
ಮಂಡ್ಯ (ಅ.06): ಆಯುಧ ಪೂಜೆ ಹಾಗೂ ವಿಜಯದಶಮಿ ಹಬ್ಬದ ಅಂಗವಾಗಿ ಸ್ಥಗಿತಗೊಂಡಿದ್ದ ಕಾಂಗ್ರೆಸ್‌ನ ‘ಭಾರತ್ ಜೋಡೋ’ ಪಾದಯಾತ್ರೆ ಪಾಂಡವಪುರ ತಾಲೂಕಿನ ಕೆನ್ನಾಳು ಗ್ರಾಮದಿಂದ ಗುರುವಾರ ಬೆಳಗ್ಗೆ ಪುನಾರಂಭಗೊಳ್ಳಲಿದೆ. ಅಲ್ಲದೆ, ಇದೇ ಮೊದಲ ಬಾರಿಗೆ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಈ ಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ರಾಹುಲ್ ಗಾಂಧಿ ನೇತೃತ್ವದ ಐಕ್ಯತಾ ಯಾತ್ರೆ ಅ.3ರಂದು ಮೈಸೂರಿನ ಕಳಸ್ತವಾಡಿಯಿಂದ ಶ್ರೀರಂಗಪಟ್ಟಣ, ಕಿರಂಗೂರು ಮಾರ್ಗವಾಗಿ ಪಾಂಡವಪುರ ತಾಲೂಕಿನ ಕೆನ್ನಾಳು ಗ್ರಾಮವನ್ನು ತಲುಪಿತ್ತು.
ಬಳಿಕ, ರಾಹುಲ್ ಗಾಂಧಿಯವರು ಮೈಸೂರು ಜಿಲ್ಲೆ ಎಚ್.ಡಿ.ಕೋಟೆಯ ಕಬಿನಿ ಹಿನ್ನೀರು ಬಳಿ ಇರುವ ಆರೆಂಜ್ ಕೌಂಟಿ ರೆಸಾರ್ಚ್‌ಗೆ ತೆರಳಿ, ತಾಯಿ ಸೋನಿಯಾ ಗಾಂಧಿ ಜೊತೆ ವಿಶ್ರಾಂತಿ ಪಡೆದಿದ್ದರು. ಹಬ್ಬದ ಬಳಿಕ ಗುರುವಾರದಿಂದ ಯಾತ್ರೆ ಪುನಾರಂಭಗೊಳ್ಳಲಿದ್ದು, ಕೆನ್ನಾಳು ಗ್ರಾಮದಿಂದ ರಾಹುಲ್ ಅವರು ಪಾದಯಾತ್ರೆಯನ್ನು ಮುಂದುವರಿಸಲಿದ್ದಾರೆ. ಸೋನಿಯಾ ಕೂಡ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಕಾಲ್ನಡಿಗೆಯಲ್ಲಿ ಪಾಲ್ಗೊಳ್ಳುವ ಸಲುವಾಗಿಯೇ ಸೋನಿಯಾ ಅವರು ಸೋಮವಾರ ಮೈಸೂರಿಗೆ ಆಗಮಿಸಿ, ಆರೆಂಜ್ ಕೌಂಟಿಯಲ್ಲಿ ವಾಸ್ತವ್ಯ ಹೂಡಿದ್ದಾರೆ.
Bharat Jodo Yatra: 40% ಬಗ್ಗೆ ಪ್ರಧಾನಿ ಮೌನವೇಕೆ: ರಾಹುಲ್ ಗಾಂಧಿ ಪ್ರಶ್ನೆ
ಕೆನ್ನಾಳು ಗ್ರಾಮದಿಂದ ಆರಂಭವಾಗಲಿರುವ ಪಾದಯಾತ್ರೆ, ಪಾಂಡವಪುರ ತಾಲೂಕಿನ ಜಕ್ಕನಹಳ್ಳಿ ಸರ್ಕಲ್ ಮೂಲಕ ನಾಗಮಂಗಲ ತಾಲೂಕಿನ ಖರಡ್ಯ ಗ್ರಾಮವನ್ನು ಪ್ರವೇಶಿಸಲಿದೆ. ಮಧ್ಯಾಹ್ನ 12 ಗಂಟೆಗೆ ಚೌಡಗೋನಹಳ್ಳಿ ಗೇಟ್ ಬಳಿ ಊಟದ ವ್ಯವಸ್ಥೆ ಮಾಡಲಾಗಿದೆ. ಅಲ್ಲಿಂದ ಮುಂದುವರಿದು ಬ್ರಹ್ಮದೇವರಹಳ್ಳಿಯ ಎಂ.ಹೊಸೂರು ಗೇಟ್ ಹತ್ತಿರದ ಆಯುರ್ವೇದಿಕ್ ಕಾಲೇಜಿಗೆ ರಾಹುಲ್ ಆಗಮಿಸಲಿದ್ದಾರೆ. ಸಭೆ ಬಳಿಕ, ರಾಹುಲ್ ಅಲ್ಲಿಯೇ ವಾಸ್ತವ್ಯ ಹೂಡಲಿದ್ದಾರೆ.
ನವಲಗುಂದದಿಂದ 2 ಸಾವಿರ ಜನ ಭಾಗಿ: ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ ಜೋಡೋ ಯಾತ್ರೆ ಅ. 13ರಂದು ಚಿತ್ರದುರ್ಗದ ಮೊಳಕಾಲ್ಮೂರಿಗೆ ತಲುಪಲಿದ್ದು, ನವಲಗುಂದ ವಿಧಾನಸಭಾ ಕ್ಷೇತ್ರದಿಂದ 2 ಸಾವಿರಕ್ಕಿಂತ ಹೆಚ್ಚು ಜನ ಭಾಗವಹಿಸಲಿದ್ದಾರೆ ಎಂದು ನವಲಗುಂದ ಭಾರತ ಜೋಡೋ ಉಸ್ತುವಾರಿ ಪಿ.ಎಚ್. ನೀರಲಕಟ್ಟಿಹೇಳಿದರು. ಪಟ್ಟಣದ ಕಾಂಗ್ರೆಸ್ ಭವನದಲ್ಲಿ ಪೂರ್ವಭಾವಿ ಸಭೆ ಉದ್ದೇಶಿಸಿ ಮಾತನಾಡಿದರು.
ಮಾಜಿ ಶಾಸಕ ಎನ್.ಎಚ್. ಕೋನರಡ್ಡಿ ಮಾತನಾಡಿ, ಭಾರತ ಜೋಡೋ ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿ ಅವರೊಂದಿಗೆ ಸೋನಿಯಾಗಾಂಧಿ, ಪ್ರಿಯಾಂಕಾ ಗಾಂಧಿ ಹಾಗೂ ಕರ್ನಾಟಕ ಉಸ್ತುವಾರಿ ರಣದೀಪಸಿಂಗ್ ಸುರ್ಜೆವಾಲಾ ಸೇರಿ ಎಐಸಿಸಿ ಮುಖಂಡರು ಭಾಗವಹಿಸುತ್ತಿದ್ದು, ಪಾದಯಾತ್ರೆಗೆ ಮತ್ತಷ್ಟುಶಕ್ತಿ ತುಂಬಿದಂತಾಗಿದೆ. ಈ ಐತಿಹಾಸಿಕ ಯಾತ್ರೆ 2023ರ ಕರ್ನಾಟಕ ವಿಧಾನಸಭಾ ಹಾಗೂ 2024ರ ಲೋಕಸಭಾ ಚುನಾವಣೆಗೆ ಕಾಂಗ್ರೆಸ್‌ಗೆ ದೊಡ್ಡ ಶಕ್ತಿ ನೀಡಲಿದೆ ಎಂದು ಹೇಳಿದರು.
ಹವಾಮಾನ ವೈಪರಿತ್ಯ, ಆರೋಗ್ಯ ಸಮಸ್ಯೆ: Sonia Gandhi ಕೊಡಗು ಪ್ರವಾಸ ರದ್ದು, ಮೈಸೂರಿನಲ್ಲೇ ವಾಸ್ತವ್ಯ
ಈ ಸಂದರ್ಭ ಮಾಜಿ ಸಚಿವರಾದ ಕೆ.ಎನ್. ಗಡ್ಡಿ, ಧಾರವಾಡ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ವಿನೋದ ಅಸೂಟಿ, ನವಲಗುಂದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವರ್ದಮಾನಗೌಡ ಹಿರೇಗೌಡ್ರ, ಅಣ್ಣಿಗೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ ಮಾಯಣ್ಣವರ, ಧಾರವಾಡ ಜಿಲ್ಲಾ ಸೇವಾದಳ ಅಧ್ಯಕ್ಷ ಚಂಬಣ್ಣಾ ಹಾಳದೋಟರ, ಉಪಾಧ್ಯಕ್ಷ ಎ.ವ್ಹಿ. ಶಟ್ಟರ, ನವಲಗುಂದ ಪುರಸಭೆ ಅಧ್ಯಕ್ಷ ಅಪ್ಪಣ್ಣಾ ಹಳ್ಳದ, ಮುಖಂಡರಾದ ವಿಜಯ ಕುಲಕರ್ಣಿ, ಎಸ್.ಡಿ. ಮಕಾನದಾರ, ಬಾಪುಗೌಡ ಪಾಟೀಲ, ಪದ್ಮಾವತಿ ಪೂಜಾರ, ಬಾಬಾಜಾನ ಮುಲ್ಲಾನವರ ಮುಂತಾದವರಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.