ವಿಶ್ವಾಸ ಇಲ್ಲದಿದ್ದರೆ ನಾಯಕತ್ವ ತ್ಯಾಗಕ್ಕೆ ಸಿದ್ಧ: ಕುಮಾರಸ್ವಾಮಿ

By Kannadaprabha NewsFirst Published Oct 18, 2019, 7:12 AM IST
Highlights

ವಿಶ್ವಾಸ ಇಲ್ಲದಿದ್ದರೆ ಅಧಿಕಾರ ನಾಯಕತ್ವ ತ್ಯಜಿಸಲು ಸಿದ್ಧ’ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಅವರು ತಮ್ಮ ಪಕ್ಷ ಅಸಮಾಧಾನಿತರಿಗೆ ತಿರುಗೇಟು ನೀಡಿದ್ದಾರೆ. 

ಬೆಂಗಳೂರು [ಅ.18]:  ‘ನನ್ನ ನಾಯಕತ್ವದಲ್ಲಿ ಅವರಿಗೆ ವಿಶ್ವಾಸ ಇಲ್ಲ ಎಂದರೆ ನಾನು ನಾಯಕತ್ವ ತ್ಯಜಿಸಲು ಸಿದ್ಧ’ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಅವರು ಅಸಮಾಧಾನಗೊಂಡಿರುವ ತಮ್ಮ ಪಕ್ಷದ ವಿಧಾನಪರಿಷತ್‌ ಸದಸ್ಯರಿಗೆ ತಿರುಗೇಟು ನೀಡಿದ್ದಾರೆ.

ಪಕ್ಷದ ಹಿರಿಯ ಸದಸ್ಯ ಬಸವರಾಜ ಹೊರಟ್ಟಿಸೇರಿದಂತೆ ಮೇಲ್ಮನೆ ಸದಸ್ಯರು ವರಿಷ್ಠರ ನಡೆಯ ಬಗ್ಗೆ ಬೇಸರ ವ್ಯಕ್ತಪಡಿಸಿದ್ದ ಹಿನ್ನೆಲೆಯಲ್ಲಿ ಗುರುವಾರ ತಮ್ಮ ನಿವಾಸದಲ್ಲಿ ಸುದ್ದಿಗಾರರ ಜತೆ ಕುಮಾರಸ್ವಾಮಿ ಮಾತನಾಡಿದರು.

‘ನಾನು ಎಲ್ಲರ ಜತೆ ಗೌರವಯುತವಾಗಿ ನಡೆದುಕೊಂಡಿದ್ದೇನೆ. ನನ್ನ ನಾಯಕತ್ವದಲ್ಲಿ ಅವರಿಗೆ ವಿಶ್ವಾಸ ಇಲ್ಲ ಎಂದರೆ ನಾನು ನಾಯಕತ್ವ ತ್ಯಜಿಸಲು ಸಿದ್ಧ. ಪಕ್ಷದ ವರಿಷ್ಠ ಎಚ್‌.ಡಿ.ದೇವೇಗೌಡರ ಜತೆ ಮಾತನಾಡಿಕೊಂಡು ಹೊಸ ನಾಯಕತ್ವ ಹುಡುಕಿಕೊಳ್ಳಬಹುದು. ಅದಕ್ಕೆ ನನ್ನ ವಿರೋಧ ಇಲ್ಲ’ ಎಂದು ಖಾರವಾಗಿ ನುಡಿದರು.

ನನ್ನ ನಡೆಯ ಬಗ್ಗೆ ಯಾರಿಂದಲೂ ಪ್ರಮಾಣ ಪತ್ರ ತೆಗೆದುಕೊಳ್ಳುವ ಅಗತ್ಯ ಇಲ್ಲ. ಅವರಿಗೆ ಬೇಕಾದ ನಾಯಕನನ್ನು ಆಯ್ಕೆ ಮಾಡಿಕೊಳ್ಳಬಹುದು. ಪಕ್ಷದ ಸದಸ್ಯರನ್ನು ಕಡೆಗಣಿಸುವ ಕೆಲಸ ಮಾಡಿಲ್ಲ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವ ಪ್ರಯತ್ನ ಮಾಡಲಾಗಿದೆ ಎಂದರು.

ಮದುವೆ ಮನೆಯಲ್ಲಿ ರಾಜೀನಾಮೆ ಸೂತ್ರ, ತೆನೆ ಕೆಳಗಿಳಿಸಲು ರೆಡಿಯಾದ ಜೆಡಿಎಸ್ ಶಾಸಕರು!?...

ಸಾಲ ಮನ್ನಾ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಅವರು, ನಾನು ಘೋಷಣೆ ಮಾಡಿದ್ದ ಸಾಲ ಮನ್ನಾದಿಂದ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಯಾವುದೇ ಹೊರೆಯಾಗುವುದಿಲ್ಲ. ಬಜೆಟ್‌ನಲ್ಲಿ ಹಣ ಇಡಲಾಗಿದೆ. ಸಾಲ ಮನ್ನಾಕ್ಕಾಗಿ ಹೊಸ ಹಣ ಸಂಗ್ರಹ ಮಾಡುವುದು ಬೇಕಾಗಿಲ್ಲ. ವೈಜ್ಞಾನಿಕವಾಗಿ ಸಾಲ ಮನ್ನಾಕ್ಕಾಗಿ ಹಣ ಇಡಲಾಗಿದೆ. ಆ ಹಣ ಬಿಡುಗಡೆ ಮಾಡಿದರೆ ಸಾಕಾಗುತ್ತದೆ. ನೆರೆ ಪರಿಹಾರಕ್ಕೂ ಹಾಗೂ ಸಾಲ ಮನ್ನಾ ಹಣಕ್ಕೂ ಹೊಂದಾಣಿಕೆ ಮಾಡುವ ಅಗತ್ಯ ಇಲ್ಲ. ಯಡಿಯೂರಪ್ಪ ಘೋಷಣೆ ಮಾಡಿದ ಸಾಲ ಮನ್ನಾ ಬಗ್ಗೆ ಅವರೇ ತೀರ್ಮಾನ ಕೈಗೊಳ್ಳಬೇಕು ಎಂದು ಹೇಳಿದರು.

ಅನರ್ಹರ ವಾಪಸ್‌ ಇಲ್ಲ:  ಪ್ರಶ್ನೆಯೊಂದಕ್ಕೆ ಉತ್ತರಿಸಿದ ಕುಮಾರಸ್ವಾಮಿ, ಸರ್ಕಾರವನ್ನು ಪತನಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಜೆಡಿಎಸ್‌ನ ಅನರ್ಹಗೊಂಡಿರುವ ಶಾಸಕರನ್ನು ವಾಪಸ್‌ ಕರೆಸಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.

ಈಗಾಗಲೇ ಅವರನ್ನು ಪಕ್ಷದಿಂದ ಅಮಾನತು ಮಾಡಲಾಗಿದೆ. ಗೋಪಾಲಯ್ಯ ಎರಡು ಬಾರಿ ನಮಗೆ ಮೋಸ ಮಾಡಿದ್ದಾರೆ. ಪಕ್ಷದ ವರಿಷ್ಠರಾದ ದೇವೇಗೌಡ ಹತ್ತಿರ ಬೇಡಿಕೊಂಡು ಮತ್ತೆ ಪಕ್ಷಕ್ಕೆ ಹಿಂತಿರುಗಿದರು. ಮತ್ತೆ ಅವರೇ ನಮಗೆ ದ್ರೋಹ ಮಾಡಿದ್ದಾರೆ. ಗೋಪಾಲಯ್ಯ ಸೇರಿದಂತೆ ಮೂವರನ್ನು ಪಕ್ಷಕ್ಕೆ ವಾಪಸ್‌ ಸೇರಿಸಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.

click me!