ಸಿದ್ದರಾಮಯ್ಯ ಎಣಿಕೆ ಪ್ರಕಾರ ರಾಜ್ಯಸಭೆಗೆ ಮತದಾನ ನಡೆದರೆ ಈಗ ಜೆಡಿಎಸ್‌ನಲ್ಲಿರುವ ಜಿ.ಟಿ.ದೇವೇಗೌಡ, ಗುಬ್ಬಿಯ ಶ್ರೀನಿವಾಸ್, ಕೋಲಾರದ ಶ್ರೀನಿವಾಸಗೌಡ, ಅರಸಿಕೆರೆಯ ಶಿವಲಿಂಗೇಗೌಡ ಕಾಂಗ್ರೆಸ್‌ನತ್ತ ಹಾರುತ್ತಾರೆ.
India Gate Column by Prashant Natu
2023ರ ಚುನಾವಣೆವರೆಗೆ ಯಾವುದೇ ಕಾರಣಕ್ಕೂ ದೇವೇಗೌಡರ (Devegowda) ಜೊತೆ ಮೈತ್ರಿ ಸಹವಾಸ ಬೇಡ ಎನ್ನುವ ಬಗ್ಗೆ ಸಿದ್ದರಾಮಯ್ಯ (siddaramaiah) ಮತ್ತು ಡಿ.ಕೆ.ಶಿವಕುಮಾರ್ ಅಪರೂಪಕ್ಕೆ ಒಂದೇ ಅಭಿಪ್ರಾಯಕ್ಕೆ ಬಂದಂತೆ ಕಾಣುತ್ತಿದೆ. ಅದರಲ್ಲೂ ಕಾಂಗ್ರೆಸ್ ಹೈಕಮಾಂಡ್ ರಣದೀಪ್ ಸುರ್ಜೇವಾಲಾ ಮೂಲಕ ದೇವೇಗೌಡರ ಜೊತೆ ಮಾತುಕತೆಗೆ ಮನವೊಲಿಸುತ್ತಿದ್ದರೂ ಕೂಡ ಸಿದ್ದರಾಮಯ್ಯ ತಯಾರಿಲ್ಲ. ನಾವು ಸೋತರೂ ಚಿಂತೆ ಇಲ್ಲ, ಆದರೆ ಚುನಾವಣೆಗೆ ಒಂದು ವರ್ಷ ಮುಂಚೆ ದೇವೇಗೌಡರ ಮುಂದೆ ಮಂಡಿ ಊರಿದರೆ 2023ರಲ್ಲಿ ಕಷ್ಟ ಆಗುತ್ತದೆ.
ಮೊದಲನೇ ಅಭ್ಯರ್ಥಿ ನೀವೇ ಹೇಳಿದ ಜೈರಾಮ್ ರಮೇಶರನ್ನು ನಿಲ್ಲಿಸಿದ್ದೇವೆ. ಎರಡನೇ ಅಭ್ಯರ್ಥಿ ಇಲ್ಲಿನ ಲೋಕಲ್ ಪಾಲಿಟಿಕ್ಸ್. ನೀವು ಜಾಸ್ತಿ ತಲೆ ಕೆಡಿಸಿಕೊಳ್ಳಬೇಡಿ ಎಂದು ಸಿದ್ದು ದಿಲ್ಲಿ ನಾಯಕರಿಗೆ ಹೇಳಿಬಿಟ್ಟಿದ್ದಾರೆ. ಅರ್ಥ ಸ್ಪಷ್ಟ, ಈಗ ದೇವೇಗೌಡರ ಜೊತೆ ಕಾಂಗ್ರೆಸ್ ಮೈತ್ರಿ ಮಾಡಿಕೊಂಡರೆ 2023ಕ್ಕೆ ತಮಗೆ ಅಧಿಕಾರದ ಬಾಗಿಲು ಮುಚ್ಚುತ್ತದೆ. ತಾವು ಇನ್ನೊಮ್ಮೆ ಮುಖ್ಯಮಂತ್ರಿ ಆಗಬೇಕಾದರೆ ಕಾಂಗ್ರೆಸ್ ಏಕಾಂಗಿಯಾಗಿ ಅಧಿಕಾರಕ್ಕೆ ಬರಬೇಕು. ಅದು ಆಗಬೇಕಾದರೆ ಜೆಡಿಎಸ್ ಇನ್ನಷ್ಟುದುರ್ಬಲ ಆಗಬೇಕು.
ಹೀಗಾಗಿ ಈಗಲೇ 4ರಿಂದ 5 ಒಕ್ಕಲಿಗ ಶಾಸಕರು ಕ್ರಾಸ್‌ವೋಟ್ ಮಾಡಿದರೆ ಒಂದು ವೇಗ ದೊರಕುತ್ತದೆ ಎಂಬ ಧಾಟಿಯಲ್ಲಿ ಸಿದ್ದು ಚಿಂತನೆ ನಡೆದಿದೆ. ಈಗ ನಮ್ಮದು ಒಂದು ಕಣ್ಣು ಹೋದರೂ ಪರವಾಗಿಲ್ಲ, ಜೆಡಿಎಸ್‌ನದು ಎರಡೂ ಕಣ್ಣು ಹೋಗಬೇಕು. ಆಗ ಮಾತ್ರ 2023ಕ್ಕೆ ಬಾಗಿಲು ತೆರೆಯುತ್ತದೆ ಎಂಬ ಸಿದ್ದು ಅಭಿಪ್ರಾಯ ಡಿ.ಕೆ.ಶಿವಕುಮಾರ್‌ಗೂ ಕೂಡ ಮನವರಿಕೆ ಆಗಿದೆ. ಆದರೆ ಸುಮ್ಮನಿರದ ದೇವೇಗೌಡರು ಮಲ್ಲಿಕಾರ್ಜುನ ಖರ್ಗೆ ಮೂಲಕ ದಿಲ್ಲಿಯೊಂದಿಗೆ ತೆರೆಯ ಹಿಂದಿನ ಮಾತುಕತೆ ನಡೆಸುತ್ತಿದ್ದಾರೆ.
ಮೇಲ್ಮನೆ ಟಿಕೆಟ್ ಫೈಟ್: ವಿಜಯೇಂದ್ರ ಟಿಕೆಟ್ ಕೈ ಬಿಟ್ಟಿದ್ದು ಸ್ವತಃ ಮೋದಿ..!
ಆತ್ಮಸಾಕ್ಷಿ ಅಂದರೆ ಕ್ರಾಸ್ ವೋಟ್!
ಸಿದ್ದರಾಮಯ್ಯ ಎಣಿಕೆ ಪ್ರಕಾರ ರಾಜ್ಯಸಭೆಗೆ ಮತದಾನ ನಡೆದರೆ ಈಗ ಜೆಡಿಎಸ್‌ನಲ್ಲಿರುವ ಜಿ.ಟಿ.ದೇವೇಗೌಡ, ಗುಬ್ಬಿಯ ಶ್ರೀನಿವಾಸ್, ಕೋಲಾರದ ಶ್ರೀನಿವಾಸಗೌಡ, ಅರಸಿಕೆರೆಯ ಶಿವಲಿಂಗೇಗೌಡ ಕಾಂಗ್ರೆಸ್‌ನತ್ತ ಹಾರುತ್ತಾರೆ. ಕಾಕತಾಳೀಯ ಎಂದರೆ ನಾಲ್ವರೂ ಕೂಡ ಒಕ್ಕಲಿಗರು. ಈಗಲೇ ಕಾಂಗ್ರೆಸ್ 2023ರ ಟಿಕೆಟ್ ಭರವಸೆ ನೀಡಿದರೆ ರಾಜ್ಯಸಭೆಯಲ್ಲಿ ಅಡ್ಡ ಮತದಾನ ಮಾಡಲು ನಾಲ್ವರೂ ಹಿಂದೆಮುಂದೆ ನೋಡುವುದಿಲ್ಲ. ಸಿದ್ದು ಲೆಕ್ಕಾಚಾರದ ಪ್ರಕಾರ ಇದರಿಂದ 2023ಕ್ಕೆ ಮುಂಚೆ ಎರಡು ಸಂದೇಶ ಹೋಗುತ್ತದೆ.
ಒಂದು, ಒಕ್ಕಲಿಗರು ಜೆಡಿಎಸ್ ಬಿಟ್ಟು ಹೋಗುತ್ತಿದ್ದಾರೆ, ಎರಡು ದೇವೇಗೌಡರು ಮುಸ್ಲಿಂ ಅಭ್ಯರ್ಥಿಯನ್ನು ಸೋಲಿಸಿದರು ಎಂದು. ಸಿದ್ದು ಆಟ ಈ ಬಾರಿ ಬಲು ವಿಚಿತ್ರವಾಗಿದೆ. 2023ಕ್ಕೆ ತನಗೊಂದು ಬಾಗಿಲು ಖುಲ್ಲಾ ಇಡಲು ತಕ್ಷಣದ ಲಾಭ ಬಿಜೆಪಿಗೆ ಆದರೂ ಅಡ್ಡಿ ಇಲ್ಲ, ಆದರೆ ಬಲು ಜೋರಾದ ಗಾಯ ಜೆಡಿಎಸ್‌ಗೆ ಮಾಡಬೇಕು ಎಂಬ ಹುಮ್ಮಸ್ಸಿ ನಲ್ಲಿದ್ದಾರೆ.
ಕಾಂಗ್ರೆಸ್- ಪ್ರಶಾಂತ್ ಕಿಶೋರ್ ನಡುವಿನ ಮಾತುಕತೆ ಮುರಿದು ಬೀಳಲು ನಿಜವಾದ ಕಾರಣ ಏನು?
ಬಿಎಸ್‌ವೈ, ಸಿದ್ದು, ಎಚ್‌ಡಿಕೆ ಸಂಗೀತ ಕುರ್ಚಿ
ಕರ್ನಾಟಕದ ರಾಜಕಾರಣ 2004ರಿಂದ ಸುತ್ತು ಹೊಡೆಯುತ್ತಿರುವುದು ಯಡಿಯೂರಪ್ಪ, ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ನಡುವೆ. ಅಧಿಕಾರ ಸಿಗುತ್ತದೆ ಎಂದರೆ ಮೂರರಲ್ಲಿ ಇಬ್ಬರು ಒಟ್ಟಿಗೆ ಬರುವುದು ಅನೇಕ ಬಾರಿ ನಡೆದಿದೆ. 2006ರಲ್ಲಿ ಸಿದ್ದು ದೂರ ಇಡಲು ಬಿಎಸ್‌ವೈ-ಕುಮಾರಸ್ವಾಮಿ ಒಟ್ಟಿಗೆ ಬಂದರೆ, 2011ರಲ್ಲಿ ಯಡಿಯೂರಪ್ಪ ವಿರುದ್ಧ ಸಿದ್ದು ಮತ್ತು ಕುಮಾರಣ್ಣ ಒಟ್ಟಿಗೆ ಬಂದು ಬಾಲಚಂದ್ರ ಜಾರಕಿಹೊಳಿ ಮತ್ತು 16 ಮಂದಿಯ ತಂಡವನ್ನು ಬಂಡಾಯ ಎಬ್ಬಿಸಿದ್ದರು. 2018ರಲ್ಲಿ ಬಿಎಸ್‌ವೈ ಮತ್ತು ಕುಮಾರಣ್ಣ ಒಟ್ಟಿಗೆ ಬಂದು ಸಿದ್ದುಗೆ ಚಾಮುಂಡೇಶ್ವರಿಯಲ್ಲೇ ಬಲೆ ಹಾಕಿದ್ದರು.
ಈಗ ಮತ್ತೊಮ್ಮೆ ಈ ಮ್ಯೂಸಿಕಲ್ ಚೇರ್ ಆಟಕ್ಕೆ ವೇಗ ಸಿಕ್ಕಿದೆ. ಯಡಿಯೂರಪ್ಪ ಅವರ ಪರಮಾಪ್ತ ಲೆಹರ್ ಸಿಂಗ್‌ರನ್ನು ಗೆಲ್ಲಿಸಲು ಕುಮಾರಣ್ಣ ಮತ್ತು ಸಿದ್ದು ಕುಸ್ತಿ ಹಿಡಿದಿದ್ದಾರೆ. ರಾಜಕೀಯ ಮಜವಾಗಿರುತ್ತದೆ ನೋಡಿ. ಇವೆಲ್ಲ ಬೆಳವಣಿಗೆ ನೋಡಿದರೆ 2018ರಲ್ಲಿ ಹೇಗೆ ಯಡಿಯೂರಪ್ಪ ಇನ್ನೊಮ್ಮೆ ಮುಖ್ಯಮಂತ್ರಿ ಆಗುತ್ತಾರಾ ಎಂದು ಪಾಲಿಟಿಕ್ಸ್ ಸುತ್ತು ಹೊಡೆದಿತ್ತೋ, ಹಾಗೆಯೇ 2023ರಲ್ಲಿ ಸಿದ್ದುಗೆ ಇನ್ನೊಂದು ಅವಕಾಶ ಸಿಗುತ್ತಾ ಎಂದು ಗಿರಕಿ ಹೊಡೆಯಲಿದೆ ಅನ್ನಿಸುತ್ತದೆ.
India Gate:ನಾಯಕತ್ವ ಬದಲಿಸಲು ಬಿಜೆಪಿ ಸಿದ್ಧವಿಲ್ಲ, ಹೈಕಮಾಂಡ್ ಲೆಕ್ಕಾಚಾರ ಏನು?
ದೇವೇಗೌಡರ ಪರ್ಯಾಯ ಪಾಲಿಟಿಕ್ಸ್
2008ರ ಸಮಯ. ಯಡಿಯೂರಪ್ಪನವರಿಗೆ ಅಧಿಕಾರ ಬಿಟ್ಟುಕೊಡಲು ದೇವೇಗೌಡರಿಗೆ ಮನಸ್ಸಿರಲಿಲ್ಲ. ಹೀಗಾಗಿ ಈಶ್ವರಪ್ಪ ಮತ್ತು ಶೆಟ್ಟರ್‌ರಲ್ಲಿ ಒಬ್ಬರನ್ನು ಮುಖ್ಯಮಂತ್ರಿ ಮಾಡಿದರೆ ನಾವು ಬೆಂಬಲ ಕೊಡುತ್ತೇವೆ ಎಂದು ಆಗಿನ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ರಾಜನಾಥ್ ಸಿಂಗ್‌ರಿಗೆ ಹೇಳಿ ಬಂದಿದ್ದರು. ಅದೇ ದೇವೇಗೌಡರು 2009ರಲ್ಲಿ ಕುಮಾರಸ್ವಾಮಿಯನ್ನು ಕೇಂದ್ರದಲ್ಲಿ ಮಂತ್ರಿ ಮಾಡಿ, ರಾಜ್ಯದಲ್ಲಿ ಬಿಜೆಪಿ ತೆಗೆಯೋಣ ಎಂದು ರಾತ್ರೋರಾತ್ರಿ ಕುಮಾರಸ್ವಾಮಿ ಅವರನ್ನು ಸೋನಿಯಾ ಗಾಂಧಿ ಮನೆ 10 ಜನಪಥ್‌ಗೆ ಕಳುಹಿಸಿದ್ದರು. ವ್ಯತ್ಯಾಸ ಇಷ್ಟೆ, ಆಗ ದೇವೇಗೌಡರು ಮಾತ್ರ ಏಕಕಾಲಕ್ಕೆ ಇಬ್ಬರ ಹೆಗಲ ಮೇಲೆ ಕೈಹಾಕುತ್ತಿದ್ದರು. ಈಗ ಅವರದೇ ಗರಡಿಯಲ್ಲಿ ಪಳಗಿದ ಸಿದ್ದು ಕೂಡ ಅವೇ ಅಸ್ತ್ರ ಪ್ರಯೋಗ ಮಾಡುತ್ತಿದ್ದಾರೆ. ತೆರೆಯ ಹಿಂದೆ ಏನೂ ನಡೆಯದೆ ಹೀಗೆಲ್ಲಾ ಮೂರು ಮೂರು ಅಭ್ಯರ್ಥಿಗಳು ನಿಲ್ಲೋದು ಸಾಧ್ಯ ಇಲ್ಲ ಬಿಡಿ.
ಯಾರು ಈ ಲೆಹರ್ ಸಿಂಗ್?
ರಾಜಸ್ಥಾನ ಮೂಲದ ಮಾರ್ವಾಡಿಗಳು ಇಲ್ಲದ ಊರು ಇಲ್ಲ, ಪ್ರಭಾವ ಇಲ್ಲದ ಕ್ಷೇತ್ರಗಳಿಲ್ಲ. ದಿಲ್ಲಿಯಲ್ಲಿ ಪ್ರಭಾವಿ ಆಗಿದ್ದ ಅನಂತಕುಮಾರ್ ದೂರವಾದ ಮೇಲೆ ದಿಲ್ಲಿ ಸಂಪರ್ಕಕ್ಕಾಗಿ ಯಡಿಯೂರಪ್ಪ ಉಪಯೋಗಿಸಿದ್ದು ಈ ಜೈನ್ ಮಾರ್ವಾಡಿ, ರಾಜಸ್ಥಾನದ ರಾಜಸಮುಂದ ಜಿಲ್ಲೆಯ ಕುಮಾರಿಯಾದಿಂದ ಬೆಂಗಳೂರಿಗೆ ವಲಸೆ ಬಂದಿದ್ದ ಲೆಹರ್ ಸಿಂಗ್ ಸಿರೋಯಾರನ್ನು. ಅವೆನ್ಯೂ ರೋಡ್‌ನಲ್ಲಿ ಸಣ್ಣ ವ್ಯಾಪಾರಿ ಆಗಿದ್ದ ಲೆಹರ್ ಸಿಂಗ್ ಬೆಂಗಳೂರಿಗೆ ಬರುತ್ತಿದ್ದ ದಿಲ್ಲಿ ನಾಯಕರನ್ನು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸುವ ಬಿಜೆಪಿ ಪ್ರೊಟೋಕಾಲ್ ತಂಡದಲ್ಲಿದ್ದರು. ನೋಡನೋಡುತ್ತಲೇ ಲೆಹರ್ ಹಿಂದಿ ಬಾರದ ಯಡಿಯೂರಪ್ಪಗೆ ದಿಲ್ಲಿ ವ್ಯವಹಾರಗಳ ಕಣ್ಣು, ಕಿವಿ, ಮೂಗು ರೀತಿ ಪ್ರಭಾವಿ ಆದರು. ಇತ್ತೀಚೆಗೆ ಕೇಳಿದಾಗಲೆಲ್ಲಾ ಲೆಹರ್ ಸಿಂಗ್ ನಾನು ಯಡಿಯೂರಪ್ಪರಿಂದ ದೂರ ಇದ್ದೇನೆ ಎಂದು ಹೇಳಿಕೊಳ್ಳುತ್ತಿದ್ದರು. ಈಗ ಏಕಾಏಕಿ ಟಿಕೆಟ್ ಪಡೆದು ಕಾಂಗ್ರೆಸ್-ಜೆಡಿಎಸ್ ಜಗಳದಲ್ಲಿ ರಾಜ್ಯಸಭೆ ಚುನಾವಣೆಯಲ್ಲಿ ಗೆದ್ದರೂ ಆಶ್ಚರ್ಯವಿಲ್ಲ ಎನ್ನುವ ಸ್ಥಿತಿಯಲ್ಲಿದ್ದಾರೆ.
- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ
- ಇಂಡಿಯಾ ಗೇಟ್, ದೆಹಲಿಯಿಂದ ಕಂಡ ರಾಜಕಾರಣ