'ಬಿಜೆಪಿ ಬ್ಲ್ಯಾಕ್ಮೇಲ್‌ ಮಾಡಲು ರಮೇಶ್‌ರಿಂದ ಸಿದ್ದು ಭೇಟಿ'

By Web DeskFirst Published Dec 16, 2019, 8:01 AM IST
Highlights

ಬಿಜೆಪಿ ಬ್ಲ್ಯಾಕ್ಮೇಲ್‌ ಮಾಡಲು ರಮೇಶ್‌ರಿಂದ ಸಿದ್ದು ಭೇಟಿ| ರಮೇಶ್‌ ವಿರುದ್ಧ ಮುಂದೆಯೂ ಸ್ಪರ್ಧೆ

ಗೋಕಾಕ[ಡಿ.16]: ಉಪಮುಖ್ಯಮಂತ್ರಿ ಸ್ಥಾನ ತಪ್ಪಿದ್ದಕ್ಕೆ ಬಿಜೆಪಿಯವರನ್ನು ಬ್ಲ್ಯಾಕ್‌ಮೇಲ್‌ ಮಾಡುವ ತಂತ್ರವನ್ನು ಶಾಸಕ ರಮೇಶ್‌ ಜಾರಕಿಹೊಳಿ ಆರಂಭಿಸಿದ್ದಾರೆ. ಇದೇ ಕಾರಣಕ್ಕೆ ಆಸ್ಪತ್ರೆಗೆ ಹೋಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದಾರೆ ಎಂದು ಅವರ ಸೋದರ ಹಾಗೂ ಗೋಕಾಕ್‌ ಕ್ಷೇತ್ರದ ಪರಾಜಿತ ಕಾಂಗ್ರೆಸ್‌ ಅಭ್ಯರ್ಥಿ ಲಖನ್‌ ಜಾರಕಿಹೊಳಿ ಹೇಳಿದ್ದಾರೆ.

ಗೋಕಾಕ್‌ನಲ್ಲಿ ಭಾನುವಾರ ನಡೆದ ಮತದಾರರಿಗೆ ಕೃತಜ್ಞತೆ ಸಲ್ಲಿಸುವ ಕಾಂಗ್ರೆಸ್‌ ಸಮಾವೇಶದಲ್ಲಿ ಮಾತನಾಡಿದ ಅವರು, ಮುಂದಿನ ಚುನಾವಣೆಯಲ್ಲೂ ರಮೇಶ್‌ ವಿರುದ್ಧ ಸ್ಪರ್ಧಿಸುವುದಾಗಿ ಘೋಷಿಸಿದರು.

‘ನೀರಾವರಿ ಮಂತ್ರಿ ಆಗುತ್ತಾರೆ, ಡಿಸಿಎಂ ಆಗುತ್ತಾರೆ ಅಂತಾ ಏನೇನೋ ಹೇಳಿದರು. ಈ ಮನುಷ್ಯನನ್ನು (ರಮೇಶ್‌ ಜಾರಕಿಹೊಳಿ) ನೀರಾವರಿ ಮಂತ್ರಿ ಮಾಡಿದರೆ ನಿಮ್ಮನ್ನು ನಡು ನೀರಲ್ಲೇ ಬಿಟ್ಟು ಬಿಡ್ತಾನೆ. ಪೌರಾಡಳಿತ ಮಂತ್ರಿ ಸ್ಥಾನ ಕೊಟ್ಟರೆ ಮಾತ್ರ ಗಪ್‌ ಇರೋ ಮನುಷ್ಯ ಇವನು’ ಎಂದು ಕಿಡಿಕಾರಿದರು.

ನಾವು ಮಾವ, ಅಳಿಯಂದಿರ ವಿರುದ್ಧ ಸೋತಿಲ್ಲ. ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಸೋತಿದ್ದೇವೆ. ಯಡಿಯೂರಪ್ಪನನ್ನು ನೋಡಿ ಮತ ಹಾಕಿ ಅಂತಾ ಯಡಿಯೂರಪ್ಪ ಹೇಳಿದ್ದರು. ಹೀಗಾಗಿ ರಮೇಶ್‌ ಜಾರಕಿಹೊಳಿ ಚುನಾವಣೆಯಲ್ಲಿ ಗೆದ್ದಿದ್ದಾರೆ ಎಂದು ತಿಳಿಸಿದರು.

ವಾಮಮಾರ್ಗದಲ್ಲಿ ದುಡ್ಡಿನ ಹೊಳೆ ಹರಿಸಿ ಮೋಸ ಮಾಡಿದ್ದಾರೆ. ನಾವೆಲ್ಲಾ ಒಂದೇ ಎಂದು ಅಪಪ್ರಚಾರ ಮಾಡಿ, ಮುಗ್ಧ ಜನರಿಗೆ ಮೋಸ ಮಾಡಿ ಮತ ಹಾಕಿಸಿಕೊಂಡಿದ್ದಾರೆ ಎಂದು ದೂರಿದರು.

ಮುಂದಿನ ಚುನಾವಣೆಯಲ್ಲೂ ಸತೀಶಣ್ಣ ಟಿಕೆಟ್‌ ಕೊಡಿಸ್ತಾರೆ, ನಾನು ರಮೇಶ್‌ ವಿರುದ್ಧ ಸ್ಪರ್ಧಿಸುತ್ತೇನೆ. ರಮೇಶ್‌ನ ಮಗ ಸಂತೋಷ್‌ ನಾವೆಲ್ಲ ಒಂದೇ ಅಂತಾ ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಮಾಡಿದ್ದಾನೆ. ರಾಜಕೀಯವಾಗಿ ನಾವು ಅವರ ಜೊತೆ ಎಂದಿಗೂ ಕೂಡಲ್ಲ. ಮುಂದಿನ ಚುನಾವಣೆ ವೇಳೆಯೂ ನಾನು ರಮೇಶ್‌ ವಿರುದ್ಧ ಸ್ಪರ್ಧಿಸುತ್ತೇನೆ ಎಂದರು.

click me!