
ಬೆಂಗಳೂರು(ಆ.15): ಬಿಜೆಪಿ ರಾಜ್ಯಾಧ್ಯಕ್ಷಬಿ.ವೈ.ವಿಜಯೇಂದ್ರ ಅವರ ವಿರುದ್ಧದ ಬಂಡಾಯದ ಕಹಳೆ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆಯಿದ್ದು, ಇನ್ನೊಂದು ವಾರದಲ್ಲಿ ರಾಜಧಾನಿ ಬೆಂಗಳೂರಿನಲ್ಲಿ ಮತ್ತೊಂದು ಸಭೆ ನಿಗದಿಯಾಗಿದೆ.
ಬಹುತೇಕ ಈ ತಿಂಗಳ 21ರಂದು ಸಭೆ ನಡೆಯುವ ಸಂಭವವಿದ್ದು, ಭಿನ್ನ ಧ್ವನಿ ಎತ್ತಿರುವಹಿರಿಯಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ ಹಾಗೂ ರಮೇಶ್ ಜಾರಕಿಹೊಳಿ ಅವರೇ ಈ ಸಭೆಯ ನೇತೃತ್ವ ವಹಿಸಲಿದ್ದಾರೆ. ಈ ಬಾರಿ ಎಲ್ಲ ಜಿಲ್ಲೆಗಳಿಂದಲೂ ಅತೃಪ್ತ ಮುಖಂಡರನ್ನು ಸಭೆಗೆ ಆಹ್ವಾನಿಸಲು ಉದ್ದೇಶಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಒಂದು ವೇಳೆ ಅಷ್ಟರೊಳಗಾಗಿ ಬಿಜೆಪಿಯ ವರಿಷ್ಠರು ಬ್ರೇಕ್ ಹಾಕಿದಲ್ಲಿ ಮಾತ್ರ ಸಭೆ ರದ್ದಾಗಬಹುದು ಅಥವಾ ಮುಂದೂಡಬಹುದು. ಇಲ್ಲದಿದ್ದರೆ ಸಭೆ ನಡೆಯುವುದು ನಿಶ್ಚಿತ ಎಂದು ತಿಳಿದು ಬಂದಿದೆ. ಕಳೆದ ಭಾನುವಾರ ಬೆಳಗಾವಿಯ ಹೊರವಲಯದ ರೆಸಾಟ್ ೯ವೊಂದರಲ್ಲಿ ನಡೆದ ಸಭೆಯ ಮುಂದುವರಿದ ಭಾಗವಿದು. ಈ ಸಭೆಯಲ್ಲೂ ಯತ್ನಾಳ್, ಜಾರಕಿಹೊಳಿ ಜತೆಗೆ ಅರವಿಂದ್ ಲಿಂಬಾವಳಿ, ಅಣ್ಣಾ ಸಾಹೇಬ್ ಜೊಲ್ಲೆ, ಜಿ.ಎಂ.ಸಿದ್ದೇಶ್ವರ್, ಪ್ರತಾಪ್ ಸಿಂಹ, ಕುಮಾರ್‌ಬಂಗಾರಪ್ಪ, ಬಿ.ಪಿ.ಹರೀಶ್ ಅವರೊಂದಿಗೆ ಇತರ ಹಲವು ಮುಖಂಡರೂ ಜತೆಗೂಡುವ ನಿರೀಕ್ಷೆಯಿದೆ.
ಬಳ್ಳಾರಿ ಪಾದಯಾತ್ರೆ ಕುರಿತು ಪಕ್ಷದ ವೇದಿಕೆಯಲ್ಲಿ ಚರ್ಚೆಯಾಗಿಲ್ಲ: ಆರ್.ಅಶೋಕ್
ಪಾದಯಾತ್ರೆ ಹೆಸರಲ್ಲಿ ಸಭೆ: ಮೇಲ್ನೋಟಕ್ಕೆ ವಾಲ್ಮೀಕೆ ಅಭಿವೃದ್ಧಿ ನಿಗಮದ ಹಗರಣ ಮುಂದಿಟ್ಟುಕೊಂಡು ಕೂಡಲಸಂಗಮದಿಂದ ಬಳ್ಳಾರಿವರೆಗೆ ಪಾದಯಾತ್ರೆ ಹಮ್ಮಿಕೊಳ್ಳುವ ಹಮ್ಮಿಕೊಳ್ಳುವ ಬಗ್ಗೆ ಸಭೆ ನಡೆಸಲಾಗುವುದು ಎಂದು ಹೇಳುತ್ತಿದ್ದರೂ ಆಂತರ್ಯದಲ್ಲಿ ರಾಜ್ಯಾಧ್ಯಕ್ಷ ನಾಯಕತ್ವಕ್ಕೆ ಸಡ್ಡು ಹೊಡೆಯುವುದೇ ಆಗಿದೆ ಎಂದು ಮೂಲಗಳು ತಿಳಿಸಿವೆ.
ಈ ಬಾರಿಯ ಸಭೆಯಲ್ಲಿ ಪಕ್ಷದ ವರಿಷ್ಠರನ್ನು ಭೇಟಿ ಮಾಡಲು ದೆಹಲಿಗೆ ತೆರಳುವ ಬಗ್ಗೆ, ವರಿಷ್ಠರ ಮೇಲೆ ಒತ್ತಡ ಹೇರುವ ಬಗ್ಗೆ ಚರ್ಚೆ ನಡೆಸುವ ಸಾಧ್ಯತೆಯಿದೆ.
ಈಗಾಗಲೇ ಬೆಳಗಾವಿ ಸಭೆ ಬಳಿಕ ಬಿಜೆಪಿ ಪಾಳೆಯದಲ್ಲಿ ತೀವ್ರ ಚರ್ಚೆ ಆರಂಭವಾಗಿದೆ. ವಿಜಯೇಂದ್ರ ಅವರು ಬುಧವಾರ ಬೆಂಗಳೂರಿನಲ್ಲಿ ಸಂಘ: 'ಪರಿವಾರದ ಮುಖಂಡರು ಹಾಗೂ ಬಿಜೆಪಿಯ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರನ್ನು ಭೇಟಿ ಮಾಡಿ ಪಕ್ಷದಲ್ಲಿನ ಬೆಳವಣಿಗೆಗಳ ಬಗ್ಗೆ ಪ್ರಸ್ತಾಪಿಸಿದ್ದಾರೆ. ಇದರ ಬೆನ್ನಲ್ಲೇ ಬಂಡಾಯದ ಮತ್ತೊಂದು ಸಭೆ ನಡೆಸಲು ಮುಂದಾಗಿರುವುದು ಕುತೂಹಲ ಮೂಡಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.