ಕಾಂಗ್ರೆಸ್‌ 42 ಅಭ್ಯರ್ಥಿಗಳ 2ನೇ ಪಟ್ಟಿ ರಿಲೀಸ್‌: ಬಂಡಾಯ ಶುರು..!

Published : Apr 07, 2023, 03:00 AM IST
ಕಾಂಗ್ರೆಸ್‌ 42 ಅಭ್ಯರ್ಥಿಗಳ 2ನೇ ಪಟ್ಟಿ ರಿಲೀಸ್‌: ಬಂಡಾಯ ಶುರು..!

ಸಾರಾಂಶ

ಸಿದ್ದು ಕಣ್ಣಿಟ್ಟಿರುವ ಕೋಲಾರ ಕ್ಷೇತ್ರ ಇನ್ನೂ ಸಸ್ಪೆನ್ಸ್‌, ಬಾದಾಮಿಗೆ ಚಿಮ್ಮನಕಟ್ಟಿ ಪುತ್ರ, ದತ್ತ, ರಘು ಆಚಾರ್‌, ಮಾಲಕರಡ್ಡಿ ಪುತ್ರಿಗೆ ಟಿಕೆಟಿಲ್ಲ, ಕೆಲವೆಡೆ ಭಿನ್ನಮತ ಭುಗಿಲು.   

ಬೆಂಗಳೂರು(ಏ.07):  ವಿಧಾನಸಭೆ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆಗೆ ತೀವ್ರ ಕಸರತ್ತು ನಡೆಸುತ್ತಿರುವ ಕಾಂಗ್ರೆಸ್‌ ಗುರುವಾರ ಒಂದು ಕ್ಷೇತ್ರದಲ್ಲಿ ರೈತ ಸಂಘಕ್ಕೆ ಬೆಂಬಲದ ಘೋಷಣೆಯೊಂದಿಗೆ 42 ಕ್ಷೇತ್ರಗಳಿಗೆ ಹುರಿಯಾಳುಗಳ ಎರಡನೇ ಪಟ್ಟಿಯನ್ನು ಪ್ರಕಟಿಸಿದೆ.

ಆದರೆ, ತೀವ್ರ ಪೈಪೋಟಿಯಿದ್ದ ಕಡೆಯ 100 ಕ್ಷೇತ್ರಗಳ ಪೈಕಿ ಸ್ವಲ್ಪ ಮಟ್ಟಿಗೆ ಸುರಕ್ಷಿತ ಎಂಬ ಎಣಿಕೆಯ ಮೇಲೆ ಈ 42 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದ್ದರೂ, ಪ್ರಬಲ ಆಕಾಂಕ್ಷಿಗಳಿಗೆ ಟಿಕೆಟ್‌ ಕೈ ತಪ್ಪಿರುವ ಕ್ಷೇತ್ರಗಳಾದ ಚಿತ್ರದುರ್ಗ (ರಘು ಆಚಾರ್‌), ಕಲಘಟಗಿ (ನಾಗರಾಜ ಛಬ್ಬಿ), ಮೊಳಕಾಲ್ಮುರು (ಯೋಗೇಶ್‌ ಬಾಬು), ನರಗುಂದ (ಸಂಗಮೇಶ್‌ ಕೊಳ್ಳಿ), ಬೇಲೂರು (ರಾಜಶೇಖರ್‌) ಕ್ಷೇತ್ರದಲ್ಲಿ ಬಂಡಾಯದ ಸಾಧ್ಯತೆ ಎದುರಾಗಿದೆ. ಮಂಡ್ಯ, ಕಲಘಟಗಿ, ಕಿತ್ತೂರು ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಟಿಕೆಟ್‌ ಆಕಾಂಕ್ಷಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಗೋಕಾಕ್‌ನಲ್ಲಿ ಅಶೋಕ್‌ ಪೂಜಾರಿ ಬೆಂಬಲಿಗರು ಪ್ರತಿಭಟನೆ ನಡೆಸಿದ್ದಾರೆ. ಚಿತ್ರದುರ್ಗ ಟಿಕೆಟ್‌ ತಪ್ಪಿದ್ದಕ್ಕೆ ರಘು ಆಚಾರ್‌ ಬಹಿರಂಗವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್‌ ಜಾತಿ ಲೆಕ್ಕ : 166 ಕ್ಷೇತ್ರಗಳಲ್ಲಿ ಲಿಂಗಾಯತರು ರಾಕ್‌- ಕುರುಬ ಸಮುದಾಯಕ್ಕೆ ಕೊಕ್‌

ನಿರೀಕ್ಷೆಯಂತೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಅಪೇಕ್ಷೆಯ ಕೋಲಾರ ಈ ಪಟ್ಟಿಯಲ್ಲಿ ಇಲ್ಲ. ಆದರೆ, ಕಳೆದ ಬಾರಿ ಸ್ಪರ್ಧಿಸಿದ್ದ ಬಾದಾಮಿ ಕ್ಷೇತ್ರಕ್ಕೆ ಅಭ್ಯರ್ಥಿಯನ್ನು ಘೋಷಿಸಲಾಗಿದೆ. ಉಳಿದಂತೆ ಹಿರಿಯ ನಾಯಕ ಎಚ್‌. ಆಂಜನೇಯ ಟಿಕೆಟ್‌ ಗಿಟ್ಟಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮೇಲುಕೋಟೆ ಕ್ಷೇತ್ರಕ್ಕೆ ರೈತ ಸಂಘದ ಅಭ್ಯರ್ಥಿ ದರ್ಶನ್‌ ಪುಟ್ಟಣ್ಣಯ್ಯ ಅವರಿಗೆ ಕಾಂಗ್ರೆಸ್‌ ಬೆಂಬಲ ಘೋಷಿಸಿದೆ. ತನ್ಮೂಲಕ ಕಾಂಗ್ರೆಸ್‌ ತನ್ನ ಮೊದಲ ಎರಡು ಪಟ್ಟಿಗಳಲ್ಲಿ ಒಟ್ಟು 166 ಸ್ಥಾನಗಳಿಗೆ ಹುರಿಯಾಳುಗಳನ್ನು ಘೋಷಿಸಿದಂತೆ ಆಗಿದ್ದು, ಇನ್ನೂ 58 ಕ್ಷೇತ್ರಗಳಲ್ಲಿ ಅಭ್ಯರ್ಥಿ ಘೋಷಣೆ ಬಾಕಿಯುಳಿದಿದೆ.

5 ಹಾಲಿ ಶಾಸಕರಿಗೆ ಟಿಕೆಟ್‌ ಸಸ್ಪೆನ್ಸ್‌:

ಇನ್ನು ಮೊದಲ ಪಟ್ಟಿಯಲ್ಲಿ ಆರು ಮಂದಿ ಹಾಲಿ ಶಾಸಕರನ್ನು ಹೊರತುಪಡಿಸಿ ಉಳಿದ ಎಲ್ಲರಿಗೂ ಟಿಕೆಟ್‌ ಘೋಷಿಸಲಾಗಿತ್ತು. ಈಗ ಎರಡನೇ ಪಟ್ಟಿಯಲ್ಲಿ ಎಂ.ವೈ. ಪಾಟೀಲ್‌ (ಅಫಜಲ್‌ಪುರ) ಮಾತ್ರ ಅವಕಾಶ ನೀಡಲಾಗಿದ್ದು, ಬಾಕಿ ಉಳಿದ ಐದು ಕ್ಷೇತ್ರಗಳಾದ ಹರಿಹರ (ರಾಮಪ್ಪ), ಲಿಂಗಸಗೂರು (ಡಿ.ಎಸ್‌. ಹೂಲಗೇರಿ), ಕುಂದಗೋಳ (ಕುಸುಮಾ ಶಿವಳ್ಳಿ), ಶಿಡ್ಲಘಟ್ಟ(ವಿ. ಮುನಿಯಪ್ಪ) ಮತ್ತು ಪುಲಕೇಶಿನಗರದ (ಅಖಂಡ ಶ್ರೀನಿವಾಸ) ಸಸ್ಪೆನ್ಸ್‌ ಮುಂದುವರೆಸಲಾಗಿದೆ.

ವೈಎಸ್‌ವಿ ದತ್ತಗೆ ಟಿಕೆಟಿಲ್ಲ:

ವಲಸಿಗರ ಪೈಕಿ ಜೆಡಿಎಸ್‌ನಿಂದ ಪಕ್ಷ ಸೇರಿದ್ದ ಶಾಸಕ ಎಂ.ಆರ್‌. ಶ್ರೀನಿವಾಸ್‌ ಅವರಿಗೆ ಗುಬ್ಬಿಯಿಂದ, ಬಿಜೆಪಿಯಿಂದ ಆಗಮಿಸಿದ್ದ ಎನ್‌.ವೈ. ಗೋಪಾಲಕೃಷ್ಣ ಅವರಿಗೆ ಮೊಳಕಾಲ್ಮುರಿನಿಂದ ಹಾಗೂ ಬಾಬುರಾವ್‌ ಚಿಂಚನಸೂರು ಅವರಿಗೆ ಗುರುಮಿಠಕಲ್‌ನಿಂದ ಟಿಕೆಟ್‌ ಘೋಷಿಸಲಾಗಿದೆ. ಕುತೂಹಲಕಾರಿ ಸಂಗತಿಯೆಂದರೆ, ಜೆಡಿಎಸ್‌ನಿಂದ ಕಾಂಗ್ರೆಸ್‌ ಸೇರಿ ಕಡೂರಿನಿಂದ ಟಿಕೆಟ್‌ ಬಯಸಿದ್ದ ವೈ.ಎಸ್‌.ವಿ.ದತ್ತ ಅವರಿಗೆ ಕೊಕ್‌ ನೀಡಲಾಗಿದ್ದು, ಆ ಕ್ಷೇತ್ರಕ್ಕೆ ಕೆ.ಎಸ್‌.ಆನಂದ್‌ ಅವರಿಗೆ ಟಿಕೆಟ್‌ ಘೋಷಿಸಲಾಗಿದೆ.

ಅದೇ ರೀತಿ ಬಿಜೆಪಿಯಿಂದ ಕಾಂಗ್ರೆಸ್‌ ಸೇರಿದ್ದ ಮಾಜಿ ಸಚಿವ ಎ.ಬಿ.ಮಾಲಕರಡ್ಡಿ ಅವರ ಪುತ್ರಿ ಅನೂರಾಧ ಅವರಿಗೆ ಯಾದಗಿರಿಯಿಂದ ಟಿಕೆಟ್‌ ನಿರಾಕರಿಸಲಾಗಿದ್ದು, ಆ ಕ್ಷೇತ್ರಕ್ಕೆ ಮಲ್ಲಿಕಾರ್ಜುನ ಖರ್ಗೆ ಅವರ ಆಪ್ತ ಚೆನ್ನಾರಡ್ಡಿ ಪಾಟೀಲ್‌ ತುನ್ನೂರು ಅವರಿಗೆ ಟಿಕೆಟ್‌ ನೀಡಲಾಗಿದೆ. ಬೆಂಗಳೂರಿನ ಪದ್ಮನಾಭನಗರ ಕ್ಷೇತ್ರದಲ್ಲಿ ಮಾಜಿ ಸಚಿವ ಪಿ.ಜಿ.ಆರ್‌. ಸಿಂಧ್ಯ ಅವರನ್ನು ಕಣಕ್ಕೆ ಇಳಿಸಲು ಉದ್ದೇಶಿಸಲಾಗಿದೆ ಎನ್ನಲಾಗಿತ್ತು. ಆದರೆ, ಅಂತಿಮವಾಗಿ ರಘುನಾಥ ನಾಯ್ದು ಅವರಿಗೆ ಟಿಕೆಟ್‌ ನೀಡಲಾಗಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಸ್ವಕ್ಷೇತ್ರ ಶಿಗ್ಗಾಂವಿಯಲ್ಲಿ ಕಟ್ಟಿಹಾಕಲು ಪ್ರಬಲ ಹುರಿಯಾಳು ವಿನಯ ಕುಲಕರ್ಣಿ ಅವರನ್ನು ಕಣಕ್ಕೆ ಇಳಿಸಲಾಗುವುದು ಎನ್ನಲಾಗಿತ್ತು. ಆದರೆ, ವಿನಯ ಕುಲಕರ್ಣಿ ತಮ್ಮ ಬಯಕೆಯ ಕ್ಷೇತ್ರವಾದ ಧಾರವಾಡದಿಂದಲೇ ಟಿಕೆಟ್‌ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಧರಂ ಇಬ್ಬರೂ ಪುತ್ರರಿಗೂ ಟಿಕೆಟ್‌:

ಕುಟುಂಬ ರಾಜಕಾರಣ ಎರಡನೇ ಪಟ್ಟಿಯಲ್ಲೂ ಮುಂದುವರೆದಿದ್ದು, ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್‌ ಅವರ ಇಬ್ಬರು ಪುತ್ರರಿಗೂ ಕಾಂಗ್ರೆಸ್‌ ಟಿಕೆಟ್‌ ನೀಡಿದಂತಾಗಿದೆ. ಮೊದಲ ಪಟ್ಟಿಯಲ್ಲಿ ಧರ್ಮಸಿಂಗ್‌ ಅವರ ಹಿರಿಯ ಪುತ್ರ ಅಜಯಸಿಂಗ್‌ ಅವರಿಗೆ ಜೇವರ್ಗಿಯ ಟಿಕೆಟ್‌ ನೀಡಲಾಗಿತ್ತು. ಎರಡನೇ ಪಟ್ಟಿಯಲ್ಲಿ ಅವರ ಸಹೋದರ ವಿಜಯಸಿಂಗ್‌ ಅವರಿಗೆ ಬಸವ ಕಲ್ಯಾಣ ಟಿಕೆಟ್‌ ಘೋಷಿಸಲಾಗಿದೆ. ಅಷ್ಟೇ ಅಲ್ಲ, ಕಾಂಗ್ರೆಸ್‌ ಸೇರಲಿದ್ದಾರೆ ಎಂದು ಅಂತಿಮವಾಗಿ ಜೆಡಿಎಸ್‌ ಸೇರ್ಪಡೆಯಾಗಿದ್ದ ಮಾಜಿ ಸಚಿವ ಎ. ಮಂಜು ಅವರ ಪುತ್ರ ಮಂಥರ್‌ ಗೌಡ ಅವರಿಗೆ ಕಾಂಗ್ರೆಸ್‌ ಮಡಿಕೇರಿ ಕ್ಷೇತ್ರದ ಟಿಕೆಟ್‌ ದಯಪಾಲಿಸಿದೆ.

ಕೈ -ಕೈ ಮಿಲಾಯಿಸಿದರೂ ಸಿಗಲಿಲ್ಲ ಕೈ ಟಿಕೆಟ್: ತಟ್ಟುವುದೇ ಬಂಡಾಯದ ಬಿಸಿ

ಎಲ್ಲೆಲ್ಲಿ ಬಂಡಾಯ?

ಚಿತ್ರದುರ್ಗ (ರಘು ಆಚಾರ್‌), ಕಲಘಟಗಿ (ನಾಗರಾಜ ಛಬ್ಬಿ), ಮೊಳಕಾಲ್ಮುರು (ಯೋಗೇಶ್‌ ಬಾಬು), ನರಗುಂದ (ಸಂಗಮೇಶ್‌ ಕೊಳ್ಳಿ), ಬೇಲೂರು (ರಾಜಶೇಖರ್‌) ಕ್ಷೇತ್ರದಲ್ಲಿ ಬಂಡಾಯ ಸಾಧ್ಯತೆ. ಮಂಡ್ಯ, ಕಿತ್ತೂರಿನಲ್ಲಿ ಟಿಕೆಟ್‌ ಆಕಾಂಕ್ಷಿಗಳ ಅಸಮಾಧಾನ. ಗೋಕಾಕ್‌ನಲ್ಲಿ ಅಶೋಕ್‌ ಪೂಜಾರಿ ಬೆಂಬಲಿಗರಿಂದ ಪ್ರತಿಭಟನೆ.

5 ಹಾಲಿ ಶಾಸಕರಿಗೆ 2ನೇ ಪಟ್ಟೀಲೂ ಟಿಕೆಟ್‌ ಇಲ್ಲ

ಹಾಲಿ ಶಾಶಕರಿರುವ ಹರಿಹರ (ರಾಮಪ್ಪ), ಲಿಂಗಸಗೂರು (ಡಿ.ಎಸ್‌.ಹೂಲಗೇರಿ), ಕುಂದಗೋಳ (ಕುಸುಮಾ ಶಿವಳ್ಳಿ), ಶಿಡ್ಲಘಟ್ಟ(ವಿ.ಮುನಿಯಪ್ಪ) ಮತ್ತು ಪುಲಕೇಶಿನಗರದ (ಅಖಂಡ ಶ್ರೀನಿವಾಸ) ಟಿಕೆಟ್‌ 2ನೇ ಪಟ್ಟಿಯಲ್ಲೂ ಘೋಷಣೆಯಾಗಿಲ್ಲ. ಇಲ್ಲಿನ ಶಾಸಕರಿಗೆ ಟಿಕೆಟ್‌ ಸಿಗುತ್ತದೆಯೋ ಇಲ್ಲವೋ ಎಂಬ ಸಸ್ಪೆನ್ಸ್‌ ಮುಂದುವರೆದಿದೆ.

ಟಿಕೆಟ್‌ ಗಿಟ್ಟಿಸಿದ ಪ್ರಮುಖರು

1. ಎಚ್‌.ಆಂಜನೇಯ ಹೊಳಲ್ಕೆರೆ
2. ಸಂತೋಷ್‌ ಲಾಡ್‌ ಕಲಘಟಗಿ
3. ಎಚ್‌ವೈ ಮೇಟಿ ಬಾಗಲಕೋಟೆ
4. ಕಿಮ್ಮನೆ ರತ್ನಾಕರ್‌ ತೀರ್ಥಹಳ್ಳಿ
5. ಬಾಬುರಾವ್‌ ಚಿಂಚನಸೂರ್‌ ಗುರುಮಿಟ್ಕಲ್‌

ಟಿಕೆಟ್‌ ಕಳಕೊಂಡ ಪ್ರಮುಖರು

1. ವೈಎಸ್‌ವಿ ದತ್ತ ಕಡೂರು
2. ರಘು ಆಚಾರ್‌ ಚಿತ್ರದುರ್ಗ
3. ನಾಗರಾಜ್‌ ಛಬ್ಬಿ ಕಲಘಟಗಿ
4.ಅನುರಾಧಾ ಮಾಲಕರೆಡ್ಡಿ ಯಾದಗಿರಿ
10. ಮಂಜುನಾಥ್‌ ಗೌಡ ತೀರ್ಥಹಳ್ಳಿ

ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ನನಗೂ ಸಿಎಂ ಆಗುವ ಆಸೆ ಇದೆ, ಹೈಕಮಾಂಡ್ ನಿರ್ಧಾರ ಅಂತಿಮ: ದಿನೇಶ್‌ ಗುಂಡೂರಾವ್
Karnataka News Live: ಡೆಡ್ಲಿ ರಾಟ್‌ವೀಲರ್ ನಾಯಿಗಳ ದಾಳಿಗೆ ಮಹಿಳೆ ದುರ್ಮರಣ; ಮೂವರು ಮಕ್ಕಳು ಅನಾಥ