
ಕೋಲಾರ (ಫೆ.06): ಬಿ.ವೈ.ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷರಾಗಿರುವುದಕ್ಕೆ ನನ್ನ ಭಿನ್ನಾಭಿಪ್ರಾಯವಿಲ್ಲ, ಬದಲಾವಣೆಗೆ ನಾನು ಒತ್ತಾಯವನ್ನೂ ಮಾಡಿಲ್ಲ, ಆಕಸ್ಮಿಕವಾಗಿ ನನಗೆ ಅಧ್ಯಕ್ಷನಾಗುವ ಅವಕಾಶ ಸಿಕ್ಕರೆ ನಿಭಾಯಿಸಲು ಸಿದ್ಧ ಎಂದು ಮಾಜಿ ಸಚಿವ ಶ್ರೀರಾಮುಲು ತಿಳಿಸಿದರು. ಖಾಸಗಿ ಕಾರ್ಯಕ್ರಮದ ನಿಮಿತ್ತ ಆಗಮಿಸಿದ್ದ ಅವರು ತಾಲೂಕಿನ ಅರಾಭಿಕೊತ್ತನೂರು ಗ್ರಾಮದಲ್ಲಿ ನಡೆದ ಪಾರ್ವತಿ ಸಮೇತ ಸೋಮನಾಥೇಶ್ವರ ಸ್ವಾಮಿ ಬ್ರಹ್ಮ ರಥೋತ್ಸವದಲ್ಲಿ ಪಾಲ್ಗೊಂಡ ನಂತರ ಜಿಪಂ ಮಾಜಿ ಸದಸ್ಯೆ ರೂಪಶ್ರೀ ಮಂಜುನಾಥ್ ಅವರ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.
ಬಿವೈವಿಗೆ ಅನುಭವದ ಕೊರತೆ: ವಿಜಯೇಂದ್ರ ಅವರು ಹೊಸದಾಗಿ ಅಧ್ಯಕ್ಷರಾಗಿದ್ದು, ಅನುಭವದ ಕೊರತೆ ಇರಬಹುದು ಆದರೆ ದಕ್ಷಿಣ ಭಾರತದ ಭೀಷ್ಮರಾಗಿರುವ ಯಡಿಯೂರಪ್ಪ ಮುಂದಾಳತ್ವ ತೆಗೆದುಕೊಳ್ಳಬೇಕಾಗಿದೆ, ಪಕ್ಷ ಮುನ್ನಡೆಸಲು ಯಡಿಯೂರಪ್ಪ ಮುಂದೆ ಬರಬೇಕು ಎಂದು ಮನವಿ ಮಾಡಿದ ಅವರು, ಯಡಿಯೂರಪ್ಪ ಅವರಿಂದ ನಾನು ಬೆಳೆದಿದ್ದೇವೆ, ಅವರು ಮನಸ್ಸು ಮಾಡಿ ನನ್ನಗೆ ಅಧ್ಯಕ್ಷ ಸ್ಥಾನದ ಅವಕಾಶಕೊಟ್ಟರೆ ಇಡೀ ರಾಜ್ಯದಲ್ಲಿ ಸಂಚರಿಸಿ 224 ಕ್ಷೇತ್ರಗಳಲ್ಲೂ ಪಕ್ಷವನ್ನು ಸಂಘಟಿಸಿ ಭಿನ್ನಾಭಿಪ್ರಾಯ ಶಮನ ಮಾಡಲು ಸಿದ್ಧ ಎಂದರು.
ಚುನಾವಣೆ ಸೋಲಿನಿಂದಾಗಿ ಮಿಸ್ ಫೈರ್ ಆಗಿ ರೆಡ್ಡಿ ಜೊತೆ ಭಿನ್ನಾಭಿಪ್ರಾಯ: ಶ್ರೀರಾಮುಲು
ಬಿವೈವಿಯನ್ನು ವಿರೋಧಿಸುವುದಿಲ್ಲ: ಮಾಜಿ ಸಚಿವ ಬಸವನಗೌಡ ಯತ್ನಾಳ್ ಅವರು ಶ್ರೀರಾಮಲು ಅವರ ಹೆಸರು ಪ್ರಸ್ತಾಪಿಸಿರುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ನನ್ನ ಹೆಸರು ಪ್ರಸ್ತಾವನೆ ಮಾಡಿದ್ದಾರೆ, ದೊಡ್ಡ ಮನಸ್ಸಿನಿಂದ ಅವರು ನನ್ನ ಹೆಸರು ಪ್ರಸ್ತಾಪ ಮಾಡಿರುದು ಸಂತೋಷ, ಆದರೆ ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡಿದ್ದಾರೆ ನಮಗೆ ಯಾವುದೇ ಭಿನ್ನಾಭಿಪ್ರಾಯವಿಲ್ಲವೆಂದು ಮತ್ತೊಮ್ಮೆ ಸ್ಪಷ್ಟಪಡಿಸಿದರು.ತಮ್ಮನ್ನು ರಾಜ್ಯ ಬಿಜೆಪಿ ಅಧ್ಯಕ್ಷರನ್ನಾಗಿ ಮಾಡಿದರೆ ಮುಂಬರುವ 2028ರ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ 150 ಸ್ಥಾನ ಗೆಲುವ ಕೆಲಸ ಮಾಡುತ್ತೇನೆ. ಆದರೆ ಇದಕ್ಕೆ ಯಡಿಯೂರಪ್ಪ ಅವರ ಆರ್ಶಿವಾದ ಬೇಕು. ಪಕ್ಷದ ಹೈಕಮಾಂಡ್ ಅಧ್ಯಕ್ಷರ ಬದಲಾವಣೆ ಮಾಡಿ ಅವಕಾಶ ಕೊಟ್ಟರೆ ನಿಭಾಯಿಸಲು ಸಿದ್ದ ಎಂದರು.
ಬಿಜೆಪಿ ಬೆಳೆಸಲು ಒಂದಾಗಬೇಕು: ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆಬರಬೇಕು, ಇರುವ ಗೊಂದಲ ನಿವಾರಣೆಯಾಗಬೇಕು ಮತ್ತು ದೆಹಲಿಗೆ ಹೋಗಿರುವರನ್ನು ಸಮಾಧಾನಮಾಡಬೇಕಾಗಿದೆ. ಒಟ್ಟಾರೆ ಬಿಜೆಪಿ ಉಳಿಸಿ ಬೆಳೆಸಲು ಎಲ್ಲರೂ ಒಂದಾಗಿ ಸಾಗಬೇಕು ಎಂಬುದೇ ನನ್ನ ಅಭಿಲಾಷೆ ಎಂದರು.ಜನಾರ್ಧನರೆಡ್ದಿ ಬಂದ ಮೇಲೆ ಒಬ್ಬಂಟಿಯಾಗಿರುವ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ರಾಜಕೀಯ ಬೇರೆ, ವೈಯಕ್ತಿಕ ಜೀವನವೇ ಬೇರೆ, ಈಗಾಗಲೇ ಇದರ ಬಗ್ಗೆ ಮಾತನಾಡಿರುವೆ. ಪದೇ ಪದೇ ಮಾತನಾಡುವುದು ಬೇಡ ಎಂದು ನಿರ್ಧರಿಸಿದ್ದೇನೆ ಎಂದರು.
ಕಾಂಗ್ರೆಸ್ ಸೇರಲು ಶ್ರೀರಾಮುಲುಗೆ ನಾನು ಆಹ್ವಾನ ಕೊಟ್ಟಿಲ್ಲ: ಡಿ.ಕೆ.ಶಿವಕುಮಾರ್
ಬಿಜೆಪಿ ಬಿಡುವುದಿಲ್ಲ: ಕಾಂಗ್ರೆಸ್‌ನವರು ಸಂಪರ್ಕ ಮಾಡಿರುವ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿ, ಅಭಿಮಾನದಿಂದ ಮತ್ತು ನಮ್ಮ ಸಂಘಟನೆ ನೋಡಿ ಕರೆದಿದ್ದಾರೆ, ಆದರೆ ನಾನು ಯಾವುದೇ ಕಾರಣಕ್ಕೂ ರಾಜಕೀಯವಾಗಿ ನನ್ನನ್ನು ಬೆಳೆಸಿದ ಬಿಜೆಪಿ ಬಿಟ್ಟು ಹೋಗಲು ಮನಸ್ಸು ಮಾಡಿಲ್ಲ ಎಂದರು.ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಓಂಶಕ್ತಿ ಚಲಪತಿ, ಮುಖಂಡ ಬಂಕ್ ಮಂಜುನಾಥ್, ಜಿಪಂ ಮಾಜಿ ಸದಸ್ಯೆ ರೂಪಶ್ರೀ ಮಂಜುನಾಥ್, ತಾಪಂ ಮಾಜಿ ಅಧ್ಯಕ್ಷ ಸೂಲೂರು ಆಂಜಿನಪ್ಪ, ಅಶೋಕ್,ಪೆಮ್ಮಶೆಟ್ಟಿಹಳ್ಳಿ ಮುನಿರಾಜು, ಮುಳ್ಳಹಳ್ಳಿ ಮಂಜುನಾಥ್ ಮತ್ತಿತರರಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.