ರಮೇಶ ಜಾರಕಿಹೊಳಿ ಎಚ್ಚರಿಕೆಯಿಂದ ಮಾತನಾಡಬೇಕು. ರಾಜ್ಯದಲ್ಲಿ ಯಡಿಯೂರಪ್ಪ ಹಳ್ಳಿ ಹಳ್ಳಿ ಅಡ್ಡಾಡಿ ಪಕ್ಷ ಕಟ್ಟಿದ್ದಾರೆ. ಯಡಿಯೂರಪ್ಪ ಬಗ್ಗೆ ಮಾತ ನಾಡುವಾಗ ನಾಲಿಗೆ ಬಿಗಿ ಹಿಡಿದು ಮಾತನಾಡಬೇಕು: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ
ಕೊಪ್ಪಳಬ(ಡಿ.16): ವಿಜಯೇಂದ್ರ ಬದಲಾವಣೆಗೆ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಸಹಕರಿಸಬೇಕು' ಎಂದಿರುವ ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ ಮೇಲೆ ಕಿಡಿಕಾರಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, 'ಯಡಿಯೂರಪ್ಪ ವಿರುದ್ಧ ಮಾತನಾಡುವ ಹಕ್ಕು ರಮೇಶ ಜಾರಕಿಹೊಳಿಗಿಲ್ಲ' ಎಂದು ಅವರು ಕಿಡಿಕಾರಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಮೇಶ ಜಾರಕಿಹೊಳಿ ಎಚ್ಚರಿಕೆಯಿಂದ ಮಾತನಾಡಬೇಕು. ರಾಜ್ಯದಲ್ಲಿ ಯಡಿಯೂರಪ್ಪ ಹಳ್ಳಿ ಹಳ್ಳಿ ಅಡ್ಡಾಡಿ ಪಕ್ಷ ಕಟ್ಟಿದ್ದಾರೆ. ಯಡಿಯೂರಪ್ಪ ಬಗ್ಗೆ ಮಾತ ನಾಡುವಾಗ ನಾಲಿಗೆ ಬಿಗಿ ಹಿಡಿದು ಮಾತನಾಡಬೇಕು. ನಾನು ರಾಜ್ಯದ ಅಧ್ಯಕ್ಷನಿದ್ದೇನೆ. ರಮೇಶ ಜಾರಕಿಹೊಳಿ ಇದೀಗ ಪಕ್ಷಕ್ಕೆ ಬಂದಿದ್ದಾರೆ. ಸಮಸ್ಯೆ ಇದ್ದರೆ ಹೈಕಮಾಂಡ್ ಜೊತೆ ಮಾತನಾಡಲಿ. ಬಹಿರಂಗವಾಗಿ ಮಾತನಾಡುವುದು ಸರಿಯಲ್ಲ ಎಂದರು.
ಅಡ್ಜಸ್ಟ್‌ಮೆಂಟ್‌ಗೆ ಒಪ್ಪದ ನಾಲ್ವರ ಟಾರ್ಗೆಟ್: ಯತ್ನಾಳ ಬಾಂಬ್
ಯಾರು ವಿಫಲ ಅಂತ ಅವರ ಕ್ಷೇತ್ರದ ಜನರೇ ಹೇಳುತ್ತಾರೆ. ರಮೇಶ ಜಾರಕಿಹೊಳಿ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ನಾನು ಒಂದುವರೆ ವರ್ಷದಿಂದ ನಿರಂತರ ಹೋರಾಟ ಮಾಡಿದ್ದೇನೆ. ಮುಡಾ ನಿವೇಶನವನ್ನು ಸಿಎಂ ಮರಳಿ ನೀಡಿದ್ದಾರೆ. ವಾಲ್ಮೀಕಿ ನಿಗಮದ ಹಗರಣದಲ್ಲಿ ರಾಜ್ಯದ ಮುಖ್ಯಮಂತ್ರಿ ತುದಿಗಾಲ ಮೇಲೆ ನಿಲ್ಲುವಂತೆ ಮಾಡಿದ್ದೇವೆ. ನಮ್ಮ ಪಕ್ಷದಲ್ಲಿ ಎಲ್ಲರೂ ಒಂದಾಗುತ್ತಿದ್ದಾರೆ. ಇನ್ನೊಂದು ತಿಂಗಳಲ್ಲಿ ಎಲ್ಲ ಗೊತ್ತಾಗುತ್ತದೆ. ಕೆಲವೇ ದಿನಗಳಲ್ಲಿ ಪಕ್ಷದಲ್ಲಿ ಎಲ್ಲವೂ ಸರಿಹೋಗುತ್ತದೆ ಎಂದು ಹೇಳಿದರು.
ವಿಜಯೇಂದ್ರ ಬದಲಿಸಿ, ಹೊಸ ಅಧ್ಯಕ್ಷರ ನೇಮಿಸಿ: ರಮೇಶ್ ಜಾರಕಿಹೊಳಿ
ಬೆಳಗಾವಿ: ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದಿಂದ ವಿಜಯೇಂದ್ರ ಕೆಳಗಿಳಿಸಲು ನಾವು ಹೋರಾಟ ಮಾಡಿದ್ದು ನಿಜ. ಈ ಬಗ್ಗೆ ಹೈಕಮಾಂಡ್ ಕೈಗೊಳ್ಳುವ ನಿರ್ಣಯಕ್ಕೆ ನಾವು ಬದ್ಧ ಎಂದು ಮಾಜಿ ಸಚಿವ, ಶಾಸಕ ರಮೇಶ ಜಾರಕಿಹೊಳಿ ಹೇಳಿದರು.
ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪನವರ ಬಗ್ಗೆ ನಮಗೆ ಅಪಾರವಾದ ಗೌರವ ಇದೆ. ಯಡಿಯೂರಪ್ಪ ರಾಜ್ಯ ಪ್ರವಾಸ ಮಾಡಿದರೆ ಸ್ವಾಗತ. ಆದರೆ, ಯಾಕೆ ಪ್ರವಾಸ ಮಾಡುತ್ತಾರೆ ಅದನ್ನ ಸ್ಪಷ್ಟಪಡಿಸಬೇಕು. ಮಗನ ಸ್ಥಾನ ಭದ್ರ ಮಾಡೋಕೆ ಮಾಡುತ್ತಿದ್ದಾರಾ? ಪಕ್ಷ ಭದ್ರ ಮಾಡೋಕೆ ಮಾಡುತ್ತಿದ್ದಾರಾ? ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು.
ಯಡಿಯೂರಪ್ಪರವರೇ ನಿಮ್ಮ ಬಗ್ಗೆ ಗೌರವ ಇದೆ. ವಯಸ್ಸಾಗಿದೆ. ಪಕ್ಷ ಎಲ್ಲವನ್ನೂ ನಿಮಗೆ ಕೊಟ್ಟಿದೆ. ದಯವಿಟ್ಟು ಪಕ್ಷವನ್ನು ಬ್ಲ್ಯಾಕ್‌ಮೇಲ್ ಮಾಡಬೇಡಿ. ವಿಜಯೇಂದ್ರ ಬೆನ್ನು ಹತ್ತಿದರೆ ನೀವೂ ಹಾಳಾಗುತ್ತೀರಿ. ಮಗನಾಗಿ ನೋಡಬೇಡಿ, ವೈಫಲ್ಯಗೊಂಡ ಅಧ್ಯಕ್ಷ ಅಂತಾ ನೋಡಿ. ಬಿಜೆಪಿಗೆ ಹೊಸ ರಾಜ್ಯಾಧ್ಯಕ್ಷ ನೇಮಕಕ್ಕೆ ಸಹಕಾರ ಕೊಡಿ ಎಂದು ಒತ್ತಾಯಿಸಿದರು.
ಸಂಘಟನೆ ಸಭೇಲಿ ವಿಜಯೇಂದ್ರ ಶಕ್ತಿ ಪ್ರದರ್ಶನ: ನಾಯಕತ್ವ ಪ್ರಶ್ನಿಸಿದ್ದ ಭಿನ್ನಮತೀಯರಿಗೆ ಸಂದೇಶ
ಡಿಕೆಶಿ ಹಸ್ತಕ್ಷೇಪ ನನಗೆ ಸಂಬಂಧಿಸಿದ್ದಲ್ಲ:
ಬೆಳಗಾವಿ ಜಿಲ್ಲಾ ರಾಜಕಾರಣದಲ್ಲಿ ಡಿ.ಕೆ.ಶಿವಕುಮಾರ ಹಸ್ತಕ್ಷೇಪ ಮಾಡುತ್ತಿರುವ ವಿಚಾರದ ಕುರಿತು ಮಾತನಾಡಿದ ಅವರು, ಅದು ಕಾಂಗ್ರೆಸ್ ಆಂತರಿಕ ಸಮಸ್ಯೆ. ಅದಕ್ಕೂ ನನಗೂ ಸಂಬಂಧ ಇಲ್ಲ. ನಾನು ಬಿಜೆಪಿ ನಿಷ್ಠಾವಂತ ಎಂಎಲ್‌ಎ, ಕಾರ್ಯಕರ್ತ. ಕಾಂಗ್ರೆಸ್ ಕಚೇರಿ ನಿರ್ಮಾಣದಲ್ಲಿ ರಮೇಶ್ ಜಾರಕಿಹೊಳಿ ಪಾತ್ರ ದೊಡ್ಡದಿತ್ತು ಎಂಬುದು ನಿಜ. ಇಂದು ಬೆಳಗಾವಿಯಲ್ಲಿ ಬಿಜೆಪಿ ಕಚೇರಿ ನಿರ್ಮಾಣ ಆಗಲು ಜಾಗ ಕೊಡಿಸಲು ನಾನು ಓಡಾಡಿದ್ದೇನೆ ಎಂದು ಹೇಳಿದರು.
ಕಾಂಗ್ರೆಸ್ ಕಚೇರಿಗೆ ಸತೀಶ ಜಾರಕಿಹೊಳಿ ಕೊಡುಗೆ ಏನು ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಕಚೇರಿ ನಿರ್ಮಾಣಕ್ಕೆ ಸತೀಶ್ ಜಾರಕಿಹೊಳಿ ಕೊಡುಗೆ ಇದೆ. ಅರ್ಧ ಕಾಮಗಾರಿ ಆಗಿದ್ದ ಕಟ್ಟಡ ಪೂರ್ಣಗೊಳಿಸಿದ್ದಾರೆ. ಇಂದಿಗೂ ಕಚೇರಿ ನಿರ್ವಹಣೆಗೆ ಸತೀಶ ಜಾರಕಿಹೊಳಿ ದುಡ್ಡು ನೀಡುತ್ತಿದ್ದಾರೆ ಎಂಬುದನ್ನು ಕೇಳಿದ್ದೇನೆ. ಕಾಂಗ್ರೆಸ್ ಕಚೇರಿ ಕಟ್ಟಡ ಕಾಮಗಾರಿ ಪೂರ್ಣಗೊಳ್ಳಲು ಹಾಗೂ ನಿರ್ವಹಣೆಗೆ ಸತೀಶ ಜಾರಕಿಹೊಳಿ ಕೊಡುಗೆ ಇದೆ ಎಂದು ಹೇಳಿದರು.