ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ನಮಗೆ ಆಜನ್ಮ ಶತ್ರುವಲ್ಲ. ರಾಜಕೀಯದಲ್ಲಿ ಯಾರೂ ಶತ್ರುಗಳಲ್ಲ. ಹಾಗೆಯೇ ಯಾರೂ ಮಿತ್ರರಲ್ಲ ಎಂದು ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ಬೆಂಗಳೂರು [ನ.07]: ಬಿಜೆಪಿ-ಜೆಡಿಎಸ್ ಹತ್ತಿರವಾಗುತ್ತಿವೆ ಎಂದು ಕಾಂಗ್ರೆಸ್ ಶಾಸಕಾಂಗ ನಾಯಕ ಸಿದ್ದರಾಮಯ್ಯ ಎಂದು ಪದೇ ಪದೇ ಹೇಳುತ್ತಿರುವ ನಡುವೆಯೇ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ನಮಗೆ ಆಜನ್ಮ ಶತ್ರುವಲ್ಲ. ರಾಜಕೀಯದಲ್ಲಿ ಯಾರೂ ಶತ್ರುಗಳಲ್ಲ. ಹಾಗೆಯೇ ಯಾರೂ ಮಿತ್ರರಲ್ಲ ಎಂದು ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ಏತನ್ಮಧ್ಯೆ, ಯಡಿಯೂರಪ್ಪ ಜತೆ ಮಾತನಾಡಿಯೇ ಇಲ್ಲ ಎಂದು ಮಂಗಳವಾರ ಹೇಳಿದ್ದ ದೇವೇಗೌಡರು, ಇದೀಗ ದೂರವಾಣಿ ಸಂಭಾಷಣೆಯನ್ನು ಖಚಿತಪಡಿಸಿದ್ದಾರೆ. ಆದರೆ, ಅದು ಬೆಂಗಳೂರು ನಗರದ ಪುಸ್ತಕ ಮಳಿಗೆಯೊಂದರ ಕುರಿತಾದದ್ದು ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಶತ್ರುಗಳಿಲ್ಲ, ಮಿತ್ರರೂ ಅಲ್ಲ: ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ದೇವೇಗೌಡರು, ಯಾವ ಯಾವ ಸಂದರ್ಭದಲ್ಲಿ ಏನೇನಾಗುತ್ತದೆಯೊ ಗೊತ್ತಿಲ್ಲ. ನಾನು ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಒಂದೇ ವೇದಿಕೆಯಲ್ಲಿ ಭಾಷಣ ಮಾಡಿದ್ದೇ ಅದೇ ರೀತಿ ಪರಸ್ಪರ ಹೋರಾಟವನ್ನೂ ಮಾಡಿದ್ದೇವೆ. ಯಡಿಯೂರಪ್ಪ ಆಗಲಿ ಅಥವಾ ಸಿದ್ದರಾಮಯ್ಯ ಆಗಲಿ. ಯಾರೂ ನಮಗೆ ಶತ್ರುಗಳಲ್ಲ.ಮಿತ್ರರೂ ಅಲ್ಲ. ಅವರು ರಾಜಕೀಯ ಎದುರಾಳಿಗಳು ಎಂದು ವ್ಯಾಖ್ಯಾನಿಸಿದರು.
ಹೆಚ್ಚಿನ ಜಿಲ್ಲಾ ಸುದ್ದಿಗಾಘಿ ಇಲ್ಲಿ ಕ್ಲಿಕ್ಕಿಸಿ
ವಿಧಾನಸಭೆಯ ಉಪಚುನಾವಣೆ ನಂತರ ಅತಂತ್ರ ಪರಿಸ್ಥಿತಿ ನಿರ್ಮಾಣವಾದರೆ ಆಗ ಜೆಡಿಎಸ್ ನಡೆ ಏನಿರುತ್ತದೆ ಎಂಬ ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಗೌಡರು, ಊಹಾಪೋಹಗಳಿಗೆ ಪ್ರತಿಕ್ರಿಯಿಸುವುದಿಲ್ಲ. ಅಂಥ ಸಂದರ್ಭದಲ್ಲಿ ಜೆಡಿಎಸ್ ಸೇರಿದಂತೆ ಕಾಂಗ್ರೆಸ್, ಬಿಜೆಪಿ ಯಾವ ನಿರ್ಧಾರ ಕೈಗೊಳ್ಳುತ್ತವೆ ಎಂಬುದನ್ನು ಈಗಲೇ ಹೇಳಲು ಸಾಧ್ಯವಿಲ್ಲ ಎಂದು ಮಾರ್ಮಿಕವಾಗಿ ಹೇಳಿದರು.
ಬಿಎಸ್‌ವೈ ಜತೆ ಮಾತು: ಇದೇ ವೇಳೆ, ಯಡಿಯೂರಪ್ಪ ಜತೆ ಮಾತುಕತೆ ನಡೆದ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಬೆಂಗಳೂರು ನಗರದ ಬುಕ್‌ಹೌಸ್ ಕುರಿತ ಕಡತವೊಂದಕ್ಕೆ ಮುಖ್ಯಮಂತ್ರಿಗಳ ಕಚೇರಿಯಿಂದ ತಡೆ ಹಿಡಿಯಲಾಗಿತ್ತು. ಆ ಬಗ್ಗೆ ಮುಖ್ಯಮಂತ್ರಿಗಳ ಸಲಹೆಗಾರ ಲಕ್ಷ್ಮೀನಾರಾಯಣ ಅವರ ಮೂಲಕ ಯಡಿಯೂರಪ್ಪ ಜತೆಗೆ ಮಾತನಾಡಿದ್ದೆ ಅಷ್ಟೆ ಎಂದರು. ಯಡಿಯೂರಪ್ಪ ಜತೆಗೆ ಮಾತನಾಡಿದ್ದೀರಾ ಎಂಬ ಸುದ್ದಿಗಾರರ ಮರುಪ್ರಶ್ನೆಗೆ, ನೀವು ಅಂದುಕೊಂಡಿರುವ ಹಾಗೇನೂ ಮಾತನಾಡಿಲ್ಲ. ಆದಾಗ್ಯೂ, ಯಡಿಯೂರಪ್ಪ ಜತೆ ಮಾತನಾಡಬಾರದು ಎಂದೇನೂ ಇಲ್ಲ. ಆದರೆ, ಅಂತಹ ಸಂದರ್ಭ ಬಂದಿಲ್ಲ ಎಂದು ಸ್ಪಷ್ಟಪಡಿಸಿದರು.