
ಬೆಂಗಳೂರು[ಜ.27]: ಮುಂಬರುವ ಲೋಕಸಭಾ ಚುನಾವಣೆಗೆ ಉತ್ತಮ ಪ್ರಜಾಕೀಯ ಪಕ್ಷ ಅಣಿಯಾಗಿದ್ದು, ರಾಜ್ಯದ 28 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ ಎಂದು ಪಕ್ಷದ ರಾಜ್ಯಾಧ್ಯಕ್ಷ ಮತ್ತು ಚಿತ್ರನಟ ಉಪೇಂದ್ರ ಹೇಳಿದ್ದಾರೆ.
ಶನಿವಾರ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಅಧಿಕಾರಕ್ಕಾಗಿ ಪಕ್ಷ ಸಂಘಟಿಸಿಲ್ಲ. ಜನರಿಗೆ ಒಳ್ಳೆಯದಾಗಬೇಕು ಹಾಗೂ ವ್ಯವಸ್ಥೆ ಬದಲಾಗಬೇಕು ಎಂಬುದು ನಮ್ಮ ಗುರಿ. ನಮ್ಮದು ಆಟೋ ಚಿಹ್ನೆ. ಇಂದು ಪ್ರತಿಯೊಬ್ಬರಿಗೂ ಬದಲಾವಣೆ ಬೇಕು ಅನ್ನಿಸುತ್ತಿದೆ. ಹಾಗಾಗಿ ಈ ಬಾರಿ ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡುತ್ತಿದ್ದೇವೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾರಣಾಂತರಗಳಿಂದ ಸ್ಪರ್ಧಿಸಲು ಸಾಧ್ಯವಾಗಲಿಲ್ಲ ಎಂದರು.
ನಮ್ಮ ಪಕ್ಷವನ್ನು ಸೇರಲು ಎಲ್ಲರಿಗೂ ಮುಕ್ತ ಸ್ವಾಗತ. ನಮ್ಮ ಪಕ್ಷ ಸೇರಲು ಆಸಕ್ತಿ ಇರುವವರಿಗೆ ಅವಕಾಶ ಕಲ್ಪಿಸುತ್ತೇವೆ. ಸದ್ಯಕ್ಕೆ 15ರಿಂದ 20 ಮಂದಿ ಮುಂದೆ ಬಂದಿದ್ದಾರೆ. ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಚಾಲ್ತಿಯಲ್ಲಿದೆ. ನಾನು ಕೂಡ ಒಂದು ಕ್ಷೇತ್ರದಲ್ಲಿ ಸ್ಪರ್ಧಿಸುತ್ತೇನೆ. ಯಾವ ಕ್ಷೇತ್ರ ಎನ್ನುವ ಬಗ್ಗೆ ಯೋಚಿಸಿಲ್ಲ. ಮುಂಬರುವ 15 ದಿನಗಳಲ್ಲಿ ಸಂಪೂರ್ಣ ಮಾಹಿತಿ ನೀಡುತ್ತೇವೆ. ಜನರ ಇಚ್ಛೆಯಂತೆ ಅಭ್ಯರ್ಥಿಗಳ ಆಯ್ಕೆ ಮಾಡಲಾಗುವುದು. ಹದಿನೈದು ದಿನಗಳಲ್ಲಿ ಎಲ್ಲದಕ್ಕೂ ಉತ್ತರ ಸಿಗಲಿದೆ ಎಂದು ಮಾಹಿತಿ ನೀಡಿದರು.
ರಾಜ್ಯದಲ್ಲಿ ಬಲಿಷ್ಠವಾದ ಪ್ರಾದೇಶಿಕ ಪಕ್ಷದ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ಪಕ್ಷವೂ ಪ್ರಾದೇಶಿಕವಾಗಿ ಶ್ರಮ ವಹಿಸಲಿದೆ. ಉತ್ತಮ ಪ್ರಜಾಕೀಯ ಪಕ್ಷದಲ್ಲಿ ಕಾರ್ಯಕರ್ತರಿಲ್ಲ, ಮಧ್ಯವರ್ತಿಗಳಿಲ್ಲ. ಚುನಾವಣಾ ಪ್ರಣಾಳಿಕೆ ಎಂಬ ಪರಿಕಲ್ಪನೆ ತಪ್ಪು. ನಿಜವಾದ ಪ್ರಣಾಳಿಕೆ ಏನು ಎಂಬುದು ಜನರಿಗೆ ಗೊತ್ತಿದೆ. ನಮ್ಮ ಅಭ್ಯರ್ಥಿಗಳು ಜನರೊಂದಿಗೆ ಚರ್ಚಿಸಿ ಮಾಹಿತಿ ಸಂಗ್ರಹಿಸುತ್ತಾರೆ. ನಮ್ಮ ಪ್ರಣಾಳಿಕೆ ಜನರಿಂದ ಸಿದ್ಧಗೊಂಡ ಪ್ರಣಾಳಿಕೆಯಾಗಿದೆ. ಸೆಲೆಕ್ಷನ್, ಎಲೆಕ್ಷನ್, ಕಲೆಕ್ಷನ್, ರಿಜೆಕ್ಷನ್, ಪ್ರಮೋಷನ್ ಈ ಐದು ತತ್ವಗಳ ಮೇಲೆ ನಮ್ಮ ಪ್ರಣಾಳಿಕೆ ಸಿದ್ಧವಾಗಿದೆ ಎಂದರು.
ಪ್ರಕಾಶ್ ರಾಜ್‌ಗೆ ಸ್ವಾಗತ
ನಟ, ಚಿಂತಕ ಪ್ರಕಾಶ್ ರಾಜ್ ನಮ್ಮ ಪಕ್ಷಕ್ಕೆ ಬಂದರೆ ಸ್ವಾಗತ. ಅವರನ್ನು ಮೊದಲು ಜನರ ಮುಂದೆ ಇಡ್ತೀವಿ. ಜನರಿಗೆ ಈ ರೀತಿ ಕೆಲಸ ಮಾಡ್ತೀನಿ ಅಂತಾ ಯಾರೇ ಬರಲಿ ಅವಕಾಶ ನೀಡುತ್ತೇವೆ. ಪ್ರಕಾಶ್ ರಾಜ್ ಪಕ್ಷಕ್ಕೆ ಬರುವುದು ಅವರ ನಿರ್ಧಾರ. ಅವರು ಕೆಲಸದ ಮಾದರಿ ತಂದರೆ ಖಂಡಿತ ಸ್ವಾಗತಿಸುತ್ತೇವೆ.
- ಉಪೇಂದ್ರ, ಉತ್ತಮ ಪ್ರಜಾಕೀಯ ಪಕ್ಷ
ದೇವರಿಗೆ ‘ಭಾರತ ರತ್ನ’ ಅಲ್ಲ
ಶ್ರೀ ಶಿವಕುಮಾರ ಸ್ವಾಮೀಜಿಗಳು ನಡೆದಾಡುವ ದೇವರು. ಭಾರತ ರತ್ನ ಪ್ರಶಸ್ತಿಯನ್ನು ಮನುಷ್ಯರಿಗೆ ನೀಡುತ್ತಾರೆಯೇ ಹೊರತು, ದೇವರಿಗೆ ಅಲ್ಲ. ಶ್ರೀಗಳು ಭಾರತ ರತ್ನಕ್ಕಿಂತ ಹೆಚ್ಚು. ಅವರು ವಿಶ್ವರತ್ನ. ಅವರ ಮುಂದೆ ಭಾರತ ರತ್ನ ಪ್ರಶಸ್ತಿ ಶೂನ್ಯ ಎಂದು ಉಪೇಂದ್ರ ಶ್ರೀಗಳಿಗೆ ಭಾರತ ರತ್ನ ಸಿಗದ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು.
ಉತ್ತಮ ಪ್ರಜಾಕೀಯ ಪ್ರಣಾಳಿಕೆ
- ಪ್ರಜೆಗಳಿಗೆ ಏನು ಬೇಕು
- ಜನಪ್ರತಿನಿಧಿಗಳು ಹೇಗೆ ಕೆಲಸ ಮಾಡುತ್ತಾರೆ?
- ಪ್ರಜೆಗಳೊಂದಿಗೆ ನಿರಂತರವಾಗಿ ಯಾವ ರೀತಿಯಲ್ಲಿ ಸಂಪರ್ಕದಲ್ಲಿರುವುದು
- ಬೇಡಿಕೆಗಳನ್ನು ಹೇಗೆ ಕಾರ್ಯರೂಪಕ್ಕೆ ತರುವುದು
- ಪ್ರಜೆಗಳು ಮತ್ತು ಕಾರ್ಯಾಂಗದ ನಡುವೆ ಪಾರದರ್ಶಕ ಸೇತುವೆಯಾಗಿ ಕೆಲಸ
- ದೃಶ್ಯ ದಾಖಲೆಗಳೊಂದಿಗೆ ತಾವು ಮಾಡುವ ಕೆಲಸಗಳ ಸಂಪೂರ್ಣ ಮಾಹಿತಿ ನೀಡುವುದು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.