
ನವದೆಹಲಿ: ಬಿಜೆಪಿಯಲ್ಲಿ ಮೂಲೆ ಗುಂಪಾದರು ಎಂದು ಹೇಳಲಾದ ಮಾಜಿ ಮುಖ್ಯಮಂತ್ರಿಗಳು, ಮಾಜಿ ಕೇಂದ್ರ ಸಚಿವರನ್ನು ಮುಂಬರುವ ಲೋಕಸಭಾ ಚುನಾವಣೆಗಾಗಿ (Lok Sabha Elections 2022) ರಾಜ್ಯಗಳ ಉಸ್ತುವಾರಿಗಳನ್ನಾಗಿ ನೇಮಿಸುವ ಮೂಲಕ ಬಿಜೆಪಿ ಹೊಸ ಜವಾಬ್ದಾರಿ ನೀಡಿದೆ. ಈ ಮೂಲಕ ಪಕ್ಷದಲ್ಲಿ ನೀವು ಮೂಲೆ ಗುಂಪಾಗಿಲ್ಲ ಎಂಬ ಸಂದೇಶವನ್ನು ಹೈಕಮಾಂಡ್ ನೀಡಿದೆ. ಬಿಪ್ಲಬ್ ದೇವ್, ವಿಜಯ್ ರೂಪಾನಿ ಮುಖ್ಯಮಂತ್ರಿ ಸ್ಥಾನ ಕಳೆದುಕೊಂಡಿದ್ದರು. ಪ್ರಕಾಶ್ ಜಾವ್ಡೇಕರ್ ಕೇಂದ್ರ ಸಚಿವ ಸ್ಥಾನ ಕಳೆದುಕೊಂಡಿದ್ದರು. ಇದೀಗ ಅವರಿಗೆ ರಾಜ್ಯಗಳ ಉಸ್ತುವಾಗಿ ನೀಡುವ ಮೂಲಕ ಪಕ್ಷ ನಿಮ್ಮ ಸೇವೆಯನ್ನು ಗೌರವಿಸುತ್ತದೆ ಎಂಬ ಸಂದೇಶ ನೀಡಿದೆ. ಹೈಕಮಾಂಡ್ ಈ ಹೊಸ ನಿರ್ಧಾರದಿಂದ ಪಕ್ಷ ಸಂಘಟನೆಗೆ ಹೆಚ್ಚಿನ ಬಲ ಸಿಗಲಿದೆ ಎಂದು ರಾಜಕೀಯ ನಿಪುಣರು ಅಭಿಪ್ರಾಯ ಪಡುತ್ತಿದ್ದಾರೆ.
ಮುಂಬರುವ ಲೋಕಸಭಾ ಚುನಾವಣೆಗೆ ಬಿಜೆಪಿ ಈಗಾಗಲೇ ಸಿದ್ಧತೆ ನಡೆಸಿದ್ದು, ಅಚ್ಚರಿಯ ಆದೇಶವನ್ನು ಶುಕ್ರವಾರ ಹೊರಡಿಸಿದೆ. ಹಿರಿಯ ಬಿಜೆಪಿ ನಾಯಕರಾದ ವಿಜಯ್ ರೂಪಾನಿ, ಬಿಪ್ಲಬ್ ದೇವ್, ಪ್ರಕಾಶ್ ಜಾವ್ಡೇಕರ್, ಮಹೇಶ್ ಶರ್ಮಾ ಸೇರಿದಂತೆ ಹಲವರನ್ನು ರಾಜ್ಯ ಉಸ್ತುವಾರಿಗಳನ್ನಾಗಿ ನೇಮಿಸಲಾಗಿದೆ. ವಿನೋದ್ ತಾವ್ಡೆ ಅವರನ್ನು ಬಿಹಾರ ರಾಜ್ಯದ ಚುನಾವಣಾ ಉಸ್ತುವಾರಿಯಾಗಿ ನೇಮಿಸಲಾಗಿದೆ. ಓಮ್ ಮಾಥೂರ್ ಅವರನ್ನು ಛತ್ತಿಸ್‌ಗಢಕ್ಕೆ ಮತ್ತು ಮಂಗಲ್ ಪಾಂಡೆ ಅವರನ್ನು ಪಶ್ಚಿಮ ಬಂಗಾಳಕ್ಕೆ ನೇಮಿಸಲಾಗಿದೆ. ಬಿಪ್ಲಬ್ ದೇವ್ ಅವರನ್ನು ಹರಿಯಾಣಕ್ಕೆ, ಲಕ್ಷ್ಮಿಕಾಂತ್ ಬಾಜ್‌ಪಾಯ್ ಅವರನ್ನು ಜಾರ್ಖಂಡ್, ಪ್ರಕಾಶ್ ಜಾವ್ಡೆಕರ್ ಅವರನ್ನು ಕೇರಳ, ಡಾ. ಮಹೇಶ್ ಶರ್ಮಾ ಅವರನ್ನು ತ್ರಿಪುರಾ ರಾಜ್ಯಕ್ಕೆ ನೇಮಿಸಲಾಗಿದೆ.
ಇತ್ತೀಚೆಗಷ್ಟೇ ಅಚ್ಚರಿಯ ಬೆಳವಣಿಗೆಯಲ್ಲಿ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರನ್ನು ಕೇಂದ್ರ ಸಂಸದೀಯ ಮಂಡಳಿ ಮತ್ತು ಕೇಂದ್ರ ಚುನಾವಣಾ ಸಮಿತಿಗೆ ನೇಮಿಸಿತ್ತು. ಇದು ಸಾಕಷ್ಟು ರಾಜಕೀಯ ಚರ್ಚೆಗೂ ಕಾರಣವಾಗಿತ್ತು. ಬಿಎಸ್‌ವೈ ಅವರ ಶ್ರಮವಿಲ್ಲದೇ ಕರ್ನಾಟಕದಲ್ಲಿ ಬಿಜೆಪಿ ಮತ್ತೆ ಅಧಿಕಾರ ಹಿಡಿಯುವುದು ಕಷ್ಟ ಎಂಬ ಅರಿವು ಹಕಮಾಂಡ್‌ಗೆ ಆಗಿದೆ. ಅದೇ ಕಾರಣಕ್ಕಾಗಿ ಮೂಲೆ ಗುಂಪಾಗಿದ್ದ ಯಡಿಯೂರಪ್ಪ ಅವರಿಗೆ ಮತ್ತೆ ಹೈಕಮಾಂಡ್ ಮಣೆಹಾಕಿದೆ ಎಂಬ ಮಾತುಗಳೂ ಕೇಳಿ ಬಂದಿದ್ದವು.
ಇದನ್ನೂ ಓದಿ: ಅಧಿಕಾರ ಮುಖ್ಯವೂ ಅಲ್ಲ, ಶಾಶ್ವತವೂ ಅಲ್ಲ: ಮಾಜಿ ಸಿಎಂ ಯಡಿಯೂರಪ್ಪ
ಬಿಜೆಪಿಯ ಮಾಸ್ ಲೀಡರ್ ಯಡಿಯೂರಪ್ಪ:
ಬಿಜೆಪಿಯಲ್ಲಿ ಅತಿದೊಡ್ಡ ನಾಯಕ ಬಿಎಸ್ ಯಡಿಯೂರಪ್ಪ ಎಂಬುದು ರಾಜ್ಯದ ಪ್ರತಿಯೊಬ್ಬರಿಗೂ ತಿಳಿದಿರುವ ವಿಚಾರ. ಅವರ ಇಚ್ಛೆಗೆ ವಿರುದ್ಧವಾಗಿ ಪೂರ್ಣಾವಧಿ ಅಧಿಕಾರ ನಿರ್ವಹಿಸಲು ಬಿಡದೇ ಮುಖ್ಯಮಂತ್ರಿ ಸ್ಥಾನದಿಂದ ಹೈಕಮಾಂಡ್ ಕೆಳಗಿಳಿಸಲಿದೆ ಎನ್ನಲಾಗಿತ್ತು. ಆ ಸಂದರ್ಭದಲ್ಲಿ ಯಡಿಯೂರಪ್ಪ ಅವರೂ ಕಣ್ಣೀರು ಹಾಕಿದ್ದರು. ಇವೆಲ್ಲವೂ ಬಿಜೆಪಿಯ ಲಿಂಗಾಯತ ವೋಟ್ ಬ್ಯಾಂಕ್ ಮೇಲೆ ಪರಿಣಾಮ ಬೀರುವುದು ಶತಸಿದ್ಧ ಎನ್ನಲಾಗಿತ್ತು. ಇತ್ತೀಚೆಗೆ ತಮ್ಮ ಸ್ವ ಕ್ಷೇತ್ರ ಶೀಕಾರಿಪುರದಿಂದ ಮಗ ಬಿವೈ ವಿಜಯೇಂದ್ರ ಚುನಾವಣೆ ಎದುರಿಸುತ್ತಾರೆ ಎಂದು ಯಡಿಯೂರಪ್ಪ ಹೇಳಿದ್ದರು. ಆದರೆ ಅದಾದ ನಂತರ ಬೆಳವಣಿಗೆಗಳಿಂದ ಅವರ ಹೇಳಿಕೆಯನ್ನು ವಾಪಸ್ ಪಡೆಯಬೇಕಾಗಿ ಬಂತು.
ಇದನ್ನೂ ಓದಿ: Karnataka Politics ಯಡಿಯೂರಪ್ಪ ಬೆನ್ನಲ್ಲೇ ಕಾಂಗ್ರೆಸ್ ನಾಯಕನಿಂದ ಪುತ್ರನಿಗೆ ಕ್ಷೇತ್ರ ತ್ಯಾಗ
ಈ ಎಲ್ಲಾ ಬೆಳವಣಿಗೆಗಳ ಲಾಭ ಪಡೆದ ಕಾಂಗ್ರೆಸ್ ನಾಯಕರು, ಬಿಜೆಪಿಯಲ್ಲಿ ಯಡಿಯೂರಪ್ಪ ಅವರನ್ನು ಮೂಲೆಗುಂಪು ಮಾಡಲಾಗುತ್ತಿದೆ. ಯಡಿಯೂರಪ್ಪ ಅವರನ್ನು ಬಳಸಿಕೊಂಡು ಅಧಿಕಾರ ಹಿಡಿದ ಬಿಜೆಪಿ ಅವರನ್ನು ಕೇರ್ ಮಾಡುತ್ತಿಲ್ಲ ಎಂಬೆಲ್ಲಾ ಹೇಳಿಕೆಗಳನ್ನು ನೀಡುತ್ತಾ ಬಂದಿದ್ದರು. ಯಡಿಯೂರಪ್ಪ ಅವರಿಗೆ ಪಕ್ಷದಲ್ಲಿ ಬೆಲೆಯಿಲ್ಲ, ಅವರು ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬ ಮಾತುಗಳೂ ಕೇಳಿ ಬಂದಿದ್ದವು. ಈ ಎಲ್ಲಾ ಆರೋಪಿಗಳಿಗೆ ಬಿಜೆಪಿ ಉತ್ತರ ನೀಡುವ ಸಲುವಾಗಿಯೇ ಕೇಂದ್ರ ಸಂಸದೀಯ ಮಂಡಳಿ ಮತ್ತು ಕೇಂದ್ರೀಯ ಚುನಾವಣಾ ಸಮಿತಿಯಲ್ಲಿ ಅವರಿಗೆ ಸ್ಥಾನ ನೀಡಿರುವ ಸಾಧ್ಯತೆಯಿದೆ. ಜತೆಗೆ ಲಿಂಗಾಯತ ಸಮುದಾಯಕ್ಕೂ ಯಡಿಯೂರಪ್ಪ ಅವರನ್ನು ಪಕ್ಷ ಗೌರವಯುತವಾಗಿ ನಡೆಸಿಕೊಳ್ಳುತ್ತಿದೆ ಎಂಬ ಮಾತು ತಲುಪಿಸುವ ಯತ್ನ ಇದಾಗಿದೆ ಎನ್ನಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.