯೊ? ಕೊಪ್ಪಳ ಕ್ಷೇತ್ರಕ್ಕೆ ಟಿಕೆಟ್ಟೋ?

ಎಪ್ಪತ್ತು ದಾಟಿದರೂ ಇಪ್ಪತ್ತರಂತೆ ಅಡ್ಡಾಡುವ ಸಾಮರ್ಥ್ಯ ನಮ್ಮ ಸಾಹೇಬರದ್ದು ಎಂದು ತಮ್ಮ ಬೆಂಬಲಿಗರಿಂದ ಬಹುಪರಾಕ್‌ ಹಾಕಿಸಿಕೊಳ್ಳುವ ಸಂಗಣ್ಣಂಗೆ ವಯಸ್ಸಾಯ್ತು ಅಂತ ಟಿಕೆಟ್‌ ಕೊಡಲ್ಲ ಅಂದ್ರೆ ಕೋಪ ಬರಲ್ವ?

ಬರಲಿಕ್ಕೇಬೇಕು. ಸೋ, ಬಂದೇಬಿಟ್ಟಿದೆ. ಅದು ಬಂದ ಮೇಲೆ ಕರಡಿ ಸಂಗಣ್ಣ ಅವರನ್ನು ಸುಮ್ಮನಿರಲು ಬಿಡುತ್ತದೆಯೇ? ಬಿಡಲ್ಲ. ಅದಾಗಿ, ಸಾಹೇಬರು ಒಂದು ಡೈಲಾಗ್‌ ಬಿಟ್ಟಿದ್ದಾರೆ. ಆ ಡೈಲಾಗ್‌ - ‘ನನಗ್ಯಾವ ವಯಸ್ಸಾಗಿದೆ. ಪ್ರಧಾನಿ ಮೋದಿ ಅವರಷ್ಟೇ ನನ್ನ ವಯಸ್ಸು. ಆರೋಗ್ಯವಾಗಿಯೂ ಇದ್ದೇನೆ.’
ಇದರ ತಾತ್ಪರ್ಯ ಏನು ಎಂದು ಕವಡೆ ಹಾಕಿಸಿದ ಕೊಪ್ಪಳ ಜಿಲ್ಲಾ ಪರಿವಾರದ ನಾಯಕರು - ‘ಮೋದಿಗೆ ಟಿಕೆಟ್‌ ಕೊಟ್ಟರೆ, ನನಗೂ ಕೊಡಿ. ಮೋದಿಗೆ ಟಿಕೆಟ್‌ ಕೈಬಿಟ್ಟರೆ ನನ್ನನ್ನೂ ಪರಿಗಣಿಸಬೇಡಿ’ ಅಂತ ಎಂದು ಪತ್ತೆ ಮಾಡಿಬಿಟ್ಟಿದ್ದಾರೆ.

ಇದು ಪತ್ತೆಯಾಗುತ್ತಿದ್ದಂತೆಯೇ ಕರಡಿ ಸಂಗಣ್ಣ ಇನ್ನೇನಾದರೂ ಮಾತನಾಡಿ ಬುಡಕ್ಕೆ ತಂದಾರು ಎಂದು ಎಚ್ಚೆತ್ತ ಬಿಜೆಪಿ ನಾಯಕರಾದ ಬಿ.ಎಸ್‌.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಖುದ್ದು ಮಾತನಾಡಿ ಸಂಸದ ಕರಡಿ ಸಂಗಣ್ಣ ಅವರನ್ನು ಸಮಾಧಾನಪಡಿಸಿದ್ದಾರಂತೆ.

ಆದರೆ, ಸಂಗಣ್ಣನ ಸಿಟ್ಟು ಇನ್ನೂ ಹೊಗೆಯಾಡುತ್ತಿದೆಯಂತೆ. ಯಾವಾಗ ಬೇಕಾದರೂ ಬಗ್‌ ಎನ್ನಬಹುದು ಅಂತಾರಪ್ಪ ಅವರ ಅಭಿಮಾನಿಗಳು.

ಡಿಸಿ-ಸಿಇಓ ಅಂತಂದ್ರೆ ಅತ್ತೆ-ಮಾವ
ಜಿಲ್ಲಾಡಳಿತದ ಪ್ರಮುಖ ಹುದ್ದೆಗಳಾದ ಜಿಲ್ಲಾಧಿಕಾರಿ, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳನ್ನು ಕುಟುಂಬ ವ್ಯವಸ್ಥೆಯ ಅತ್ತೆ, ಮಾವನಿಗೆ ಹೋಲಿಕೆ ಮಾಡಬಹುದೇ?
ಕಲಬುರಗಿಯಿಂದ ವರ್ಗಗೊಂಡ ಡಿ.ಸಿ. ಯಶ್ವಂತ ಗುರುಕರ್‌ ಬೀಳ್ಕೊಡುಗೆ ಸಮಾರಂಭದಲ್ಲಿ ಹೀಗೊಂದು ಜಿಜ್ಞಾಸೆ ಹುಟ್ಟಿಕೊಂಡಿತು.

ನಿರ್ಗಮಿತ ಡಿ.ಸಿ. ಗುರುಕರ್‌ ಅವರ ಗುಣಾವಗುಣಗಳ ಬಗ್ಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಜಿಲ್ಲಾ ಉಪ ನಿರ್ದೇಶಕ ನವೀನ್‌ ತಮ್ಮ ಅನಿಸಿಕೆ ಹೇಳುತ್ತಾ, ಆಡಳಿತ ವ್ಯವಸ್ಥೆಯಲ್ಲಿರೋ ಡಿಸಿ, ಸಿಇಓ ಅಂದ್ರೆ ಅತ್ತೆ, ಮಾವ ಇದ್ಹಂಗೆ. ಅತ್ತೆ, ಮಾವ ಬದಲಾಗ್ತಾನೇ ಹೋಗ್ತಾರೆ, ನಾವು ಸೊಸೆಯಂದಿರು ಬಂದವರೊಂದಿಗೆ, ಅವರ ಸ್ಪೀಡ್‌, ಶೈಲಿ, ಧೋರಣೆಗಳೊಂದಿಗೆ ಅಡ್ಜಸ್ಟ್‌ ಆಗ್ತಿರಬೇಕು ಎಂದಾಗ ಸಮಾರಂಭದಲ್ಲಿ ನಗೆ ಉಕ್ಕಿತ್ತು.

ಸೊಸೆಯಂದಿರ ಪಾಡು ನೋಡ್ತೀರಲ್ಲ, ಕೊಟ್ಟ ಮನೆಗೆ ಹೋಗಬೇಕು, ಅಲ್ಲಿ ಗಂಡನೊಂದಿಗೆ ಹೊಂದಾಣಿಕೆಯಾಗೋದರ ಜೊತೆಗೇ ಟಾಪ್‌ ಪೊಸಿಷನ್ನಿನಲ್ಲಿರೋ ಅತ್ತೆ, ಮಾವನ ಜೊತೆಗೂ ಅಡ್ಜಸ್ಟ್‌ ಆಗಬೇಕು. ಇದಕ್ಕಾಗಿ ಸೊಸೆಯಂದಿರು ಪಡುವ ಪಾಡು ದೇವರೇ ಬಲ್ಲ. ಕುಟುಂಬ ವ್ಯವಸ್ಥೆಯಲ್ಲಿ ಸೊಸೆಯಂದಿರಂತೆಯೇ ಜಿಲ್ಲಾಡಳಿತದಲ್ಲಿ ಡಿಸಿ, ಸಿಇಓ ಅನ್ನೋ ಅತ್ತೆ, ಮಾವಂದಿರ ಜೊತೆಗೆ ಹೊಂದಾಣಿಕೆಯಾಗಲು, ಅವರ ಸ್ಪೀಡ್‌ಗೆ ತಕ್ಕಂತೆ ಕಮ್ಮಿ, ಹೆಚ್ಚು ಕೆಲಸ ಮಾಡಲು ಜಿಲ್ಲಾ ಮಟ್ಟದ ಅಧಿಕಾರಿಗಳು ಪಡಬಾರದ ಪಾಡು ಪಡುತ್ತಿರುತ್ತೇವೆ ಎಂದು ವಿವರಿಸಿದರು.
ಆಗ ಅಲ್ಲಿದ್ದ ಅಧಿಕಾರಿಗಳೆಲ್ಲರೂ ನಮ್ಮೆಲ್ಲರ ಮನ್‌ ಕೀ ಬಾತ್‌ ಹೇಳಿದ್ದೀರಾ ಬಿಡಿ ಎಂಬಂತೆ ಮೇಜು ಗುದ್ದಿದರು.

  • ವಸಂತಕುಮಾರ ಕತಗಾಲ
  • ಸೋಮರಡ್ಡಿ ಅಳವಂಡಿ
  • ಶೇಷಮೂರ್ತಿ ಅವಧಾನಿ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಿದ್ದು ಸೇನೆಯಲ್ಲಿ ಬಿರುಕು: ಅಹಿಂದ ಅರಸೊತ್ತಿಗೆ, ಸಾಹುಕಾರ್​ಗೆ ಸಿಗುತ್ತಾ ಪ್ರಚಂಡ ಪವರ್?
ಹಿಂದೂಗಳು ಒಂದಾಗದಿದ್ರೆ ದೇಶ, ಸಂವಿಧಾನ ಉಳಿಯಲ್ಲ: ಶಾಸಕ ಬಸನಗೌಡ ಪಾಟೀಲ ಯತ್ನಾಳ