ಸಚಿವ ಸ್ಥಾನ ಸಿಗದ ಕಾರಣಕ್ಕೆ ಸಂಜಯ್ ಶಿರ್ಸತ್ ಸಿಟ್ಟು, ಶಿವಸೇನೆ ಏಕನಾಥ್‌ ಶಿಂಧೆ ಕ್ಯಾಂಪ್‌ನಲ್ಲಿ ಬಂಡಾಯ?

By Santosh NaikFirst Published Aug 13, 2022, 12:00 PM IST
Highlights

ಮಹಾರಾಷ್ಟ್ರ ಸರ್ಕಾರದಲ್ಲಿ ಬಂಡಾಯದ ಸೂಚನೆ ಸಿಕ್ಕಿದೆ. ಮಹಾರಾಷ್ಟ್ರ ಸರ್ಕಾರದಲ್ಲಿ ಸಚಿವರಾಗುವ ಅವಕಾಶ ಕಳೆದುಕೊಂಡಿರುವ ಸಂಜಯ್‌ ಶಿರ್ಸತ್‌, ಶುಕ್ರವಾರ ರಾತ್ರಿ ಒಂದು ಟ್ವೀಟ್‌ ಮಾಡಿದ್ದು, ಅದರಲ್ಲಿ ಉದ್ಧವ್‌ ಠಾಕ್ರೆ ಅವರನ್ನು ಮಹಾರಾಷ್ಟ್ರದ ಕುಟುಂಬದ ಮುಖ್ಯಸ್ಥ ಎಂದೂ ಬರೆದಿದ್ದಲ್ಲದೆ, ವಿಧಾನಸಭೆಯಲ್ಲಿ ಉದ್ಧವ್‌ ಠಾಕ್ರೆ ಮಾತನಾಡಿರುವ ವಿಡಿಯೋ ಭಾಷಣವನ್ನೂ ಅವರು ಪೋಸ್ಟ್‌ ಮಾಡಿದ್ದಾರೆ.

ಮುಂಬೈ (ಆ.13): ಬಿಜೆಪಿ ಬೆಂಬಲದೊಂದಿಗೆ ಶಿವಸೇನೆಯನ್ನು ಭಾಗ ಮಾಡಿಕೊಂಡು ಬಂದ ಏಕನಾಥ್‌ ಶಿಂಧೆ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿದ್ದಾರೆ. ಇತ್ತೀಚೆಗೆ ಸಚಿವ ಸಂಪುಟವನ್ನೂ ರಚನೆ ಮಾಡಿದ್ದಾರೆ. ಆದರೆ, ಸಚಿವ ಸ್ಥಾನ ಸಿಗದೇ ಇರುವ ಔರಂಗಾಬಾದ್‌ ಶಾಸಕ ಸಂಜಯ್‌ ಶಿರ್ಸತ್‌ ಬಂಡಾಯದ ಸೂಚನೆ ನೀಡಿದ್ದಾರೆ. ಶುಕ್ರವಾರ ತಡರಾತ್ರಿ ಅವರು ಮಾಡಿರುವ ಒಂದು ಟ್ವೀಟ್‌ ಈ ಅನುಮಾನಕ್ಕೆ ಕಾರಣವಾಗಿದೆ. ಈ ಟ್ವೀಟ್‌ನಲ್ಲಿ ಅವರು ಉದ್ಧವ್‌ ಠಾಕ್ರೆ ಅವರ ವಿಡಿಯೋವೊಂದನ್ನು ಪೋಸ್ಟ್‌ ಮಾಡಿದ್ದಾರೆ. ಇದರಲ್ಲಿ ಉದ್ಧವ್‌ ಠಾಕ್ರೆ ಮಹಾರಾಷ್ಟ್ರದ ಕುರಿತಾಗಿ ಮಾತನಾಡಿದ್ದಾರೆ. ಈ ಟ್ವೀಟ್‌ ಶಿವಸೇನೆಯ ಶಿಂಧೆ ಕ್ಯಾಂಪ್‌ಗೆ ಎಚ್ಚರಿಕೆ ಎನ್ನುವ ರೀತಿಯಲ್ಲಿ ಬಿಂಬಿಸಲಾಗಿದೆ. ದೊಡ್ಡ ಮಟ್ಟದ ರಾಜಕೀಯ ಅಲ್ಲೋಲ ಕಲ್ಲೋಲಕ್ಕೆ ಸಾಕ್ಷಿಯಾಗಿದ್ದ ಮಹಾರಾಷ್ಟ್ರದಲ್ಲಿ ಮತ್ತೊಂದು ಸುತ್ತಿನ ಬಂಡಾಯ ರಚನೆಯಾಗುವ ಮೊದಲ ಹಂತದ ಸೂಚನೆ ಇದು ಎಂದು ಹೇಳಲಾಗಿದೆ. ಏಕನಾಥ್‌ ಶಿಂಧೆ ನೇತೃತ್ವದಲ್ಲಿ ಮಾಜಿ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ವಿರುದ್ಧ ಬಂಡಾಯ ಏಳಲಾಗಿತ್ತು. ಕೊನೆಗೆ ಮಹಾ ವಿಕಾಸ್‌ ಅಘಾಡಿ ಸರ್ಕಾರ ಪತನವಾದ ಬಳಿಕ ಶಿಂಧೆ ಮಹಾರಾಷ್ಟ್ರದ ಸಿಎಂ ಆಗಿದ್ದರು. ಪ್ರಮಾಣವಚನ ಸ್ವೀಕಾರ ಮಾಡಿ ಹಲವು ದಿನಗಳ ಬಳಿಕ ಸಂಪುಟವನ್ನು ರಚನೆ ಮಾಡಲಾಗಿತ್ತು. ಸಂಪುಟ ರಚನೆಯ ಬೆನ್ನಲ್ಲಿಯೇ ಸಂಭಾವ್ಯ ಬಂಡಾಯದ ಸೂಚನೆ ಸಿಕ್ಕಿದೆ.

ಶಿಂಧೆ ಬಣವನ್ನು ಸೇರಿಕೊಂಡಿರುವ ಔರಂಗಾಬಾದ್ ಪಶ್ಚಿಮ ಶಾಸಕ ಸಂಜಯ್ ಶಿರ್ಸಾತ್ ಮಾಡಿದ ಟ್ವೀಟ್ ಹೊಸ ಊಹಾಪೋಹಗಳಿಗೆ ಕಾರಣವಾಗಿದೆ. ಟ್ವೀಟ್‌ನಲ್ಲಿ ಅವರು ಮಹಾರಾಷ್ಟ್ರದ ಕುಟುಂಬದ ಮುಖ್ಯಸ್ಥ ಉದ್ದವ್‌ ಠಾಖ್ರೆ ಎಂದು ಬರೆದುಕೊಂಡಿದ್ದಾರೆ. ಅಂದಿನಿಂದ ಶಿಂಧೆ ಪಾಳಯಕ್ಕೆ ಮೊದಲಿಗರಾದ ಸಂಜಯ್ ಶಿರ್ಸಾತ್ ಅವರು ಸಚಿವ ಸ್ಥಾನ ಸಿಗದೆ ಅಸಮಾಧಾನಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಉದ್ಧವ್ ಠಾಕ್ರೆ ಅವರ ವಿಡಿಯೋವನ್ನು ಶಿರ್ಸತ್‌ ಪೋಸ್ಟ್ ಮಾಡಿದ್ದರು. ಇದರಲ್ಲಿ ಮಹಾರಾಷ್ಟ್ರದ ಬಗ್ಗೆ ಠಾಕ್ರೆ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಅಂದಿನಿಂದ ಅವರ ಟ್ವೀಟ್ ಶಿಂಧೆ ಪಾಳಯಕ್ಕೆ ಇದು ಎಚ್ಚರಿಕೆ ಎಂಬ ಊಹಾಪೋಹಗಳಿವೆ. ಆದರೆ, ನನ್ನ ಟ್ವೀಟ್‌ನ ಉದ್ದೇಶವೇನೆಂದರೆ, ನೀವು ಕುಟುಂಬದ ಮುಖ್ಯಸ್ಥನ ಪಾತ್ರವನ್ನು ನಿರ್ವಹಿಸುವಾಗ, ನಿಮ್ಮ ಸ್ವಂತ ಅಭಿಪ್ರಾಯಕ್ಕಿಂತ ನಿಮ್ಮ ಕುಟುಂಬದ ಅಭಿಪ್ರಾಯವನ್ನು ಗೌರವಿಸಬೇಕು ಎಂದು ಸಂಜಯ್ ಶಿರ್ಸತ್ ಹೇಳಿದ್ದಾರೆ.

‘ಮಹಾ’ ಸರ್ಕಾರ ರಚನೆ: ಬಿಜೆಪಿಯ 9, ಶಿಂಧೆ ಬಣದ 9 ಸಚಿವರಿಂದ ಪ್ರಮಾಣ ವಚನ ಸ್ವೀಕಾರ

ಶಿಂಧೆ ಬಗ್ಗೆ ಯಾವುದೇ ಅಸಮಾಧಾನವಿಲ್ಲ: ಟ್ವೀಟ್ ಬಗ್ಗೆ ಸ್ಪಷ್ಟನೆ ನೀಡಿರುವ ಶಿರ್ಸತ್, ಸಚಿವ ಸ್ಥಾನ ಸಿಗಲಿಲ್ಲ ಎಂಬ ಕಾರಣಕ್ಕೆ ನನ್ನ ಟ್ವೀಟ್ ಅಲ್ಲ ಎಂದಿದ್ದಾರೆ. ನನಗೆ ಸರಿ ಅನಿಸಿದ್ದನ್ನು ಮಾತ್ರ ಮಾತನಾಡುತ್ತೇನೆ ಎಂದರು. ಉದ್ಧವ್ ಠಾಕ್ರೆ ಅವರು ಎನ್‌ಸಿಪಿ ಮತ್ತು ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಳ್ಳಬಾರದಿತ್ತು ಎಂದು ನಾನು ನಂಬುತ್ತೇನೆ. "ಶಿಂಧೆ ಶಿಬಿರದಲ್ಲಿ ನಾವೆಲ್ಲರೂ ಸಂತೋಷವಾಗಿದ್ದೇವೆ' ಎಂದು ಹೇಳಿದ್ದಾರೆ.

ಮಹಾರಾಷ್ಟ್ರ ಸರ್ಕಾರದ ನಿಜವಾದ ಸಿಎಂ ಯಾರೆಂದು ಗೊತ್ತಿಲ್ಲ: 'ಇಡಿ' ಸರ್ಕಾರವನ್ನು ಲೇವಡಿ ಮಾಡಿದ ಆದಿತ್ಯ ಠಾಕ್ರೆ

ಠಾಕ್ರೆ ನಿಲುವನ್ನು ಒಪ್ಪಿಲ್ಲ ಅಷ್ಟೇ: ಟ್ವೀಟ್ ಅನ್ನು ಅಳಿಸಿದ ನಂತರ ಮಾತನಾಡಿದ್ದ ಶಿರ್ಸತ್‌, ನಾವು ಇಂದು ಶಿವಸೇನೆಯಾಗಿದ್ದೇವೆ. ನಮ್ಮ ನಾಯಕ ಯಾರು ಎಂದರೆ, ನಮ್ಮ ಕುಟುಂಬದ ಮುಖ್ಯಸ್ಥ. ಬಾಳಾಸಾಹೇಬರ ನಂತರ ಉದ್ಧವ್ ಸಾಹೇಬರು ನಮ್ಮ ಕುಟುಂಬದ ಮುಖ್ಯಸ್ಥರು. ನಾವು ಯಾವಾಗಲೂ ಉದ್ಧವ್ ಠಾಕ್ರೆ ಅವರನ್ನು ಕುಟುಂಬದ ಮುಖ್ಯಸ್ಥ ಎಂದು ಪರಿಗಣಿಸಿದ್ದೇವೆ. ಇಂದು ಜಗಳವಾಡಿದರೂ ಅವರ ವಿರುದ್ಧ ಮಾತನಾಡೋದಿಲ್ಲ. ನಾವು ದೂರದಲ್ಲಿದ್ದರೂ ಅವರೇ ನಮ್ಮ ಕುಟುಂಬದ ಮುಖ್ಯಸ್ಥರು. ಅವರು ತೆಗೆದುಕೊಂಡ ನಿಲುವನ್ನು ನಾವು ಒಪ್ಪಲಿಲ್ಲ. ನಮ್ಮ ನಿಲುವು ಉದ್ಧವ್ ಠಾಕ್ರೆ ವಿರುದ್ಧ ಅಲ್ಲ. ನಮ್ಮ ನಿಲುವು ಎನ್‌ಸಿಪಿ ಮತ್ತು ಕಾಂಗ್ರೆಸ್‌ ವಿರುದ್ಧವಾಗಿತ್ತು. ಇದನ್ನು ಅವರು ಒಪ್ಪದ ಕಾರಣ ಬೇರ್ಪಟ್ಟೆವು. ಸಂಬಂಧ ಮುರಿದುಹೋಗಿದೆ ಎಂದು ಅರ್ಥವಲ್ಲ. ನಮ್ಮ ನಿಲುವಿನ ಮೇಲೆ ನಾವು ಅಚಲರಾಗಿದ್ದೇವೆ. ಅವರು ತಮ್ಮ ನಿಲುವಿನಲ್ಲಿ ಅಚಲರಾಗಿದ್ದರು ಎಂದು ಶಿರ್ಸತ್‌ ಹೇಳಿದ್ದಾರೆ.
 

click me!