ಎಚ್ಚರಿಕೆ ಗಿಚ್ಚರಿಕೆ ಎಲ್ಲ ನಡೆಯಲ್ಲ, ಡಿಸಿಎಂ ಸ್ಥಾನಕ್ಕೆ ಕಿರೀಟ ಇಲ್ಲ: ಡಿಕೆಶಿಗೆ ಸಚಿವ ರಾಜಣ್ಣ ತಿರುಗೇಟು

Published : Feb 18, 2025, 06:57 AM ISTUpdated : Feb 18, 2025, 07:33 AM IST
ಎಚ್ಚರಿಕೆ ಗಿಚ್ಚರಿಕೆ ಎಲ್ಲ ನಡೆಯಲ್ಲ, ಡಿಸಿಎಂ ಸ್ಥಾನಕ್ಕೆ ಕಿರೀಟ ಇಲ್ಲ: ಡಿಕೆಶಿಗೆ ಸಚಿವ ರಾಜಣ್ಣ ತಿರುಗೇಟು

ಸಾರಾಂಶ

ನಾನೇನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೆಸರು ದುರ್ಬಳಕೆ ಮಾಡಿಕೊಂಡಿಲ್ಲ. ಡಿ.ಕೆ.ಶಿವಕುಮಾರ್‌ ಎಐಸಿಸಿ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುವುದನ್ನು ನಿಲ್ಲಿಸಲಿ. ಅವರು ಎಐಸಿಸಿ ಹೆಸರು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂಬುದು ಆರೋಪವಲ್ಲ, ವಾಸ್ತವ.’

 ಬೆಂಗಳೂರು : ‘ನಾನೇನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೆಸರು ದುರ್ಬಳಕೆ ಮಾಡಿಕೊಂಡಿಲ್ಲ. ಡಿ.ಕೆ.ಶಿವಕುಮಾರ್‌ ಎಐಸಿಸಿ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುವುದನ್ನು ನಿಲ್ಲಿಸಲಿ. ಅವರು ಎಐಸಿಸಿ ಹೆಸರು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂಬುದು ಆರೋಪವಲ್ಲ, ವಾಸ್ತವ.’ ಸಿದ್ದರಾಮಯ್ಯ ಹೆಸರು ದುರ್ಬಳಕೆ ಮಾಡಿಕೊಳ್ಳಬಾರದು ಎಂದು ಹೇಳಿಕೆ ನೀಡಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ಗೆ ಸಹಕಾರ ಸಚಿವ ಕೆ.ಎನ್‌.ರಾಜಣ್ಣ ನೀಡಿರುವ ತಿರುಗೇಟು ಇದು.

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ನಾನು ಸಿದ್ದರಾಮಯ್ಯ ಸೇರಿ ಯಾರ ಹೆಸರನ್ನೂ ದುರ್ಬಳಕೆ ಮಾಡಿಕೊಂಡಿಲ್ಲ. ದುರ್ಬಳಕೆ ಮಾಡಿಕೊಂಡು ಸದಾಶಿವನಗರ, ಡಾಲರ್ಸ್‌ ಕಾಲೊನಿಯಲ್ಲಿ ನಾನೇನು ಎರಡು ಮನೆ ಕಟ್ಟಿದ್ದೇನೆಯೇ? ಎಲ್ಲದಕ್ಕೂ ಎಐಸಿಸಿ ಹೇಳಿದೆ, ಹೈಕಮಾಂಡ್‌ ಹೇಳಿದೆ ಎಂದು ಹೇಳುತ್ತಾ ಎಐಸಿಸಿ ಹೆಸರು ದುರ್ಬಳಕೆ ಮಾಡಿಕೊಳ್ಳುವುದನ್ನು ಮೊದಲು ಶಿವಕುಮಾರ್‌ ನಿಲ್ಲಿಸಲಿ. ಸಣ್ಣ ಪುಟ್ಟ ವಿಚಾರಗಳಿಗೆಲ್ಲ ಹೈಕಮಾಂಡ್‌ ಯಾಕೆ ಹೇಳುತ್ತದೆ? ಇವರು ಅಲ್ಲಿ ಹೋಗಿ ದೂರು ಹೇಳಿದಾಗ ಅವರು ಸೂಚನೆ ಕೊಟ್ಟಿರುತ್ತಾರೆ’ ಎಂದು ತಿರುಗೇಟು ನೀಡಿದರು.

ಎಚ್ಚರಿಕೆ ಗಿಚ್ಚರಿಕೆ ನಡೆಯಲ್ಲ:

ನಾನು 50 ವರ್ಷದಿಂದ ಪಕ್ಷಕ್ಕಾಗಿ ಕೆಲಸ ಮಾಡುತ್ತಿದ್ದೇನೆ. ನನ್ನ ಹೇಳಿಕೆಗಳಿಂದ ಪಕ್ಷದ ಹಿತಾಸಕ್ತಿಗೆ ಧಕ್ಕೆಯಾಗಿಲ್ಲ. ನಾನು ಮಾತನಾಡಿದರೆ ಸತ್ಪರಿಣಾಮ ಬೀರುವ ಮಾತನಾಡುತ್ತೇನೆಯೇ ಹೊರತು ದುಷ್ಪರಿಣಾಮ ಬೀರುವ ಮಾತನಾಡುವುದಿಲ್ಲ. ಈ ಬಗ್ಗೆ ನಾನು ಯಾರಿಂದಲೂ ಶಿಸ್ತಿನ ಪಾಠ ಮಾಡಿಸಿಕೊಳ್ಳಬೇಕಿಲ್ಲ. ಡಿ.ಕೆ.ಶಿವಕುಮಾರ್‌ ಹೇಳಿಕೆ ನೀಡಿದ್ದಾರೆ ಅಷ್ಟೇ, ಎಚ್ಚರಿಕೆ ನೀಡಿಲ್ಲ. ಎಚ್ಚರಿಕೆ ಗಿಚ್ಚರಿಕೆ ಎಲ್ಲಾ ನಡೆಯುವುದಿಲ್ಲ. ಎಚ್ಚರಿಕೆ ನೀಡಿದರೆ ಯಾರು ಕೇಳುತ್ತಾರೆ? ಎಂದು ಪ್ರಶ್ನಿಸಿದರು.

ಡಿಸಿಎಂ ಎಂದರೆ ಕಿರೀಟ ಇರಲ್ಲ:

ಪೂರ್ಣಾವಧಿ ಮುಖ್ಯಮಂತ್ರಿ ವಿಚಾರದಲ್ಲಿ ನಾನು ಹಟಕ್ಕೆ ಬಿದ್ದಿಲ್ಲ. ಹೈಕಮಾಂಡ್‌ನವರು ಡಿಕೆಶಿ ಲೋಕಸಭೆವರೆಗೆ ಅಧ್ಯಕ್ಷರಾಗಿರುತ್ತಾರೆ ಎಂದು ಹೇಳಿದ್ದರು. ಹೀಗಾಗಿ ಕೇಳಿದ್ದೇವೆ. ಹೆಚ್ಚುವರಿ ಉಪ ಮುಖ್ಯಮಂತ್ರಿ ಸ್ಥಾನ ನೀಡಿದ್ದರೆ ಲೋಕಸಭೆ ಚುನಾವಣೆಗೆ ಸಹಾಯವಾಗುತ್ತಿತ್ತು. ಹೀಗಾಗಿ ಕೇಳಿದ್ದೆವು. ಈಗ ಕೇಳುವುದಿಲ್ಲ. ಉಪ ಮುಖ್ಯಮಂತ್ರಿ ಸ್ಥಾನಕ್ಕೆ ಹೆಚ್ಚುವರಿ ಕಿರೀಟ ಇರಲ್ಲ ಎಂದು ಪರೋಕ್ಷವಾಗಿ ಟೀಕಿಸಿದರು.

ಇನ್ನು ನನಗೂ ಹಾಗೂ ಡಿ.ಕೆ.ಶಿವಕುಮಾರ್ ಅವರಿಗೂ ವಿಚಾರ ಭೇದ ಇರಬಹುದು. ಆದರೆ ವೈಯಕ್ತಿಕವಾಗಿ ಏನೂ ಇಲ್ಲ. ನಾನು ಹಾಗೂ ಅವರು ವಿಧಾನಸೌಧಕ್ಕೆ ಹೋಗುವ ರಸ್ತೆ ಬೇರೆ ಇರಬಹುದು, ಹೋಗುವ ಸ್ಥಳ ಒಂದೇ. ನಾನು, ಅವರು ಹಲವು ವರ್ಷಗಳಿಂದ ಸ್ನೇಹಿತರು. ಒಟ್ಟಿಗೆ ವಿದೇಶ ಪ್ರವಾಸ ಎಲ್ಲಾ ಮಾಡಿದ್ದೇವೆ. ಅವರನ್ನು ಮನೆಗೆ ಒಂದು ದಿನ ಊಟಕ್ಕೆ ಕರೆಯುತ್ತೇನೆ ಎಂದು ಇದೇ ವೇಳೆ ರಾಜಣ್ಣ ತಿಳಿಸಿದರು.

- ಸಿದ್ದರಾಮಯ್ಯ ಹೆಸರು ದುರ್ಬಳಕೆ ಮಾಡಿಕೊಂಡು ಸದಾಶಿವನಗರ, ಡಾಲರ್ಸ್‌ ಕಾಲೋನಿಯಲ್ಲಿ ನಾನೇನು 2 ಮನೆ ಕಟ್ಟಿದ್ದೇನೆಯೇ?

- ಎಲ್ಲದಕ್ಕೂ ಎಐಸಿಸಿ ಹೇಳಿದೆ, ಹೈಕಮಾಂಡ್‌ ಹೇಳಿದೆ ಎಂದು ಎಐಸಿಸಿ ಹೆಸರು ದುರ್ಬಳಕೆ ಮಾಡಿಕೊಳ್ಳುವುದನ್ನು ಡಿಕೆಶಿ ನಿಲ್ಲಿಸಲಿ

- ಸಣ್ಣಪುಟ್ಟ ವಿಚಾರಗಳಿಗೆಲ್ಲಾ ಹೈಕಮಾಂಡ್‌ ಯಾಕೆ ಹೇಳುತ್ತದೆ? ಇವರು ಅಲ್ಲಿ ಹೋಗಿ ದೂರು ಹೇಳಿದಾಗ ಸೂಚನೆ ಕೊಟ್ಟಿರುತ್ತಾರೆ

- ನಾನು ಯಾರಿಂದಲೂ ಶಿಸ್ತಿನ ಪಾಠ ಮಾಡಿಸಿಕೊಳ್ಳಬೇಕಿಲ್ಲ. ಡಿಕೆಶಿ ಹೇಳಿದ್ದಾರಷ್ಟೆ. ಎಚ್ಚರಿಕೆ ನೀಡಿಲ್ಲ. ಎಚ್ಚರಿಕೆ- ಗಿಚ್ಚರಿಕೆ ನಡೆಯಲ್ಲ

- ಎಚ್ಚರಿಕೆ ನೀಡಿದರೆ ಯಾರು ಕೇಳುತ್ತಾರೆ? ಈ ಹಿಂದೆ ಹೆಚ್ಚುವರಿ ಡಿಸಿಎಂ ಸ್ಥಾನಗಳನ್ನು ಕೇಳಿದ್ದೆ. ಈಗ ಕೇಳುವುದಿಲ್ಲ: ಸಚಿವ ಕಿಡಿ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ನಾನು ಹತ್ತು ಲಕ್ಷದ ವಾಚಾದ್ರೂ ಕಟ್ಟುತ್ತೇನೆ, ಅದು ನನ್ನ ಆಸ್ತಿ: ಬಿಜೆಪಿಗೆ ತಿರುಗೇಟು ಕೊಟ್ಟ ಡಿಕೆಶಿ
ಡಿಕೆಶಿ ಸಿಎಂ ಆದ್ರೆ ಅವರ ಸಂಪುಟದಲ್ಲಿ ನಾನು ಸಚಿವ ಆಗೋಲ್ಲ: ಕೆಎನ್ ರಾಜಣ್ಣ ದೊಡ್ಡ ನಿರ್ಧಾರ!