ಬಿಜೆಪಿಗೆ ಬಂಡಾಯದ ಬಿಸಿ, 40 ಕ್ಷೇತ್ರಗಳಲ್ಲಿ ಅತೃಪ್ತಿ: 9 ಮಂದಿ ರಾಜೀನಾಮೆ

Published : Apr 13, 2023, 05:14 AM IST
ಬಿಜೆಪಿಗೆ ಬಂಡಾಯದ ಬಿಸಿ, 40 ಕ್ಷೇತ್ರಗಳಲ್ಲಿ ಅತೃಪ್ತಿ: 9 ಮಂದಿ ರಾಜೀನಾಮೆ

ಸಾರಾಂಶ

15ಕ್ಕೂ ಹೆಚ್ಚು ಮಂದಿ ಬಂಡಾಯ ಸ್ಪರ್ಧೆ, ಸವದಿ, ಗೂಳಿಹಟ್ಟಿ, ಲಮಾಣಿ, ಆರ್‌.ಶಂಕರ್‌, ಚಿಕ್ಕನಗೌಡರ, ಮುದ್ದಹನುಮೇಗೌಡ ಕಣಕ್ಕೆ. 

ಬೆಂಗಳೂರು(ಏ.13):  ಬಿಜೆಪಿ ಮೊದಲ ಪಟ್ಟಿ ಬಿಡುಗಡೆಯಾದ ಬೆನ್ನಲ್ಲೇ ರಾಜ್ಯಾದ್ಯಂತ ಟಿಕೆಟ್‌ ಕೈತಪ್ಪಿದವರ ಆಕ್ರೋಶ ಭುಗಿಲೆದ್ದಿದೆ. ಮೊದಲ ದಿನವೇ ಹಿರಿಯರಾದ ಜಗದೀಶ್‌ ಶೆಟ್ಟರ್‌ ಬಂಡಾಯದ ಬಾವುಟ ಹಾರಿಸಿದ್ದರು. ಇದರ ಬೆನ್ನಲ್ಲೇ ಇದೀಗ 9 ಮಂದಿಗೆ ಬಿಜೆಪಿಗೆ ಗುಡ್‌ಬೈ ಹೇಳಿದ್ದಾರೆ. ಮತ್ತೊಂದೆಡೆ, 15ಕ್ಕೂ ಹೆಚ್ಚು ಮಂದಿ ಸದ್ಯದಲ್ಲೇ ಪಕ್ಷಕ್ಕೆ ಸಡ್ಡು ಹೊಡೆದು ಪಕ್ಷೇತರರಾಗಿ ಸ್ಪರ್ಧಿಸುವ ಅಥವಾ ಬೇರೊಂದು ಪಕ್ಷದ ಮೂಲಕ ಚುನಾವಣಾ ಕಣದಲ್ಲಿ ಉಳಿಯಲು ನಿರ್ಧರಿಸಿದ್ದಾರೆ.

ಮಾಜಿ ಸಚಿವ ಆರ್‌.ಶಂಕರ್‌, ಲಕ್ಷ್ಮಣ್‌ ಸವದಿ, ಗೂಳಿಹಟ್ಟಿಶೇಖರ್‌, ಮುದ್ದಹನುಮೇಗೌಡ ಅವರು ಪಕ್ಷೇತರ ಅಥವಾ ಬೇರೊಂದು ಪಕ್ಷದಿಂದ ಸ್ಪರ್ಧಿಸುವ ಸುಳಿವು ನೀಡಿದ ಪ್ರಮುಖರಾದರೆ, ಸಚಿವ ಅಂಗಾರ ಅವರು ರಾಜಕೀಯ ನಿವೃತ್ತಿ ಘೋಷಿಸಿ, ಸುಳ್ಯ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರದಿಂದಲೇ ದೂರವುಳಿಯುವ ನಿರ್ಧಾರ ಪ್ರಕಟಿಸಿದ್ದಾರೆ.

ಟಿಕೆಟ್ ಕೈತಪ್ಪಿದ ಆಕ್ರೋಶ, ಬಿಜೆಪಿಗೆ ಶಾಸಕ ಗೂಳಿಹಟ್ಟಿ ಶೇಖರ್ ಗುಡ್ ಬೈ!

ಒಟ್ಟಾರೆ ಬಿಜೆಪಿ ಟಿಕೆಟ್‌ ಘೋಷಣೆಯಾದ ಬಳಿಕ 40ಕ್ಕೂ ಹೆಚ್ಚು ಮಂದಿ ತಮ್ಮ ಅಸಮಾಧಾನ ಹೊರಹಾಕಿದ್ದು, ಸಚಿವ ಅಂಗಾರ, ಶಾಸಕ ರಘುಪತಿ ಭಟ್‌ ಸೇರಿ ಹಲವರು ಪಕ್ಷದ ನಿಲುವಿನ ವಿರುದ್ಧ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದಾರೆ. ಇನ್ನು ಬೆಂಗಳೂರು ಸೇರಿ ರಾಜ್ಯದ ಇನ್ನೂ ಐದು ಕಡೆ ಟಕೆಟ್‌ ವಿಚಾರವಾಗಿ ಪ್ರತಿಭಟನೆ ನಡೆದು ವರಿಷ್ಠರ ವಿರುದ್ಧ ಆಕ್ರೋಶ ಭುಗಿಲೆದ್ದಿದೆ.

ಎಲ್ಲೆಲ್ಲಿ, ಯಾರು ಬಂಡಾಯ ಸ್ಪರ್ಧೆ?:

ಮಾಜಿ ಸಚಿವ ಆರ್‌.ಶಂಕರ್‌ ಅವರು ಎಂಎಲ್ಸಿ ಸ್ಥಾನ ಹಾಗೂ ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದು, ರಾಣೆಬೆನ್ನೂರು ಕ್ಷೇತ್ರದಲ್ಲಿ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದಾಗಿ ಘೋಷಿಸಿದ್ದಾರೆ. ಚಿತ್ರದುರ್ಗ ಜಿಲ್ಲೆ ಹೊಸದುರ್ಗ ಕ್ಷೇತ್ರದಿಂದ ಮಾಜಿ ಸಚಿವ ಹಾಗೂ ಹಾಲಿ ಶಾಸಕ ಗೂಳಿಹಟ್ಟಿಶೇಖರ್‌ ಅವರು ಜನಾರ್ದನ ರೆಡ್ಡಿ ಪಕ್ಷ ಅಥವಾ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವುದು ಖಚಿತವಾಗಿದೆ. ಇನ್ನು ಧಾರವಾಡ ಜಿಲ್ಲೆ ಕುಂದಗೋಳ ಕ್ಷೇತ್ರದ ಮಾಜಿ ಶಾಸಕ ಎಸ್‌.ಐ.ಚಿಕ್ಕನಗೌಡರ ಹಾಗೂ ಧಾರವಾಡ ವಿಧಾನಸಭೆ ಕ್ಷೇತ್ರದ ಹಿರಿಯ ಮುಖಂಡ, ಬಯಲುಸೀಮೆ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ತವನಪ್ಪ ಅಷ್ಟಗಿ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದು, ಬಂಡಾಯವಾಗಿ ಸ್ಪರ್ಧಿಸುವ ಸುಳಿವು ನೀಡಿದ್ದಾರೆ.

ಅದೇ ರೀತಿ ಗದಗ ಜಿಲ್ಲೆ ಶಿರಹಟ್ಟಿಕ್ಷೇತ್ರದ ಶಾಸಕ ರಾಮಣ್ಣ ಲಮಾಣಿ, ತುಮಕೂರಿಂದ ಕುಣಿಗಲ್‌ ಟಿಕೆಟ್‌ನ ಪ್ರಬಲ ಆಕಾಂಕ್ಷಿಗಳಾಗಿದ್ದ ಮುದ್ದಹನುಮೇಗೌಡ, ರಾಜೇಶ್‌ ಗೌಡ ಕೂಡ ಬೆಂಬಲಿಗರ ಜತೆ ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

ಸೋಮಣ್ಣ ವಿರುದ್ಧ ಗುಟುರು:

ಚಾಮರಾಜನಗರ ಕ್ಷೇತ್ರದ ಬಿಜೆಪಿ ಟಿಕೆಟ್‌ ಸಚಿವ ಸೋಮಣ್ಣ ಪಾಲಾಗಿದ್ದು, ಇದರಿಂದ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಆಪ್ತ ಎಂ.ರುದ್ರೇಶ್‌ ಮುನಿಸಿಕೊಂಡಿದ್ದಾರೆ. ಸೋಮಣ್ಣ ವಿರುದ್ಧ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಕುರಿತು ಚಿಂತನೆ ನಡೆಸುತ್ತಿದ್ದೇನೆ ಎಂದಿದ್ದಾರೆ.

ಬೆಳಗಾವಿ ಜಿಲ್ಲೆ ಅಥಣಿ ಕ್ಷೇತ್ರದ ಟಿಕೆಟ್‌ ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಆಪ್ತ ಮಹೇಶ್‌ ಕುಮಟಳ್ಳಿ ಪಾಲಾಗುತ್ತಿದ್ದಂತೆ ಮಾಜಿ ಡಿಸಿಎಂ ಲಕ್ಷ್ಮಣ್‌ ಸವದಿ ಅಸಮಾಧಾನ ಹೊರಹಾಕಿದ್ದಾರೆ. ಬಿಜೆಪಿ ತೊರೆಯುವ ಮನಸ್ಥಿತಿಯಲ್ಲಿರುವ ಸವದಿ ಅವರನ್ನು ಸೆಳೆಯಲು ಕಾಂಗ್ರೆಸ್‌ ಈಗಾಗಲೇ ಪ್ರಯತ್ನ ಆರಂಭಿಸಿದೆ.

ವಿಜಯನಗರ ಜಿಲ್ಲೆ ಸಂಡೂರು ವಿಧಾನಸಭಾ ಕ್ಷೇತ್ರದಲ್ಲೂ ಬಂಡಾಯದ ಕಿಡಿ ಹೊತ್ತಿಕೊಂಡಿದ್ದು, ಶಿಲ್ಪಾ ರಾಘವೇಂದ್ರ ಅವರಿಗೆ ಟಿಕೆಟ್‌ ನೀಡಿದ್ದನ್ನು ಪ್ರತಿಭಟಿಸಿ ಬಿಜೆಪಿ ಎಸ್‌.ಟಿ.ಮೋರ್ಚಾ ರಾಜ್ಯ ಕಾರ್ಯಕಾರಿಣಿ ಸದಸ್ಯ ಕೆ.ಎಸ್‌.ದಿವಾಕರ್‌ ಅವರು ಜನಾರ್ದನ ರೆಡ್ಡಿ ಅವರ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದಿಂದ ಅಥವಾ ಪಕ್ಷೇತರರಾಗಿ ಸ್ಪರ್ಧೆ ಮಾಡುವ ಸಾಧ್ಯತೆ ಇದೆ. ಕಲಬುರಗಿ ಜಿಲ್ಲೆಯ ಜೇವರ್ಗಯಲ್ಲಿ ದೊಡ್ಡಪ್ಪಗೌಡ ಪಾಟೀಲ್‌ ಬಿಜೆಪಿ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದು, ಜೆಡಿಎಸ್‌ ಕಡೆ ಮುಖಮಾಡಿದ್ದಾರೆ. ಕಲಬುರಗಿ ಉತ್ತರ ಕ್ಷೇತ್ರದಿಂದ ಶಿವಕಾಂತ ಮಹಾಜನ್‌, ಅಪಜಲ್ಫುರದಿಂದ ನಿತಿನ್‌ ಗುತ್ತೇದಾರ್‌ ಕೂಡ ಅಸಮಾಧಾನ ಹೊರಹಾಕಿದ್ದಾರೆ.

ಪ್ರತಿಭಟನೆ:

ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ ಹಾಗೂ ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌ ಪರ ಅಭಿಮಾನಿಗಳ ಪ್ರತಿಭಟನೆ ಮುಂದುವರಿದಿದ್ದು, ಕುಣಿಗಲ್‌ನಲ್ಲಿ ರಾಜೇಶ್‌ ಗೌಡ, ಸಂಡೂರಲ್ಲಿ ಕೆ.ಎಸ್‌.ದಿವಾಕರ್‌ ಪರ ಬೆಂಬಲಿಗರೂ ತಮ್ಮ ನಾಯಕರಿಗೆ ಟಿಕೆಟ್‌ ತಪ್ಪಿದ್ದಕ್ಕಾಗಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚಾಮರಾಜಪೇಟೆಯಲ್ಲಿ ಸೈಲೆಂಟ್‌ ಸುನಿಲ್‌ ಬೆಂಬಲಿಗರು ಮಂಡಲ ಬಿಜೆಪಿ ಕಚೇರಿಗೆ ನುಗ್ಗಿ ಗಲಾಟೆ ನಡೆಸಿದರೆ, ಜಯನಗರ ಟಿಕೆಟ್‌ ವಿಚಾರವಾಗಿ ಎನ್‌.ಆರ್‌.ರಮೇಶ್‌ ಯಡಿಯೂರು ವಾರ್ಡ್‌ನ 1,250ಕ್ಕೂ ಹೆಚ್ಚು ಕಾರ್ಯಕರ್ತರು ಪಕ್ಷಕ್ಕೆ ತಮ್ಮ ರಾಜೀನಾಮೆ ಸಲ್ಲಿಸಿದ್ದಾರೆ.

ಬಿಜೆಪಿ ಕಚೇರಿಗೆ ನುಗ್ಗಿ ಸೈಲೆಂಟ್ ಸುನೀಲ ಬೆಂಬಲಿಗರ ಗಲಾಟೆ, ಚಾಮರಾಜಪೇಟೆ ಜಂಗ್ಲಿ ಕುಸ್ತಿಗೆ ಕಾಂಗ್ರೆಸ್ ಟಾಂಗ್!

ತೇರದಾಳದಲ್ಲಿ ರಾರ‍ಯಲಿ:

ಬಾಗಲಕೋಟೆ ಜಿಲ್ಲೆಯ ಬಾದಾಮಿ ಕ್ಷೇತ್ರದಲ್ಲಿ ಮಾವ-ಅಳಿಯ ಆಗಿರುವ ಎಂ.ಕೆ.ಪಟ್ಟಣಶೆಟ್ಟಿಮತ್ತು ಮಹಾಂತೇಶ ಮಮದಾಪುರ ಇಬ್ಬರೂ ಬಂಡಾಯವೇಳಲು ಸಿದ್ಧತೆ ನಡೆಸಿದ್ದಾರೆ. ವಿಜಯಪುರದ ತೇರದಾಳ ಕ್ಷೇತ್ರದಲ್ಲಿ ಹಾಲಿ ಶಾಸಕ ಸಿದ್ದು ಸವದಿಗೆ ಟಿಕೆಚ್‌ ಘೋಷಿಸಿದ್ದರಿಂದ ಡಾ.ಪಂಡಿತ ಪಟ್ಟಣ, ಭೀಮಶಿ ಮುಗದುಮ…, ರಾಜು ಅಂಬಲಿ ಅವರು ಸೇರಿಕೊಂಡು ಏ.13ರಂದು ಬನಹಟ್ಟಿಈಶ್ವರಲಿಂಗ ಮೈದಾನದಲ್ಲಿ ಬೃಹತ್‌ ಪ್ರತಿಭಟನಾ ರಾರ‍ಯಲಿ ನಡೆಸಲು ಸಜ್ಜಾಗಿದ್ದಾರೆ.

ಬೆಳಗಾವಿಯಲ್ಲಿ 2 ದಿನಗಳ ಗಡುವು

ಬೆಳಗಾವಿ ಉತ್ತರದಲ್ಲಿ ಅನಿಲ… ಬೆನಕೆ, ಬೆಳಗಾವಿ ಗ್ರಾಮೀಣದಲ್ಲಿ ಸಂಜಯ ಪಾಟೀಲ…, ಬೈಲಹೊಂಗಲದಲ್ಲಿ ದೊಡ್ಡನಗೌಡ ಪಾಟೀಲ ಮತ್ತು ಡಾ.ವಿಶ್ವನಾಥ ಪಾಟೀಲ್‌, ರಾಮದುರ್ಗದಲ್ಲಿ ಮಹಾದೇವಪ್ಪ ಯಾದವಾಡ, ಗೋಕಾಕ್‌ ಕ್ಷೇತ್ರದಲ್ಲಿ ಮಾರುತಿ ಅಸ್ಟಗಿ ಟಿಕೆಟ್‌ ಕೈತಪ್ಪಿದ್ದಕ್ಕೆ ಅಸಮಾಧಾನ ಹೊರಹಾಕಿದ್ದಾರೆ. ಬಹುತೇಕ ಎಲ್ಲ ಆಕಾಂಕ್ಷಿಗಳೂ ಬಿಜೆಪಿ ಹೈಕಮಾಂಡ್‌ಗೆ 2 ದಿನಗಳು ಗಡುವು ನೀಡಿದ್ದು, ಅಷ್ಟರೊಳಗೆ ನ್ಯಾಯ ಒದಗಿಸದಿದ್ದರೆ ಮುಂದಿನ ನಡೆ ನಿರ್ಧರಿಸುವುದಾಗಿ ತಿಳಿಸಿದ್ದಾರೆ.

ಅಂಗಾರ ರಾಜಕೀಯ ನಿವೃತ್ತಿ

ಸುಳ್ಯ ಕ್ಷೇತ್ರದ ಟಿಕೆಟ್‌ ಕೈತಪ್ಪಿದ್ದರಿಂದ ಅಸಮಾಧಾನಗೊಂಡಿರುವ ಶಾಸಕ, ಸಚಿವ ಅಂಗಾರ ಅವರು ರಾಜಕಾರಣದಿಂದಲೇ ನಿವೃತ್ತಿ ಘೋಷಿಸಿ, ಹೊಸ ಅಭ್ಯರ್ಥಿ ಪರ ಪ್ರಚಾರ ನಡೆಸಲ್ಲ ಎಂದಿದ್ದಾರೆ. ಅದೇ ರೀತಿ ಉಡುಪಿ ಶಾಸಕ ರಘುಪತಿ ಭಟ್‌ ಕೊನೇ ಕ್ಷಣದಲ್ಲಿ ಟಿಕೆಟ್‌ ಕೈತಪ್ಪಿದ್ದಕ್ಕೆ ಕಣ್ಣೀರು ಹಾಕಿದ್ದಾರೆ.

ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಒಂದೇ ಕಾರಲ್ಲಿ ಪ್ರಯಾಣಿಸಿದ ಖರ್ಗೆ, ಡಿಕೆಶಿ: ತೀವ್ರ ರಾಜಕೀಯ ಕುತೂಹಲ
Karnataka News Live: BBK 12 - ಕಿಚ್ಚ ಸುದೀಪ್‌ ಮುಂದೆ ರೇಷ್ಮೆ ಶಾಲಿನಲ್ಲಿ ಹೊಡೆದಂತೆ ಸತ್ಯದರ್ಶನ ಮಾಡಿಸಿದ ಗಿಲ್ಲಿ ನಟ