
ಬೆಂಗಳೂರು[ನ. 07] ಇಡಿ ವಿಚಾರಣೆ ವೇಳೆ ಡಿಕೆ ಶಿವಕುಮಾರ್ ತಿಹಾರ್ ಜೈಲು ಸೇರಿದ್ದಾಗ ಸಹಜವಾಗಿಯೇ ಬಿಜೆಪಿ ಮತ್ತು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರ ಮೇಲೆ ಹರಿಹಾಯ್ದಿದ್ದರು. ಬಂಡೆ ವಾಪಸ್ ಬಂದ ಮೇಲೆ ಏನು ಮಾಡುತ್ತದೆ ನೋಡಿ? ಎಂದು ಡಿಕೆಶಿ ಅಭಿಮಾನಿಗಳು ಬಹಿರಂಗ ಸವಾಲು ಹಾಕಿದ್ದರು.
ಆದರೆ ಡಿಕೆಶಿ ಹೊರಬಂದ ಮೇಲೆ ಪರಿಸ್ಥಿತಿಯೇ ಭಿನ್ನವಾಗಿದೆ. ಬಿಜೆಪಿ ಮೇಲೆ ಅಂತಹ ಯಾವ ವಾಗ್ದಾಳಿಯನ್ನು ಮಾಡಿಲ್ಲ. ಒಂದರ್ಥದಲ್ಲಿ ಸೈಲಂಟ್ ಆಗಿದ್ದು ದೇವಾಲಯಗಳನ್ನು ಸುತ್ತುದ್ದಿದ್ದಾರೆ. ಈ ನಡುವೆ ಬಿಜೆಪಿ ಹಿರಿಯ ನಾಯಕ ಎಸ್.ಎಂ. ಕೃಷ್ಣ ಸಹ ಡಿಕೆಶಿ ಅವರನ್ನು ಭೇಟಿ ಮಾಡಿದ್ದರು.
ಡಿಕೆಶಿ ಮುಂದೆ ಎರಡು ಹುದ್ದೆ, ಎರಡು ಕಷ್ಟ!
ಹಾಗಾದರೆ ಇದಕ್ಕೆಲ್ಲ ಕಾರಣ ಏನು ಎಂದು ಹುಡುಕುತ್ತಾ ಹೋದರೆ ಅದಕ್ಕೆ ಸಿಗುವ ಉತ್ತರ ವಿನಯ್ ಗುರೂಜಿ! ಎರಡು ದಿನಗಳ ಹಿಂದೆ ಡಿಕೆಶಿ ವಿನಯ್ ಗುರೂಜಿ ಅವರನ್ನು ಭೇಟಿ ಮಾಡಿದ್ದರು. ಈ ವೇಳೆ ಡಿಕೆಶಿಗೆ ನೀವು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರನ್ನು ಒಮ್ಮೆ ಭೇಟಿ ಮಾಡುವುದು ಒಳಿತು ಎಂಬ ಸಲಹೆ ಸಹ ವಿನಯ್ ಗುರೂಜಿ ಅವರಿಂದ ಸಿಕ್ಕಿದೆ.
ನೀವು ಈಗ ಪ್ರತಿಯೊಂದು ಹೆಜ್ಜೆಯನ್ನು ಎಚ್ಚರಿಕೆಯಿಂದ ಇಡಬೇಕು ಎಂದು ವಿನಯ್ ಗುರೂಜಿ ಹೇಳಿದ್ದಾರೆ ಎಂಬ ಖಚಿತ ಮಾಹಿತಿ ಲಭ್ಯವಾಗಿದೆ.
ಡಿಕೆಶಿಗೆ ಕಂಟಕಗಳು ಕಾಡಲಿದೆ ಎಂಬುದನ್ನು ವಿನಯ್ ಗುರೂಜಿ ಹೇಳಿದ್ದರು. ಅದರಂತೆ ಅವರು ಇಡಿ ಬಲೆಗೆ ಸಿಕ್ಕಿ ತಿಹಾರ್ ಜೈಲು ಸೇರುವಂತೆ ಆಗಿತ್ತು.
ದೇವೇಗೌಡರ ಮೃದು ಮಾತಿಗೂ ಇದೇ ಕಾರಣ: ದೇವೇಗೌಡರು ಒಂದರ್ಥದಲ್ಲಿ ಜೆಡಿಎಸ್ ಸಹ ಬಿಜೆಪಿ ಸರ್ಕಾರ ಮತ್ತು ಬಿಎಸ್ ಯಡಿಯೂರಪ್ಪ ಅವರ ಮೇಲೆ ಮೃದುಧೋರಣೆಯನ್ನೇ ತಾಳಿದೆ. ಇದಕ್ಕೆ ಆ ಪಕ್ಷದ ನಾಯಕರು ಇತ್ತೀಚೆಗೆ ನೀಡುತ್ತಿರುವ ಹೇಳಿಕೆಗಳೇ ಆಧಾರ.
ಅಮಿತ್ ಶಾ ಭೇಟಿ ಮಾಡಿ ಡಿಕೆಶಿ ಎಂದಿದ್ದ ಗುರೂಜಿ
ಬಿಎಸ್ ಯಡಿಯೂರಪ್ಪ ಮತ್ತು ದೇವೇಗೌಡರು ದೂರವಾಣಿ ಮೂಲಕ ಮಾತನಾಡಿದ್ದಾರೆ ಎಂಬ ವಿಚಾರ ಎರಡು ದಿನಗಳಿಂದ ದೊಡ್ಡ ಸುದ್ದಿ. ಒಮ್ಮೆ ಹೌದು..ಇನ್ನೊಮ್ಮೆ ಅಲ್ಲ ಎಂದು ಉಭಯ ನಾಯಕರು ಭಿನ್ನವಾದ ಹೇಳಿಕೆಯನ್ನು ನೀಡಿದ್ದರು. ಆದರೆ ಒಟ್ಟಿನಲ್ಲಿ ಮಾತನಾಡಿರುವುದು ನಿಜ ಎಂಬುದೇ ಕೊನೆಗೂ ಸಿಕ್ಕ ಉತ್ತರ.
ಗೌಡರ ಈ ನಡವಳಿಕೆಯ ಹಿಂದೆಯೂ ವಿನಯ್ ಗುರೂಜಿ ಇದ್ದಾರೆ. ಅವರ ಸಲಹೆಯಂತೆ ಕಾದು ನೋಡುವ ಜತೆಗೆ ಸಂಭಾಳಿಸಿಕೊಂಡು ಹೋಗುವ ತಂತ್ರಕ್ಕೆ ಗೌಡರು ಶರಣಾಗಿದ್ದಾರೆ ಎನ್ನಲಾಗುತ್ತಿದೆ. ರಾಜಕೀಯದಲ್ಲಿ ಯಾರೂ ಶತ್ರುಗಳಲ್ಲ, ಯಾರೂ ಮಿತ್ರರಲ್ಲ ಎಂದು ದೇವೇಗೌಡರೇ ಮತ್ತೆ ಹೇಳಿದ್ದರು.
ಒಟ್ಟಿನಲ್ಲಿ ಗೌಡರು ಮತ್ತು ಡಿಕೆಶಿ ಬಿಜೆಪಿ ಮೇಲೆ ಸಾಫ್ಟ್ ಕಾರ್ನರ್ ತಾಳಲು ವಿನಯ್ ಗುರೂಜಿ ಅವರ ಸಲಹೆಗಳೇ ಕಾರಣ ಎಂಬುದು ಆಶ್ರಮದ ಮೂಲಗಳಿಂದ ಸಿಕ್ಕ ಮಾಹಿತಿ.
"
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.