ರೈತರ ಪಂಪ್‌ಸೆಟ್‌ಗೆ ಮೀಟರ್ ಅಳವಡಿಕೆ, ಸ್ವಾಮಿನಾಥನ್ ವರದಿ ಜಾರಿ ಕುರಿತು ಚರ್ಚಿಸುವೆ: ರಾಹುಲ್ ಗಾಂಧಿ
ರಾಯಚೂರು(ಅ.22): ರೈತರ ಪಂಪ್‌ಸೆಟ್‌ಗಳಿಗೆ ಮೀಟರ್ ಅಳವಡಿಸಲು ರಾಜ್ಯ ಸರ್ಕಾರ ಮುಂದಾಗಿರುವುದು, ರೈತರು ಬೆಳೆದ ಬೆಳೆಗಳಿಗೆ ವೈಜ್ಞಾನಿಕವಾದ ಬೆಲೆ ನಿಗದಿಪಡಿಸುವ ಕುರಿತಾದ ಎಂ.ಎಸ್.ಸ್ವಾಮಿನಾಥನ್ ವರದಿ ಜಾರಿಗೊಳಿಸುವ ತುರ್ತು ಅಗತ್ಯತೆ ಸೇರಿದಂತೆ ರೈತರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಸಂಸತ್‌ನಲ್ಲಿ ಚರ್ಚೆ ನಡೆಸುವುದಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭರವಸೆ ನೀಡಿದ್ದಾರೆ. ಆಂಧ್ರಪ್ರದೇಶದ ಮಂತ್ರಾಲಯದಿಂದ ರಾಜ್ಯ ಪ್ರವೇಶಿಸಿದ ಭಾರತ ಐಕ್ಯತಾ ಯಾತ್ರೆ ಶುಕ್ರವಾರ ತಾಲೂಕಿನ ಗಿಲ್ಲೆಸುಗೂರಿಗೆ ಆಗಮಿಸಿದಾಗ ರಾಹುಲ್ ಅವರು ರೈತರು ಹಾಗೂ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಸಂಘಟನೆಗಳ ನಿಯೋಗದ ಜೊತೆ ಸಮಾಲೋಚನೆ ನಡೆಸಿದರು.
ಸಮಾಲೋಚನೆ ವೇಳೆ ಮಾತನಾಡಿದ ರೈತ ಮುಖಂಡರು, ರಾಜ್ಯ ಸರ್ಕಾರ ರೈತರ ಪಂಪ್‌ಸೆಟ್‌ಗಳಿಗೆ ಮೀಟರ್ ಅಳವಡಿಸಲು ಮುಂದಾಗಿದೆ. ಇದರಿಂದ ಕೃಷಿ ವಲಯವೇ ನಾಶವಾಗುವ ಆತಂಕ ಸೃಷ್ಟಿಯಾಗಿದೆ. ಇದಕ್ಕೆ ರೈತರ ತೀವ್ರ ವಿರೋಧವಿದೆ. ಅಲ್ಲದೆ, ರೈತರ ಬೆಳೆಗಳಿಗೆ ವೈಜ್ಞಾನಿಕವಾದ ಬೆಲೆ (ಎಂಎಸ್‌ಪಿ) ನಿಗದಿಪಡಿಸುವ ಕುರಿತಾದ ಎಂ.ಎಸ್.ಸ್ವಾಮಿನಾಥನ್ ವರದಿಯನ್ನು ಜಾರಿಗೊಳಿಸುವ ತುರ್ತು ಅಗತ್ಯವಿದೆ ಎಂದರು.
undefined
ಮಂತ್ರಾಲಯಕ್ಕೆ ಭೇಟಿ ನೀಡಿದ ಗಾಂಧಿ ಕುಟುಂಬದ ಮೊದಲ ಕುಡಿ: ರಾಯರ ದರ್ಶನ ಪಡೆದ ರಾಹುಲ್ ಗಾಂಧಿ..!
ರಾಜ್ಯಾದ್ಯಂತ ಸುರಿದ ಭಾರಿ ಮಳೆಯಿಂದಾಗಿ ಹತ್ತಿ, ಮೆಣಸಿನಕಾಯಿ ಸೇರಿದಂತೆ ರೈತರು ಕಷ್ಟಪಟ್ಟು ಬೆಳೆದ ಬೆಳೆಗಳು ಸಂಪೂರ್ಣ ಹಾನಿಗೀಡಾಗಿವೆ. ಸರ್ಕಾರ ನೀಡುತ್ತಿರುವ ಪರಿಹಾರ ಸಾಲುತ್ತಿಲ್ಲ. ಹೀಗಾಗಿ, ಬೆಳೆ ಹಾನಿಗೆ ವೈಜ್ಞಾನಿಕವಾಗಿ ಪರಿಹಾರ ನೀಡಬೇಕಾದ ಅಗತ್ಯವಿದೆ. ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ರೈತರನ್ನು ವಂಚಿಸಲಾಗುತ್ತಿದೆ. ವಿಮಾ ಮೊತ್ತವನ್ನು ಕಟ್ಟಿಸಿಕೊಂಡು, ಅದಕ್ಕೆ ತಕ್ಕಂತಹ ಪರಿಹಾರ ನೀಡದೆ, ವಿಮಾ ಕಂಪನಿಗಳು ರೈತರನ್ನು ವಂಚಿಸುತ್ತಿವೆ.
ಇನ್ನು, ತುಂಗಭದ್ರಾ ಜಲಾಶಯದಲ್ಲಿ ಹೂಳಿನ ಪ್ರಮಾಣ ಜಾಸ್ತಿಯಾಗಿರುವುದರಿಂದ ಅಚ್ಚುಕಟ್ಟು ಪ್ರದೇಶದ ಕೆಳಭಾಗದ ರೈತರಿಗೆ ನೀರು ಹರಿಸುವುದು ಕಷ್ಟಕರವಾಗಿದೆ. ಹೂಳಿನ ಸಮಸ್ಯೆ ನಿವಾರಣೆಗೆ ಪರ್ಯಾಯ ಜಲಾಶಯ ನಿರ್ಮಿಸುವ ಯೋಜನೆ ಸಾಕಾರಗೊಳ್ಳುತ್ತಿಲ್ಲ ಎಂದು ತಮ್ಮ ಸಂಕಷ್ಟತೋಡಿಕೊಂಡರು. ರೈತರ ಅಹವಾಲು ಆಲಿಸಿದ ರಾಹುಲ್, ರೈತರ ಈ ಎಲ್ಲಾ ಸಮಸ್ಯೆಗಳ ಕುರಿತು ಲೋಕಸಭೆಯಲ್ಲಿ ಧ್ವನಿ ಎತ್ತುವೆ ಎಂದು ಭರವಸೆ ನೀಡಿದರು.