ಮಂತ್ರಾಲಯದಲ್ಲಿ ಕನ್ನಡಿಗ ಭಕ್ತರಿಗೆ ಸುಸಜ್ಜಿತ ವಸತಿಗಳ ನಿರ್ಮಾಣ: ಸಚಿವ ರಾಮಲಿಂಗಾರೆಡ್ಡಿ

Kannadaprabha News   | Kannada Prabha
Published : Jul 16, 2025, 06:31 AM IST
Ramalinga reddy

ಸಾರಾಂಶ

ರಾಘವೇಂದ್ರ ಸ್ವಾಮಿಗಳ ದರ್ಶನ ಪಡೆಯಲು ರಾಜ್ಯದಿಂದಲೇ ಅಧಿಕ ಭಕ್ತರು ಆಗಮಿಸುತ್ತಾರೆ. ಅವರ ಅನುಕೂಲಕ್ಕಾಗಿ ಮಂತ್ರಾಲಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಸತಿ ಗೃಹಗಳ ವ್ಯವಸ್ಥೆಗೆ ಕ್ರಮ ವಹಿಸಲಾಗುವುದು ಎಂದು ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.

ರಾಯಚೂರು (ಜು.16): ರಾಘವೇಂದ್ರ ಸ್ವಾಮಿಗಳ ದರ್ಶನ ಪಡೆಯಲು ರಾಜ್ಯದಿಂದಲೇ ಅಧಿಕ ಭಕ್ತರು ಆಗಮಿಸುತ್ತಾರೆ. ಅವರ ಅನುಕೂಲಕ್ಕಾಗಿ ಮಂತ್ರಾಲಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಸತಿ ಗೃಹಗಳ ವ್ಯವಸ್ಥೆಗೆ ಕ್ರಮ ವಹಿಸಲಾಗುವುದು ಎಂದು ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು. ಮಂಗಳವಾರ ಮಂತ್ರಾಲಯಕ್ಕೆ ಆಗಮಿಸಿದ ಸಚಿವರು ಗ್ರಾಮದೇವಿ ಮಂಚಾಲಮ್ಮಗೆ ಪೂಜೆ ಸಲ್ಲಿಸಿ, ನಂತರ ಗುರುರಾಯರ ಮೂಲಬೃಂದಾವನದ ದರ್ಶನ ಪಡೆದರು. ಈ ವೇಳೆ, ಮಠದ ಪೀಠಾಧಿಪತಿ ಡಾ.ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರೊಂದಿಗೆ ಹಲವು ವಿಚಾರಗಳನ್ನು ಚರ್ಚಿಸಿದರು. ಬಳಿಕ, ಶ್ರೀಗಳು ಸಚಿವರಿಗೆ ನೆನಪಿನ ಕಾಣಿಕೆ, ಫಲ-ಮಂತ್ರಾಕ್ಷತೆ ವಿತರಿಸಿ, ಸನ್ಮಾನಿಸಿ, ಆಶೀರ್ವದಿಸಿದರು.

ಈ ವೇಳೆ ಮಾತನಾಡಿ, ಮಂತ್ರಾಲಯಕ್ಕೆ ಪ್ರತಿದಿನ ಅಂದಾಜು 200 ಬಸ್ಸುಗಳು ರಾಜ್ಯದ ಬೇರೆ ಬೇರೆ ಭಾಗಗಳಿಂದ ಬರುತ್ತವೆ. ರೈಲಿನ ಮೂಲಕವು ಜನರು ಮಂತ್ರಾಲಯಕ್ಕೆ ಬರುತ್ತಾರೆ. ಆಂಧ್ರಕ್ಕೆ ಹೋಲಿಸಿದರೆ ಶೇ.60ರಷ್ಟು ಜನರು ಕರ್ನಾಟಕದಿಂದಲೇ ಮಂತ್ರಾಲಯಕ್ಕೆ ಆಗಮಿಸುತ್ತಾರೆ. ಈ ಬಗ್ಗೆ ಮಂತ್ರಾಲಯದ ಸ್ವಾಮೀಜಿ ಅವರೊಂದಿಗೆ ಚರ್ಚಿಸಿದಾಗ, ಕರ್ನಾಟಕದಿಂದ ಬರುವ ಭಕ್ತರ ಅನುಕೂಲಕ್ಕಾಗಿ ಮಂತ್ರಾಲಯದಲ್ಲಿ ವಸತಿ ಗೃಹಗಳ ನಿರ್ಮಾಣಕ್ಕೆ ಸೂಕ್ತವಾದ ಜಾಗದ ವ್ಯವಸ್ಥೆ ಮಾಡಿಕೊಡುವುದಾಗಿ ಸ್ವಾಮೀಜಿ ಮಾತು ಕೊಟ್ಟಿದ್ದಾರೆ ಎಂದರು.

ಮಂತ್ರಾಲಯದಲ್ಲಿ ಈಗಿರುವ ಕರ್ನಾಟಕ ರಾಜ್ಯ ವಸತಿ ಗೃಹ ಕಟ್ಟಡದ ಕಳಪೆ ಕಾಮಗಾರಿಯ ಬಗ್ಗೆ ಲೋಕಾಯುಕ್ತಕ್ಕೆ ದೂರು ಸಲ್ಲಿಕೆಯಾಗಿದೆ. ಕಳಪೆ ಕಾಮಗಾರಿ ನಡೆದಿದೆ ಎಂದು ಲೋಕಾಯುಕ್ತರಿಂದ ಸಾಬೀತಾದಲ್ಲಿ ಸಂಬಂಧಿಸಿದ ಗುತ್ತಿಗೆದಾರರಿಂದಲೇ ಕಟ್ಟಡದ ದುರಸ್ತಿ ಮಾಡಿಸಲಾಗುವುದು. ಇಲ್ಲವಾದಲ್ಲಿ ಕಟ್ಟಡದಲ್ಲಿನ ನೂನ್ಯತೆಗಳ ಬಗ್ಗೆ ಪರಿಶೀಲಿಸಿ ಮಾಸ್ಟರ್ ಪ್ಲಾನ್ ರೂಪಿಸಿ ಕಟ್ಟಡವನ್ನು ಸರಿಪಡಿಸಲಾಗುವುದು ಎಂದು ಹೇಳಿದರು.

ಧಾರ್ಮಿಕ ದತ್ತಿ ಇಲಾಖೆಯಿಂದ ಮಂತ್ರಾಲಯದಲ್ಲಿ ನಿರ್ಮಾಣ ಮಾಡಿರುವ ಕರ್ನಾಟಕ ರಾಜ್ಯದ ವಸತಿ ಗೃಹದಲ್ಲಿ ಒಟ್ಟು 50 ಕೋಣೆಗಳಿವೆ. ಇವುಗಳನ್ನು ಕರ್ನಾಟಕದಿಂದ ಬರುವ ಭಕ್ತರಿಗೆ ಮೀಸಲಿರಿಸಿದೆ. ತಲಾ ನಾಲ್ಕು ಜನರು 12 ಗಂಟೆ ಸಮಯ ವಾಸ್ತವ್ಯ ಮಾಡಲು 500 ರು.ದರ ನಿಗದಿಪಡಿಸಲಾಗಿದೆ. 12 ಗಂಟೆ ಮೀರಿದಾಗ 1,000 ದರ ನಿಗದಿಪಡಿಸಲಾಗುತ್ತದೆ. ಒಟ್ಟು 50 ರೂಮ್ ಗಳ ಪೈಕಿ 30 ರೂಮ್ ಗಳನ್ನು ಆನಲೈನ್ ಮೂಲಕ ಬುಕ್‌ ಮಾಡಲು ಅವಕಾಶ ಮಾಡಿಕೊಡಲಾಗುವುದು. ಇನ್ನುಳಿದ 20 ರೂಮ್ ಗಳನ್ನು ನೇರವಾಗಿ ಹಣ ಪಾವತಿಸಿ ಬುಕ್ಕಿಂಗ್ ಮಾಡುವ ವ್ಯವಸ್ಥೆಗೆ ಕ್ರಮ ವಹಿಸುವುದಾಗಿ ಸಚಿವರು ತಿಳಿಸಿದರು.

ಕಲ್ಯಾಣ ಮಂಟಪ, ಛತ್ರ, ವಸತಿ ಗೃಹಗಳ ನಿರ್ಮಾಣ ಪ್ರಕರಣವು ನ್ಯಾಯಾಲಯದ ಅಂಗಳದಲ್ಲಿರುವುದರಿಂದ ಕಟ್ಟಡದ ದುರಸ್ತಿಗೆ ತೊಡಕಾಗಿ ಪರಿಣಮಿಸಿದೆ. ಮಂತ್ರಾಲಯ, ಶ್ರೀಶೈಲಂ, ತಿರುಪತಿ ಸೇರಿದಂತೆ ನಾನಾ ಕಡೆಗಳಲ್ಲಿ ವಿವಾದದಿಂದ ಕೂಡಿರುವ ಜಾಗದ ಸಮಸ್ಯೆಯನ್ನು ಬೇಗನೆ ಇತ್ಯರ್ಥಪಡಿಸಬೇಕು ಎಂದು ಖುದ್ದು ಆಂಧ್ರಪ್ರದೇಶದ ಮುಖ್ಯಮಂತ್ರಿಗಳು ಆಯಾ ದತ್ತಿ ಸಂಸ್ಥೆಗಳಿಗೆ ಪತ್ರ ಬರೆದಿದ್ದಾರೆ. ಉತ್ತಮ ದರ್ಜೆಯ ನಿರ್ವಹಣೆಗಾಗಿ ಮಂತ್ರಾಲಯದಲ್ಲಿರುವ ಕರ್ನಾಟಕ ವಸತಿ ಗೃಹಗಳ ಕಟ್ಟಡದ ನಿರ್ಹಹಣೆಯ ಉಸ್ತುವಾರಿಯನ್ನು ಪ್ರವಾಸೋದ್ಯಮ ಇಲಾಖೆಗೆ ವಹಿಸುವ ಬಗ್ಗೆ ಪ್ರವಾಸೋದ್ಯಮ ಸಚಿವ ಎಚ್.ಕೆ ಪಾಟೀಲ್ ಅವರೊಂದಿಗೆ ಮಾತನಾಡುವುದಾಗಿ ಸಚಿವರು ತಿಳಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ರಾಜ್ಯದಲ್ಲಿ ರಾಜಕೀಯ ಹೊಲಸೆದ್ದು, ಎಲ್ಲ ಪಕ್ಷಗಳು ಗಬ್ಬೆದ್ದು ಹೋಗಿವೆ: ಕೆ.ಎಸ್.ಈಶ್ವರಪ್ಪ
ಸಿಎಂ ಕುರ್ಚಿ ಪೈಪೋಟಿಯಲ್ಲಿ ರೈತ ಸಮಸ್ಯೆ ಗೌಣ: ಬಿ.ವೈ.ವಿಜಯೇಂದ್ರ ಟೀಕೆ