ಅಥಣಿಯಲ್ಲಿ ಲಕ್ಷ್ಮಣ ರೇಖೆ ದಾಟಲಾಗದೆ ಮುಖಭಂಗ, ಆಪರೇಷನ್ ಕಮಲದ ಟೀಂ ಇಲ್ಲಿ ಮುದುಡಿದೆ, ಜಾರಕಿಹೊಳಿಯ ಸ್ವಪ್ರತಿಷ್ಠೆ ರಾಜಕಾರಣಕ್ಕೆ ಬ್ರೇಕ್ ಹಾಕಿದ ಮತದಾರ
ಬೆಳಗಾವಿ(ಮೇ.14): ಆಪರೇಷನ್ ಕಮಲಕ್ಕೆ ಒಳಗಾಗಿ ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದ್ದ ರಮೇಶ ಜಾರಕಿಹೊಳಿ ಟೀಮ್‌ಗೆ ತೀವ್ರ ಮುಖಭಂಗ ಉಂಟಾಗಿದೆ. ಬೆಳಗಾವಿ ರಾಜಕಾರಣದ ಮೂಲಕ ಇಡೀ ಉತ್ತರ ಕರ್ನಾಟಕ ಮತ್ತು ಬಿಜೆಪಿಯಲ್ಲಿ ಹಿಡಿತ ಸಾಧಿಸಲು ಹವಣಿಸಿದ್ದ ರಮೇಶ ಜಾರಕಿಹೊಳಿ ಯೋಜನೆಗೆ ಈ ಫಲಿತಾಂಶ ಬ್ರೇಕ್ ಹಾಕಿದೆ.
ಬಿಜೆಪಿ ಹೈಕಮಾಂಡ್ ಬಳಿ ಬಿಗಿಪಟ್ಟು ಹಿಡಿದು ಬೆಳಗಾವಿ ಜಿಲ್ಲೆಯ ಮೂರ್ನಾಲ್ಕು ಬೆಂಬಲಿಗರಿಗೆ ಟಿಕೆಟ್ ಕೊಡಿಸುವಲ್ಲಿ ಯಶಸ್ವಿಯಾಗಿದ್ದ ರಮೇಶ ಜಾರಕಿಹೊಳಿ, ಅವರಿಗೆ ಗೆಲುವು ತಂದುಕೊಡುವಲ್ಲಿ ಮುಗ್ಗರಿಸಿದರು. ಹೀಗಾಗಿ ಬೆಳಗಾವಿ ಜಿಲ್ಲೆಯಲ್ಲಿ ರಮೇಶ ಟೀಂ ಪೈಕಿ ರಮೇಶ ಒಬ್ಬರೇ ವಿಜೇತರಾಗಿದ್ದಾರೆ. ಉಳಿದಂತೆ ಅವರ ತಂಡದ ಮಹೇಶ ಕುಮಟಳ್ಳಿ (ಅಥಣಿ), ಶ್ರೀಮಂತ ಪಾಟೀಲ (ಕಾಗವಾಡ), ನಾಗೇಶ ಮುನ್ನೋಳ್ಕರ (ಬೆಳಗಾವಿ ಗ್ರಾಮೀಣ) ಸೋಲನ್ನು ಅನುಭವಿಸಿದ್ದಾರೆ.
ಬೆಳಗಾವಿಯಿಂದ 11 ಜನ ಗೆದ್ದಿರುವುದು ಸ್ವಾಭಿಮಾನದ ಪ್ರತೀಕವಾಗಿದೆ: ಲಕ್ಷ್ಮೀ ಹೆಬ್ಬಾಳ್ಕರ್
2018ರ ಚುನಾವಣೆಯಲ್ಲಿ ಅಥಣಿಯ ಮಹೇಶ ಕುಮಟಳ್ಳಿ ಮತ್ತು ಕಾಗವಾಡದ ಶ್ರೀಮಂತ ಪಾಟೀಲರನ್ನು ಕರೆದುಕೊಂಡು ಬಿಜೆಪಿಗೆ ಬಂದಿದ್ದ ರಮೇಶ ಜಾರಕಿಹೊಳಿ, ಒಬ್ಬ ಪ್ರಭಾವಿ ನಾಯಕನಾಗಿ ಹೊರಹೊಮ್ಮಿದ್ದರು. ಲಕ್ಷ್ಮೇ ಹೆಬ್ಬಾಳಕರ್ ಮತ್ತು ಡಿಕೆಶಿ ಮೇಲಿನ ಜಿದ್ದಿಗಾಗಿ ಬೆಳಗಾವಿ ಉಸ್ತುವಾರಿಗೆ ಪಟ್ಟು ಹಿಡಿದಿದ್ದ ನಾಯಕನಿಗೆ ಸ್ವಪ್ರತಿಷ್ಠೆಯೇ ಮುಳ್ಳಾಗಿದೆ.
ಅಥಣಿಯಲ್ಲಿ ದಾಟಲಾಗಿಲ್ಲ ಲಕ್ಷ್ಮಣ ರೇಖೆ:
ಅಥಣಿಯಲ್ಲಿ ‘ಬಿಜೆಪಿಯ ಮಹೇಶ ಕುಮಟಳ್ಳಿ ವರ್ಸಸ್ ಲಕ್ಷ್ಮಣ ಸವದಿ’ ಎನ್ನುವುದಕಿಂತ ‘ರಮೇಶ ಜಾರಕಿಹೊಳಿ ವರ್ಸಸ್ ಲಕ್ಷ್ಮಣ ಸವದಿ’ ಎನ್ನುವ ಸ್ಥಿತಿ ನಿರ್ಮಾಣವಾಗಿತ್ತು. ಕಾಂಗ್ರೆಸ್‌ನ ಲಕ್ಷ್ಮಣ ಸವದಿ ಅವರು ಬರೋಬ್ಬರಿ 1,31,404 ಮತಗಳನ್ನು ಪಡೆದು ಮಹೇಶ ಕುಮಠಳ್ಳಿ (55,282) ವಿರುದ್ಧ 76,122 ಮತಗಳ ಅಂತರದಲ್ಲಿ ಐತಿಹಾಸಿಕ ಗೆಲುವು ದಾಖಲಿಸಿದ್ದಾರೆ.
ಸವದಿ-ಹೆಬ್ಬಾಳ್ಕರ್-ಸತೀಶ್ ಕಾಂಬಿನೇಷನ್: ಬೆಳಗಾವಿ ಕೇಸರಿ ಕೋಟೆ ಛಿದ್ರ
ಬೆಳಗಾವಿ ಗ್ರಾಮೀಣದಲ್ಲಿ ಲಕ್ಷ್ಮೇ ಹೆಬ್ಬಾಳಕರ್ ವಿರುದ್ಧ ಜಿದ್ದಿಗೆ ಬಿದ್ದು ನಾಗೇಶ ಮುನೋಳ್ಕರ್‌ಗೆ ಟಿಕೆಟ್ ಕೊಡಿಸಿ ಕಣಕ್ಕಿಳಿಸಿ ಅವರ ಪರ ಪ್ರಚಾರ ಸಹ ಮಾಡಿದ್ದರು ಜಾರಕಿಹೊಳಿ. ಲಕ್ಷ್ಮೇ ಹೆಬ್ಬಾಳಕರ್ 1,06,590 ಮತಗಳನ್ನು ಪಡೆದು ಮುನ್ನೋಳ್ಕರ್ (ಪಡೆದ ಮತ 51039) ಅವರನ್ನು ಬರೋಬ್ಬರಿ 55,551 ಮತಗಳ ಅಂತರದಲ್ಲಿ ಮಣಿಸಿದ್ದಾರೆ. ಇನ್ನು, ಕಾಗವಾಡದಲ್ಲಿ ಜಾರಕಿಹೊಳಿ ಬೆಂಬಲಿತ ಅಭ್ಯರ್ಥಿ ಬಿಜೆಪಿಯ ಶ್ರೀಮಂತ ಪಾಟೀಲರು (74560 ಮತ) ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಭರಮಗೌಡ ಆಳಗೌಡ 83,387 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದು, 8827 ಮತಗಳ ಅಂತರದಲ್ಲಿ ಶ್ರೀಮಂತ ಪಾಟೀಲರನ್ನು ಪರಾಭವಗೊಳಿಸಿದ್ದಾರೆ.
ರಮೇಶ ಜಾರಕಿಹೊಳಿ ಈಗ ಏಕಾಂಗಿ!
2018ರ ಚುನಾವಣೆಯಲ್ಲಿ ಮೂರ್ನಾಲ್ಕು ಶಾಸಕರನ್ನು ಕಟ್ಟಿಕೊಂಡು ಆಪರೇಷನ್ ಕಮಲದ ತೆಕ್ಕೆಗೆ ಬಂದಿದ್ದ ರಮೇಶ ಜಾರಕಿಹೊಳಿ ಈಗ ಅಕ್ಷರಶ: ಏಕಾಂಗಿ. ಗೋಕಾಕ್ ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ 1,05,313 ಮತಗಳನ್ನು ಪಡೆದು ಕಾಂಗ್ರೆಸ್‌ನ ಕಡ್ಡಿ ಮಹಾಂತೇಶ ಕಲ್ಲಪ್ಪ (79,901) ವಿರುದ್ಧ 25,412 ಮತಗಳ ಅಂತರದಲ್ಲಿ ಗೆದ್ದಿರುವುದೊಂದೇ ಇವರ ಸಾಧನೆ. ಉಳಿದಂತೆ ಇವರ ಜತೆ ಗುರುತಿಸಿಕೊಂಡಿದ್ದ ಮೂವರೂ ಸೋಲು ಕಂಡಿದ್ದರಿಂದ ಜಾರಕಿಹೊಳಿ ಒಂಟಿಯಾಗಿದ್ದಾರೆ.