ಗ್ಯಾರಂಟಿಗಳ ಆಧಾರದ ಮೇಲೆ ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೇಸ್ ಸರ್ಕಾರ ಅಧಿಕಾರಕ್ಕೆ ಬಂದಿದೆ. ಸರ್ಕಾರಕ್ಕೆ ಜನರು ಈಗಾಗಲೇ ಛೀಮಾರಿ ಹಾಕುತ್ತಿದ್ದಾರೆಂದು ಸಂಸದ ಎಸ್.ಮುನಿಸ್ವಾಮಿ ಹೇಳಿದರು.
ಕೋಲಾರ (ಸೆ.09): ಗ್ಯಾರಂಟಿಗಳ ಆಧಾರದ ಮೇಲೆ ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೇಸ್ ಸರ್ಕಾರ ಅಧಿಕಾರಕ್ಕೆ ಬಂದಿದೆ. ಸರ್ಕಾರಕ್ಕೆ ಜನರು ಈಗಾಗಲೇ ಛೀಮಾರಿ ಹಾಕುತ್ತಿದ್ದಾರೆಂದು ಸಂಸದ ಎಸ್.ಮುನಿಸ್ವಾಮಿ ಹೇಳಿದರು. ಜಿಲ್ಲಾಧಿಕಾರಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬಿಜೆಪಿಯಿಂದ ಪ್ರತಿಭಟನೆ ಹಮ್ಮಿಕೊಂಡ ಸಂದರ್ಭದಲ್ಲಿ ಅವರಿಂದ ಜಿಲ್ಲಾಧಿಕಾರಿ ಮನವಿ ಸ್ವೀಕರಿಸುವ ಬದಲು ಕಾಂಗ್ರೆಸ್ ಏಜೆಂಟರಂತೆ ವರ್ತಿಸಿ, ತೊಗಲಕ್ ದರ್ಬಾರ್ ಮಾಡುವ ಮೂಲಕ ಇಲ್ಲಿಂದ ಪರಾರಿಯಾಗಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಂಸದ ಸ್ಥಾನ ಬಿಟ್ಟುಕೊಡಲು ಸಿದ್ಧ: ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಬಿಜೆಪಿ ಮೈತ್ರಿ ವಿಚಾರ ಹೈಕಮಾಂಡ್‌ಗೆ ಬಿಟ್ಟಿ ವಿಚಾರ, ನರೇಂದ್ರ ಮೋದಿಯವರು ಮತ್ತೆ ಪ್ರಧಾನಿಯಾಗಬೇಕೆಂಬುದು ನಮ್ಮ ಆಸೆ. ನಮ್ಮ ಪಕ್ಷದ ಹೈಕಮಾಂಡ್‌ಗೆ ನಾನು ಬದ್ಧ. ದೇಶದ ಭವಿಷ್ಯಕ್ಕಾಗಿ ನಾನು ಸಂಸದ ಸ್ಥಾನ ಬಿಟ್ಟುಕೊಡಲು ಸಿದ್ಧ, ನನ್ನ ರಾಜಕೀಯ ಭವಿಷ್ಯದ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಪಕ್ಷ ನನ್ನ ಕೈ ಬಿಡುವುದಿಲ್ಲ ಎಂಬ ನಂಬಿಕೆ ನನಗಿದೆ. ನಾನು ಸೀಟು ಬಿಟ್ಟುಕೊಡುವ ವಿಚಾರಕ್ಕೆ ಹತಾಶನಾಗುವುದಿಲ್ಲ. ಜೆಡಿಎಸ್- ಬಿಜೆಪಿ ಹೊಂದಾಣಿಕೆಯಾದರೆ ಒಳ್ಳೆಯದೇ ಆಗುತ್ತದೆ. ಕೋಲಾರದ ಸಂಸದ ಸ್ಥಾನ ಜೆಡಿಎಸ್‌ಗೆ ಬಿಟ್ಟುಕೊಡುವ ಬಗ್ಗೆ ಇದುವರೆವಿಗೂ ಪಕ್ಷದಲ್ಲಿ ತೀರ್ಮಾನವಾಗಿಲ್ಲ ಎಂದರು.
ಬಿಜೆಪಿ ಬಗ್ಗೆ ಮಾತನಾಡೋ ನೈತಿಕತೆ ಸಂಸದ ಬಚ್ಚೇಗೌಡರಿಗಿಲ್ಲ: ಎಂಟಿಬಿ ನಾಗರಾಜ್ ಆಕ್ರೋಶ
16ಕ್ಕೆ ಬಿಎಸ್‌ವೈ ಕೋಲಾರಕ್ಕೆ: ಸೆ. 16ರಂದು ಮಾಜಿ ಸಿ.ಎಂ.ಯಡಿಯೂರಪ್ಪ ಕೋಲಾರಕ್ಕೆ ಬರಲಿದ್ದಾರೆ. ರಾಜ್ಯಾಧ್ಯಕ್ಷರು ಹಾಗೂ ಮಾಜಿ ಸಿ.ಎಂ ಬಸವರಾಜ ಬೊಮ್ಮಾಯಿ ಕುರುಡುಮಲೆ ಗಣೇಶನ ದೇವಸ್ಥಾನಕ್ಕೆ ಬರಲಿದ್ದಾರೆ. ಒಳ್ಳೆಯ ಕೆಲಸ ಆರಂಭಿಸಲು ಕುರುಡುಮಲೆ ಗಣಪತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಲಿದ್ದಾರೆ. ಯಡಿಯೂರಪ್ಪ ಈ ಹಿಂದೆ ಚುನಾವಣಾ ಪ್ರಚಾರ ಪ್ರಾರಂಭಿಸಿದಾಗ ಕುರುಡುಮಲೆ ಗಣಪನಿಗೆ ಪೂಜೆ ಸಲ್ಲಿಸಿ ಪ್ರಚಾರ ಆರಂಭಿಸಿದ್ದರು. ಕರ್ನಾಟಕದಲ್ಲಿ ಬಿಜೆಪಿ 28 ಸ್ಥಾನ ಗೆಲ್ಲಲಿದೆ. ರಾಜ್ಯದಲ್ಲಿ ಸೋಲಿನ ಕಹಿ ಮರೆತು ಕಾಂಗ್ರೇಸ್ ಸೋಲಿಸುವ ಕೆಲಸ ಆರಂಭ ಮಾಡುತ್ತೇವೆ ಎಂದರು.
ರೈಲು ನಿಲ್ದಾಣ ಅಭಿವೃದ್ಧಿಗೆ ₹200 ಕೋಟಿ ಬಿಡುಗಡೆ: ಈ ಹಿಂದೆ ಜಿಲ್ಲೆಯ ಸಂಸದರಾಗಿದ್ದ ಕೆ.ಎಚ್.ಮುನಿಯಪ್ಪ ರೈಲ್ವೆ ಸಚಿವರಾಗಿದ್ದಾಗಲೂ ಜಿಲ್ಲೆಗೆ ಯಾವುದೇ ಶಾಶ್ವತ ಯೋಜನೆಗಳನ್ನು ಜಾರಿಗೊಳಿಸದೆ ಬರೀ ಘೋಷಣೆಗೆ ಮಾತ್ರ ಸೀಮಿತವಾಗಿದ್ದರು, ಆದರೆ ಬಿಜೆಪಿ ಸರ್ಕಾರದಲ್ಲಿ ಘೋಷಣೆ ಮಾಡದೆಯೇ ಪ್ರಯಾಣಿಕರಿಗೆ ಅನುಕೂಲವಾಗುವ ಯೋಜನೆಗಳನ್ನು ಅನುಷ್ಟಾನಗೊಳಿಸಲಾಗದೆ ಎಂದು ಸಂಸದ ಎಸ್.ಮುನಿಸ್ವಾಮಿ ಹೇಳಿದರು. ಪಟ್ಟಣದ ರೈಲ್ವೆ ನಿಲ್ದಾಣದಲ್ಲಿ ನಿರ್ಮಾಣ ಮಾಡಿರುವ ಎಸ್ಕಲೇಟರ್ ಉದ್ಘಾಟಿಸಿ ಮಾತನಾಡಿದ ಅವರು, ಕೆ.ಎಚ್.ಮುನಿಯಪ್ಪ ರೈಲ್ವೆ ಸಚಿವರಾಗಿ ಶ್ರೀನಿವಾಸಪುರದಲ್ಲಿ ಕೋಚ್ ಫ್ಯಾಕ್ಟರಿ ನಿರ್ಮಾಣ ಮಾಡುವುದಾಗಿ ಹೇಳಿ ಭೂಮಿ ಪೂಜೆ ಸಹ ಮಾಡಿದ್ದರು. ಆದರೆ ಕಾಮಗಾರಿ ಮಾತ್ರ ಕಾರ‍್ಯಗತವಾಗಲೇಲ್ಲ ಎಂದು ಟೀಕಿಸಿದರು.
5 ಭರವಸೆಗಳಲ್ಲಿ 4 ಗ್ಯಾರಂಟಿಗಳನ್ನು ಜಾರಿಗೊಳಿಸಿ ನುಡಿದಂತೆ ನಡೆದ ಕಾಂಗ್ರೆಸ್: ಸಂಸದ ಸುರೇಶ್
ಮುನಿಯಪ್ಪ ಭರವಸೆ ಘೋಷಣೆಗೆ ಸೀಮಿತ: ಜನರನ್ನು ಮರಳು ಮಾಡಲು ಮುನಿಯಪ್ಪ ಘೋಷಣೆಗಳನ್ನು ಮಾಡುತ್ತಿದ್ದರು. ಆದರೆ ಪ್ರಧಾನಿ ಮೋದಿ ಸರ್ಕಾರ ಜನರ ಸಮಸ್ಯೆಗಳನ್ನು ಅರಿತು ಕೆಲಸ ಮಾಡುತ್ತಿದೆ. ಬೆಂಗಳೂರು ಬಿಟ್ಟರೆ ಅತಿ ದೊಡ್ಡ ಹಾಗೂ ಹೆಚ್ಚು ಇಲಾಖೆಗೆ ಆದಾಯ ಬರುವ ನಿಲ್ದಾಣ ಬಂಗಾರಪೇಟೆ ನಿಲ್ದಾಣವಾಗಿದೆ. ಮುನಿಯಪ್ಪ ಅವರು ಮನಸು ಮಾಡಿದ್ದರೆ ಹೆಚ್ಚಿನ ಸೌಲಭ್ಯಗಳನ್ನು ಒದಗಿಸಬಹುದಿತ್ತು ಎಂದರು. ಆದರೆ ಏನೇನು ಮಾಡದೆ ಸುಳ್ಳು ಭರವಸೆವೆಗಳನ್ನು ನೀಡಿದ್ದರಿಂದ ಸೋಲಿಲ್ಲದ ಸರದಾರನಿಗೆ ಜನತೆ ಸೋಲಿನ ರುಚಿ ತೋರಿಸಿದರು. ಅಮೃತ್ ಯೋಜನೆಯಲ್ಲಿ ಇಲ್ಲಿನ ರೈಲ್ವೆ ನಿಲ್ದಾಣದಲ್ಲಿ ಆಧುನಿಕ ಸೌಲಭ್ಯಗಳನ್ನು ಕಲ್ಪಿಸಲು 2೦ಕೋಟಿ ಮಂಜೂರು ಮಾಡಿಸಲಾಗಿದೆ,ಇದಲ್ಲದೆ 6 ಕೋಟಿ ವೆಚ್ಚದಲ್ಲಿ ಎರಡನೇ ದ್ವಾರ ನಿರ್ಮಾಣಕ್ಕೆ ಅನುದಾನ ಮಂಜೂರು ಮಾಡಿಸಲಾಗಿದೆ, ಇದಲ್ಲದೆ ಬೂದಿಕೋಟೆ ವೃತ್ತದಲ್ಲಿ ಮೇಲ್ಸೇತುವೆ ನಿರ್ಮಾಣಕ್ಕೆ ೩೨ಕೋಟಿ ಅನುದಾನ ಮಂಜೂರಾಗಿದ್ದು ಇಷ್ಟರಲ್ಲದೆ ಕಾಮಗಾರಿ ಆರಂಭವಾಗಲಿದೆ ಎಂದರು.